ಸಂಕಷ್ಟದಲ್ಲಿ ಗೋಟಬಾಯ ರಾಜಪಕ್ಸೆ ಸರ್ಕಾರ ಅವಿಶ್ವಾಸಕ್ಕೆ ಗೆಲುವಾದರೆ ಮಹಿಂದಾ ರಾಜೀನಾಮೆ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ನಡುವೆ ರಾಜಕೀಯ ಬಿಕ್ಕಟ್ಟು
ಕೊಲಂಬೊ(ಮೇ.04): ಆರ್ಥಿಕ ಕುಸಿತ ಹಾಗೂ ನಾಗರಿಕ ದಂಗೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಗೋಟಬಾಯ ರಾಜಪಕ್ಸೆ ಸರ್ಕಾರಕ್ಕೆ ಬುಧವಾರ ಇನ್ನೊಂದು ಅಗ್ನಿಪರೀಕ್ಷೆ ಎದುರಾಗಲಿದ್ದು, ಸಂಸತ್ತಿನಲ್ಲಿ ವಿಪಕ್ಷಗಳು ಒಗ್ಗಟ್ಟಿನಿಂದ ಅವಿಶ್ವಾಸ ಗೊತ್ತುವಳಿ ಮಂಡಿಸಲಿವೆ. ಈ ಅವಿಶ್ವಾಸಕ್ಕೆ ಗೆಲುವಾದರೆ ಪ್ರಧಾನಿ ಮಹಿಂದಾ ರಾಜಪಕ್ಸೆ ಹಾಗೂ ಅವರ ಸಚಿವ ಸಂಪುಟ ರಾಜೀನಾಮೆ ನೀಡಬೇಕಾಗುತ್ತದೆ.
ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಲು ಹಾಗೂ ಸಂಸತ್ತಿಗೆ ಹೆಚ್ಚಿನ ಅಧಿಕಾರ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕೆ ಸಮಿತಿ ರಚಿಸಲಾಗುವುದು ಎಂದು ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಪ್ರಕಟಿಸಿದ್ದರೂ ವಿಪಕ್ಷಗಳು ಅವಿಶ್ವಾಸಕ್ಕೆ ಮುಂದಾಗಿವೆ. ವಿಪಕ್ಷಗಳೆಲ್ಲ ಒಟ್ಟಾದರೆ ಅವಿಶ್ವಾಸಕ್ಕೆ ಗೆಲುವಾಗುವ ಸಾಧ್ಯತೆ ಹೆಚ್ಚಿದೆ. ಇನ್ನು, ಅವಿಶ್ವಾಸದಲ್ಲಿ ಸರ್ಕಾರ ಸೋತರೂ ಅಧ್ಯಕ್ಷ ಹುದ್ದೆಗೆ ಸಮಸ್ಯೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಲಂಕಾ ಅಧ್ಯಕ್ಷರ ಅಧಿಕಾರ ಕಟ್?: ಸೋದರ ಗೋಟಬಾಯ ಅಧಿಕಾರ ಮೊಟಕುಗೊಳಿಸಲು ಮಹಿಂದಾ!
ಮೊದಲು ತಮ್ಮ ಹಿರಿಯ ಸೋದರ, ಪ್ರಧಾನಿ ಮಹಿಂದಾ ರಾಜಪಕ್ಸೆಯನ್ನು ಕಿತ್ತುಹಾಕಲು ಸಿದ್ಧವಿರುವುದಾಗಿ ಹೇಳಿದ್ದ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ನಂತರ ಹಿಂದೇಟು ಹಾಕಿದ್ದು ಪ್ರತಿಪಕ್ಷಗಳ ಸಿಟ್ಟಿಗೆ ಕಾರಣವಾಗಿದೆ. ಮಹಿಂದಾ ಪದತ್ಯಾಗದ ಬದಲು ವಿಪಕ್ಷಗಳನ್ನೂ ಸರ್ಕಾರದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿ, ‘ಸರ್ವಪಕ್ಷಗಳ ಸರ್ಕಾರ’ ರಚಿಸುವ ಪ್ರಸ್ತಾಪವನ್ನು ಇತ್ತೀಚೆಗೆ ಗೋಟಬಾಯ ಮುಂದಿಟ್ಟಿದ್ದರು.
