ಏನಾಯ್ತು? ನಾನೇಕೆ ಇಲ್ಲಿದ್ದೇನೆ? ಕೊರಿಯಾ ವಿಮಾನ ದುರಂತದಲ್ಲಿ ಬದುಕುಳಿದವರ ಆಘಾತಕಾರಿ ಅನುಭವ
ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಇಬ್ಬರು ತಮ್ಮ ಆಘಾತಕಾರಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಇವರು ಘಟನೆಯ ಬಗ್ಗೆ ಇನ್ನೂ ಆತಂಕದಲ್ಲಿದ್ದಾರೆ.
ಸಿಯೋಲ್: ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ದುರಂತ ಕಂಡು ಇಡೀ ಜಗತ್ತವೇ ದಿಗ್ಭ್ರಮೆಗೊಂಡಿದೆ. 6 ಸಿಬ್ಬಂದಿಯೊಂದಿಗೆ 175 ಪ್ರಯಾಣಿಕರೊಂದಿಗೆ ಬ್ಯಾಂಕಾಕ್‌ನಿಂದ ಹಾರಿದ್ದ jeju air flight 7c2216 ಮುವಾನ್‌ನಲ್ಲಿ ರನ್‌ವೇಯಿಂದ ಸ್ಕಿಡ್ ಆಗಿ, ಗೋಡೆಗೆ ಡಿಕ್ಕಿ ಹೊಡೆದು ಸ್ಪೋಟಗೊಂಡಿತ್ತು. ಈ ದುರಂತದಲ್ಲಿ 181 ಜನರ ಪೈಕಿ ಇಬ್ಬರು ಮಾತ್ರ ಪವಾಡದ ರೀತಿಯಲ್ಲಿ ಬದುಕುಳಿದಿದ್ದಾರೆ. ಇದೀಗ ಬದುಕುಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಈ ವಿಮಾನ ದುರಂತದಲ್ಲಿ ಬದುಕುಳಿದ ಇಬ್ಬರ ಪೈಕಿ ಒಬ್ಬರಾಗಿರುವ 32 ವರ್ಷದ ಲೀ ಸದ್ಯ ಮೊಕ್ಪೊ ಕೊರಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಯಾಣಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಲೀ, ವಿಮಾನದ ಟೇಲ್ ಭಾಗದಲ್ಲಿ (ಹಿಂಭಾಗ) ನಿಂತುಕೊಂಡಿದ್ದರು. ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ನಂತರ ಮಾತನಾಡಿರುವ ಲೀ, ಏನಾಯ್ತು? ನಾನೇಕೆ ಇಲ್ಲಿದ್ದೇನೆ ಅಂತ ಹೇಳುತ್ತಾ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಕೊರಿಯನ್ ಟೈಮ್ಸ್ ವರದಿ ಮಾಡಿದೆ.
ವಿಮಾನ ಪತನದಿಂದಾಗಿ ಲೀ ಭಯಗೊಂಡಿದ್ದಾರೆ. ಕೊನೆ ಕ್ಷಣದವರೆಗೂ ಪ್ರಯಾಣಿಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿರೋದರಿಂದ ಸದ್ಯ ಆ ಆತಂಕದಲ್ಲಿಯೇ ಈ ರೀತಿ ಮಾತನಾಡುತ್ತಿದ್ದಾರೆ. ನಡೆದ ಘಟನೆ ಬಗ್ಗೆ ಅವರಿಗೆ ಸಂಪೂರ್ಣವಾಗಿ ಮನವರಿಕೆ ಮಾಡಿಕೊಡಬೇಕಿದೆ. ಎಡ ಭುಜ ಮತ್ತು ತಲೆಗೆ ಗಾಯಗಳಾಗಿದ್ದು, ಸದ್ಯ ಪ್ರಜ್ಙೆ ಬಂದಿದೆ. ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇನ್ನು ಇದೇ ದುರಂತದಲ್ಲಿ ಬದುಕುಳಿದವರು 25 ವರ್ಷದ ಫ್ಲೈಟ್ ಅಟೆಂಡೆಟಂಟ್ ಕ್ವಾನ್ ಸಹ ಮೊಕ್ಪೊ ಕೊರಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕ್ವಾನ್ ಅವರ ತಲೆ, ಮೊಣಕಾಲು ಮತ್ತು ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ತಲೆಯ ಮೇಲೆ ಸೀಳಿದ ರೀತಿಯ ಗಾಯವಾಗಿದ್ದು, ಪಾದದ ಮೂಳೆಯಲ್ಲಿ ಮುರಿತ ಉಂಟಾಗಿದ್ದು, ಈ ಸಂಬಂಧ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
25 ವರ್ಷದ ಕ್ವಾನ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂಬುವುದು ಸಂತೋಷಕರ ವಿಷಯ. ಮಾನಸಿಕವಾಗಿಯೂ ಕ್ವಾನ್ ಆಘಾತಕ್ಕೊಳಗಾಗಿದ್ದಾಳೆ. ನಮ್ಮ ಸಿಬ್ಬಂದಿ ವಿಮಾನ ಪತನದ ಬಗ್ಗೆಯೂ ಕ್ವಾನ್ ಜೊತೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ವಿಮಾನ ಪತನಕ್ಕೆ ಕಾರಣವೇನು?
ವಿಮಾನ ಲ್ಯಾಂಡಿಂಗ್ ಮುನ್ನವೇ ಹಕ್ಕಿಯೊಂದು ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ನಂತರ ಗೇರ್ ವಿಫಲವಾಗಿದ್ದರಿಂದ ವಿಮಾನ ರನ್‌ವೇಯಿಂದ ಸ್ಕಿಡ್ ಆಗಿ ಗೋಡೆಗೆ ಡಿಕ್ಕಿಯಾಗಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ದಕ್ಷಿಣ ಸಿಯೋಲ್ ನಗರದಿಂದ 290 ಕಿಲೋ ಮೀಟರ್ ದೂರದಲ್ಲಿ ಮುವಾನ್ ನಗರವಿದೆ.
ಇದನ್ನೂ ಓದಿ: ನನ್ನ ಕೊನೆ ಮಾತು ಹೇಳಲೇ? ವಿಮಾನ ದುರಂತಕ್ಕೂ ಮುನ್ನ ಪ್ರಯಾಣಿಕನ ಮನಕಲುಕಿದ ಸಂದೇಶ!