*ಆಮ್ಲಜನಕದೊಂದಿಗೆ ಸೇರಿ ಬೆಂಕಿ ಉಗುಳುವ ಅಸ್ತ್ರ ಬಳಕೆ*ವೈರಿಗಳ ಮೇಲೆ ರಷ್ಯಾ ರುಬೆಲ್‌ ದಾಳಿ!*ತೈಲ ಖರೀದಿಗೆ ರುಬೆಲ್‌ನಲ್ಲೇ ಹಣ ಪಾವತಿಗೆ ಸೂಚನೆ*ನಿರ್ಬಂಧ ವಿಧಿಸಿದ ದೇಶಗಳ ವಿರುದ್ಧ ರಷ್ಯಾ ಹೊಸ ಅಸ್ತ್ರ 

ಲೀವ್‌ (ಮಾ. 25): ಸತತ ಒಂದು ತಿಂಗಳಿಂದ ಉಕ್ರೇನ್‌ ವಿರುದ್ಧ ಭೀಕರ ಯುದ್ಧ ಸಾರಿರುವ ರಷ್ಯಾ, (Russia Ukraine War) ಗುರುವಾರ ಉಕ್ರೇನ್‌ ಮೇಲೆ ಫಾಸ್ಫರಸ್‌ (ರಂಜಕ) ಬಾಂಬ್‌ ದಾಳಿ (Phosphorus Bombs) ನಡೆಸಿ, ಜನರನ್ನು ಹತ್ಯೆಗೈದಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೋದಿಮಿರ್‌ ಜೆಲೆನ್‌ಸ್ಕಿ ಆರೋಪಿಸಿದ್ದಾರೆ. ನ್ಯಾಟೋ ಪ್ರತಿನಿಧಿಗಳೊಂದಿಗೆ ಆನ್‌ಲೈನ್‌ ಮೂಲಕ ಚರ್ಚೆ ನಡೆಸಿದ ಅವರು, ‘ರಷ್ಯಾ ಗುರುವಾರ ಬೆಳಗ್ಗೆ ಫಾಸ್ಫರಸ್‌ ಬಾಂಬ್‌ ದಾಳಿ ನಡೆಸಿದೆ. ರಂಜಕವು ಆಮ್ಲಜನದೊಂದಿಗೆ ಸೇರಿದಾಗ ಬೆಂಕಿ ಉತ್ಪತ್ತಿಯಾಗುತ್ತದೆ. ಇದರಿಂದ ಭಾರೀ ಪ್ರಮಾಣದ ಹಾನಿಯುಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು. ಇದೇ ವೇಳೆ ನಾವು ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಬೂದು ಪ್ರದೇಶದಲ್ಲಿ ನಿಂತು ಸಾಮಾನ್ಯ ಮೌಲ್ಯಗಳನ್ನು ರಕ್ಷಿಸುತ್ತಿರುವಂತೆ ಭಾಸವಾಗುತ್ತಿದೆ ಎಂದು ಭಾವನಾತ್ಮಕವಾಗಿ ಹೇಳಿದರು.

ಏನಿದು ಫಾಸ್ಫರಸ್‌ ಬಾಂಬ್‌?: ರಂಜಕವು ಗಾಳಿಯಲ್ಲಿ ಆಮ್ಲಜನಕದೊಂದಿಗೆ ಸೇರಿದಾಗ ಬೆಂಕಿ ಹೊತ್ತಿಕೊಳ್ಳುತ್ತದೆ. ರಂಜಕದ ಜ್ವಾಲೆಗಳು ನೂರಾರು ಚದರ ಕಿಲೋಮೀಟರ್‌ಗಳವರೆಗೆ ವ್ಯಾಪಿಸುತ್ತವೆ. ವಿಶಿಷ್ಟವಾದ ಬೆಳ್ಳುಳ್ಳಿಯಂತಹ ದುರ್ವಾಸನೆಯೊಂದಿಗೆ ದಟ್ಟವಾದ ಬಿಳಿ ಹೊಗೆಯನ್ನು ಉತ್ಪಾದಿಸುತ್ತದೆ. ಹೊಗೆ ಅತಿಗೆಂಪು ದೃಷ್ಟಿಮತ್ತು ಶಸ್ತ್ರಾಸ್ತ್ರ-ಟ್ರ್ಯಾಕಿಂಗ್‌ ವ್ಯವಸ್ಥೆಗಳನ್ನು ತಡೆಯುತ್ತದೆ.

ಇದನ್ನೂ ಓದಿಉಕ್ರೇನ್ ಯುದ್ಧದ ನಡುವೆ ಮುರಿದು ಬಿತ್ತು ಪುಟಿನ್ ಮಗಳ ಮದುವೆ, ರಷ್ಯಾಧ್ಯಕ್ಷನ ಆ ಕನಸೂ ನುಚ್ಚುನೂರು!

