ಶತ್ರುವಿನ ಮೇಲೆ ದಾಳಿ, ಗೂಢಚರ ಕೆಲಸಕ್ಕೆ ವಿಶ್ವದಲ್ಲೇ ಅತ್ಯಂತ ಖ್ಯಾತಿ ಹೊಂದಿರುವ ಇಸ್ರೇಲ್, ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಬೇಟೆಗಾಗಿ ಇರಾನ್ ರಾಜಧಾನಿ ಟೆಹ್ರಾನ್‌ನ ಟ್ರಾಫಿಕ್ ಕ್ಯಾಮೆರಾಗಳನ್ನೇ ಹ್ಯಾಕ್ ಮಾಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ವಾಷಿಂಗ್ಟನ್: ಶತ್ರುವಿನ ಮೇಲೆ ದಾಳಿ, ಗೂಢಚರ ಕೆಲಸಕ್ಕೆ ವಿಶ್ವದಲ್ಲೇ ಅತ್ಯಂತ ಖ್ಯಾತಿ ಹೊಂದಿರುವ ಇಸ್ರೇಲ್, ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಬೇಟೆಗಾಗಿ ಇರಾನ್ ರಾಜಧಾನಿ ಟೆಹ್ರಾನ್‌ನ ಟ್ರಾಫಿಕ್ ಕ್ಯಾಮೆರಾಗಳನ್ನೇ ಹ್ಯಾಕ್ ಮಾಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಕಳೆದ ಶನಿವಾರ ಇರಾನ್ ಮೇಲೆ ದಾಳಿ ನಡೆಸುವ ಮುನ್ನ ‘ಬಡಾ ಸಾಬ್’ ಎಂಬ ಮೊಬೈಲ್ ಆ್ಯಪ್ ಹ್ಯಾಕ್ ಮಾಡಿ ಶಿಯಾ ಮುಸ್ಲಿಮರನ್ನೇ ಸರ್ಕಾರದ ವಿರುದ್ಧ ದಂಗೆ ಏಳಲು ಪ್ರಚೋದಿಸಿದ ವಿಷಯದ ಬೆಳಕಿಗೆ ಬಂದಲ್ಲೇ ಇಸ್ರೇಲ್‌ನ ಮತ್ತೊಂದು ಸೈಬರ್ ಅಸ್ತ್ರ ಇಡೀ ವಿಶ್ವವನ್ನು ದಂಗುಬಡಿಸಿದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಅಧಿಕಾರಿಗಳ ಮೂಲಗಳನ್ನು ಆಧರಿಸಿ ಪತ್ರಿಕೆಯೊಂದು ಈ ಕುರಿತು ಸ್ಫೋಟಕ ವರದಿ ಪ್ರಕಟಿಸಿದೆ. ಟೆಹ್ರಾನ್‌ನ ಟ್ರಾಫಿಕ್ ಕ್ಯಾಮೆರಾಗಳನ್ನು ಒಂದು ವರ್ಷದಿಂದ ಹ್ಯಾಕ್ ಮಾಡಿದ್ದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್, ಖಮೇನಿಯ ಬಾಡಿಗಾರ್ಡ್‌ಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು ಎನ್ನಲಾಗಿದೆ.
ತಿರುಗುಬಾಣ:
ತನ್ನ ವಿರೋಧಿಗಳು, ಪ್ರತಿಭಟನಾಕಾರರನ್ನು ಗುರುತಿಸಿ ದಮನಿಸಲು ಇರಾನ್ ಸರ್ಕಾರ ದೇಶಾದ್ಯಂತ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಿತ್ತು. ಇತ್ತೀಚೆಗೆ ಇರಾನ್‌ನಾದ್ಯಂತ ನಡೆದಿದ್ದ ಪ್ರತಿಭಟನೆಯನ್ನು ಇದೇ ಕ್ಯಾಮೆರಾ ಬಳಸಿಕೊಂಡೇ ಮಟ್ಟಹಾಕಲಾಗಿತ್ತು. ಆದರೆ, ಅದೇ ಕ್ಯಾಮೆರಾಗಳನ್ನು ಬಳಸಿಕೊಂಡು ಇಸ್ರೇಲ್ ಕೂಡ ಇರಾನ್‌ನ ಉನ್ನತ ಅಧಿಕಾರಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿತ್ತು.
