ಅಧ್ಯಕ್ಷ ಸ್ಥಾನಕ್ಕೆ ರಾಜಪಕ್ಸ ರಾಜೀನಾಮೆ ಖಚಿತ ಪ್ರಧಾನಿ ಕಾರ್ಯಾಲಯ ಖಚಿತಪಡಿದ ಬೆನ್ನಲ್ಲೇ ರಾಜಪಕ್ಸ ಕಸರತ್ತು ಶ್ರೀಲಂಕಾದಲ್ಲಿ ಭಾರಿ ಪ್ರತಿಭಟನೆ, ತಾಲಿಬಾನ್ ಮೀರಿಸಿದ ನಡೆ

ಕೊಲೊಂಬೊ(ಜು.11): ಶ್ರೀಲಂಕಾದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟು, ರಾಜಕೀಯ ಬಿಕ್ಕಟ್ಟಿನಿಂದ ಇಡೀ ದೇಶ ದಿಕ್ಕು ದೆಸೆಯಿಲ್ಲದ ತೀವ್ರ ಹಿನ್ನಡೆ ಅನುಭವಿಸಿದೆ. ಜನರು ದಂಗೆ ಎದ್ದಿದ್ದಾರೆ. ಪ್ರಧಾನಿ ಹಾಗೂ ಅಧ್ಯಕ್ಷರ ನಿವಾಸಗಳಿಗೆ ಮುತ್ತಿಗೆ ಹಾಕಿದ್ದಾರೆ. ಇತ್ತ ಪ್ರಧಾನಿ ರನಿಲ್ ವಿಕ್ರಮಸಿಂಘೆ ಈಗಾಗಲೇ ರಾಜೀನಾಮೆ ನೀಡಿದ್ದು, ಅಧ್ಯಕ್ಷ ಗೊಟಬಯ ರಾಜಪಕ್ಸ ಗೌಪ್ಯಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾರೆ. ಇದರ ನಡುವೆ ಭಾರಿ ಪ್ರತಿಭಟನೆಯಿಂದ ಬೆದರಿದ ರಾಜಪಕ್ಸ ತಾನು ರಾಜೀನಾಮೆ ನೀಡುವುದಾಗಿ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ರಾನಿಲ್ ಕಚೇರಿ ಬಹಿರಂಗ ಪಡಿಸಿದೆ. ಆದರೆ ಇದು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮಾತ್ರ ಅನ್ನೋ ಮಾತುಗಳು ಕೇಳಿಬಂದಿದೆ.

ತೀವ್ರ ಬಿಕ್ಕಟ್ಟಿನ ಪರಿಸ್ಥಿತಿ ನಡುವೆಯೂ ಕುಟುಂಬ ಅನುಭವಿಸಿಕೊಂಡು ಬಂದ ಶ್ರೀಲಂಕಾ ಪ್ರಧಾನಿ, ಅಧ್ಯಕ್ಷ ಹಾಗೂ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲು ಗೊಟಬಯ ರಾಜಪಕ್ಸ ನಿರಾಕರಿಸಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಅಧಿಕಾರ ಬಿಟ್ಟುಕೊಟ್ಟರೆ ದಂಗೆ ಎದ್ದಿರುವ ಜನರು ಇನ್ನೆಂದು ರಾಜಪಕ್ಸ ಕುಟುಂಬಕ್ಕೆ ಅಧಿಕಾರ ನೀಡುವ ಸಾಧ್ಯತೆಗಳಿಲ್ಲ ಅನ್ನೋದನ್ನು ಅರಿತಿರುವ ಗೊಟಬಯ, ಶತಾಯಗತಾಯ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. 

ಶ್ರೀಲಂಕಾ ಸ್ಥಿತಿ ಬಗ್ಗೆ IMF ಕಣ್ಣು, ರಾಜಕೀಯ ಸಂಕಷ್ಟ ನಿವಾರಣೆಯಾಗುತ್ತಿದ್ದಂತೆಯೇ ಬೇಲ್‌ಔಟ್‌ ಡೀಲ್‌ ಚರ್ಚೆ!

ಜುಲೈ 13ರಂದು ರಾಜಪಕ್ಸ ರಾಜೀನಾಮೆ ನೀಡಲಿದ್ದಾರೆ ಎಂದು ಈಗಾಗಲೇ ಪ್ರಧಾನಿ ಕಾರ್ಯಾಲಯ ಹೇಳಿದೆ. ರಾಜೀನಾಮೆ ಮಾತುಗಳ ನಡುವೆ ರಾಜಪಕ್ಸ ನಿನ್ನ(ಜು.10) ಸರ್ಕಾರಿ ಆದೇಶ ಹೊರಡಿಸಿದ್ದರು. 37,000 ಮೆಟ್ರಿಕ್ ಟನ್ ಆಮದು ಅಡುಗೆ ಅನಿಲ(LPG) ಸರಿಯಾಗಿ ವಿತರಣೆ ಮಾಡುವಂತೆ ಆದೇಶ ಹೊರಡಿಸಿದ್ದರು. ಗೌಪ್ಯ ಸ್ಥಳದಿಂದಲೇ ಆದೇಶ ಹೊರಡಿಸಿ ತಾನು ಅಧಿಕಾರದಲ್ಲಿ ಮುಂದುವರಿಯುವ ಸೂಚನೆ ನೀಡಿದ್ದರು. ಇದೀಗ ಆಮದು ಮಾಡಿರುವ ಆಹಾರ ಹಾಗೂ ಇತರ ವಸ್ತುಗಳ ವಿತರಣೆಗೆ ಮತ್ತೊಂದು ಆದೇಶ ಹೊರಡಿಸುವ ಸಾಧ್ಯತೆ ಇದೆ. 

