ಲಾಸ್ ಏಂಜಲೀಸ್‌ನಲ್ಲಿ ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ಸಿಖ್ ವ್ಯಕ್ತಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ಪೊಲೀಸರ ಬಾಡಿಕ್ಯಾಮ್‌ನಲ್ಲಿ ಸೆರೆಯಾಗಿದ್ದು ಮೃತ ವ್ಯಕ್ತಿಯನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಲಾಸ್ ಏಂಜಲೀಸ್: ಕಾರಿನಿಂದ ಇಳಿದು ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ಸಿಖ್ ವ್ಯಕ್ತಿಗೆ ಅಮೆರಿಕಾ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದು, ಈ ಘಟನೆಯ ದೃಶ್ಯಾವಳಿ ಸಂಪೂರ್ಣವಾಗಿ ಪೊಲೀಸರ ಬಾಡಿಕ್ಯಾಮ್‌ನಲ್ಲಿ ರೆಕಾರ್ಡ್ ಆಗಿದೆ. ಹತ್ಯೆಯಾದ ವ್ಯಕ್ತಿ ಸಿಖ್ ಸಮರ ಕಲೆಯಾದ ಗಟ್ಕಾವನ್ನು ನಡುರಸ್ತೆಯಲ್ಲಿ ಪ್ರದರ್ಶಿಸುತ್ತಿದ್ದ, ಆದರೆ ಇದನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದರು ಆತ ನಿಲ್ಲಿಸದ ಹಿನ್ನೆಲೆ ಹಾಗೂ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಹಿನ್ನೆಲೆ ಅಮೆರಿಕಾ ಪೊಲೀಸರು ಈ ಸಿಖ್ ವ್ಯಕ್ತಿಯ ಕತೆ ಮುಗಿಸಿದ್ದಾರೆ.
ನಡುರಸ್ತೆಯಲ್ಲಿ ಖಡ್ಗ ಝಳಪಿಸಿದ ಗುರುಪ್ರೀತ್ ಸಿಂಗ್:
ಮೃತ ವ್ಯಕ್ತಿಯನ್ನು 36 ವರ್ಷದ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಲಾಸ್ ಏಂಜಲೀಸ್‌ನ ಕ್ರಿಪ್ಟೊ ಡಾಟ್ ಕಾಮ್ ಅರೇನಾ ಬಳಿ ನಡುರಸ್ತೆಯಲ್ಲೇ ಪೊಲೀಸರು ಆತನಿಗೆ ಗುಂಡಿಕ್ಕಿದ್ದಾರೆ. ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ಈ ಘಟನೆಯ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಈ ಗುರುಪ್ರೀತ್ ಸಿಂಗ್ ನಡುರಸ್ತೆಯಲ್ಲೇ ಗಟ್ಕಾ ಪ್ರದರ್ಶನ ಮಾಡಿದ್ದಾನೆ. ಆತ ನಡುರಸ್ತೆಯಲ್ಲಿ ಖಡ್ಗವನ್ನು ಝಳಪಿಸಿದ್ದಾನೆ. ಆತ ಅದನ್ನು ನಿಲ್ಲಿಸಲು ನಿರಾಕರಿಸಿದ ನಂತರ ಪೊಲೀಸರು ಆತನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈತನ ಕೈಯಲ್ಲಿದ್ದ ಆಯುಧವನ್ನು 'ಖಂಡ' ಎಂದು ಗುರುತಿಸಲಾಗಿದ್ದು, ಇದು ಭಾರತೀಯ ಸಮರ ಕಲೆಗಳಲ್ಲಿ ಬಳಸಲಾಗುವ ಎರಡು ಅಲಗಿನ ಕತ್ತಿಯಾಗಿದೆ.
ಘಟನೆ ಪೊಲೀಸರ ಬಾಡಿಕ್ಯಾಮ್‌ನಲ್ಲಿ ರೆಕಾರ್ಡ್:
ಈ ಘಟನೆ ಜುಲೈ 13 ರಂದು ನಡೆದಿದೆ ಎನ್ನಲಾಗಿದ್ದ, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಫಿಗುರೋವಾ ಸ್ಟ್ರೀಟ್ ಮತ್ತು ಒಲಿಂಪಿಕ್ ಬೌಲೆವಾರ್ಡ್‌ನ ಜನನಿಬಿಡ ಇಂಟರ್‌ಸೆಕ್ಷನ್ ಬಳಿವ್ಯಕ್ತಿಯೊಬ್ಬ ದಾರಿಯಲ್ಲಿ ಹೋಗುತ್ತಿರುವವರ ಮೇಲೆ ಮಚ್ಚು ಬೀಸುತ್ತಿದ್ದಾನೆ ಎಂದು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಗೆ ಹಲವಾರು ಬಾರಿ ಕರೆಗಳು ಬಂದ ನಂತರ ಈ ಘಟನೆ ನಡೆದಿದೆ.
