ಖಲಿಸ್ತಾನಿ ಉಗ್ರ ನಿಜ್ಜರ್‌ಗೆ ಕೆನಡಾ ಸಂಸತ್‌ನಲ್ಲಿ ಮೌನ ಪ್ರಾರ್ಥನೆ: ಮತ್ತೆ ಭಾರತವನ್ನು ಕೆಣಕಿದ ಟ್ರಡೋ ಸರ್ಕಾರ
ನಿಗೂಢವಾಗಿ ಹತ್ಯೆಯಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ಗೆ ಕೆನಡಾದ ಸಂಸತ್‌ನಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಗೌರವ ಸೂಚಿಸಲಾಗಿದ್ದು, ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನವದೆಹಲಿ: ನಿಗೂಢವಾಗಿ ಹತ್ಯೆಯಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ಗೆ ಕೆನಡಾದ ಸಂಸತ್‌ನಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಗೌರವ ಸೂಚಿಸಲಾಗಿದ್ದು, ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆನಡಾದ ವ್ಯಾಂಕೋವರ್‌ನಲ್ಲಿರುವ ಭಾರತದ ದೂತವಾಸದ ( Indian Consulate General in Vancouver) ಅಧಿಕಾರಿ ಕೆನಡಾ ಸರ್ಕಾರಕ್ಕೆ ತಿರುಗೇಟು ನೀಡಿದ್ದು, 1985ರಲ್ಲಿ ಏರ್ ಇಂಡಿಯಾ ಕನಿಷ್ಕಾ ವಿಮಾನದಲ್ಲಿ ಖಲಿಸ್ತಾನಿ ಉಗ್ರರು ಇಟ್ಟ ಬಾಂಬಿಗೆ ಬಲಿಯಾದ 329 ಜನರಿಗೆ ಗೌರವ ಸಲ್ಲಿಸಲು ಮುಂದಾಗಿದೆ.
ಭಾರತವೂ ಭಯೋತ್ಪಾದನೆಯನ್ನು ನಿರ್ಮೂಲನೆ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಜಾಗತಿಕವಾಗಿ ಭಯೋತ್ಪಾದನ ಬೆದರಿಕೆಯನ್ನು ನಿಭಾಯಿಸಲು ಎಲ್ಲಾ ರಾಷ್ಟ್ರಗಳೊಂದಿಗೆ ಬಹಳ ಹತ್ತಿರದಿಂದ ಕೆಲಸ ಮಾಡುತ್ತದೆ. ಏರ್ ಇಂಡಿಯಾ ವಿಮಾನ 182 ಕನಿಷ್ಕಾ ಮೇಲೆ ದಾಳಿ ಮಾಡಿ 86 ಮಕ್ಕಳು ಸೇರಿದಂತೆ ಒಟ್ಟು 329 ಮುಗ್ಧ ಜೀವಗಳನ್ನು ಬಲಿಪಡೆದ ಖಲಿಸ್ತಾನಿ ಉಗ್ರರ ಹೇಯ ಕೃತ್ಯಕ್ಕೆ 39 ವರ್ಷಗಳು ತುಂಬಿದ್ದು, ಈ ಘಟನೆಯನ್ನು ಖಂಡಿಸುತ್ತಾ ಈ ದುರಂತದಲ್ಲಿ ಮಡಿದ ಜೀವಗಳಿಗೆ ಜೂನ್ 23 ರಂದು ಗೌರವ ಸಮರ್ಪಣೆ ಮಾಡಲಾಗುವುದು. ಇದು ಭಾರತದ ನಾಗರಿಕ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಘೋರ ಭಯೋತ್ಪಾದಕ ಕೃತ್ಯವಾಗಿತ್ತು ಎಂದು ವ್ಯಾಂಕೋವರ್‌ನ ಭಾರತೀಯ ಕಾನ್ಸುಲೇಟ್ ಜನರಲ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಯ್ಯಾನ್ಲಿ ಪಾರ್ಕ್ ಬಳಿಯ ಕೇಪರ್ಲಿ ಕ್ರೀಡಾಂಗಣದ ಬಳಿ ಇರುವ ಏರ್ ಇಂಡಿಯಾ ಸ್ಮಾರಕದ ಬಳಿ ಜೂನ್ 23 ರಂದು ಸಂಜೆ 6.30ಕ್ಕೆ ಈ ದುರಂತದಲ್ಲಿ ಮಡಿದವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ವ್ಯಾಕೋಂವರ್ ದೂತವಾಸದ ಜನರಲ್ ಅವರು ಕೆನಡಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಭಯೋತ್ಪಾದನೆ ವಿರುದ್ಧ ಒಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಲಾಗಿದೆ.
'ಘರ್ ಮೆ ಗುಸ್ ಕೆ ಮಾರೇಂಗೆ..' ಮೋದಿ ಹೇಳಿದ್ದನ್ನು ನಿಜ ಮಾಡಿತಾ ಭಾರತದ RAW?
ಅಂದು ಏನಾಗಿತ್ತು?
