*ನಾಲ್ಕು ಸಂಧಾನ ಸಭೆ ನಡೆದರೂ ಇನ್ನೂ ನಿಲ್ಲದ ಕದನ: ಉಭಯ ದೇಶಗಳಲ್ಲಿ ಸಾವಿರಾರು ಮಂದಿ ಸಾವು*ಉಕ್ರೇನ್‌ನಿಂದ 35 ಲಕ್ಷ ಮಂದಿ ವಲಸೆ: ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳಿಂದ ಆರ್ಥಿಕ ದಿಗ್ಭಂಧನ*ಅನಿರ್ಬಂಧಿತ ಮಿಲಿಟರಿ ನೆರವಿಗೆ ಜೆಲೆನ್‌ಸ್ಕಿ ಮನವಿ: ನ್ಯಾಟೋ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ವಿನಂತಿ

ಮಾಸ್ಕೋ (ಮಾ. 25) : ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಅಪ್ರಚೋದಿತ ದಾಳಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ಪುಟ್ಟರಾಷ್ಟ್ರ ಉಕ್ರೇನ್‌ ನ್ಯಾಟೋ ಸೇರ್ಪಡೆ ವಿರೋಧಿಸಿ ಅದನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಫೆ.24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಏಕಾಏಕಿ ಯುದ್ಧ ಘೋಷಿಸಿದರು. 2021ರ ಅಂತ್ಯದ ವೇಳೆಗೇ ಉಕ್ರೇನ್‌ ವಿರುದ್ಧ ಯುದ್ಧಕ್ಕೆ ಸಕಲ ತಯಾರಿ ಮಾಡಿಕೊಂಡು ಗುಪ್ತವಾಗಿ ಗಡಿಯಲ್ಲಿ 1.50 ಲಕ್ಷ ಸೇನೆ ನಿಯೋಜಿಸಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಏಕಾಏಕಿ ಯುದ್ಧ ಘೋಷಿಸಿ, ಉಕ್ರೇನ್‌ ಮೇಲೆ ಸರಣಿ ವೈಮಾನಿಕ ಮತ್ತು ಕ್ಷಿಪಣಿ ದಾಳಿ ನಡೆಸುವ ಮೂಲಕ ದೇಶದ ಮೂಲಭೂತ ಸೌಕರ‍್ಯಗಳ ಮೇಲೆ ನೇರವಾಗಿ ದಾಳಿ ನಡೆಸಿದರು. ಇತ್ತ ಉಕ್ರೇನ್‌ ಪಡೆಗಳೂ ಪ್ರತಿದಾಳಿ ನಡೆಸಿ ರಷ್ಯಾ ಪಡೆಗಳನ್ನು ಮಣಿಸುವ ಸಕಲ ಪ್ರಯತ್ನ ಮಾಡುತ್ತಿವೆ.

ಒಂದು ತಿಂಗಳಿನಿಂದ ರಷ್ಯಾ ಪಡೆಗಳು ಉಕ್ರೇನಿನ ಪ್ರಮುಖ ನಗರಗಳ ಮೇಲೆ ನಿರಂತರ ರಾಕೆಟ್‌, ಶೆಲ್‌, ಗುಂಡಿನ ಮಳೆಗರೆದು ವಿಧ್ವಂಸಕ ಕೃತ್ಯ ನಡೆಸುತ್ತಿವೆ. ರಾಜಧಾನಿ ಕೀವ್‌ ವಶಪಡಿಸಿಕೊಳ್ಳುವ ನಿರಂತರ ಪ್ರಯತ್ನದಲ್ಲಿವೆ. 2ನೇ ಅತಿ ದೊಡ್ಡ ನಗರ ಖಾರ್ಕೀವ್‌ ಮೇಲೆ ದಾಳಿ ಮಾಡಿ ಅಕ್ಷರಶಃ ನರಕಸದೃಶ ಮಾಡಿವೆ. ಅಷ್ಟೇ ಅಲ್ಲದೆ ಪ್ರಮುಖ ನಗರಗಳ ಶಾಲೆ ಮತ್ತು ಆಸ್ಪತ್ರೆ ಮೇಲೂ ರಷ್ಯಾ ಗುಂಡಿನ ದಾಳಿ ಆರಂಭಿಸಿದೆ.

ಇದನ್ನೂ ಓದಿ:Russia Ukraine War: ಉಕ್ರೇನ್‌ ಮೇಲೆ ಫಾಸ್ಫರಸ್‌ ಬಾಂಬ್‌ ದಾಳಿ

ಮಾ.1ರಂದು ಖಾರ್ಕೀವ್‌ನ ಸರ್ಕಾರಿ ಕಟ್ಟಡ ಮೇಲೆ ರಷ್ಯಾ ಪಡೆಗಳು ನಡೆಸಿದ ದಾಳಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ. ಮಾ.9ರಂದು ಮರಿಯುಪೋಲ್‌ನಲ್ಲಿ ಆಸ್ಪತ್ರೆ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 3 ಮಂದಿ ಮೃತಪಟ್ಟು, 17 ಜನರು ಗಾಯಗೊಂಡಿದ್ದಾರೆ. ಮಾ.16ರಂದು ಮರಿಯುಪೋಲ್‌ನ ಐತಿಹಾಸಿಕ ಥಿಯೇಟರ್‌ ಮೇಲಿನ ಬಾಂಬ್‌ ದಾಳಿ ನಡೆಸಿತು. 

