Asianet Suvarna News Asianet Suvarna News

Russia Ukraine Crisis: ಯುದ್ಧ ಇನ್ನಷ್ಟು ಸನ್ನಿಹಿತ? ರಷ್ಯಾ ಪರ ಭಾರತ ಪರೋಕ್ಷ ಬ್ಯಾಟಿಂಗ್‌!

*ಉಕ್ರೇನ್‌ ರಾಯಭಾರ ಸಿಬ್ಬಂದಿ ಹಿಂದಕ್ಕೆ ಕರೆಸಿಕೊಂಡ ರಷ್ಯಾ
*ರಷ್ಯಾ ತೊರೆಯುವಂತೆ ನಾಗರಿಕರಿಗೆ ಉಕ್ರೇನ್‌ ಸರ್ಕಾರ ಕರೆ
*ಉಕ್ರೇನ್‌ ಬಿಕ್ಕಟ್ಟಿನ ಬೇರುಗಳು ಸೋವಿಯತ್‌ ಒಕ್ಕೂಟದಲ್ಲಿದೆ: ಜೈಶಂಕರ್‌
*ನ್ಯಾಟೋ ವಿಸ್ತರಣೆ , ರಷ್ಯಾ-ಯುರೋಪ್‌ ನಡುವಿನ ಕಲಹ ಈ ಬಿಕ್ಕಟ್ಟಿಗೆ ಕಾರಣ
*ಯುದ್ಧದಲ್ಲಿ ಪಾಲ್ಗೊಳ್ಳಲು ಸಾಮಾನ್ಯ ನಾಗರಿಕರಿಗೂ ಅವಕಾಶ
 

Russia Ukraine crisis has its roots in post Soviet politics says S Jaishankar mnj
Author
Bengaluru, First Published Feb 24, 2022, 7:31 AM IST | Last Updated Feb 24, 2022, 10:28 AM IST

ನವದೆಹಲಿ (ಫೆ.24): ಉಕ್ರೇನ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಮೂಲವು ಸೋವಿಯತ್‌ ಒಕ್ಕೂಟದ ನಂತರ ರಾಜಕೀಯದಲ್ಲಿದೆ. ಅಲ್ಲದೇ ನ್ಯಾಟೋ ಪಡೆಯ ವಿಸ್ತರಣೆ ಮತ್ತು ರಷ್ಯಾ ಹಾಗೂ ಯುರೋಪ್‌ ದೇಶಗಳ ನಡುವಿನ ಸಂಬಂಧದಲ್ಲಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಪ್ಯಾರಿಸ್‌ನಲ್ಲಿ ಮಾತನಾಡಿದ ಅವರು, ‘ಈ ದಿನಗಳಲ್ಲಿ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇವುಗಳು ಹೊಸ ಸವಾಲುಗಳನ್ನು ಹುಟ್ಟುಹಾಕಿದೆ. ಅದೇ ರೀತಿ ಕಳೆದ 30 ವರ್ಷಗಳ ಜಟಿಲ ಸನ್ನಿವೇಶಗಳ ಫಲಿತಾಂಶವೇ ಉಕ್ರೇನ್‌ನ ಬಿಕ್ಕಟ್ಟಾಗಿದೆ. ಭಾರತ, ಫ್ರಾನ್ಸ್‌ ಸೇರಿದಂತೆ ಹಲವು ದೇಶಗಳು ಈ ಸಮಸ್ಯೆಗೆ ರಾಜತಾಂತ್ರಿಕ ಪರಿಹಾರ ಬಯಸುತ್ತವೆ. ಆದರೆ ನೀವು ಸಮಸ್ಯೆಗೆ ಪರಿಹಾರ ಹುಡುಕುತ್ತೀರಾ ಅಥವಾ ಸಮಸ್ಯೆಯಿಂದ ತೃಪ್ತಿಯಾಗಿದ್ದೀರಾ ಎಂಬುದು ಇಲ್ಲಿ ನಿಜವಾದ ಪ್ರಶ್ನೆಯಾಗಿದೆ. ಭಾರತ ರಷ್ಯಾ ಮತ್ತು ಇತರ ದೇಶಗಳೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮಾತನಾಡಬಲ್ಲದು’ ಎಂದು ಹೇಳಿದ್ದಾರೆ.

