ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಇರಾನ್-ಅಮೆರಿಕ ಎರಡನೇ ಹಂತದ ಸಂಧಾನ ಮಾತುಕತೆ ಹಠಾತ್ತನೆ ರದ್ದಾಗಿದೆ. ಅಮೆರಿಕ ನಿಯೋಗ ಬರುವ ಮೊದಲೇ ಇರಾನ್ ತಂಡವು ಪಾಕಿಸ್ತಾನಕ್ಕೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿ ನಿರ್ಗಮಿಸಿದ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ನಿಯೋಗದ ಭೇಟಿಯನ್ನು ರದ್ದುಗೊಳಿಸಿದರು.
ಇಸ್ಲಾಮಾಬಾದ್: ಮಧ್ಯಪ್ರಾಚ್ಯ ಸಂಘರ್ಷಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪಾಕ್ ರಾಜಧಾನಿಯಲ್ಲಿ ನಿಗದಿ ಆಗಿದ್ದ ಅಮೆರಿಕ-ಇರಾನ್ ನಡುವಿನ ಬಹುನಿರೀಕ್ಷಿತ 2ನೇ ಹಂತದ ಮಾತುಕತೆ ಶನಿವಾರ ಹಠಾತ್ ರದ್ದಾಗಿದೆ.
ಇಸ್ಲಾಮಾಬಾದ್‌ಗೆ ಆಗಮಿಸಿದ್ದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಜಿ ಅವರ ನಿಯೋಗ, ಅಮೆರಿಕ ನಿಯೋಗ ಬರುವ ಮುನ್ನವೇ ರಷ್ಯಾ ಹಾಗೂ ಟರ್ಕಿ ಪ್ರವಾಸಕ್ಕೆ ನಿರ್ಗಮಿಸಿತು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕ್‌ಗೆ ಹೊರಟಿದ್ದ ತಮ್ಮ ನಿಯೋಗಕ್ಕೆ ತಡೆ ಒಡ್ಡಿದರು. ಹೀಗಾಗಿ ಸಂಧಾನಕ್ಕೆ ಗ್ರಹಣ ಹಿಡಿದಂತಾಗಿದೆ. ಅಲ್ಲದೆ, ಮುಂದೆ ಮತ್ತೆ ಯುದ್ಧವೋ ಅಥವಾ ಸಂಧಾನಕ್ಕೆ ಹೊಸ ದಿನಾಂಕ ನಿಗದಿ ಆಗುವುದೋ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.
ಇರಾನ್ ನಿಯೋಗ ಬಿಗಿ ಪಟ್ಟು
ಶನಿವಾರ ನಸುಕಿನಲ್ಲಿ ಇಸ್ಲಾಮಾಬಾದ್‌ಗೆ ಆಗಮಿಸಿದ್ದ ಇರಾನ್ ನಿಯೋಗದ ಅಧ್ಯಕ್ಷತೆ ವಹಿಸಿದ್ದ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಜಿ ಅವರು, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರನ್ನು ಭೇಟಿ ಮಾಡಿ ಸಂಧಾನಕ್ಕೆ ಸಂಬಂಧಿಸಿದ ತಮ್ಮ ಷರತ್ತು ಹಾಗೂ ಕಳವಳಗಳನ್ನು ಪ್ರಸ್ತುತಪಡಿಸಿದರು. ‘ಅಮೆರಿಕವು ಆ ಕಳವಳಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ಪಂದಿಸಿದರೆ ಮುಖಾಮುಖಿ ಮಾತುಕತೆಗೆ ಸಿದ್ಧ’ ಎಂದರು. ಬಳಿಕ ತಮ್ಮ ಯೋಜಿತ ಪ್ರವಾಸದಂತೆ ಟರ್ಕಿ ಹಾಗೂ ಇರಾನ್‌ಗೆ ರಾತ್ರಿ ಪ್ರಯಾಣ ಬೆಳೆಸಿದರು.
ಅಮೆರಿಕ ಟೀಂ ಭೇಟಿ ರದ್ದು:
ಅರ್ಗಾಚಿ ನಿಯೋಗ ಪಾಕ್‌ನಿಂದ ನಿರ್ಗಮಿಸಿದಾಗ ಇನ್ನೂ ಅಮೆರಿಕ ನಿಯೋಗ ಆಗಮಿಸಿರಲಿಲ್ಲ. ಆದರೆ ಇರಾನ್ ಟೀಂ ನಿರ್ಗಮನ ಹಾಗೂ ಬಿಗಿಪಟ್ಟು ಗಮನಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ’ಅಮೆರಿಕದ ಸಂಧಾನಕಾರರಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಇರಾನ್ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಭೇಟಿ ನೀಡುವುದಿಲ್ಲ. ಮುಂದಿನ ಆಯ್ಕೆ ನಮ್ಮ ಕೈಯಲ್ಲಿದೆ’ ಎಂದು ಘೋಷಿಸಿದರು.
‘ಕೆಲವೇ ನಿಮಿಷದಲ್ಲಿ ಅವರು ಹೊರಡುವವರಿದ್ದರು. ಅವರಿಗೆ ನಾನು ಕರೆ ಮಾಡಿ, ‘ಅವರು (ಇರಾನ್) ಯಾವಾಗ ಬೇಕಾದರೂ ನಮಗೆ ಕರೆ ಮಾಡಬಹುದು. ಆದರೆ ಈಗ ಅವರು ಪಾಕ್‌ನಲ್ಲಿಲ್ಲ. ನೀವು ಏನೂ ಮಾತನಾಡದೆ ಸುಮ್ಮನೇ ಕುಳಿತುಕೊಳ್ಳಲು 18 ಗಂಟೆಗಳ ವಿಮಾನ ಪ್ರಯಾಣ ಮಾಡುವ ಅವಶ್ಯಜತೆ ಇಲ್ಲ ಎಂದು ಹೇಳಿದೆ’ ಎಂದರು.
ಅಮೆರಿಕ-ಇರಾನ್ ನಡುವಿನ ಮೊದಲ ಹಂತದ ಮಾತುಕತೆ ಏ.11ರಂದು ನಡೆದಿತ್ತು. ಮೊದಲ ಹಂತದ ಮಾತುಕತೆ ಯಾವುದೇ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿತ್ತು.