ನೆಲಮಾಳಿಗೆಯಲ್ಲಿ ಅಡಗಿದ್ದ ನೂರಾರು ಜನರು ಅದೃಷ್ಟವಶಾತ್‌ ಬದುಕುಳಿದರು. ಹೀಗೆ 2ನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಸಾವಿರಾರು ಮಂದಿ ಬಲಿಯಾಗಿದ್ದಾರೆ, ಸಾಕಷ್ಟುಆಸ್ತಿ-ಪಾಸ್ತಿ ಸಹ ಹಾನಿಯಾಗಿದೆ. ಅಂದಾಜು 35 ಲಕ್ಷ ಜನರು ಉಕ್ರೇನ್‌ ತೊರೆದು ವಲಸೆ ಹೋಗಿದ್ದಾರೆ. ಈ ನಡುವೆ ಯುದ್ಧ ನಿಲ್ಲಿಸುವ ಸಂಬಂಧ ಉಭಯ ದೇಶಗಳು ನಾಲ್ಕು ಬಾರಿ ಸಂಧಾನ ಸಭೆ ನಡೆಸಿದರೂ ಅವೆಲ್ಲವೂ ವಿಫಲವಾಗಿವೆ.

ಆರ್ಥಿಕ ದಿಗ್ಭಂಧನ: ರಷ್ಯಾದ ಅಪ್ರಚೋದಿತ ದಾಳಿಗೆ ಖಂಡನೆ ವ್ಯಕ್ತಪಡಿಸಿರುವ ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧ ವಿಧಿಸಿವೆ. ಸ್ವಿಫ್ಟ್‌ನಿಂದ ರಷ್ಯಾ ಬ್ಯಾಂಕುಗಳನ್ನು ಹೊರದಬ್ಬಲಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ಕಂಪನಿಗಳು ರಷ್ಯಾದ ಮಾರುಕಟ್ಟೆಯನ್ನು ತೊರೆದು ಸ್ಥಳಾಂತರಗೊಂಡಿವೆ.

ಇದನ್ನೂ ಓದಿ: ಯುದ್ಧದಲ್ಲಿ 15 ಸಾವಿರ ರಷ್ಯನ್‌ ಸೈನಿಕರು ಸಾವು? ಸಿಕ್ಕಿಬಿದ್ದ ಯೋಧರಿಗೆ ಉಕ್ರೇನಲ್ಲಿ ಸಂತಾನಹರಣ!

ಅನಿರ್ಬಂಧಿತ ಮಿಲಿಟರಿ ನೆರವಿಗೆ ಜೆಲೆನ್‌ಸ್ಕಿ ಮನವಿ: ರಷ್ಯಾದ ಅಪ್ರಚೋದಿತ ಆಕ್ರಮಣದ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಉಕ್ರೇನಿಗೆ ಅನಿರ್ಬಂಧಿತ ಮಿಲಿಟರಿ ನೆರವು ನೀಡುವಂತೆ ಉಕ್ರೇನ್‌ ಅಧ್ಯಕ್ಷ ವೊಲೋದಿಮಿರ್‌ ಜೆಲೆನ್‌ಸ್ಕಿ ಗುರುವಾರ ನ್ಯಾಟೋ (ನಾತ್‌ರ್‍ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಶನ್‌)ಗೆ ಮನವಿ ಮಾಡಿದ್ದಾರೆ.

ನ್ಯಾಟೋ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಜೆಲೆನ್‌ಸ್ಕಿ, ‘ನಮ್ಮ ಜನರ ಮತ್ತು ನಗರಗಳ ರಕ್ಷಣೆಗೆ ಉಕ್ರೇನಿಗೆ ಅನಿರ್ಬಂಧಿತ ಮಿಟಲಿರಿ ನೆರವಿನ ಅಗತ್ಯವಿವೆ. ರಷ್ಯಾ ಯಾವುದೇ ನಿರ್ಬಂಧಗಳಿಲ್ಲದೆ ನಮ್ಮ ಮೇಲೆ ಸಂಪೂರ್ಣ ಪ್ರಮಾಣದ ಮಿಲಿಟರಿಯನ್ನು ಬಳಸಿಕೊಂಡು ದಾಳಿ ನಡೆಸುತ್ತಿದೆ’ ಎಂದು ಹೇಳಿದರು.

ಇದೇ ವೇಳೆ ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಡ ಇದುವರೆಗೆ ಒದಗಿಸಿದ ಮಿಲಿಟರಿ ನೆರವಿಗೆ ಧನ್ಯವಾದ ತಿಳಿಸಿ, ಇನ್ನೂ ಆಕ್ರಮಣಕಾರಿ ಶಸ್ತ್ರಾಸ್ತ್ರಗಳ ಅಗತ್ಯವಿದೆ. ನಿಮ್ಮ ಒಟ್ಟು ಸೇನಾ ಸಾಮರ್ಥ್ಯದ ಶೇ.1ರಷ್ಟುಟ್ಯಾಂಕುಗಳು ಮತ್ತು ಯುದ್ಧ ವಿಮಾನಗಳಲ್ಲಿ ಒದಗಿಸಬಹುದೇ ಎಂದು ವಿನಂತಿಸಿದರು.