ತೈವಾನ್‌ ಬಿಕ್ಕಟ್ಟು ಮತ್ತು ಉಕ್ರೇನ್‌ ಬಿಕ್ಕಟ್ಟುಗಳನ್ನು ಹೋಲಿಸಲಾಗದು. ಎರಡಕ್ಕೂ ಬೇರೆಯದೇ ಆದ ಇತಿಹಾಸವಿದೆ. ಆದರೆ ಈ 2 ಬಿಕ್ಕಟ್ಟಿನ ಹಿಂದೆ ನ್ಯಾಟೋ ಪಡೆಗಳ ಕೈವಾಡವಿದೆ ಎಂದು ಅವರು ಪರೋಕ್ಷವಾಗಿ ರಷ್ಯಾ ಪರವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: Ukraine Russia Conflict: ಉಕ್ರೇನ್‌ ಮೇಲೆ ಉತ್ತರದಿಂದಲೂ ರಷ್ಯಾ ದಾಳಿ?

ರಷ್ಯಾ ಸ್ವಾಗತ: ವಿಶ್ವಸಂಸ್ಥೆಯಲ್ಲಿ ಭಾರತದ ಸ್ವತಂತ್ರ ನಿಲುವು ಮತ್ತು ಜಗತ್ತಿನ ಸಮಸ್ಯೆಗಳ ಕುರಿತಾಗಿ ಭಾರತ ಹೊಂದಿರುವ ನೋಟ ಸ್ವಾಗತಾರ್ಹ ಎಂದು ರಷ್ಯಾ ಹೇಳಿದೆ. ಭಾರತ ವಿಶ್ವಸಂಸ್ಥೆಯಲ್ಲಿ ವ್ಯಕ್ತಪಡಿಸಿರುವ ನಿಲುವು ಉಭಯ ದೇಶಗಳ ನಡುವಿನ ವಿಶೇಷ ಗೌರವದ ಪ್ರತಿಬಿಂಬವಾಗಿದೆ. ನಮ್ಮ ಉದ್ದೇಶ ಯಾರನ್ನು ಹೆದರಿಸುವುದಾಗಿಲ್ಲ ಮತ್ತು ಅದೇ ಸಮಯದಲ್ಲಿ ಒಂದು ಸಮಾನ ಅವಕಾಶದ ವಿಶ್ವವನ್ನು ನಿರ್ಮಾಣ ಮಾಡುವುದಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ರಷ್ಯಾದ ಮುಖ್ಯಸ್ಥ ರೋಮನ್‌ ಬಬುಶ್ಕಿನ್‌ ಹೇಳಿದ್ದಾರೆ.

ಯುದ್ಧ ಇನ್ನಷ್ಟು ಸನ್ನಿಹಿತ?: ರಷ್ಯಾ ಮತ್ತು ಉಕ್ರೇನ್‌ ನಡುವಣ ಯುದ್ಧ ಸನ್ನಿಹಿತವಾಗಿದೆ ಎಂಬುದನ್ನು ಸೂಚಿಸುವ ಮತ್ತಷ್ಟುಬೆಳವಣಿಗೆಗಳು ಬುಧವಾರ ನಡೆದಿದೆ. ಉಕ್ರೇನ್‌ನಲ್ಲಿ ತನ್ನ ಎಲ್ಲಾ ರಾಯಭಾರ ಕಚೇರಿ ಸಿಬ್ಬಂದಿಗಳನ್ನು ರಷ್ಯಾ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.

ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ರಷ್ಯಾದ ರಾಯಭಾರ ಕಚೇರಿ ಇದೆ. ಜೊತೆಗೆ ಖರ್ಕೀವ್‌, ಒಡೆಸಾ ಮತ್ತು ಲೀವ್‌ನಲ್ಲಿ ಉಪ ದೂತಾವಾಸ ಕಚೇರಿ ಹೊಂದಿವೆ. ಈ ಪೈಕಿ ಕೀವ್‌ನ ಕಚೇರಿ ಬುಧವಾರ ತೆರವುಗೊಂಡಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಇದನ್ನೂ ಓದಿ: ವಿಶ್ವವು ಜಾಗತಿಕ ಶಾಂತಿ, ಭದ್ರತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ: UN Chief Antonio Guterres

ಮತ್ತೊಂದೆಡೆ ಉಕ್ರೇನ್‌ ಕೂಡಾ, ರಷ್ಯಾದಲ್ಲಿ ಯಾರಾದರೂ ತನ್ನ ದೇಶದ ಪ್ರಜೆಗಳು ಇನ್ನೂ ಉಳಿದುಕೊಂಡಿದ್ದರೆ ಅವರು ತಕ್ಷಣವೇ ದೇಶಕ್ಕೆ ಮರಳಬೇಕು ಎಂದು ಸಲಹೆ ನೀಡಿದೆ. ಈ ಮೂಲಕ ಯಾವುದೇ ಸಮಯದಲ್ಲಿ ಯುದ್ಧ ಆರಂಭವಾಗಬಹುದು ಎಂಬ ಸುಳಿವನ್ನು ಎರಡೂ ದೇಶಗಳು ನೀಡಿವೆ.

