ಇತರೆ ಕರೆನ್ಸಿ ಎದುರು ಶ್ರೀಲಂಕಾ ರುಪಾಯಿ ಮೌಲ್ಯ ಭಾರೀ ಕುಸಿತ ಭಾರತದ ನೆರವಿನ ಬಳಿಕವೂ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಲಂಕಾ ಶ್ರೀಲಂಕಾದ 4.32 ರುಪಾಯಿ ಭಾರತದ 1 ರುಪಾಯಿಗೆ ಸಮ

ಕೊಲಂಬೋ(ಏ.20): ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಬಿದ್ದಿರುವ ಶ್ರೀಲಂಕಾದಲ್ಲಿ ಮಂಗಳವಾರ ಪೆಟ್ರೋಲ್‌ ಬೆಲೆಯನ್ನು ಲೀ.ಗೆ 84 ರು.ನಷ್ಟುಹೆಚ್ಚಳ ಮಾಡಲಾಗಿದೆ. ಹೀಗಾಗಿ ದೇಶದಲ್ಲಿ ಇದೀಗ ಪೆಟ್ರೋಲ್‌ ದರ ಲೀ.ಗೆ 338 ರು.ಗೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಮತ್ತು ಇತರೆ ಕರೆನ್ಸಿ ಎದುರು ಶ್ರೀಲಂಕಾ ರುಪಾಯಿ ಮೌಲ್ಯ ಭಾರೀ ಕುಸಿತ ಕಂಡಿರುವ ಕಾರಣ, ಶ್ರೀಲಂಕಾದಲ್ಲಿ ತೈಲ ಏರಿಕೆ ಅನಿವಾರ್ಯವಾಗಿತ್ತು ಎಂದು ಲಂಕನ್‌ ಇಂಡಿಯನ್‌ ಆಯಿಲ್‌ ಕಂಪನಿ ತಿಳಿಸಿದೆ. ಕಳೆದ ಮಾ.7ರ ಬಳಿಕ ಡಾಲರ್‌ ಎದುರು ರುಪಾಯಿ ಮೌಲ್ಯ ಶೇ.60ರಷ್ಟುಭಾರೀ ಕುಸಿತ ಕಂಡಿದೆ. ಶ್ರೀಲಂಕಾದ 4.32 ರುಪಾಯಿ ಭಾರತದ 1 ರುಪಾಯಿಗೆ ಸಮ

ಪ್ರತಿಭಟನಾಕಾರರ ಮೇಲೆ ಗುಂಡು: 1 ಸಾವು
ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಓರ್ವ ಬಲಿಯಾಗಿ 12 ಜನರು ಗಾಯಗೊಂಡ ಘಟನೆ ನಡೆದಿದೆ. ಶ್ರೀಲಂಕಾದ ನೈಋುತ್ಯ ಭಾಗದ ರಂಬುಕ್ಕನಾದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ರೈಲ್ವೇ ಮಾರ್ಗಗಳನ್ನು ಮುಚ್ಚಿ, ರಕ್ಷಣಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸ್ಥಳವನ್ನು ತೊರೆಯುವಂತೆ ಪೊಲೀಸರು ಸೂಚನೆ ನೀಡಿದರೂ ಸಹ ಲೆಕ್ಕಿಸದೇ ತ್ರಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಈ ಸಮಯದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ. ನಂತರ ಗುಂಡು ಹಾರಿಸಿದ್ದಾರೆ. ಈ ವೇಳೆ ಓರ್ವ ಸಾವನ್ನಪ್ಪಿದ್ದಾನೆ.

ಶ್ರೀಲಂಕಾಗೆ ಎಲ್ಲಾ ರೀತಿಯಲ್ಲೂ ಆರ್ಥಿಕ ನೆರವಿನ ಭರವಸೆ ನೀಡಿದ ನಿರ್ಮಲಾ ಸೀತಾರಾಮನ್!

