ಪ್ರಧಾನಿ ಮೋದಿಯವರ ಜಪಾನ್ ಭೇಟಿಯ ಹಿನ್ನೆಲೆಯಲ್ಲಿ ಜಪಾನ್ ತನ್ನ ಅಮೆರಿಕಾ ಭೇಟಿ ರದ್ದುಗೊಳಿಸಿದೆ. ಅಮೆರಿಕದಲ್ಲಿ 550 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಉದ್ದೇಶಿಸಿದ್ದ ಜಪಾನ್, ಟ್ರಂಪ್ ಹೇಳಿಕೆಯಿಂದಾಗಿ ಗೊಂದಲಕ್ಕೊಳಗಾಗಿದ್ದು, ಈಗ ಭಾರತದ ಪ್ರಧಾನಿ ಭೇಟಿಗೂ ಕೆಲ ಕ್ಷಣ ಮೊದಲು ಈ ಅಮೆರಿಕಾ ಭೇಟಿ ನಿಲ್ಲಿಸಿದೆ
ನವದೆಹಲಿ/ಟೊಕಿಯೋ: ಪ್ರಧಾನಿ ಮೋದಿಯವರು ಎರಡು ದಿನಗಳ ಭೇಟಿಗಾಗಿ ಈಗಾಗಲೇ ಜಪಾನ್ ರಾಜಧಾನಿ ಟೋಕಿಯೋಗೆ ತಲುಪಿದ್ದಾರೆ. ಆದರೆ ಈ ಭೇಟಿಗೂ ಮೊದಲು ಜಪಾನ್ ತನ್ನ ಅಮೆರಿಕಾ ಭೇಟಿಯನ್ನು ತಡೆ ಹಿಡಿದಿದೆ. ಜಪಾನ್‌ನ ವ್ಯಾಪಾರ ಸಮಲೋಚಕ(trade negotiator)ರ್ಯೋಸಿ ಅಕಾಜಾವಾ ಅವರು, ಕೊನೆಕ್ಷಣದಲ್ಲಿ ತಮ್ಮ ಅಮೆರಿಕಾ ಭೇಟಿಯನ್ನು ರದ್ದು ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟೋಕಿಯೋಗೆ ಭೇಟಿ ನೀಡುವ ಕೆಲ ಗಂಟೆಗಳ ಮೊದಲು ಈ ಬೆಳವಣಿಗೆ ನಡೆದಿದೆ. ಜಪಾನ್‌ನ ಟ್ರೆಡ್ ಸಮಾಲೋಚಕ ರ್ಯೋಸಿ ಅಕಾಜಾವಾ ಗುರುವಾರ ಅಮೆರಿಕಾಗೆ ಭೇಟಿ ನೀಡಬೇಕಿತ್ತು. ಅಮೆರಿಕದ ದಂಡನಾತ್ಮಕ ಸುಂಕಗಳನ್ನು ಸಡಿಲಿಸುವ ಸಲುವಾಗಿ ಜಪಾನ್ ಅಮೆರಿಕಕ್ಕೆ ನೀಡುವ 550 ಬಿಲಿಯನ್ ಡಾಲರ್ ಹೂಡಿಕೆ ಪ್ಯಾಕೇಜ್‌ನ ಅಂತಿಮಗೊಳಿಸುವಿಕೆಗಾಗಿ ಅವರು ಅಮೆರಿಕಾಗೆ ಭೇಟಿ ನೀಡುವವರಿದ್ದರು. ಆದರೆ ಜಪಾನ್‌ಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಬೆನ್ನಲೇ ಜಪಾನ್‌ನ ಟ್ರೆಡ್ ಸಮಾಲೋಚಕ ರ್ಯೋಸಿ ಅಕಾಜಾವಾ ಈ ಭೇಟಿಯನ್ನು ರದ್ದುಪಡಿಸಿದ್ದಾರೆ.
