ಲಸಿಕೆ ವಿತರಣೆಗೆ 3 ಸಮಿತಿ: ಮೋದಿ ಸೂಚನೆ
ಕೊರೋನಾಗೆ ಲಸಿಕೆ ಸಂಶೋಧನೆ ಕಾರ್ಯ ನಡೆಯುತ್ತಿದ್ದು, ಲಸಿಕೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ಸಂಬಂಧ ಸರ್ವಸನ್ನದ್ಧರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ
ಬೆಂಗಳೂರು (ನ.25): ಮಹಾಮಾರಿ ಕೊರೋನಾಗೆ ಲಸಿಕೆ ಸಂಶೋಧನೆ ಕಾರ್ಯ ನಡೆಯುತ್ತಿದ್ದು, ಲಸಿಕೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ಸಂಬಂಧ ಸರ್ವಸನ್ನದ್ಧರಾಗಬೇಕು ಎಂದು ಕರೆ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸಂಬಂಧ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮೂರು ಸಮಿತಿಗಳನ್ನು ರಚಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಚುನಾವಣಾ ವೇಳೆ ರಾಜಕೀಯ ಪಕ್ಷವನ್ನು ಬೂತ್‌ಮಟ್ಟದಿಂದ ಬಲಗೊಳಿಸುವಂತೆ ಲಸಿಕೆ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದೂ ಮೋದಿ ಅವರು ಸೂಚಿಸಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಮೋದಿ ಸೂಚನೆ ಬೆನ್ನಲ್ಲೇ 3 ಲಸಿಕಾ ಸಮಿತಿ ರಚನೆಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಸಮಿತಿ ರಚಿಸುವುದಾಗಿ ಹೇಳಿದೆ.
ಸಿಎಂಗೆ ಹಲವು ಸೂಚನೆ:
ಕೋವಿಡ್-19ಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ಪೂರ್ವ ಸಿದ್ಧತೆ, ಕೋವಿಡ್ ಸ್ಥಿತಿಗತಿ ಕುರಿತು ಮೋದಿ ಅವರು ಮಂಗಳವಾರ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಲಸಿಕೆ ಬಳಕೆಗೆ ಅಗತ್ಯ ಇರುವ ಸಿದ್ಧತೆಗಳನ್ನು ಕೈಗೊಳ್ಳಬೇಕು. ಲಸಿಕೆ ಲಭ್ಯವಾಗುತ್ತಿದ್ದಂತೆ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು. ಲಸಿಕೆ ಲಭ್ಯವಾಗುವವರೆಗೆ ಯಾವುದೇ ಕಾರಣಕ್ಕೂ ಕೊರೋನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯತನ ತೋರಬಾರದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಮೂರು ಸಮಿತಿಗಳನ್ನು ರಚಿಸಬೇಕು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಿತಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಿ ಲಸಿಕೆ ವಿತರಣೆಯ ನಿರ್ವಹಣೆಯನ್ನು ಮಾಡಬೇಕು. ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಬೇಕು ಮತ್ತು ಮನೆಯಲ್ಲಿ ಕ್ವಾರಂಟೈನ್‌ಗೊಳಗಾಗಿರುವ ಸೋಂಕಿತರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ನಿರ್ದೇಶಿಸಿದರು.
ಯಾವುದೇ ಸಮಯದಲ್ಲಿ ಕೋವಿಡ್ ವ್ಯಾಕ್ಸಿನ್ ಸಿಗಬಹುದು; ದೇಶದ ಜನರಿಗೆ ಮೋದಿ ಭರವಸೆ ..
ಕೊರೋನಾ ಸಾವಿನ ಪ್ರಮಾಣವನ್ನು ಮತ್ತಷ್ಟುಕಡಿಮೆಗೊಳಿಸಲು ಗಮನ ನೀಡಬೇಕು. ಕೊರೋನಾ ಸೋಂಕಿನ ಪ್ರಮಾಣವನ್ನು ಶೇ.5ರಷ್ಟುಮತ್ತು ಸಾವಿನ ಪ್ರಮಾಣವನ್ನು ಶೇ.1ರಷ್ಟುಮಾಡಬೇಕು. ಲಸಿಕೆ ಸಂಶೋಧನೆ ಮಾಡುವಲ್ಲಿ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಲಸಿಕೆ ವಿತರಣೆಗೆ ನೀವು ಯಾವ ರೀತಿ ತಯಾರಿ ಮಾಡಿಕೊಂಡಿದ್ದೀರಿ ಎಂಬ ಮಾಹಿತಿಯನ್ನು ಲಿಖಿತ ರೂಪದಲ್ಲಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ವಿತರಣೆಗೆ ಕೆಲವು ನಿಯಮ ರೂಪಿಸಿದ್ದು, ಅದರ ಪ್ರಕಾರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರದ ಮುಖ್ಯಕಾರ್ಯದರ್ಶಿ, ಈ ಬಗ್ಗೆ ವರದಿ ಸಿದ್ಧತೆ ಮಾಡುವುದಾಗಿ ತಿಳಿಸಿದ್ದಾರೆ.