ಈ ಕ್ಯಾಮೆರಾಗಳ ಮೇಲೆ ಕಳೆದ ವರ್ಷವೇ ಇಸ್ರೇಲ್ ನಿಯಂತ್ರಣ ಸಾಧಿಸಿತ್ತು. ಇವುಗಳಲ್ಲಿ ಒಂದು ಕ್ಯಾಮೆರಾವನ್ನು ಖಮೇನಿಯ ಭದ್ರತಾ ತಂಡ ಕಾರುಗಳನ್ನು ಪಾರ್ಕಿಂಗ್ ಮಾಡುವ ಜಾಗದಲ್ಲಿ ಸ್ಥಾಪಿಸಲಾಗಿತ್ತು. ಈ ಕ್ಯಾಮೆರಾ ಬಳಸಿಕೊಂಡು ಖಮೇನಿಯ ಭದ್ರತಾ ಸಿಬ್ಬಂದಿ, ಅವರ ಹಿನ್ನೆಲೆ, ಅವರಿಗೆ ಯಾವ ಹೊಣೆಗಾರಿಕೆ ನೀಡಲಾಗಿತ್ತು ಎಂಬಿತ್ಯಾದಿ ವಿವರಗಳನ್ನು ಕಳೆದೊಂದು ವರ್ಷಗಳಿಂದ ಮೊಸಾದ್ ಗುಪ್ತವಾಗಿ ಸಂಗ್ರಹಿಸಿತ್ತು. ಭದ್ರತಾ ಸಿಬ್ಬಂದಿ ಕಚೇರಿ ಬಳಿ ಇದ್ದರೆ ಖಮೇನಿ ಇದ್ದಾರೆ ಎಂಬ ಸುಳಿವು ಪಡೆಯುವ ತಂತ್ರ ಇದಾಗಿತ್ತು.
ದಾಳಿಯ ದಿನವಾದ ಶನಿವಾರ ಇಸ್ರೇಲ್ ಮತ್ತು ಅಮೆರಿಕವು ಟೆಹರಾನ್‌ನ ಪಾಶ್ಚರ್ ಸ್ಟ್ರೀಟ್‌ನಲ್ಲಿ ಮೊಬೈಲ್ ನೆಟ್‌ವರ್ಕ್ ಅನ್ನು ಅಸ್ತವ್ಯಸ್ತಗೊಳಿಸಿತ್ತು. ಈ ಮೂಲಕ ದಾಳಿಯ ಸಣ್ಣ ಕುರುಹೇನಾದರೂ ಸೋರಿಕೆಯಾದರೂ ಖಮೇನಿ ಬಾಡಿಗಾರ್ಡ್‌ಗಳಿಗೆ ಆ ಕುರಿತ ಸಣ್ಣ ಮಾಹಿತಿಯೂ ತಲುಪಬಾರದಂತೆ ನೋಡಿಕೊಳ್ಳಲಾಗಿತ್ತು ಎಂದು ಮೂಲಗಳನ್ನು ಆಧರಿಸಿ ಹೇಳಲಾಗಿದೆ.
ಇನ್ನು ಇರಾನ್ ನಾಯಕರ ನಿತ್ಯದ ಚಲನವಲನಗಳ ಕುರಿತು ಸಂಗ್ರಹಿಸುತ್ತಿದ್ದ ಮಾಹಿತಿಗಳನ್ನು ಎಐ ಟೂಲ್ಸ್ ಮತ್ತು ಆಲ್ಗೋರಿದಂ ಬಳಸಿಕೊಂಡು ಪರಿಶೀಲಿಸಿ ನಂತರ ಹತ್ಯೆಯ ರೂಪುರೇಷೆ ಸಿದ್ಧಪಡಿಸಲಾಗಿತ್ತು ಎನ್ನಲಾಗಿದೆ.
ಹಲ್ಲು, ಹೊಟ್ಟೆಯಲ್ಲಿ ಚಿಪ್ ಅಳವಡಿಸಿತ್ತೇ ಇಸ್ರೇಲ್?
ಟ್ರಾಫಿಕ್ ಕ್ಯಾಮೆರಾ ಹ್ಯಾಕ್ ಬಳಿಕ ಇರಾನ್‌ನ ಮಿಲಿಟರಿ ಅಧಿಕಾರಿಯೊಬ್ಬರ ಹಲ್ಲು, ಹೊಟ್ಟೆಗೆ ಚಿಪ್ ಅಳವಡಿಸಿ ಖಮೇನಿ ಅಡಗಿರುವ ಸ್ಥಳ ಪತ್ತೆಹಚ್ಚಲಾಯಿತು ಎಂಬ ಕಥೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ!
ಕೆಲ ವರ್ಷಗಳ ಹಿಂದೆ ಮೊಸಾದ್‌ನ ಏಜೆಂಟರು ವೈದ್ಯರು, ದಂತ ವೈದ್ಯರ ಹೆಸರಿನಲ್ಲಿ ಇರಾನ್‌ನೊಳಗೆ ಪ್ರವೇಶಿಸಿದ್ದಾರೆ. ಅದರಂತೆ ದಂತ ವೈದ್ಯರೊಬ್ಬರು ಇರಾನ್‌ನ ಪ್ರಮುಖ ಸೇನಾ ಅಧಿಕಾರಿಯ ಹಲ್ಲಿನಲ್ಲಿ ಚಿಪ್‌ವೊಂದನ್ನು ಅಳವಡಿಸಿದ್ದರು ಎನ್ನಲಾಗಿದೆ.
