ಎಲ್ಲಾ ದಿಕ್ಕುಗಳಿಂದಲೂ ಉಕ್ರೇನ್‌ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿರುವ ರಷ್ಯಾ, ಇದೀಗ ಉಕ್ರೇನ್‌ನ ಉತ್ತರ ಭಾಗದಲ್ಲಿ ಬರುವ ತನ್ನ ಮಿತ್ರ ದೇಶ ಬೆಲಾರಸ್‌ನ ಗಡಿಯಲ್ಲಿ ಭಾರೀ ಪ್ರಮಾಣದ ಸೇನೆ ನಿಯೋಜನೆ ಮಾಡಿರುವುದು ಕಂಡುಬಂದಿದೆ.

ಮಾಸ್ಕೋ (ಫೆ.24): ಎಲ್ಲಾ ದಿಕ್ಕುಗಳಿಂದಲೂ ಉಕ್ರೇನ್‌ (Ukraine) ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿರುವ ರಷ್ಯಾ (Russia), ಇದೀಗ ಉಕ್ರೇನ್‌ನ ಉತ್ತರ ಭಾಗದಲ್ಲಿ ಬರುವ ತನ್ನ ಮಿತ್ರ ದೇಶ ಬೆಲಾರಸ್‌ನ ಗಡಿಯಲ್ಲಿ (Belarus Border) ಭಾರೀ ಪ್ರಮಾಣದ ಸೇನೆ ನಿಯೋಜನೆ ಮಾಡಿರುವುದು ಕಂಡುಬಂದಿದೆ.

ಅಮೆರಿಕದ ಖಾಸಗಿ ಉಪಗ್ರಹ ಮ್ಯಾಕ್ಸರ್‌ (Maxar) ಸೆರೆಹಿಡಿದಿರುವ ಹೊಸ ಚಿತ್ರಗಳ ಅನ್ವಯ, ಉಕ್ರೇನ್‌ ಗಡಿ ಭಾಗದಲ್ಲಿ ಬರುವ ಬೆಲಾರಸ್‌ನಲ್ಲಿ ದಿಢೀರನೆ 100ಕ್ಕೂ ಹೆಚ್ಚು ಹೊಸ ಸೇನಾ ವಾಹನಗಳನ್ನು ಜಮಾವಣೆ ಮಾಡಿರುವುದು ಮತ್ತು ಮಿಲಿಟರಿ ಆಸ್ಪತ್ರೆ ನಿರ್ಮಾಣ ಮಾಡಿರುವುದು ಕಂಡುಬಂದಿದೆ. ಈ ಪ್ರದೇಶವು ಉಕ್ರೇನ್‌ನ ರಾಜಧಾನಿ ಕೀವ್‌ಗೆ ಸಮೀಪವಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಿಂದ ದಾಳಿ ನಡೆಸಿ ನೆರೆಯ ದೇಶದ ಜಂಘಾಬಲವನ್ನೇ ಹೊಸಕಿಹಾಕುವ ಉದ್ದೇಶ ರಷ್ಯಾದ್ದು ಎನ್ನಲಾಗಿದೆ.

Russia Ukraine Crisis: ವಿವಾದದ ಹಿಂದಿನ ಕಾರಣವೇನು? ಇತಿಹಾಸ ನೆನಪಿಸಿದ ಸಚಿವ ಜೈಶಂಕರ್!

ಉಕ್ರೇನ್‌ನ ದಕ್ಷಿಣದ ಭಾಗದಲ್ಲಿ ಸಮುದ್ರವಿದ್ದು, ಅಲ್ಲಿ ಈಗಾಗಲೇ ರಷ್ಯಾ ತನ್ನ ಅತ್ಯಾಧುನಿಕ ಯುದ್ಧ ನೌಕೆ, ಸಬ್‌ಮರೀನ್‌ಗಳ ನಿಯೋಜನೆ ಮಾಡಿದೆ. ಇನ್ನು ಪೂರ್ವದಲ್ಲಿ ಬರುವ ಗಡಿ ಪ್ರದೇಶದಲ್ಲಿ ಉಕ್ರೇನ್‌ನದ್ದೇ ಬಂಡುಕೋರರ ಆಡಳಿತರುವ ಪ್ರದೇಶಗಳಿವೆ. ಅವುಗಳಿಗೆ ಮಂಗಳವಾರವಷ್ಟೇ ರಷ್ಯಾ ಸ್ವಾಯತ್ತ ಸ್ಥಾನಮಾನ ನೀಡಿದೆ. ಹೀಗಾಗಿ ಅಲ್ಲಿಂದಲೂ ದಾಳಿ ನಡೆಸುವುದು ಸುಲಭ. ಅದರ ಜೊತೆಗೆ ಉತ್ತರದಲ್ಲಿ ಬೆಲಾರಸ್‌ನಿಂದಲೂ ದಾಳಿ ನಡೆಸಿದರೆ, ನ್ಯಾಟೋ ಪಡೆಗಳ ನೆರವಿನ ಹೊರತಾಗಿಯೂ ರಷ್ಯಾವನ್ನು ಎದುರಿಸುವುದು ಉಕ್ರೇನ್‌ಗೆ ಅಸಾಧ್ಯವಾಗಲಿದೆ. 

