ವಿಚ್ಛೇದನದ ನಂತರ ದುಬೈ ರಾಜಕುಮಾರಿ ಶೇಖಾ ಮಹ್ರಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. 40 ವರ್ಷದ ಮೊರಾಕೋ-ಅಮೆರಿಕನ್ ಮೂಲದ ರಾಪರ್ ಜೊತೆ ತಮ್ಮ ಸಂಬಂಧವನ್ನು ಅವರು ಖಚಿತಪಡಿಸಿದ್ದಾರೆ.

ಗಂಡನಿಗೆ ಇನ್ಸ್ಟಾ ಪೋಸ್ಟ್ ಮೂಲಕವೇ ವಿಚ್ಛೇದನ ಘೋಷಣೆ ಮಾಡಿ ಸುದ್ದಿಯಾಗಿದ್ದ ದುಬೈ ರಾಜಕುಮಾರಿಗೆ ಈಗ ಮತ್ತೆ ಪ್ರೀತಿಯಾಗಿದೆ. 40 ವರ್ಷದ ಮೊರಾಕೋ-ಅಮೆರಿಕನ್ ಮೂಲದ ರಾಪರ್ ಜೊತೆ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ. ದುಬೈ ದೊರೆ ಹಾಗೂ ಯುಎಇ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿ 31 ವರ್ಷದ ಶೇಖಾ ಮಹ್ರಾ ಮೊಹಮ್ಮದ್ ರಶೀದ್ ಅಲ್ ಮಕ್ತೌಮ್ ಅವರು ಪ್ರಸಿದ್ದ ರಾಪರ್ ಮೊರಾಕೋ-ಅಮೆರಿಕನ್ ಮೂಲದ ಫ್ರೆಂಚ್ ಮೊಂಟಾನಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

40 ವರ್ಷದ ರಾಪರ್ ಜೊತೆ ರಾಜಕುಮಾರಿಯ ಪ್ರೇಮ:

ಜೂನ್‌ನಲ್ಲಿ ನಡೆದ ಪ್ಯಾರಿಸ್ ಫ್ಯಾಷನ್ ವೀಕ್ ಸಂದರ್ಭದಲ್ಲಿ ಈ ಜೋಡಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎಂದು ಫ್ರೆಂಚ್ ಮೊಂಟಾನಾ ಅವರ ಪ್ರತಿನಿಧಿಯೊಬ್ಬರು ಹೇಳಿದ್ದಾರೆ. 31 ವರ್ಷ ಪ್ರಾಯದ ದುಬೈ ರಾಜಕುಮಾರಿಗೆ 40 ವರ್ಷದ ರ‍್ಯಾಪರ್ ಫ್ರೆಂಚ್‌ ಮೊಂಟಾನಾ ಜೊತೆ 2024ರ ಅಂತ್ಯದಿಂದಲೂ ಆತ್ಮೀಯತೆ ಇದೆ. ರಾಜಕುಮಾರಿ ಶೇಖಾ ಮಹ್ರಾ ಅವರು ಮಾಂಟಾನಾ ಅವರನ್ನು ಕರೆದುಕೊಂಡು ಅವರಿಗೆ ದುಬೈ ಪ್ರವಾಸ ಮಾಡಿದ್ದರು. ಜೊತೆಗೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದಾದ ನಂತರ ಅವರಿಬ್ಬರೂ ಆಗಾಗ ದುಬೈ ಹಾಗೂ ಮೊರಾಕೊದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ದುಬಾರಿ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುತ್ತಾರೆ. ಮಸೀದಿಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಪ್ಯಾರಿಸ್‌ನ ಪಾಂಟ್ ಡೆಸ್ ಆರ್ಟ್ಸ್ ಸೇತುವೆಯ ಮೇಲೂ ಅಡ್ಡಾಡಿದ್ದಾರೆ.

ಪ್ಯಾರಿಸ್ ಫ್ಯಾಷನ್ ಇವೆಂಟ್‌ನಲ್ಲಿ ಕೈ ಕೈ ಹಿಡಿದು ಓಡಾಟ:

ಇವರ ಈ ವರ್ಷದ ಆರಂಭದಲ್ಲಿ ಇವರು ಪ್ಯಾರಿಸ್ ಫ್ಯಾಷನ್ ಇವೆಂಟ್‌ನಲ್ಲಿ ಕೈ ಕೈ ಹಿಡಿದು ಓಡಾಡಿದ ನಂತರ ಇವರ ಈ ರೋಮ್ಯಾನ್ಸ್ ಸಾರ್ವಜನಿಕರಿಗೂ ತಿಳಿದು ಬಂತು. ಶೇಖಾ ಮಹ್ರಾ ಅವರು ಈ ಹಿಂದೆ ಶೇಖ್ ಮನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್ ಅವರೊಂದಿಗೆ 2023ರಲ್ಲಿವಿವಾಹವಾಗಿದ್ದರು. ಇವರ ದಾಂಪತ್ಯದಲ್ಲಿ ಒಬ್ಬ ಮಗಳೂ ಜನಿಸಿದ್ದಳು ಆದರೆ ಅದೇನಾಯ್ತೋ ಏನೋ ಮಗು ಜನಿಸಿ ಕೆಲವೇ ದಿನಗಳಿಗೆ ಅಂದರೆ ಕಳೆದ ವರ್ಷ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಶೇಖಾ ಮಹ್ರಾ ಅವರು ತಮ್ಮ ವಿಚ್ಛೇದನವನ್ನು ಘೋಷಣೆ ಮಾಡಿದರು. ಪತಿ ಮೇಲೆ ದಾಂಪತ್ಯ ದ್ರೋಹದ ಆರೋಪ ಹೊರಿಸಿದರು.

