ನವದೆಹಲಿ(ನ.25): ಅಮೆರಿಕದ ಫೈಝರ್‌, ಮಾಡೆರ್ನಾ ಸೇರಿದಂತೆ ಜಗತ್ತಿನ ಇನ್ನಿತರ ರಾಷ್ಟ್ರಗಳು ತಾವು ಶೋಧಿಸಿದ ಕೊರೋನಾ ಲಸಿಕೆಯು ಇಂತಿಷ್ಟುಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ ಎಂದು ಘೋಷಿಸಿಕೊಂಡ ಬೆನ್ನಲ್ಲೇ, ಕೊರೋನಾ ಗುಣಪಡಿಸುವ ನಿಟ್ಟಿನಲ್ಲಿ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌-5 ಲಸಿಕೆಯು ಶೇ.95ರಷ್ಟುಪರಿಣಾಮಕಾರಿಯಾಗಿದೆ ಎಂದು ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್‌ ಫಂಡ್‌(ಆರ್‌ಡಿಐಎಫ್‌) ಸಿಇಒ ಕಿರಿಲ್‌ ಡಿಮಿಟ್ರೀವ್‌ ಹೇಳಿದ್ದಾರೆ.

ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಲಸಿಕೆ ಸಂಗ್ರಹ ಸಿದ್ಧತೆ ಹೇಗಿದೆ?

ಈ ಬಗ್ಗೆ ಮಂಗಳವಾರ ವಚ್ರ್ಯುವಲ್‌ ಕಾನ್ಫರೆನ್ಸ್‌ ಉದ್ದೇಶಿಸಿ ಮಾತನಾಡಿದ ಡಿಮಿಟ್ರೀವ್‌, ‘ಕೊರೋನಾ ನಿಗ್ರಹಕ್ಕೆ ಸ್ಪುಟ್ನಿಕ್‌-5 ಲಸಿಕೆ ಪರಿಣಾಮಕಾರಿಯಷ್ಟೇ ಅಲ್ಲದೆ, ಪ್ರತಿಯೊಬ್ಬರಿಗೂ ಖರೀದಿಸಲು ಸಾಧ್ಯವಾಗಬಹುದಾದ ವಿಶ್ವದ ಲಸಿಕೆಗಳಲ್ಲಿ ಒಂದಾಗಿದೆ. ಈ ಲಸಿಕೆಯ ಒಂದು ಡೋಸ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 10 ಡಾಲರ್‌(ಸುಮಾರು 750 ರು.)ಗಿಂತ ಕಡಿಮೆ ಇರಲಿದ್ದು, ಪ್ರತಿಯೊಬ್ಬರ ಕೈಗೂ ಎಟುಕಲಿದೆ. ಈ ಲಸಿಕೆಯನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರುವ ಸಾಮಾನ್ಯ ವಾತಾವರಣದಲ್ಲಿ ಸುರಕ್ಷಿತವಾಗಿ ಶೇಖರಿಸಬಹುದಾಗಿದ್ದು, ಲಸಿಕೆಯ ಸಾಗಣೆಗೂ ಸಲೀಸು ಆಗಲಿದೆ. ರಷ್ಯಾ ಸೇರಿ ನಾನಾ ರಾಷ್ಟ್ರಗಳಲ್ಲಿ 42 ಸಾವಿರ ಸ್ವಯಂಸೇವಕರ ಮೇಲೆ ಸ್ಪುಟ್ನಿಕ್‌ ಲಸಿಕೆ ಪ್ರಯೋಗ ನಡೆಸಲಾಗುತ್ತಿದೆ.’ ಎಂದರು.

ಲಸಿಕೆ ವಿತರಣೆಗೆ 3 ಸಮಿತಿ: ಮೋದಿ ಸೂಚನೆ

ಸ್ಪುಟ್ನಿಕ್‌-5 ಲಸಿಕೆಯನ್ನು ರಷ್ಯಾದ ಸೂಕ್ಷ್ಮಜೀವಿ ಮತ್ತು ವೈರಾಣುವಿನ ಗಮಾಲೆಯಾ ರಾಷ್ಟ್ರೀಯ ಸಂಶೋಧನಾ ಕೇಂದ್ರ ಮತ್ತು ಆರ್‌ಡಿಐಎಫ್‌ ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಡಾ. ರೆಡ್ಡೀಸ್‌ ಪ್ರಯೋಗಾಲಯ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಈ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಅಮೆರಿಕದ ಫೈಝರ್‌ ಶೇ.95, ಮಾಡೆರ್ನಾ ಶೇ.90ಕ್ಕಿಂತ ಹೆಚ್ಚು, ಬ್ರಿಟನ್‌ನ ಅಸ್ಟ್ರಾಜೆನಿಕಾ ಶೇ.70 ಹಾಗೂ ಭಾರತದ ಕೋವ್ಯಾಕ್ಸಿನ್‌ 50-60ರಷ್ಟುಪರಿಣಾಮಕಾರಿಯಾಗಿವೆ ಎಂದು ಆಯಾ ಲಸಿಕೆ ಉತ್ಪಾದಕ ಕಂಪನಿಗಳು ಹೇಳಿಕೊಂಡಿವೆ.