ಹೀಗಾಗಿಯೇ ಇಂಥ ರಣತಂತ್ರವನ್ನು ರಷ್ಯಾ ರೂಪಿಸಿದೆ ಎನ್ನಲಾಗಿದೆ. ಗಡಿಯಾಚೆ ರಷ್ಯಾದ ಸೇನೆಯನ್ನು ಬಳಸಿಕೊಳ್ಳಲು ಮಂಗಳವಾರ ರಷ್ಯಾ ಸಂಸತ್ತು ಒಪ್ಪಿಗೆ ನೀಡಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆಗಳು ಕಂಡುಬಂದಿವೆ. ಇದರ ನಡುವೆಯೇ ರಷ್ಯನ್‌ ಬಂಡುಕೋರರು ನಡೆಸಿದ ಶೆಲ್‌ ದಾಳಿಯಲ್ಲಿ ಪೂರ್ವ ಉಕ್ರೇನ್‌ನಲ್ಲಿ ಓರ್ವ ಯೋಧ ಮೃತಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಹೇಳಿದೆ.

ರಷ್ಯಾಕ್ಕೆ ಭಾರತದ ಪರೋಕ್ಷ ಬೆಂಬಲ: ರಷ್ಯಾ-ಉಕ್ರೇನ್‌ನ ಬಿಕ್ಕಟ್ಟಿನ ಬೇರುಗಳು ಸೋವಿಯತ್‌ ಒಕ್ಕೂಟದ ಪತನದಲ್ಲಿವೆ. ನ್ಯಾಟೋ ವಿಸ್ತರಣೆ ಹಾಗೂ ರಷ್ಯಾ-ಯುರೋಪ್‌ ನಡುವಿನ ಕಲಹದಿಂದಾಗಿ ಸಂಘರ್ಷದ ಸನ್ನಿವೇಶ ಸೃಷ್ಟಿಯಾಗಿದೆ. ಇದಕ್ಕೆ ಭಾರತವು ರಾಜತಾಂತ್ರಿಕ ಪರಿಹಾರ ಬಯಸುತ್ತದೆ ಎನ್ನುವ ಮೂಲಕ ರಷ್ಯಾದ ನಡೆಯನ್ನು ವಿರೋಧಿಸದೆ ಭಾರತವು ಪರೋಕ್ಷವಾಗಿ ಸಮರ್ಥಿಸಿಕೊಂಡಿದೆ. ಇದನ್ನು ರಷ್ಯಾ ಸ್ವಾಗತಿಸಿದೆ.

ನಿರ್ಬಂಧ ವಿಧಿಸಿದ ಇನ್ನಷ್ಟು ದೇಶಗಳು: ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅಮೆರಿಕ, ಬ್ರಿಟನ್‌ ಹಾಗೂ ಯುರೋಪಿಯನ್‌ ಒಕ್ಕೂಟದ ನಂತರ ಇದೀಗ ಜರ್ಮನಿ, ಕೆನಡಾ, ಜಪಾನ್‌ ದೇಶಗಳೂ ನಿರ್ಬಂಧ ಘೋಷಿಸಿವೆ.

Ukraine Russia Conflict: ಶಾಂತಿ ಸ್ಥಾಪನೆಗೆ ಭಾರತ ಕರೆ: ಉಕ್ರೇನ್‌ನಿಂದ ಭಾರತೀಯರ ಕರೆತಂದ ಏರ್‌ ಇಂಡಿಯಾ!

ಉಕ್ರೇನ್‌ನಿಂದ ಭಾರತೀಯರ ಕರೆತಂದ ಏರ್‌ ಇಂಡಿಯಾ ವಿಮಾನ: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ಭೀತಿ ಹಿನ್ನಲೆಯಲ್ಲಿ ತನ್ನ ಪ್ರಜೆಗಳನ್ನು ರಕ್ಷಿಸಲು ಭಾರತ ಮುಂದಾಗಿದ್ದು, ಭಾರತೀಯರ ಹೊತ್ತ ಮೊದಲ ಏರ್‌ ಇಂಡಿಯಾ ವಿಮಾನ ದಿಲ್ಲಿಗೆ ಮಂಗಳವಾರ ರಾತ್ರಿ ಆಗಮಿಸಿದೆ. ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರಲು ಏರಿಂಡಿಯಾದ 3 ವಿಶೇಷ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ಮೊದಲ ಬ್ಯಾಚ್‌ನಲ್ಲಿ 250 ಜನರು ಭಾರತಕ್ಕೆ ಆಗಮಿಸಿದರು. ಇನ್ನೆರಡು ವಿಮಾನ ಫೆ. 24, 26ರಂದು ಕಾರ್ಯಾಚರಣೆ ನಡೆಸಲಿವೆ.

ಇದೇ ವೇಳೆ, ಇದರೊಂದಿಗೆ ಸಾಧ್ಯವಾದಷ್ಟುಬೇಗ ಉಕ್ರೇನ್‌ ಅನ್ನು ತೊರೆಯುವಂತೆ ಭಾರತದ ಪ್ರಜೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿ ಮತ್ತೊಮ್ಮೆ ಸಲಹೆ ನೀಡಿದೆ. ಅನಿವಾರ್ಯ ಇದ್ದರೆ ಮಾತ್ರ ಉಕ್ರೇನ್‌ನಲ್ಲಿ ಉಳಿದುಕೊಳ್ಳಿ ಎಂದು ಸೂಚಿಸಿದೆ. ಉಕ್ರೇನ್‌ನಲ್ಲಿ ಭಾರತೀಯ ಮೂಲದ 20 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.