ಲಂಕಾದಲ್ಲಿ ಸರ್ವಪಕ್ಷ ಸರ್ಕಾರ: ಪ್ರಧಾನಿ ರಾಜಪಕ್ಸ ಪದಚ್ಯುತಿ
ಶ್ರೀಲಂಕಾ ಎದುರಿಸುತ್ತಿರುವ ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಗೋಟಾಬಯ ರಾಜಪಕ್ಸ ತಮ್ಮ ಹಿರಿಯ ಸಹೋದರನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ, ಮಧ್ಯಂತರ ಸರ್ಕಾರ ಸ್ಥಾಪನೆ ಮಾಡಲು ಅನುಮತಿ ನೀಡಿದ್ದಾರೆ.
ಲಂಕಾದಲ್ಲಿ ಪೆಟ್ರೋಲ್ ದರ ಲೀ.ಗೆ 338 ರು.: ಒಂದೇ ದಿನ 84 ರುಪಾಯಿ ಏರಿಕೆ
ಆರ್ಥಿಕ ಬಿಕ್ಕಟ್ಟಿಗೆ ರಾಜಪಕ್ಸ ಸಹೋದರರ ಕೆಟ್ಟಹಣಕಾಸು ನೀತಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಅವರನ್ನು ಪದಚ್ಯುತಗೊಳಿಸಬೇಕು ಎಂದು ಭಾರೀ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನಾ ಅವರ ನಿಯೋಗವು ಮಧ್ಯಂತರ ಸರ್ಕಾರ ರಚನೆ ಮಾಡಲು ರಾಷ್ಟಾ್ರಧ್ಯಕ್ಷರ ಬಳಿ ಅನುಮತಿ ಕೋರಿದ್ದರು. ಆಡಳಿತಾರೂಢ ಪಕ್ಷದ ಭಿನ್ನಮತೀಯ ನಾಯಕರೊಂದಿಗೆ ಮಾತುಕತೆ ನಡೆಸಿದ ಗೊಟಬಯ ಮಧ್ಯಂತರ ಸರ್ಕಾರ ಸ್ಥಾಪನೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ನಡುವೆ ವಿಪಕ್ಷಗಳು ಮಹಿಂದಾ ಅವರನ್ನು ಪದಚ್ಯುತಗೊಳಿಸಲು ಆಗ್ರಹಿಸಿದ್ದು, ರಾಷ್ಟ್ರೀಯ ಕೌನ್ಸಿಲ್ ಹೊಸ ಪ್ರಧಾನಿಯ ಹೆಸರನ್ನು ಸೂಚಿಸಲಿದೆ ಅಲ್ಲದೇ ಸರ್ವಪಕ್ಷಗಳ ಸರ್ಕಾರ ಸ್ಥಾಪನೆಯಾಗಲಿದೆ’ ಎಂದು ಸಿರಿಸೇನಾ ಮಾಹಿತಿ ನೀಡಿದ್ದಾರೆ. ಆದರೆ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ವಕ್ತಾರ ರೋಹನ್ ವೇಲಿವಿಟಾ, ‘ಮಹಿಂದಾ ಅವರನ್ನು ಪದಚ್ಯುತಗೊಳಿಸುತ್ತಿರುವ ಬಗ್ಗೆ ರಾಷ್ಟ್ರಪತಿಯವರು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ’ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರ ಮೇಲೆ ಗುಂಡು: 1 ಸಾವು
ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಓರ್ವ ಬಲಿಯಾಗಿ 12 ಜನರು ಗಾಯಗೊಂಡ ಘಟನೆ ನಡೆದಿದೆ. ಶ್ರೀಲಂಕಾದ ನೈಋುತ್ಯ ಭಾಗದ ರಂಬುಕ್ಕನಾದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ರೈಲ್ವೇ ಮಾರ್ಗಗಳನ್ನು ಮುಚ್ಚಿ, ರಕ್ಷಣಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸ್ಥಳವನ್ನು ತೊರೆಯುವಂತೆ ಪೊಲೀಸರು ಸೂಚನೆ ನೀಡಿದರೂ ಸಹ ಲೆಕ್ಕಿಸದೇ ತ್ರಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಈ ಸಮಯದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ. ನಂತರ ಗುಂಡು ಹಾರಿಸಿದ್ದಾರೆ. ಈ ವೇಳೆ ಓರ್ವ ಸಾವನ್ನಪ್ಪಿದ್ದಾನೆ.