ಲಂಕಾ ಅಧ್ಯಕ್ಷರ ಅಧಿಕಾರ ಕಟ್‌?
ಆರ್ಥಿಕ ಕುಸಿತ ಹಾಗೂ ಅಧಿಕಾರ ದುರುಪಯೋಗದ ವಿರುದ್ಧ ಎದ್ದ ಜನಾಕ್ರೋಶವನ್ನು ತಣಿಸಲು ಮುಂದಾಗಿರುವ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಸಂವಿಧಾನಕ್ಕೆ ತಿದ್ದುಪಡಿ ತಂದು ಅಧ್ಯಕ್ಷರ ಅಧಿಕಾರಕ್ಕೇ ಕತ್ತರಿ ಹಾಕಲು ಮುಂದಾಗಿದ್ದಾರೆ. ತನ್ಮೂಲಕ ತಮ್ಮ ಕುಟುಂಬ ಹಾಗೂ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ವಿರುದ್ಧ ಬಂಡೆದ್ದಿರುವ ಹೋರಾಟಗಾರರನ್ನು ಓಲೈಸುವ ಪ್ರಯತ್ನ ಆರಂಭಿಸಿದ್ದಾರೆ.

ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಅಧ್ಯಕ್ಷರಿಗೆ ಹೆಚ್ಚು ಎಕ್ಸಿಕ್ಯೂಟಿವ್‌ ಅಧಿಕಾರಗಳಿವೆ. ಇತ್ತೀಚಿನ ಬೆಳವಣಿಗೆಗಳ ನಂತರ ದೇಶಕ್ಕೆ ಹೊಸ ಸಂವಿಧಾನ ರಚಿಸಿ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ತರಬೇಕೆಂಬ ಕೂಗೆದ್ದಿದೆ. ಅದಕ್ಕೆ ಪ್ರತಿಯಾಗಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಸಂವಿಧಾನದ 19ನೇ ವಿಧಿಯನ್ನು ಮರುಸ್ಥಾಪನೆ ಮಾಡುವ ಪ್ರಸ್ತಾಪವನ್ನು ಸಂಸತ್ತಿನ ಮುಂದಿಟ್ಟಿದ್ದಾರೆ. ಈ ವಿಧಿಯ ಮರುಸ್ಥಾಪನೆಯಾದರೆ ಅಧ್ಯಕ್ಷರ ಅಧಿಕಾರ ಕಡಿತಗೊಂಡು ಸಂಸತ್ತಿಗೆ ಹೆಚ್ಚಿನ ಅಧಿಕಾರ ಸಿಗಲಿದೆ.

ತಮಿಳುನಾಡಿನ 13 ಮೀನುಗಾರರ ಜಾಮೀನಿಗೆ 13 ಕೋಟಿ ನೀಡಿ ಎಂದ ಶ್ರೀಲಂಕಾ ಕೋರ್ಟ್!

2015ರಲ್ಲಿ ರನಿಲ್‌ ವಿಕ್ರಮಸಿಂಘೆ ಪ್ರಧಾನಿಯಾಗಿದ್ದಾಗ ಸಂವಿಧಾನದ 19ನೇ ವಿಧಿಗೆ ತಿದ್ದುಪಡಿ ತಂದು ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಿದ್ದರು. ಆದರೆ, 2019ರಲ್ಲಿ ತಮ್ಮ ಸೋದರ ಗೋಟಬಾಯ ರಾಜಪಕ್ಸೆ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಪ್ರಧಾನಿ ಮಹಿಂದಾ ರಾಜಪಕ್ಸೆ ಈ ತಿದ್ದುಪಡಿ ರದ್ದುಪಡಿಸಿದ್ದರು. ಈಗ ಅದನ್ನು ಮರುಸ್ಥಾಪನೆ ಮಾಡುವ ಸಂಧಾನ ಮಾರ್ಗವನ್ನು ಅವರು ಪ್ರಸ್ತಾಪಿಸಿದ್ದಾರೆ.

ತಮ್ಮ ಸಂಪುಟದ ಸಚಿವರನ್ನೆಲ್ಲ ಕಿತ್ತುಹಾಕಿ ಹೊಸ ಸಂಪುಟವನ್ನು ನೇಮಿಸಿಕೊಂಡಿರುವ ಮಹಿಂದಾ ರಾಜಪಕ್ಸೆ ಸದ್ಯದಲ್ಲೇ ಅಧ್ಯಕ್ಷರ ಅಧಿಕಾರ ಕಡಿತಗೊಳಿಸುವ ತಿದ್ದುಪಡಿ ಮಸೂದೆಗೆ ಸಂಪುಟದಲ್ಲಿ ಒಪ್ಪಿಗೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದರೆ ದೇಶದ ಜನರ ಆಶೋತ್ತರಗಳು ಈಡೇರುವ ವಿಶ್ವಾಸ ತಮಗಿದೆ ಎಂದು ಮಹಿಂದಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.