*ರಷ್ಯನ್ ಸೈನಿಕರ ಸಂತಾನಹರಣ ಮಾಡಿ: ಆಸ್ಪತ್ರೆ ಸೂಚನೆ*ಅವರು ಮನುಷ್ಯರಲ್ಲ, ಜಿರಳೆಗಳಿದ್ದಂತೆ: ಆಸ್ಪತ್ರೆ ಮುಖ್ಯಸ್ಥ
ಸಿಕ್ಕಿಬಿದ್ದ ರಷ್ಯನ್ನರಿಗೆ ಉಕ್ರೇನಲ್ಲಿ ಸಂತಾನಹರಣ: ಮೂರು ವಾರಗಳಿಂದ ರಷ್ಯಾದ ದಾಳಿಗೆ ತತ್ತರಿಸಿರುವ ಉಕ್ರೇನ್ ಇದೀಗ ರಷ್ಯಾ ಸೈನಿಕರ ವಿರುದ್ಧ ಅಮಾನವೀಯ ಪ್ರತೀಕಾರಕ್ಕೆ ಮುಂದಾಗಿದ್ದು, ಸಿಕ್ಕಿಬೀಳುವ ಎಲ್ಲಾ ರಷ್ಯನ್ ಸೈನಿಕರಿಗೆ ಸಂತಾನಹರಣ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ‘ರಷ್ಯನ್ ಸೈನಿಕರು ಜಿರಳೆಯಿದ್ದಂತೆ. ಅವರಿಗೆ ಸಂತಾನಹರಣ ಮಾಡಿ’ ಎಂದು ಯುದ್ಧಭೂಮಿಯಲ್ಲಿ ಗಾಯಗೊಳ್ಳುವ ಸೈನಿಕರು ಹಾಗೂ ನಾಗರಿಕರಿಗೆ ಚಿಕಿತ್ಸೆ ನೀಡುವ ಪೂರ್ವ ಉಕ್ರೇನ್‌ನ ಮೊಬೈಲ್ ಆಸ್ಪತ್ರೆಯ ಮುಖ್ಯಸ್ಥ ತನ್ನ ವೈದ್ಯರಿಗೆ ಬಹಿರಂಗವಾಗಿ ಸೂಚನೆ ನೀಡಿದ್ದಾನೆ.
2014ರಿಂದಲೂ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದೆ. ಅಂತಹ ದಾಳಿಗಳಲ್ಲಿ ಗಾಯಗೊಳ್ಳುವವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲು ಗೆನಾಡಿಯ್ ಡ್ರುಜೆಂಕೋ ಎಂಬ ವಕೀಲ ‘ಫಸ್ಟ್ ವಾಲೆಂಟರಿ ಮೊಬೈಲ್ ಹಾಸ್ಪಿಟಲ್’ ಎಂಬ ಸಂಚಾರಿ ಆಸ್ಪತ್ರೆ ಆರಂಭಿಸಿದ್ದಾನೆ. ಅದರಲ್ಲಿ 500ಕ್ಕೂ ಹೆಚ್ಚು ವೈದ್ಯರು ಮತ್ತು ನರ್ಸ್‌ಗಳು ಇದ್ದಾರೆ. ‘ವ್ಯಕ್ತಿಯೊಬ್ಬ ಗಾಯಗೊಂಡರೆ ಆತ ಶತ್ರುವಾಗಿರುವುದಿಲ್ಲ, ಬದಲಿಗೆ ರೋಗಿ ಮಾತ್ರ ಆಗಿರುತ್ತಾನೆ. ಹೀಗಾಗಿ ನಿಮ್ಮಲ್ಲಿಗೆ ಬರುವವರು ಯಾರೇ ಆಗಿರಲಿ, ಅವರ ಜೊತೆ ಮಾನವೀಯವಾಗಿ ನೋಡಿಕೊಳ್ಳಿ ಎಂದೇ ನಾನು ಹೇಳುತ್ತಾ ಬಂದಿದ್ದೆ. ಆದರೆ, ಈಗ ನಮ್ಮ ವೈದ್ಯರಿಗೆ ರಷ್ಯನ್ ಸೈನಿಕರ ಸಂತಾನಹರಣ ಮಾಡುವಂತೆ ಕಟ್ಟುನಿಟ್ಟಾಗಿ ಹೇಳಿದ್ದೇನೆ. ಏಕೆಂದರೆ ಅವರೆಲ್ಲ ಜಿರಳೆಗಳಿದ್ದಂತೆ, ಖಂಡಿತ ಮನುಷ್ಯರಲ್ಲ’ ಎಂದು ಡ್ರುಜೆಂಕೋ ಹೇಳಿದ್ದಾನೆ.
