ನವದೆಹಲಿ(ಆ.22): ಗಡಿಯಲ್ಲಿ ಭಾರತದ ವಿರುದ್ಧ ಜಿದ್ದು ಸಾಧಿಸುತ್ತಿರುವ ಚೀನಾ ಇದೀಗ ಭಾರತೀಯರ ಪುಣ್ಯ ಕ್ಷೇತ್ರವಾಗಿರುವ ಮಾನಸ ಸರೋವರದ ಬಳಿಯಲ್ಲಿ ಅತ್ಯಾಧುನಿಕ ಕ್ಷಿಪಣಿ ಉಡಾವಣಾ ನೆಲೆ ಸ್ಥಾಪಿಸುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಅನಾಮಧೇಯ ವ್ಯಕ್ತಿಯೊಬ್ಬರು ಟ್ವೀಟರ್‌ನಲ್ಲಿ ಈ ಸ್ಥಳದ ಉಪಗ್ರಹ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಮಾನಸ ಸರೋವರದ ದಂಡೆಯಲ್ಲಿ ಭೂಮಿಯಿಂದ ಅಂತರಿಕ್ಷಕ್ಕೆ ಉಡಾಯಿಸುವ ಕ್ಷಿಪಣಿ (ಸ್ಯಾಮ್‌) ನೆಲೆ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಚೀನಾ ನಿರ್ಮಿಸುತ್ತಿರುವುದು ಪತ್ತೆಯಾಗಿದೆ. ಮಾನಸ ಸರೋವರವು ಭಾರತ-ನೇಪಾಳ-ಚೀನಾ ಗಡಿಗಳು ಸಂಧಿಸುವ ಪ್ರದೇಶದಲ್ಲಿ ಚೀನಾದ ಗಡಿಯೊಳಗೆ ಇದೆ. ಇದು ಇತ್ತೀಚೆಗಷ್ಟೇ ನೇಪಾಳ ತನ್ನದು ಎಂದು ಹೇಳುತ್ತಿರುವ ಉತ್ತರಾಖಂಡದ ಲಿಪುಲೇಖ್‌ ಪಾಸ್‌ ಬಳಿ ಬರುತ್ತದೆ.

ಪಾಕ್-ಚೀನಾ ಕಣ್ತಪ್ಪಿಸಿ ಲಡಾಖ್‌ಗೆ ಭಾರತದಿಂದ ರಹಸ್ಯ ರಸ್ತೆ ಮಾರ್ಗ

ಈ ಸ್ಥಳಕ್ಕೆ ಹೊಸ ರಸ್ತೆಗಳನ್ನು ನಿರ್ಮಿಸಿರುವುದು ಜಾಗೂ ಸರೋವರದ ದಂಡೆಯಲ್ಲಿ ಕೆಂಪು ಟೆಂಟ್‌ಗಳನ್ನು ಹಾಕಿ ವಸತಿಗೆ ವ್ಯವಸ್ಥೆ ಮಾಡಿಕೊಂಡಿರುವುದು ಚಿತ್ರದಲ್ಲಿ ಕಾಣಿಸುತ್ತದೆ. ಜೊತೆಗೆ ಇಲ್ಲಿ ಒಂದು ಬೆಟಾಲಿಯನ್‌ನಷ್ಟುಸೈನಿಕರನ್ನು ಕೂಡ ಚೀನಾ ಜಮಾವಣೆ ಮಾಡಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಭಾರತ ಕೂಡ ಇತ್ತೀಚೆಗಷ್ಟೇ ಪೂರ್ವ ಲಡಾಖ್‌ನಲ್ಲಿ ಸ್ಯಾಮ್‌ ನೆಲೆ ಸ್ಥಾಪಿಸಿತ್ತು. ವಾಯುದಾಳಿ ನಡೆದರೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಈ ರೀತಿಯ ಕ್ಷಿಪಣಿ ನೆಲೆಗಳು ಗಡಿಯ ಬಳಿ ಇದ್ದರೆ ಅನುಕೂಲವಾಗುತ್ತದೆ. ಚೀನಾ ಈಗಾಗಲೇ ಪ್ಯಾಂಗಾಂಗ್‌ ಸರೋವರದ ಬಳಿ ಟಿಬೆಟ್‌ನ ಒಳಗೆ ಒಂದು ಕಡೆ ಹಾಗೂ ಟಿಬೆಟ್‌ನ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಸ್ಯಾಮ್‌ ಕ್ಷಿಪಣಿ ಉಡಾವಣಾ ವ್ಯವಸ್ಥೆ ಅಳವಡಿಸಿದೆ. ಇದೀಗ ಐದನೇ ಸ್ಯಾಮ್‌ ನೆಲೆ ಸ್ಥಾಪಿಸುತ್ತಿದೆ. ಚೀನಾ ಈಗಾಗಲೇ ಟಿಬೆಟ್‌ನಲ್ಲಿ ಸುರಂಗಗಳ ಒಳಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ತಂದು ಜಮಾವಣೆ ಮಾಡಿದೆ ಎಂದು ಹೇಳಲಾಗಿದೆ.

ಡಿಸೆಂಬರ್ ಅಂತ್ಯಕ್ಕೆ ಮೊಬೈಲ್ ಇಂಡಸ್ಟ್ರಿಯಿಂದ 50 ಸಾವಿರ ಉದ್ಯೋಗ ಸೃಷ್ಟಿ!

ಭಾರತದ ಗಡಿಯಲ್ಲಿರುವ ಗಲ್ವಾನ್‌ ಕಣಿವೆ, ಹಾಟ್‌ ಸ್ಟ್ರಿಂಗ್‌ ಹಾಗೂ ಪ್ಯಾಂಗಾಂಗ್‌ ಸರೋವರದ ಪ್ರದೇಶಕ್ಕೆ ಚೀನಾ ಕೆಲ ತಿಂಗಳ ಹಿಂದೆ ಅಕ್ರಮ ಪ್ರವೇಶ ಮಾಡಿ ಇನ್ನೂ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ಹಿಂಪಡೆಯದೆ ಉದ್ಧಟತನ ತೋರುತ್ತಿದೆ. ಈಗ ಅಂತಾರಾಷ್ಟ್ರೀಯ ಗಡಿಗೆ ಕೇವಲ 100 ಕಿ.ಮೀ. ದೂರದಲ್ಲಿರುವ ಮಾನಸ ಸರೋವರದ ದಂಡೆಯಲ್ಲಿ ಕ್ಷಿಪಣಿ ನೆಲೆ ಸ್ಥಾಪಿಸುವ ಮೂಲಕ ತನ್ನ ಹಿಡಿತವನ್ನು ಮತ್ತಷ್ಟುಬಿಗಿಗೊಳಿಸುತ್ತಿರುವ ಶಂಕೆ ವ್ಯಕ್ತವಾಗಿದೆ.