ಸಿಂಗ್ ತನ್ನ ವಾಹನವನ್ನು ರಸ್ತೆಯ ಮಧ್ಯದಲ್ಲಿ ಬಿಟ್ಟು ಹೋಗಿ ಒಂದು ಹಂತದಲ್ಲಿ ತನ್ನ ನಾಲಿಗೆಯನ್ನೂ ಕತ್ತರಿಸಿಕೊಳ್ಳಲು ಪ್ರಯತ್ನಿಸಿದ ಎಂದು ಪೊಲೀಸರು ಹೇಳಿದ್ದಾರೆ. ತನ್ನ ಕೈಯಲ್ಲಿರುವ ಆಯುಧವನ್ನು ಕೆಳಗಿಟ್ಟು ಶರಣಾಗುವಂತೆ ಪೊಲೀಸರು ಆತನಿಗೆ ಹಲವು ಬಾರಿ ಆದೇಶ ನೀಡಿದರು ಆತ ಕ್ಯಾರೇ ಅನ್ನಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಓಡಿಹೋಗುವುದಕ್ಕೂ ಮೊದಲು ಪೊಲೀಸರ ಮೇಲೆ ಹಲ್ಲೆಗೆ ಯತ್ನ
ಅಲ್ಲದೇ ಪೊಲೀಸರು ಅವನ ಬಳಿಗೆ ಹೋದಾಗ, ಅವನು ಸ್ಥಳದಿಂದ ಓಡಿ ಹೋಗುವುದಕ್ಕೂ ಮೊದಲು ಪೊಲೀಸರ ಮೇಲೆ ಬಾಟಲ್ ಎಸೆದು ದಾಳಿ ಮಾಡಲು ಮುಂದಾಗಿದ್ದಾನೆ. ಅಧಿಕಾರಿಗಳು ಅವನನ್ನು ಬೆನ್ನಟ್ಟಿದ್ದಾಗ ಆತ ವಾಹನವನ್ನು ವೇಗವಾಗಿ ನಿಯಂತ್ರಣಕ್ಕೆ ಸಿಗದಂತೆ ಚಲಾಯಿಸುತ್ತಿದ್ದ. ಅಂತಿಮವಾಗಿ ಫಿಗುಯೆರೋವಾ ಮತ್ತು 12 ನೇ ಬೀದಿಗಳ ಬಳಿ ಈತ ಮತ್ತೊಂದು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ನಂತರ ಅವನು ಅವರ ಮೇಲೆ ಬ್ಲೇಡ್‌ನಿಂದ ದಾಳಿ ಮಾಡಿದ್ದಾನೆ ಹೀಗಾಗಿ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ.
ಘಟನಾ ಸ್ಥಳದಲ್ಲಿ ಎರಡು ಅಡಿ ಉದ್ದದ ಮಚ್ಚನ್ನು ವಶಪಡಿಸಿಕೊಳ್ಳಲಾಗಿದ್ದು, ಅದನ್ನು ಸಾಕ್ಷಿಯಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಗುಂಡೇಟಿನಿಂದಾಗಿ ಆತ ಸಾವನ್ನಪ್ಪಿದ್ದ. ಈ ಘಟನೆಯಲ್ಲಿ ಯಾವುದೇ ಅಧಿಕಾರಿಗಳು ಅಥವಾ ನಾಗರಿಕರು ಗಾಯಗೊಂಡಿಲ್ಲ. ಈ ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಮಕ್ಕಳ ಪಡೆಯಲು ಸನ್ನಿ ಲಿಯೋನ್ ಬಾಡಿಗೆ ತಾಯ್ತನದ ಮೊರೆ ಹೋಗಿದ್ದೇಕೆ? : ಸನ್ನಿ ಉತ್ತರ ಬಾರಿ ವೈರಲ್
ಇದನ್ನೂ ಓದಿ: ಡಿವೋರ್ಸ್ ನಂತರ ಮತ್ತೆ ಪ್ರೀತಿಯಲ್ಲಿ ಬಿದ್ದ ದುಬೈ ರಾಜಕುಮಾರಿ: ಪ್ರಸಿದ್ಧ ರಾಪರ್ ಜೊತೆ ರೋಮ್ಯಾನ್ಸ್