ಉಕ್ರೇನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ:  ಉಕ್ರೇನ್‌ ಮೇಲೆ ಆಕ್ರಮಣ ಮಾಡಲು ಚೀನಾ ತನ್ನ ಸೇನೆಯನ್ನು ಜಮಾವಣೆ ಮಾಡುತ್ತಿರುವ ಬೆನ್ನಲ್ಲೇ ಸಭೆ ನಡೆಸಿರುವ ಉಕ್ರೇನ್‌ ದೇಶದಲ್ಲಿ 30 ದಿನಗಳ ಕಾಲ ತುರ್ತು ಪರಿಸ್ಥಿತಿ ವಿಧಿಸಲು ನಿರ್ಧರಿಸಿದೆ. ಈ ತುರ್ತು ಪರಿಸ್ಥಿತಿ ಡೊನೆಟಸ್ಕ್‌ ಮತ್ತು ಲುಹಾನ್ಸ್‌$್ಕ ಪ್ರದೇಶಗಳನ್ನು ಹೊರತು ಪಡಿಸಿ ದೇಶಾದ್ಯಂತ ಅನ್ವಯವಾಗಲಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿರುತ್ತದೆ.

ಯುದ್ಧ ಸಂಭವಿಸಿದರೆ ಸಾಮಾನ್ಯ ನಾಗರಿಕರು ಯುದ್ಧದಲ್ಲಿ ಭಾಗವಹಿಸಲು ಉಕ್ರೇನ್‌ ಅನುಮತಿ ನೀಡಿದೆ. ಇದಕ್ಕಾಗಿ ನಾಗರಿಕರು ತಮ್ಮೊಂದಿಗೆ ಶಸ್ತ್ರಾಸ್ತ್ರಗಳನ್ನು ಒಯ್ಯುವಂತಹ ವಿಧೇಯಕಕ್ಕೆ ಉಕ್ರೇನ್‌ ಸಂಸತ್ತು ಸಹಿ ಹಾಕಿದೆ. ಮೀಸಲು ಸೈನಿಕ ಪಡೆಯ ಸೈನಿಕರಿಗೆ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದೆ.

ಅಮೆರಿಕ-ರಷ್ಯಾ ವಿದೇಶಾಂಗ ಸಚಿವರ ಸಭೆ ದಿಢೀರ್‌ ರದ್ದು: ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿದೆ ಎಂದು ಆರೋಪಿಸಿರುವ ಅಮೆರಿಕದ ವಿದೇಶಾಂಗ ಸಚಿವ ಟೋನಿ ಬ್ಲಿಂಕನ್‌, ರಷ್ಯಾದ ವಿದೇಶಾಂಗ ಸಚಿವ ಸೆರ್ಗೇಯ್‌ ಲ್ಯಾವ್ರೋವ್‌ ಅವರೊಂದಿಗೆ ಬುಧವಾರ ನಿಗದಿಯಾಗಿದ್ದ ಸಭೆಯಲ್ಲಿ ರದ್ದು ಮಾಡಿದ್ದಾರೆ.

ರಷ್ಯಾ ಮೇಲೆ ಮತ್ತಷ್ಟುದೇಶಗಳ ನಿರ್ಬಂಧ: ಉಕ್ರೇನ್‌ ಮೇಲೆ ಆಕ್ರಮಣಕ್ಕೆ ಮುಂದಾಗಿರುವ ರಷ್ಯಾಕ್ಕೆ ತೀಕ್ಷ$್ಣ ಪ್ರತಿಕ್ರಿಯೆ ನೀಡುವುದಕ್ಕಾಗಿ ಮತ್ತಷ್ಟುದೇಶಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿವೆ. ರಷ್ಯಾದೊಂದಿಗಿನ ವ್ಯಾಪಾರ ವಹಿವಾಟಿಗೆ ನಿರ್ಬಂಧ ವಿಧಿಸಿದ್ದ ಅಮೆರಿಕಾ ಆರ್ಥಿಕವಾಗಿ ಬುಧವಾರ ಮತ್ತಷ್ಟುನಿರ್ಬಂಧ ವಿಧಿಸಿದೆ. ಇದರೊಂದಿಗೆ ಜರ್ಮನಿ, ಜಪಾನ್‌, ಕೆನಡಾಗಳು ಸಹ ನಿರ್ಬಂಧ ಘೋಷಿಸಿವೆ.