ಇದನ್ನೂ ಓದಿ:ಉಕ್ರೇನ್ ಮೇಲೆ ಸೂಪರ್‌ಬಾಂಬ್ ಅಟ್ಯಾಕ್: ಅಣ್ವಸ್ತ್ರ ದಾಳಿ ಸಾಧ್ಯತೆ ತಳ್ಳಿ ಹಾಕದ ರಷ್ಯಾ
ಈ ಕುರಿತು ಉಕ್ರೇನ್-24 ಚಾನಲ್‌ಗೆ ಸಂದರ್ಶನ ನೀಡಿರುವ ಆತ, ‘ರಷ್ಯಾದ ಒಬ್ಬೊಬ್ಬರೂ ಇಲ್ಲಿ ಸಾಯುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಸಾಯುತ್ತಾರೆ. ಇಲ್ಲಿಗೆ ಬರುವವರಿಗೆ ಉಕ್ರೇನ್ ಮಣ್ಣಿನ ರುಚಿ ತೋರಿಸುತ್ತೇವೆ’ ಎಂದೂ ಎಚ್ಚರಿಸಿದ್ದಾನೆ.
15 ಸಾವಿರ ರಷ್ಯನ್ ಸೈನಿಕರು ಸಾವು: ನ್ಯಾಟೋ: ಉಕ್ರೇನ್ ಮೇಲಿನ ಆಕ್ರಮಣ ಆರಂಭವಾಗಿ ಸುಮಾರು ಒಂದು ತಿಂಗಳ ಅವಧಿಯಲ್ಲಿ 7ರಿಂದ 15 ಸಾವಿರ ರಷ್ಯಾ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ನ್ಯಾಟೋದ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. 2ನೇ ಮಹಾಯುದ್ಧದ ನಂತರ ಅತಿದೊಡ್ಡ ಆಕ್ರಮಣದಲ್ಲಿ ರಷ್ಯಾ ತೊಡಗಿಕೊಂಡಿದೆ. ಇದಕ್ಕೆ ಉಕ್ರೇನ್ ತೋರಿರುವ ಪ್ರತಿರೋಧದಲ್ಲಿ ರಷ್ಯಾ ತನ್ನ ಸೈನಿಕರನ್ನು ಕಳೆದುಕೊಳ್ಳುತ್ತಿದೆ.
ಇದರೊಂದಿಗೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳಿಂದ ರಷ್ಯಾ ಮತ್ತಷ್ಟುತೊಂದರೆಗೆ ಸಿಲುಕಿಕೊಂಡಿದೆ. ಉಕ್ರೇನ್ ಹೆಚ್ಚಿನ ಮಿಲಿಟರಿ ಸಹಾಯ ಒದಗಿಸುವ ನಿಟ್ಟಿನಲ್ಲಿ ಬ್ರಸೆಲ್ಸ್ ಮತ್ತು ವಾರ್ಸಾದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಧ್ಯಕ್ಷತೆಯಲ್ಲಿ ನ್ಯಾಟೋ ರಾಷ್ಟ್ರಗಳು ಸಭೆ ನಡೆಸಲಿವೆ ಎಂದು ಅವರು ಹೇಳಿದ್ದಾರೆ.
ತನ್ನ ಯೋಧರ ಕೊಲ್ಲಲು ಕಿಲ್ಲಿಂಗ್ ಸ್ಕ್ವಾಡ್ ಕಳಿಸಿದ ರಷ್ಯಾ: ರಷ್ಯಾದ ಸೈನಿಕರು ಉಕ್ರೇನ್‌ನಲ್ಲಿ ಯುದ್ಧ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಯುದ್ಧದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ತನ್ನ ಸೈನಿಕರ ಹತ್ಯೆಗಾಗಿ ಪುಟಿನ್ ಸರ್ಕಾರ ಕಿಲ್ಲಿಂಗ್ ಸ್ಕಾಡ್‌ಗಳನ್ನು ನಿಯೋಜಿಸಿದೆ.
ಬಹಳಷ್ಟು ರಷ್ಯಾದ ಯೋಧರು ಯುದ್ಧವನ್ನೇ ಬಯಸಿಲ್ಲ. ಹೀಗಾಗಿ ಉಕ್ರೇನ್ ಪಡೆಗಳು ಎದುರಾಗಿದ್ದೇ ಯಾವುದೇ ಪ್ರತಿರೋಧವನ್ನು ಒಡ್ಡದೇ ಶರಣಾಗುತ್ತಿವೆ. ಪಡೆಗಳಲ್ಲಿ ಬಹುತೇಕರು ಟ್ಯಾಂಕರ್‌ಗಳನ್ನು ಬಿಟ್ಟು ರಷ್ಯಾಕ್ಕೆ ಪಲಾಯನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಯೋಧರನ್ನು ಯುದ್ಧಭೂಮಿಯಲ್ಲಿ ಹೋರಾಡುವಂತೆ ಮಾಡುವುದೇ ರಷ್ಯಾಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ:ವಿಶ್ವವನ್ನೇ ಬೆಚ್ಚಿ ಬೀಳಿಸಿದ ಪುಟಿನ್‌ಗೆ ಕಾಡುತ್ತಿದೆ ಆ ಭೀತಿ: 1,000 ವೈಯಕ್ತಿಕ ಸಿಬ್ಬಂದಿಗೆ ಗೇಟ್‌ಪಾಸ್!