3 ಸಮಿತಿ ರಚನೆ- ಬೊಮ್ಮಾಯಿ:
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಧಾನಿಗಳ ಸೂಚನೆಯಂತೆ ಮುಖ್ಯಮಂತ್ರಿಗಳ ನೇತೃತ್ವದ ಸಮಿತಿ ಸೇರಿದಂತೆ ಮೂರು ಸಮಿತಿಗಳ ರಚನೆಗೆ ಕ್ರಮ ಕೈಗೊಳ್ಳಲಾಗುವುದು. ಹೆಚ್ಚು ಕೋವಿಡ್ ಪ್ರಕರಣ ಮತ್ತು ಕಡಿಮೆ ಕೋವಿಡ್ ಪ್ರಕರಣಗಳಿರುವ ರಾಜ್ಯಗಳ ಜತೆ ಪ್ರಧಾನಿ ಸಭೆ ನಡೆಸಿ ವಸ್ತುಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಲಸಿಕೆ ಬಗ್ಗೆ ಮಾಹಿತಿ ನೀಡಿದರು. ಯಾವ ದೇಶದಲ್ಲಿ ಯಾವ ರೀತಿ ಲಸಿಕೆ ತಯಾರಿಸಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಒದಗಿಸಿದರು ಎಂದರು.
ಮೊದಲು 30 ಕೋಟಿ ಜನರಿಗೆ ಲಸಿಕೆ: ಬೊಮ್ಮಾಯಿ
ದೇಶದಲ್ಲಿ ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ವಿತರಣೆ ಮಾಡುವ ಉದ್ದೇಶವಿದೆ ಎಂದು ಸಚಿವ ಬೊಮ್ಮಾಯಿ ಮಾಹಿತಿ ನೀಡಿದರು.
ಈ ಪೈಕಿ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು 2 ಕೋಟಿ ಕೊರೋನಾ ವಾರಿಯರ್ಸ್‌ಗೆ ಲಸಿಕೆ ಹಾಕಲಾಗುವುದು. 50-60 ವರ್ಷ ವಯೋಮಿತಿಯ 26 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶ ಇದೆ ಎಂದರು.
ವಿಶ್ವಾದ್ಯಂತ ಹಲವು ಲಸಿಕೆಗಳನ್ನು ತಯಾರಿಸುವ ಕೆಲಸ ನಡೆಯುತ್ತಿದೆ. 50 ಲಸಿಕೆಗಳು ಕ್ಲಿನಿಕಲ್ ಸಂಶೋಧನೆಗಳ ಹಂತದಲ್ಲಿವೆ. 25 ಲಸಿಕೆಗಳು ಅಡ್ವಾನ್ಸ್ ಪ್ರಾಯೋಗಿಕ ಹಂತದಲ್ಲಿವೆ. 5 ಲಸಿಕೆಗಳು ಕ್ಲಿನಿಕಲ್ ಪ್ರಾಯೋಗಿಕ ಹಂತದಲ್ಲಿವೆ. ಭಾರತದಲ್ಲಿ 24 ಸಂಸ್ಥೆಗಳಿಗೆ ಲಸಿಕೆ ತಯಾರಿಸುವ ಸಾಮರ್ಥ್ಯ ಇದೆ. ಐಸಿಎಂಆರ್ ಅನುಮತಿಯೊಂದಿಗೆ ಭಾರತ ಬಯೋಟೆಕ್, ಆಕ್ಸ್‌ಫರ್ಡ್ ಜೆನಿಟೆಕ್ ಸೇರಿದಂತೆ ಹಲವು ಕಂಪನಿಗಳು ಲಸಿಕೆ ಸಂಶೋಧನೆಗೆ ಮುಂದೆ ಬಂದಿವೆ. ಭಾರತದಲ್ಲಿ 3 ಹಂತದ ಲಸಿಕೆ ಪ್ರಗತಿಯಲ್ಲಿದೆ. ಅಡ್ವಾನ್ಸ್, ಪ್ರಾಥಮಿಕ ಮತ್ತು ಪ್ರಯೋಗ ಹಂತದ ಲಸಿಕೆಯನ್ನು ಸಂಶೋಧನೆ ಮಾಡಲಾಗುತ್ತಿದೆ. ಹಂತಹಂತವಾಗಿ ಪ್ರಯೋಗ ಮಾಡಲಾಗುವುದು. ಅಂತಿಮವಾಗಿ ಯಾವುದರಲ್ಲಿ ಯಶಸ್ವಿಯಾಗುತ್ತೇವೆಯೋ ಅದನ್ನು ಪರಿಗಣಿಸಲಾಗುವುದು ಎಂದರು.