ಇದನ್ನೂ ಓದಿUkraine Russia Crisis: ಉಕ್ರೇನ್‌ನಿಂದ ಶೆಲ್ ದಾಳಿ, ಗಡಿಯಲ್ಲಿ ರಷ್ಯಾ ಶಿಬಿರ ಧ್ವಂಸ

ಅಮೆರಿಕ: ರಷ್ಯಾದ 2 ಬಹುದೊಡ್ಡ ಹಣಕಾಸು ಸಂಸ್ಥೆಗಳಾದ ವಿಇಬಿ ಮತ್ತು ಅವರ ಮಿಲಿಟರಿ ಬ್ಯಾಂಕ್‌ಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸುವುದಾಗಿ ಅಮೆರಿಕ ಹೇಳಿದೆ. ಈ ಮೂಲಕ ರಷ್ಯಾಗೆ ಪಾಶ್ಚಿಮಾತ್ಯ ಹಣಕಾಸು ಸೌಲಭ್ಯವನ್ನು ಕಡಿತಗೊಳಿಸಲಾಗುತ್ತಿದೆ. ಈ ನಿರ್ಧಾರದಿಂದಾಗಿ ಇನ್ನು ಮುಂದೆ ಅಮೆರಿಕ ಅಥವಾ ಯುರೋಪ್‌ನ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಲು ರಷ್ಯಾಗೆ ಸಾಧ್ಯವಾಗುವುದಿಲ್ಲ.

ಜಪಾನ್‌: ರಷ್ಯಾದ ನಡೆಯನ್ನು ಟೀಕಿಸಿರುವ ಜಪಾನ್‌, ಉಕ್ರೇನ್‌ 2 ಬಂಡುಕೋರ ರಾಜ್ಯಗಳಿಗೆ ಸಂಬಂಧಿಸಿದವರ ಆಸ್ತಿಗಳು ಜಪಾನ್‌ನಲ್ಲಿದ್ದರೆ ಅದನ್ನು ಮುಟ್ಟಗೋಲು ಹಾಕಿಕೊಳ್ಳಲಾಗುವುದು. ಉಕ್ರೇನ್‌ನಲ್ಲಿ ರಷ್ಯಾ ಸ್ವತಂತ್ರ್ಯ ಎಂದು ಘೋಷಿಸಿರುವ ಉಕ್ರೇನ್‌ನ 2 ಪ್ರದೇಶಗಳೊಂದಿಗೆ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಜಪಾನ್‌ ಹೇಳಿದೆ.

ಕೆನಡಾ: ರಷ್ಯಾದ ಮೇಲೆ ಕೆನಡಾ ಸಹ ಮತ್ತಷ್ಟುವ್ಯಾಪಾರ ನಿರ್ಬಂಧವನ್ನು ವಿಧಿಸಿದೆ. ಇದರೊಂದಿಗೆ ನ್ಯಾಟೋ ಪಡೆಗೆ ಬೆಂಬಲ ನೀಡಲು 460 ಹೆಚ್ಚುವರಿ ಸೇನೆಯನ್ನು ಪೂರ್ವ ಯುರೋಪ್‌ಗೆ ಕಳುಹಿಸುವುದಾಗಿ ಹೇಳಿದೆ.

ಜರ್ಮನಿ: ರಷ್ಯಾದಿಂದ ಯುರೋಪ್‌ ದೇಶಗಳಿಗೆ ಗ್ಯಾಸ್‌ ಪೂರೈಕೆ ಮಾಡಲು ನಿರ್ಮಾಣ ಮಾಡಲಾಗುತ್ತಿರುವ ಯೋಜನೆ ಸಹಾಯ ಮಾಡುವುದನ್ನು ನಿಲ್ಲಿಸುವುದಾಗಿ ಜರ್ಮನಿ ಹೇಳಿದೆ. ಅಲ್ಲದೇ ಈ ಗ್ಯಾಸ್‌ಗೆ ಪ್ರಮಾಣಿಕರಣ ನೀಡುವುದನ್ನು ಸಹ ತಡೆಹಿಡಿಯಲಾಗುವುದು ಎಂದು ಹೇಳಿದೆ. ಇದರೊಂದಿಗೆ ಐರೋಪ್ಯ ಒಕ್ಕೂಟದ ದೇಶಗಳು, ಬ್ರಿಟನ್‌ ಸಹ ರಷ್ಯಾದೊಂದಿಗೆ ವ್ಯಾಪಾರ ಚಟುವಟಿಕೆಗಳನ್ನು ನಿರ್ಬಂಧಿಸಿವೆ.

Latest Videos
Follow Us:
Download App:
  • android
  • ios