ಇನ್ನು ಕೆಲವರ ಪ್ರಕಾರ ಮೊಸಾದ್ ಗ್ಯಾಸ್ಟ್ರೋ ವೈದ್ಯರು ಮಿಲಿಟರಿ ಅಧಿಕಾರಿಯೊಬ್ಬರಿಗೆ ಇದೇ ರೀತಿಯ ಚಿಪ್ ಅನ್ನು ಅಳವಡಿಸಿದ್ದು, ಅವರ ಮೂಲಕ ಖಮೇನಿ ಹಾಗೂ ಅವರ ಕುಟುಂಬ ಅಡಗಿರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ.
ಇರಾನ್‌ನ ಕಮಾಂಡ್ ಖಾನಿ ಅಮೆರಿಕ, ಇಸ್ರೇಲ್‌ನ ಸ್ಪೈ?
ಇರಾನ್‌ನ ಐಆರ್‌ಜಿಸಿ ಕಮಾಂಡರ್ ಇಸ್ಮಾಯಿಲ್ ಖಾನಿಯ ಮೇಲೆಯೇ ಇದೀಗ ಕೆಲವರು ಗಂಭೀರ ಆರೋಪ ಮಾಡಲು ಆರಂಭಿಸಿದ್ದಾರೆ. ಆತ ಮೊಸಾದ್ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಏಜೆಂಟ್ ಎಂಬುದು ಕೆಲವರ ವಾದ. ಇಸ್ರೇಲ್ ದಾಳಿಯಿಂದ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ದಾಳಿಗೆ ಕೆಲ ನಿಮಿಷ ಮೊದಲು ಖಮೇನಿ ಮನೆಯಿಂದ ಹೊರಬಂದಿದ್ದಾರೆ ಎಂಬುದು ತಮ್ಮ ವಾದಕ್ಕೆ ಅವರು ನೀಡುತ್ತಿರುವ ಕಾರಣ. ಕೆಲ ಸುದ್ದಿಗಳ ಪ್ರಕಾರ ಖಾನಿ ಅವರನ್ನು ಬಂಧಿಸುವ ಸಾಧ್ಯತೆಗಳೂ ಇವೆಯಂತೆ. ಆದರೆ ಈ ಕಥೆಗಳನ್ನು ಈವರೆಗೆ ಯಾರೂ ಖಚಿತಪಡಿಸಿಲ್ಲ.
ಇಸ್ರೇಲ್ ಮಾಡಿದ್ದೇನು?
1. ಸರ್ಕಾರ ವಿರೋಧಿ ಪ್ರತಿಭಟನಾಕಾರರ ಗುರುತಿಸಿ, ಹತ್ತಿಕ್ಕಲು ದೇಶಾದ್ಯಂತ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕ್ಯಾಮೆರಾ ಅಳವಡಿಸಿತ್ತು ಇರಾನ್
2. ಅದೇ ಕ್ಯಾಮೆರಾಗಳನ್ನು ಹ್ಯಾಕ್ ಮಾಡಿತ್ತು ಇಸ್ರೇಲ್. ಒಂದು ಕ್ಯಾಮೆರಾ ಅಂತೂ ಖಮೇನಿ ಭದ್ರತಾ ಸಿಬ್ಬಂದಿಯ ಪಾರ್ಕಿಂಗ್ ಸ್ಥಳದಲ್ಲಿತ್ತು
3. ಅದರ ಮೂಲಕ ಖಮೇನಿಯ ಭದ್ರತಾ ಪಡೆಯಲ್ಲಿ ಯಾರ್‍ಯಾರಿದ್ದಾರೆ, ಅವರ ಹಿನ್ನೆಲೆ ಏನು, ಅವರ ಚಲನವಲನ ಎಲ್ಲವನ್ನೂ ಸಂಗ್ರಹಿಸಿತ್ತು
4. ಭದ್ರತಾ ಸಿಬ್ಬಂದಿ ಹೆಚ್ಚು ಇದ್ದರೆ ಖಮೇನಿ ಆ ಸ್ಥಳದಲ್ಲಿ ಇದ್ದಾರೆ, ಕಡಿಮೆ ಇದ್ದರೆ ಖಮೇನಿ ಅಲ್ಲಿ ಇಲ್ಲ ಎಂಬ ಮಾಹಿತಿ ಗಳಿಸುವ ತಂತ್ರ ಇದು
5. ಕಳೆದ ಶನಿವಾರ ದಾಳಿಗೂ ಮುನ್ನ ಖಮೇನಿ ಕಚೇರಿಯ ಸುತ್ತಲಿನ ಮೊಬೈಲ್ ನೆಟ್‌ವರ್ಕ್ ಜಾಮ್ ಮಾಡಿ ಸುಳಿವು ಸಿಗದಂತೆ ಮಾಡಿತ್ತು