ಇನ್ಸ್ಟಾದಲ್ಲಿ ಗಂಡನಿಗೆ ಡಿವೋರ್ಸ್ ಕೊಟ್ಟು ಸುದ್ದಿಯಾಗಿದ ರಾಜಕುಮಾರಿ:

ಪ್ರಿಯ ಪತಿ ನೀವು ಇತರರ ಸಾಂಗತ್ಯದಲ್ಲಿ ಮುಳುಗಿರುವುದರಿಂದ ನಾನು ನಮ್ಮ ವಿಚ್ಛೇದನವನ್ನು ಇಲ್ಲಿ ಘೋಷಿಸುತ್ತೇನೆ ಎಂದು ಆಕೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ನಾನು ನಿಮಗೆ ವಿಚ್ಚೇದನ ನೀಡುತ್ತೇನೆ, ನಾನು ನಿಮಗೆ ವಿಚ್ಚೇದನ ನೀಡುತ್ತೇನೆ, ನಾನು ನಿಮಗೆ ವಿಚ್ಚೇದನ ನೀಡುತ್ತೇನೆ ಎಂದು ಆಕೆ ಮೂರು ಬಾರಿ ಬರೆಯುವ ಮೂಲಕ ಆಕೆ ಪತಿಗೆ ತಲಾಖ್ ನೀಡಿದ್ದರು. ಬರೀ ಇಷ್ಟೇ ಅಲ್ಲ ತಮ್ಮ ವಿಚ್ಛೇದನದ ನಂತರ ಡಿವೋರ್ಸ್ ಹೆಸರಿನ ಸುಗಂಧ ದ್ರವ್ಯದ ಉದ್ಯಮವನ್ನು ಸ್ಥಾಪಿಸುವ ಮೂಲಕವೂ ಅವರು ಸುದ್ದಿಯಾಗಿದ್ದರು. ತಮ್ಮ ಬ್ರ್ಯಾಂಡ್ ಮಹ್ರಾ M1 ಅಡಿಯಲ್ಲಿ ಡಿವೋರ್ಸ್ ಹೆಸರಿನ ಸುಗಂಧ ದ್ರವ್ಯದ ಉದ್ಯಮವನ್ನು ಆರಂಭಿಸಿದರು. ಶೇಖಾ ಮೆಹ್ರಾ ಅವರು ಮೊಹಮ್ಮದ್ ಬಿನ್ ರಶೀದ್ ಸರ್ಕಾರಿ ಆಡಳಿತದ ಅರ್ಹತೆಯೊಂದಿಗೆ ಯುಕೆ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿದ್ದಾರೆ.

ಈಗ ಶೇಖಾ ಮೆಹ್ರಾ ಅವರು ಬದುಕಿನಲ್ಲಿ ಬಂದಿರು ಫ್ರೆಂಚ್ ಮೊಂಟಾನಾ, ಅವರ ನಿಜವಾದ ಹೆಸರು ಕರೀಮ್ ಖಾರ್ಬೌಚ್, ಫೇಮಸ್ ರಾಪರ್ ಆಗಿರುವ ಅವರು ಅನ್‌ಪೋರ್ಗೆಟೇಬಲ್(Unforgettable) ಮತ್ತು ನೋ ಸ್ಟೈಲಿಸ್ಟ್(No Stylist)ನಂತಹ ಜಾಗತಿಕ ಹಿಟ್‌ಗಳಿಗೆ ರಾಪ್ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ . ಅವರು ಉಗಾಂಡಾ ಮತ್ತು ಉತ್ತರ ಆಫ್ರಿಕಾದಾದ್ಯಂತ ಆರೋಗ್ಯ ಮತ್ತು ಶಿಕ್ಷಣ ಯೋಜನೆಗಳಿಗೆ ಹಣಕಾಸು ಒದಗಿಸುವ ಮೂಲಕ ಲೋಕೋಪಕಾರದ ಕಾರಣಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದಾರೆ.. ಫ್ರೆಂಚ್ ಮೊಂಟಾನಾ ಅವರಿಗೂ ಇದು 2ನೇ ವಿವಾಹವಾಗಿದೆ. ಮೊಂಟಾನಾ ಅವರು 2007 ರಿಂದ 2014 ರವರೆಗೆ ಉದ್ಯಮಿ ಮತ್ತು ವಿನ್ಯಾಸಕಿ ನದೀನ್ ಖಾರ್ಬೌಚ್ ಅವರನ್ನು ವಿವಾಹವಾಗಿದ್ದರು. ಈ ಮದುವೆಯಲ್ಲಿ ಕ್ರೂಜ್ ಖಾರ್ಬೌಚ್ ಎಂಬ ಮಗನಿದ್ದಾನೆ.

ಇದನ್ನೂ ಓದಿ: ಏರ್‌ ಶೋ ಅಭ್ಯಾಸ ಪ್ರದರ್ಶನದ ವೇಳೆ ಎಫ್‌-16 ಫೈಟರ್ ಜೆಟ್ ಪತನ: ಪೈಲಟ್ ಸಾವು, ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ

ಇದನ್ನೂ ಓದಿ: ಟ್ರಂಪ್ ಎಡವಟ್ಟಿನ ವರ್ತನೆಗೆ ತಿರುಗೇಟು: ಅಮೆರಿಕಾದಲ್ಲಿ 550 ಬಿಲಿಯನ್ ಡಾಲರ್ ಒಪ್ಪಂದ ರದ್ದು ಮಾಡುತ್ತಾ ಜಪಾನ್?