ಮಂಗಳವಾರ ಸುಮಿಯಲ್ಲಿ 300ಕ್ಕೂ ಹೆಚ್ಚು ಯೋಧರು ರಷ್ಯಾದ ಕಮಾಂಡರ್‌ಗಳ ಕದನದ ಆದೇಶವನ್ನು ಪಾಲಿಸಲು ನಿರಾಕರಿಸಿದ್ದಾರೆ. ಪ್ರಾಣಭೀತಿಯಿಂದಾಗಿ ಸುಮಿಯ ಸಂಘರ್ಷ ವಲಯದಿಂದ ಪಲಾಯನ ಮಾಡಿದ್ದಾರೆ. ಸೋಮವಾರ ದಕ್ಷಿಣ ಖೇರ್ಸನ್ ಹಾಗೂ ಮಿಕೋಲೈವ್‌ನಲ್ಲಿ ಕೂಡಾ ರಷ್ಯಾದ ಯೋಧರು ಉಕ್ರೇನಿನ ಸೈನಿಕರಿಗೆ ಪ್ರತಿದಾಳಿ ಒಡ್ಡದೇ ಸುಮ್ಮನೆ ಯುದ್ಧ ಭೂಮಿ ಬಿಟ್ಟು ತೆರಳುತ್ತಿದ್ದಾರೆ.
ಯೋಧರನ್ನು ತಮ್ಮ ಆದೇಶ ಪಾಲಿಸುವಂತೆ ಮಾಡಲು ಕಮಾಂಡರ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಯುದ್ಧಭೂಮಿ ಬಿಟ್ಟು ತೆರಳಲು ಯತ್ನಿಸಿದರೆ ತಾವೇ ಅವರನ್ನು ಗುಂಡು ಹೊಡೆದು ಸಾಯಿಸುವುದಾಗಿ ರಷ್ಯಾದ ಕಮಾಂಡರ್‌ಗಳು ತಮ್ಮದೇ ಯೋಧರಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎನ್ನಲಾಗಿದೆ.
ತಮ್ಮ ಕಾಲಿಗೆ ತಾವೇ ಗುಂಡು ಹೊಡೆದುಕೊಳ್ಳುತ್ತಿರುವ ಯೋಧರು: ಯುದ್ಧ ಮಾಡಲು ಬಯಸದ ರಷ್ಯಾದ ಯೋಧರು ಯುದ್ಧಭೂಮಿಯಿಂದ ಮನೆಗೆ ಮರಳಲು ಹೊಸ ಪ್ಲಾನ್ ಮಾಡಿದ್ದಾರೆ. ಉಕ್ರೇನಿನ ಸೇನೆಗೆ ಯಾವುದೇ ಪ್ರತಿರೋಧವನ್ನು ಒಡ್ಡದೇ ತಮ್ಮ ಕಾಲಿಗೆ ತಾವೇ ಗುಂಡು ಹೊಡೆದುಕೊಂಡು ಗಾಯಗೊಂಡು ಚಿಕಿತ್ಸೆಯ ನೆಪದಲ್ಲಿ ತವರಿಗೆ ಮರಳುತ್ತಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಜೊತೆಗೆ ರಷ್ಯಾದ ಯೋಧರಿಗೆ ಆಹಾರದ ಕೊರತೆ ಕಾಡುತ್ತಿದೆ. ಯುದ್ಧದ ಕಮಾಂಡ್ ರಚನೆಗಳು ಅಸ್ತವ್ಯಸ್ಥವಾಗಿದೆ. ಯುದ್ಧೋತ್ಸಾಹವನ್ನು ಕಳೆದುಕೊಂಡ ಸೈನಿಕರು ಖಿನ್ನತೆಗೆ ಒಳಗಾಗಿದ್ದಾರೆ ಎಂದು ಅಮೆರಿಕ ಹಾಗೂ ಬ್ರಿಟನ್‌ನ ಗುಪ್ತಚರ ಇಲಾಖೆ ವರದಿ ಮಾಡಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