ಮೊಂಟ್ರಿಯಲ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕೆನಡಿಯನ್ ಮೂಲದ ಸಿಖ್ ಟೆರರಿಸ್ಟ್‌ಗಳು ಬಾಂಬ್ ಫಿಕ್ಸ್ ಮಾಡಿದ್ದು, ವಿಮಾನ 31 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದಾಗ ಸ್ಫೋಟಿಸಿದ್ದರು. ಈ ದುರಂತದಲ್ಲಿ 329 ಜನ ಸಾವನ್ನಪ್ಪಿದ್ದರು. ಅದರಲ್ಲಿ 268 ಜನ ಕೆನಡಾ ಪ್ರಜೆಗಳಾದರೆ, 27 ಜನರ ಬ್ರಿಟಿಷರು ಹಾಗೂ 24 ಜನ ಭಾರತೀಯರಿದ್ದರು. ಇದು ನಾಗರಿಕ ವಿಮಾನಯಾನದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಭಯೋತ್ಪಾದನ ಕೃತ್ಯವೆಂದು ಪರಿಗಣಿಸಲ್ಪಟ್ಟಿದೆ.
ನಿಜ್ಜರ್ ಹತ್ಯೆ ಆರೋಪಕ್ಕೆ ಒಂದೂ ಸಾಕ್ಷ್ಯ ನೀಡಿಲ್ಲ, ಕೆನಡಾ ಬೆತ್ತಲೆಗೊಳಿಸಿದ ಸಚಿವ ಜೈಶಂಕರ್!
ಗುಂಡೇಟಿಗೆ ಬಲಿಯಾಗಿದ್ದ ನಿಜ್ಜರ್
ಬ್ರಿಟಿಷ್ ಕೊಲಂಬಿಯಾದಲ್ಲಿ ಗುರುದ್ವಾರದ ಹೊರಗೆ ಕಳೆದ ವರ್ಷ ಗುಂಡೇಟಿಗೆ ಬಲಿಯಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸ್ಮರಣಾರ್ಥ ಕೆನಡಾ ಸಂಸತ್ ಕೆಲ ನಿಮಿಷ ಮೌನ ಪ್ರಾರ್ಥನೆ ಮಾಡಿದ ನಂತರ ಭಾರತೀಯ ದೂತವಾಸ ಕಚೇರಿ ಈ ಪೋಸ್ಟ್ ಮಾಡಿದೆ. ಕೆನಡಾ ಪ್ರಧಾಣಿ ಜಸ್ಟೀನ್ ಟ್ರುಡೋ ನೇತೃತ್ವದ ಕೆನಡಾ ಆಡಳಿತವೂ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್‌ಗಳು ಭಾಗಿಯಾಗಿದ್ದಾರೆ ಎಂದು ಈ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಆದರೆ ಭಾರತ ಈ ಆರೋಪವನ್ನು ತಳ್ಳಿ ಹಾಕಿದೆ.
ಕೆನಡಾ ಸಂಸತ್‌ನಲ್ಲಿ ಮೌನ ಪ್ರಾರ್ಥನೆ
ಇನ್ನು ಈ ಪ್ರಕರಣದ ತನಿಖೆಯನ್ನು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಭಾರತೀಯ ಪ್ರಜೆಗಳನ್ನು ಬಂಧಿಸಿದ್ದಾರೆ. ಇತ್ತ ಸುದ್ದಿಸಂಸ್ಥೆ ಐಎನ್‌ಎಸ್ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಕೆನಡಾ ಸಂಸತ್ ಸದಸ್ಯರು ಹರ್ದೀಪ್ ಸಿಂಗ್ ನಿಜ್ಜರ್ ಸ್ಮರಣಾರ್ಥ ಪಾರ್ಲಿಮೆಂಟ್‌ನಲ್ಲಿ ಮೌನ ಪ್ರಾರ್ಥನೆ ಮಾಡುವುದನ್ನು ಕಾಣಬಹುದು. ಕಳೆದ ವರ್ಷ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಕೊಲ್ಲಲ್ಪಟ್ಟ ಹರ್ದೀಪ್ ಸಿಂಗ್ ನಿಜ್ಜರ್ ಸ್ಮರಣಾರ್ಥ ಕೆಲ ನಿಮಿಷಗಳ ಮೌನ ಪ್ರಾರ್ಥನೆ ಮಾಡಲು ಸಂಸತ್‌ನ ಎಲ್ಲಾ ಪಕ್ಷಗಳ ಸದಸ್ಯರ ಜೊತೆ ಚರ್ಚಿಸಿದ ನಂತರ ಒಪ್ಪಿಗೆ ಸೂಚಿಸಲಾಗಿದೆ ಎಂದು ಸ್ಪೀಕರ್ ಗ್ರೇಗ್ ಫೆರ್ಗುಸ್ ಅವರು ಹೇಳಿದ ನಂತರ ಸದಸ್ಯರೆಲ್ಲರೂ ಎದ್ದು ನಿಂತು ಮೌನ ಪ್ರಾರ್ಥನೆ ಸಲ್ಲಿಸುತ್ತಾರೆ.