ಅಮೆರಿಕಾ ಟಾಕ್ಸ್ ವಾರ್ ತಡೆಗೆ ಅಲ್ಲಿ 550 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾಗಿದ್ದ ಜಪಾನ್:
ರ್ಯೋಸಿ ಅಕಾಜಾವಾ ಅಮೆರಿಕಾ ಭೇಟಿ ಕೊನೆಕ್ಷಣದಲ್ಲಿ ರದ್ದಾದ ಹಿನ್ನೆಲೆ ಅಮೆರಿಕಾದ ಜೊತೆ ಜಪಾನ್‌ನ 550 ಬಿಲಿಯನ್ ಡಾಲರ್ ಹೂಡಿಕೆ ವಿಳಂಬವಾಗುವ ಸಾಧ್ಯತೆ ಇದೆ. ಈ ಹೂಡಿಕೆಯ ಹಣಕಾಸು ವ್ಯವಹಾರಗಳು ಅದರಿಂದ ಬರುವ ಲಾಭಗಳಲ್ಲಿನ ವಿಭಜನೆಯ ಬಗ್ಗೆ ಚರ್ಚಿಸುವುದಕ್ಕೆ ಈ ಭೇಟಿ ನಿಗದಿಯಾಗಿತ್ತು. ಜಪಾನ್ ಅಮೆರಿಕಾದಲ್ಲಿ ಹೂಡಿಕೆ ಮಾಡುವ ಬಗ್ಗೆ ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಕೂಡ ಮಾಹಿತಿ ನೀಡಿದ್ದರು.
ಜಪಾನ್ ಸರ್ಕಾರದ ವಕ್ತಾರರಾದ ಯೋಶಿಮಾಸಾ ಹಯಾಶಿ(Yoshimasa Hayashi) ಅವರ ಪ್ರಕಾರ, ಅಮೆರಿಕದ ಜೊತೆಗಿನ ಈ ಡೀಲ್‌ನ ವೇಳೆ ಆಡಳಿತ ಮಟ್ಟದಲ್ಲಿ ಚರ್ಚಿಸಬೇಕಾದ ಹಲವು ಅಂಶಗಳಿವೆ ಎಂದು ಅರಿವಾಗಿದ್ದರಿಂದ ಈ ಭೇಟಿಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಇದೆ. ಜಪಾನ್‌ನ ಈ ಹೂಡಿಕೆಗೆ ಪ್ರತಿಯಾಗಿ ಟೋಕಿಯೊದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಶೇ. 15 ಕ್ಕೆ ಇಳಿಸುವ ಬಗ್ಗೆ ಅಮೆರಿಕ ಮತ್ತು ಜಪಾನ್ ಒಪ್ಪಂದಕ್ಕೆ ಬಂದಿವೆ. ಇದು ಹಿಂದಿನ ತೆರಿಗೆಗಿಂತ ಶೇ. 25 ಕ್ಕಿಂತಲೂ ಕಡಿಮೆ.
ಜಪಾನ್ ಅಮೆರಿಕಾದಲ್ಲಿ ಮಾಡ್ತಿರುವ ಹೂಡಿಕೆ ಹಣ ಸಂಪೂರ್ಣ ನಮ್ಮದು ಎಂದ ಟ್ರಂಪ್:
ಆದರೆ ಜಪಾನ್ ಮಾಡಲು ಮುಂದಾದ ಹೂಡಿಕೆಯ ಪ್ಯಾಕೇಜನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಪ್ಯಾಕೇಜ್ ನಮಗೆ ಇಷ್ಟವಾದಂತೆ ಹೂಡಿಕೆ ಮಾಡಲು ಇರುವ ನಮ್ಮ ಹಣ ಎಂದು ಹೇಳಿಕೊಂಡಿದ್ದರು ಮತ್ತು ಇದರಲ್ಲಿ ಅಮೆರಿಕವು ಲಾಭದ ಶೇ.90 ಪ್ರತಿಶತವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿಕೊಂಡಿದ್ದರು. ಟ್ರಂಪ್ ಅವರ ಈ ಮಾತಿನಿಂದಾಗಿ ಜಪಾನಿನ ಈ ಹೂಡಿಕೆಯ ಬಗ್ಗೆ ಜಪಾನ್ ಅಧಿಕಾರಿಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಹೂಡಿಕೆಯು ಪರಸ್ಪರ ಎರಡೂ ದೇಶಗಳಪ್ರಯೋಜನಗಳಿಗೆ ಒಳಪಟ್ಟಿರುತ್ತದೆ ಎಂದು ಒತ್ತಿ ಹೇಳಿದ್ದರು.
