* ಜನಾಕ್ರೋಶ ತಣಿಸಲು ಸಂವಿಧಾನ ತಿದ್ದುಪಡಿಗೆ ಮುಂದಾದ ಪ್ರಧಾನಿ* ಲಂಕಾ ಅಧ್ಯಕ್ಷರ ಅಧಿಕಾರ ಕಟ್?* ಸೋದರ ಗೋಟಬಾಯ ಅಧಿಕಾರ ಮೊಟಕುಗೊಳಿಸಲು ಮಹಿಂದಾ ರೆಡಿ
ಕೊಲಂಬೊ(ಏ.20): ಆರ್ಥಿಕ ಕುಸಿತ ಹಾಗೂ ಅಧಿಕಾರ ದುರುಪಯೋಗದ ವಿರುದ್ಧ ಎದ್ದ ಜನಾಕ್ರೋಶವನ್ನು ತಣಿಸಲು ಮುಂದಾಗಿರುವ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಸಂವಿಧಾನಕ್ಕೆ ತಿದ್ದುಪಡಿ ತಂದು ಅಧ್ಯಕ್ಷರ ಅಧಿಕಾರಕ್ಕೇ ಕತ್ತರಿ ಹಾಕಲು ಮುಂದಾಗಿದ್ದಾರೆ. ತನ್ಮೂಲಕ ತಮ್ಮ ಕುಟುಂಬ ಹಾಗೂ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ವಿರುದ್ಧ ಬಂಡೆದ್ದಿರುವ ಹೋರಾಟಗಾರರನ್ನು ಓಲೈಸುವ ಪ್ರಯತ್ನ ಆರಂಭಿಸಿದ್ದಾರೆ.
ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಅಧ್ಯಕ್ಷರಿಗೆ ಹೆಚ್ಚು ಎಕ್ಸಿಕ್ಯೂಟಿವ್ ಅಧಿಕಾರಗಳಿವೆ. ಇತ್ತೀಚಿನ ಬೆಳವಣಿಗೆಗಳ ನಂತರ ದೇಶಕ್ಕೆ ಹೊಸ ಸಂವಿಧಾನ ರಚಿಸಿ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ತರಬೇಕೆಂಬ ಕೂಗೆದ್ದಿದೆ. ಅದಕ್ಕೆ ಪ್ರತಿಯಾಗಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಸಂವಿಧಾನದ 19ನೇ ವಿಧಿಯನ್ನು ಮರುಸ್ಥಾಪನೆ ಮಾಡುವ ಪ್ರಸ್ತಾಪವನ್ನು ಸಂಸತ್ತಿನ ಮುಂದಿಟ್ಟಿದ್ದಾರೆ. ಈ ವಿಧಿಯ ಮರುಸ್ಥಾಪನೆಯಾದರೆ ಅಧ್ಯಕ್ಷರ ಅಧಿಕಾರ ಕಡಿತಗೊಂಡು ಸಂಸತ್ತಿಗೆ ಹೆಚ್ಚಿನ ಅಧಿಕಾರ ಸಿಗಲಿದೆ.
2015ರಲ್ಲಿ ರನಿಲ್ ವಿಕ್ರಮಸಿಂಘೆ ಪ್ರಧಾನಿಯಾಗಿದ್ದಾಗ ಸಂವಿಧಾನದ 19ನೇ ವಿಧಿಗೆ ತಿದ್ದುಪಡಿ ತಂದು ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಿದ್ದರು. ಆದರೆ, 2019ರಲ್ಲಿ ತಮ್ಮ ಸೋದರ ಗೋಟಬಾಯ ರಾಜಪಕ್ಸೆ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಪ್ರಧಾನಿ ಮಹಿಂದಾ ರಾಜಪಕ್ಸೆ ಈ ತಿದ್ದುಪಡಿ ರದ್ದುಪಡಿಸಿದ್ದರು. ಈಗ ಅದನ್ನು ಮರುಸ್ಥಾಪನೆ ಮಾಡುವ ಸಂಧಾನ ಮಾರ್ಗವನ್ನು ಅವರು ಪ್ರಸ್ತಾಪಿಸಿದ್ದಾರೆ.
ತಮ್ಮ ಸಂಪುಟದ ಸಚಿವರನ್ನೆಲ್ಲ ಕಿತ್ತುಹಾಕಿ ಹೊಸ ಸಂಪುಟವನ್ನು ನೇಮಿಸಿಕೊಂಡಿರುವ ಮಹಿಂದಾ ರಾಜಪಕ್ಸೆ ಸದ್ಯದಲ್ಲೇ ಅಧ್ಯಕ್ಷರ ಅಧಿಕಾರ ಕಡಿತಗೊಳಿಸುವ ತಿದ್ದುಪಡಿ ಮಸೂದೆಗೆ ಸಂಪುಟದಲ್ಲಿ ಒಪ್ಪಿಗೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದರೆ ದೇಶದ ಜನರ ಆಶೋತ್ತರಗಳು ಈಡೇರುವ ವಿಶ್ವಾಸ ತಮಗಿದೆ ಎಂದು ಮಹಿಂದಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