ರಾಜಪಕ್ಸ್ ರಾಜೀನಾಮೆಗೆ ಒಪ್ಪಿಕೊಂಡಿದ್ದು, ಸರ್ವ ಪಕ್ಷ ಸರ್ಕಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ಆದರೆ ಪ್ರತಿಭಟನಕಾರರು ಈ ಕೂಡಲೇ ರಾಜೀನಾಮೆ ನೀಡಲು ಆಗ್ರಹಿಸಿದ್ದಾರೆ. ಪ್ರಧಾನಿ ಹಾಗೂ ಅಧ್ಯಕ್ಷರ ಮನೆಗೆ ಮೇಲೆ ದಾಳಿ ನಡೆಸಿದ್ದಾರೆ. ತಾಲೀಬಾನ್ ಏಕಾಏಕಿ ಅಫ್ಘಾನ್ ಸರ್ಕಾರದ ಮೇಲೆ ದಾಳಿ ನಡೆಸಿದ ಘಟನೆ ನೆನೆಪಿಗೆ ಬರುವಂತೆ ಇದೀಗ ಶ್ರೀಲಂಕಾದಲ್ಲಿ ನಡೆಯುತ್ತಿದೆ. 

ಶ್ರೀಲಂಕಾದಲ್ಲಿ ಜನತಾ ದಂಗೆ, ರಾತ್ರೋರಾತ್ರಿ ಅಧ್ಯಕ್ಷ ಎಸ್ಕೇಪ್‌!

ಅಧ್ಯಕ್ಷ ಗೊಟಬಯ ರಾಜಪಕ್ಷೆ ಮನೆಗೆ ನುಗ್ಗಿದ ಜನರು, ಮನೆಯ ಹೊರಾಂಗಣದಲ್ಲೇ ಈರುಳ್ಳಿ, ತರಕಾರಿ ಕತ್ತರಿಸಿ ಸಾಮೂಹಿಕವಾಗಿ ಸೌದೆ ಒಲೆಗಳಲ್ಲಿ ಅಡುಗೆ ಮಾಡಿ ಊಟ ಮಾಡಿ ಸಂಭ್ರಮಿಸಿದರು. ಅರಮನೆಗೆ ನುಗ್ಗಿದ ಜನರು ಶ್ರೀಲಂಕಾ ಅಧ್ಯಕ್ಷ ಗೋಟಬಯ ಅವರ ಮಂಚದ ಮೇಲೆ ಮಲಗಿ, ಮೊಬೈಲ್‌ ನೋಡುತ್ತಾ, ಸಂಭ್ರಮಿಸುತ್ತಾ ವಿಶ್ರಾಂತಿ ಪಡೆದಿದ್ದಾರೆ. ಅರಮನೆಯ ಮೇಲೆ ದಾಳಿ ಮಾಡಿರುವ ನಾಗರಿಕರು, ಅಧ್ಯಕ್ಷರ ನಿವಾಸದಲ್ಲಿ ಸಿಕ್ಕ ಕ್ಯೋಟ್ಯಂತರ ರು. ಹಣವನ್ನು ಎಣಿಸಿದ್ದಾರೆ. ನಂತರ ಈ ಎಲ್ಲಾ ಹಣವನ್ನು ಪೊಲೀಸ್‌ ಸಿಬ್ಬಂದಿಗೆ ನೀಡಿದ್ದಾರೆ.

ಗೋಟಬಯ ರಾಜಪಕ್ಷೆ ಅವರು ಪರಾರಿಯಾದ ಬಳಿಕ ಅರಮನೆಯಲ್ಲಿನ ಕೆಲಸಗಾರರು ಇಲ್ಲವಾಗಿದ್ದಾರೆ. ಹಾಗಾಗಿ ಅರಮನೆಯ ಆವರಣದಲ್ಲಿ 2 ದಿನದಿಂದ ಬಿದ್ದಿರುವ ಕಸವನ್ನು ದಾಳಿ ಮಾಡಿರುವ ಜನರೇ ಸ್ವಚ್ಚಗೊಳಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷರ ನಿವಾಸವನ್ನು ವಶಪಡಿಸಿಕೊಂಡಿರುವ ಜನರಲ್ಲಿ ಮಹಿಳೆಯೊಬ್ಬರು ಅರಮನೆಯಲ್ಲಿರುವ ಸೋಫಾದ ಮೇಲೆ ಮಲಗಿ ತನ್ನದೇ ಈ ಅರಮನೆ ಎಂಬಂತೆ ವಿಶ್ರಮಿಸುತ್ತಿದ್ದಾರೆ. ಅಧ್ಯಕ್ಷ ಗೊಟಬಯ ಅವರ ನಿವಾಸದ ಆವರಣದಲ್ಲಿರುವ ಈಜುಕೊಳ್ದಲ್ಲಿ ಜನರು ಈಜಾಡಿ ಸಂಭ್ರಮಿಸಿದ್ದಾರೆ. ವಿವಿಧ ಭಂಗಿಗಳಲ್ಲಿ ನೀರಿಗೆ ಹಾರುತ್ತಾ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.