ವೈರಿಗಳ ಮೇಲೆ ರಷ್ಯಾ ರುಬೆಲ್‌ ದಾಳಿ: ಉಕ್ರೇನ್‌ ಮೇಲೆ ಆಕ್ರಮಣ ನಡೆಸಿದ ನಂತರ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ತನ್ನ ಮೇಲೆ ಹೇರಿರುವ ನಿರ್ಬಂಧಕ್ಕೆ ಪ್ರತಿಯಾಗಿ ಇದೀಗ ರಷ್ಯಾ ಸರ್ಕಾರ, ಆ ದೇಶಗಳ ಮೇಲೆ ‘ರುಬೆಲ್‌’ ದಾಳಿ ನಡೆಸಿದೆ. ನಮ್ಮ ಸ್ನೇಹಿತರಲ್ಲದ ದೇಶಗಳು ನಮ್ಮಿಂದ ಖರೀದಿಸಿದ ತೈಲ ಮತ್ತು ಅನಿಲಕ್ಕೆ ರಷ್ಯಾ ಕರೆನ್ಸಿಯಾದ ರುಬೆಲ್‌ನಲ್ಲೇ ಹಣ ಪಾವತಿಸಬೇಕು ಎಂದು ರಷ್ಯಾ ಹೊಸ ಪಟ್ಟು ಹಿಡಿದಿದೆ.

ಹೀಗಾಗಿ ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೊರತಾಗಿಯೂ, ತಮ್ಮ ಬಹುಪಾಲು ತೈಲ ಮತ್ತು ಅನಿಲ ಅಗತ್ಯವನ್ನೂ ಈಗಲೂ ರಷ್ಯಾದಿಂದ ಪೂರೈಸಿಕೊಳ್ಳುತ್ತಿರುವ ಯುರೋಪ್‌ ಮತ್ತು ನ್ಯಾಟೋ ದೇಶಗಳಿಗೆ ಹೊಸ ಸಮಸ್ಯೆ ಎದುರಾಗಿದೆ.

ರಷ್ಯಾ ಮೇಲೆ ಅಮೆರಿಕ ನಿರ್ಬಂಧ ಹೇರಿದ ಬಳಿಕ ಡಾಲರ್‌ ಮೂಲಕ ಹಣ ಪಾವತಿ ಸ್ಥಗಿತ ಮಾಡಲಾಗಿತ್ತು. ಬಳಿಕ ಯುರೋಪಿಯನ್‌ ಒಕ್ಕೂಟದ ಯೂರೋ, ಜಪಾನ್‌ನ ಯೆನ್‌ ಮೇಲೂ ನಿರ್ಬಂಧ ಜಾರಿಗೊಂಡ ಕಾರಣ, ರಷ್ಯಾದ ಕಂಪನಿಗಳ ರಫ್ತು ಮತ್ತು ಆಮದಿಗೆ ಹೊಡೆತ ಬಿದ್ದಿತ್ತು. ಆದರೆ ಇದೀಗ ರಷ್ಯಾ ಸರ್ಕಾರ, ರುಬೆಲ್‌ ಮೂಲಕವೇ ಹಣ ಪಾವತಿ ಮಾಡಬೇಕು ಎಂದು ಷರತ್ತು ಹಾಕಿರುವ ಕಾರಣ ಅವುಗಳ ಹೊಸ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿವೆ.

ಇದನ್ನೂ ಓದಿ:ಯುದ್ಧದಲ್ಲಿ 15 ಸಾವಿರ ರಷ್ಯನ್‌ ಸೈನಿಕರು ಸಾವು? ಸಿಕ್ಕಿಬಿದ್ದ ಯೋಧರಿಗೆ ಉಕ್ರೇನಲ್ಲಿ ಸಂತಾನಹರಣ!

ರಾಸಾಯನಿಕ ದಾಳಿ ಎದುರಿಸಲು ಉಕ್ರೇನ್‌ಗೆ ನ್ಯಾಟೋ ನೆರವು:  ಉಕ್ರೇನ್‌ ಮೇಲೆ ರಷ್ಯಾ ಸೇನೆ ರಾಸಾಯನಿಕ ಮತ್ತು ಜೈವಿಕ ಅಸ್ತ್ರ ಬಳಸುವ ಸಾಧ್ಯತೆ ದಟ್ಟವಾದ ಬೆನ್ನಲ್ಲೇ, ಇಂಥ ದಾಳಿ ಎದುರಿಸಲು ಉಕ್ರೇನ್‌ಗೆ ಎಲ್ಲಾ ನೆರವು ನೀಡುವುದಾಗಿ ನ್ಯಾಟೋ ದೇಶಗಳು ಘೋಷಿಸಿವೆ. ಈ ಕುರಿತು ಗುರುವಾರ ಇಲ್ಲಿ ಹೇಳಿಕೆ ನೀಡಿರುವ ನ್ಯಾಟೋ ದೇಶಗಳ ಪ್ರಧಾನ ಕಾರ್ಯದರ್ಶಿ ಜೆನ್ಸ್‌ ಸ್ಟೋಲ್ಟೆನ್‌ಬರ್ಗ್‌, ರಷ್ಯಾ ನಡೆಸಬಹುದಾದ ಇಂಥ ಯಾವುದೇ ದಾಳಿ ಕೇವಲ ಉಕ್ರೇನ ಮಾತ್ರವಲ್ಲದೇ, ನೆರೆಯ ನ್ಯಾಟೋ ದೇಶಗಳ ಮೇಲೂ ಗಂಭೀರ ಪರಿಣಾಮ ಹೊಂದಿರಲಿದೆ. ಹೀಗಾಗಿ ನಾವು ಇಂಥ ದಾಳಿ ಎದುರಿಸಲು ಉಕ್ರೇನ್‌ಗೆ ರಾಸಾಯನಿಕ ದಾಳಿ ಪತ್ತೆ ಉಪಕರಣ, ರಕ್ಷಣಾ ಉಪಕರಣ ಮತ್ತು ವೈದ್ಯಕೀಯ ನೆರವು ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.