ಟ್ರಂಪ್ ಹೇಳಿಕೆಗೆ ಜಪಾನ್ ಅಧಿಕಾರಿಗಳ ಅಸಮಾಧಾನ:
ಪರಸ್ಪರ ಸುಂಕಗಳಿಗೆ ಸಂಬಂಧಿಸಿದ ಅಮೆರಿಕಾದ ಅಧ್ಯಕ್ಷೀಯ ಆದೇಶವನ್ನು ಆದಷ್ಟು ಬೇಗ ತಿದ್ದುಪಡಿ ಮಾಡಲು ಮತ್ತು ಆಟೋ ಬಿಡಿಭಾಗಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ಬಗ್ಗೆ ಅಧ್ಯಕ್ಷೀಯ ಆದೇಶವನ್ನು ಹೊರಡಿಸಲು ನಾವು ಬಲವಾಗಿ ವಿನಂತಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಜಪಾನ್ ವಕ್ತಾರ ಹಯಾಶಿಯವರು ಅಮೆರಿಕಾದ ಅಧ್ಯಕ್ಷೀಯ ಆದೇಶಕ್ಕೆ ತಿದ್ದುಪಡಿ ಮಾಡುವಂತೆ ಕೋರಿದ್ದರು. ಅಮೆರಿಕಾದಲ್ಲಿ ಜಪಾನ್‌ನ
ಹೂಡಿಕೆ ವಿವರಗಳ ಕುರಿತು ಜಂಟಿ ದಾಖಲೆಯನ್ನು ಬಿಡುಗಡೆ ಮಾಡುವ ಮೊದಲೇ ಅಮೆರಿಕಾವೂ ಜಪಾನಿನ ಸರಕುಗಳ ಮೇಲಿನ ಅತೀಯಾದ ಸುಂಕಗಳನ್ನು ತೆಗೆದುಹಾಕಲು ತಿದ್ದುಪಡಿ ಮಾಡಿದ ಅಧ್ಯಕ್ಷೀಯ ಕಾರ್ಯಕಾರಿ ಆದೇಶವನ್ನು ಪಡೆಯಬೇಕೆಂದು ಜಪಾನಿನ ಅಧಿಕಾರಿಗಳು ಪದೇ ಪದೇ ಹೇಳುತ್ತಿದ್ದಾರೆ.
ಆದರೆ ಟ್ರಂಪ್ ಹೇಳಿಕೆಯಿಂದಾಗಿ ಯಾವುದೇ ಸ್ಪಷ್ಟತೆ ಇಲ್ಲದೇ ಗೊಂದಲಕ್ಕೊಳಗಾಗಿರುವ ಜಪಾನ್ ತನ್ನ ವ್ಯಾಪಾರ ಸಮಾಲೋಚಕರ ಅಮೆರಿಕಾ ಪ್ರವಾಸವನ್ನು ಮರು ನಿಗದಿ ಮಾಡುತ್ತಾ ಅಥವಾ ಒಪ್ಪಂದವನ್ನೇ ರದ್ದುಪಡಿಸುತ್ತಾ ಎಂಬುದನ್ನು ಇನ್ನು ನಿರ್ಧರಿಸಲಾಗಿಲ್ಲ ಎಂದು ಜಪಾನಿನ ಮಾಧ್ಯಮ ಸಂಸ್ಥೆ ಕ್ಯೋಡೋ ನ್ಯೂಸ್ ವರದಿ ಮಾಡಿದೆ. ಆದರೆ ರಾಯಿಟರ್ಸ್ ಸುದ್ದಿಸಂಸ್ಥೆ ಅಕಾಜಾವಾ ಮುಂದಿನ ವಾರ ವಾಷಿಂಗ್ಟನ್‌ಗೆ ತೆರಳಬಹುದು ಎಂದು ವರದಿ ಮಾಡಿದೆ.
ಮತ್ತೊಂದೆಡೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭೇಟಿಗಾಗಿ ಜಪಾನ್‌ಗೆ ತೆರಳಿದ್ದಾರೆ. ಈ ಭೇಟಿಯು ಭಾರತ ಜಪಾನ್ ಭೇಟಿಯ 15 ನೇ ವಾರ್ಷಿಕ ಶೃಂಗಸಭೆ ಸೂಚಕವಾಗಿದ್ದು, ಇಲ್ಲಿ ಇಬ್ಬರು ನಾಯಕರು ತಮ್ಮ ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಅಂಶಗಳ ಬಗ್ಗೆ ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಟ್ರಂಪ್ ತೆರಿಗೆ ಸಮರ : ಹೇಗಿದೆ ಇಂದು ಭಾರತದಲ್ಲಿ ಬಂಗಾರದ ದರ
ಇದನ್ನೂ ಓದಿ: ಆನೆಯ ಹೊಡೆದ ಇಲಿಯಂತೆ: ಭಾರತದ ವಿರುದ್ಧ ತೆರಿಗೆ ಸಮರ, ಟ್ರಂಪ್ ನಡೆ ಬಗ್ಗೆ ಅಮೆರಿಕಾ ಆರ್ಥಿಕ ತಜ್ಞರ ಕಳವಳ
