ಬೆಂಗಳೂರು (ನ. 25): ಕೋವಿಡ್‌-19 ಲಸಿಕೆ ಶೀಘ್ರದಲ್ಲಿಯೇ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ರಾಜ್ಯ ಸರ್ಕಾರ ಲಸಿಕೆ ದಾಸ್ತಾನಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಸಂಗ್ರಹಗಾರವನ್ನು ರೆಡಿ ಮಾಡಿಕೊಳ್ಳುತ್ತಿವೆ. ಯಾವ ಯಾವ ಜಿಲ್ಲೆಯಲ್ಲಿ ಸಿದ್ಧತೆ ಹೇಗಿದೆ ಎನ್ನುವುದರ ಮಾಹಿತಿ ಇಲ್ಲಿದೆ.

ಕೋಲಾರದಲ್ಲಿ 2 ಲಕ್ಷ ಲಸಿಕೆ ಸಂಗ್ರಹಕ್ಕೆ ಸಿದ್ಧತೆ

ಸರ್ಕಾರದ ಸೂಚನೆ ಮೇರೆಗೆ 2 ಲಕ್ಷ ಕೋವಿಡ್‌ ಲಸಿಕೆ ಸಂಗ್ರಹಿಸಲು ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿರುವ 86 ಎಲ್‌ಆರ್‌ಡಿಗಳಲ್ಲಿ ಅವುಗಳನ್ನು ಸಂಗ್ರಹಿಸಲಾಗುವುದು. ಮೊದಲ ಹಂತದಲ್ಲಿ ಸರ್ಕಾರ 15 ಸಾವಿರ ಲಸಿಕೆಗಳನ್ನು ಜಿಲ್ಲೆಗೆ ಒದಗಿಸಲಿದ್ದು, ಈ ಲಸಿಕೆಗಳನ್ನು ಮೊದಲ ಬಾರಿಗೆ ಕೊರೋನಾ ವಾರಿಯ​ರ್‍ಸ್ಗೆ ನೀಡಲಾಗುವುದು. ಆರು ತಾಲೂಕು ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧ ಪಿಎಚ್‌ಸಿಗಳಲ್ಲಿರುವ ಕೋಲ್ಡ್‌ ಸ್ಟೋರೇಜ್‌ಗಳಲ್ಲಿ ಲಸಿಕೆ ಸಂಗ್ರಹಿಸಲು ಸಿದ್ಧತೆ ನಡೆಸಲಾಗಿದೆ.

ತುಮಕೂರಿನಲ್ಲಿ ಸಂಪೂರ್ಣ ಸಿದ್ಧತೆ

ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿಯೇ ತುಮಕೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿರುವ ಡೀಫ್ರೀಜರ್‌ ಉಗ್ರಾಣ ಸೇರಿದಂತೆ ಜಿಲ್ಲಾದ್ಯಂತ ಇರುವ 144 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಸ್ತಾನು ಮಾಡಿಕೊಳ್ಳಲು ಸಿದ್ಧತೆ ಸಂಪೂರ್ಣವಾಗಿದೆ. ವಾಕ್‌ ಇನ್‌ ಕೂಲರ್‌, ವ್ಯಾಕ್ಸಿನ್‌ ಸಾಗಿಸುವ ವಾಹನ, ಎಎಲ್‌ಆರ್‌ ರೆಫ್ರಿಜರೇಟರ್‌ ಎಲ್ಲವೂ ಸಿದ್ಧತೆಯಾಗಿದೆ. 1 ಲಕ್ಷದಷ್ಟುಲಸಿಕೆ ದಾಸ್ತಾನಿಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ 70 ಕೇಂದ್ರ ಗುರುತು

ಬಾಗಲಕೋಟೆಯಲ್ಲಿ ಜಿಲ್ಲಾಡಳಿತ ಭವನದಲ್ಲಿರುವ ಆರೋಗ್ಯ ಇಲಾಖೆಯ ಎರಡು ಹಾಲ್‌ಗಳನ್ನು ಕೋಲ್ಡ್‌ ಸ್ಟೋರೇಜ್‌ ಆಗಿ ಬಳಸಿಕೊಳ್ಳಲಾಗುತ್ತಿದೆ. ಕನಿಷ್ಠ 2 ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಠ 8 ಡಿಗ್ರಿ ಸೆಲ್ಸಿಯಸ್‌ ವರೆಗೆ ತಾಪಮಾನದಲ್ಲಿ ಲಸಿಕೆ ಸಂಗ್ರಹಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿ ಸಂಗ್ರಹಿಸುವ ಲಸಿಕೆಯನ್ನು ಬಾಗಲಕೋಟೆ ಮಾತ್ರವಲ್ಲದೆ ಕೊಪ್ಪಳ, ವಿಜಯಪುರ ಹಾಗೂ ಗದಗ ಜಿಲ್ಲೆಗಳಿಗೂ ಪೂರೈಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 70 ಕೇಂದ್ರಗಳನ್ನು ಗುರುತಿಸಲಾಗಿದ್ದು, ಆಯಾ ಕೇಂದ್ರಗಳಲ್ಲಿ ಡೀಫ್ರೀಜರ್‌ ವ್ಯವಸ್ಥೆ ಕಲ್ಪಿಸಲಾಗುವುದು.

ಚಿತ್ರದುರ್ಗದಲ್ಲಿ ನುರಿತ ಸಿಬ್ಬಂದಿ ನೇಮಕ

ಚಿತ್ರದುರ್ಗದಲ್ಲಿ ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಪ್ರಾದೇಶಿಕ ಕೋಲ್ಡ್‌ ಸ್ಟೋರೇಜ್‌ ಕೇಂದ್ರ ತೆರೆಯಲಾಗಿದೆ. ಲಸಿಕೆ ದಾಸ್ತಾನು ಹಾಗೂ ವಿತರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. 30 ಲಕ್ಷಕ್ಕೂ ವಿವಿಧ ಡೋಸ್‌ ಸಂಗ್ರಹಣಾ ಸಾಮರ್ಥ್ಯವಿರುವ ಕೋಲ್ಡ್‌ ಸ್ಟೋರೇಜ್‌ ಕೇಂದ್ರವನ್ನು ಲಸಿಕೆ ವಿತರಣಾ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಾಗುವುದು. ಕೋಲ್ಡ್‌ ಸ್ಟೋರೇಜ್‌ನ ತಾಂತ್ರಿಕ ನಿರ್ವಹಣೆಗೆ ಇಬ್ಬರು ನುರಿತ ಸಿಬ್ಬಂದಿ ನೇಮಿಸಲಾಗಿದೆ.

ರಾಯಚೂರಲ್ಲಿ ಖಾಸಗಿ ಕಟ್ಟಡದಲ್ಲಿಯೂ ಸಿದ್ಧತೆ

ರಾಯಚೂರು ಜಿಲ್ಲಾಡಳಿತದಿಂದ ಲಸಿಕೆ ಸಂಗ್ರಹಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ದಾಸ್ತಾನಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಔಷಧಿಗಳ ದಾಸ್ತಾನಿನ ಕಟ್ಟಡಗಳನ್ನು ಬಳಸಿಕೊಳ್ಳುತ್ತಿದೆ. ಜಿಲ್ಲೆ ಹಾಗೂ ತಾಲೂಕು ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ ಔಷಧಿ ದಾಸ್ತಾನು ಮಾಡುತ್ತಿರುವ ಸ್ಥಳದಲ್ಲಿಯೇ ಅವುಗಳನ್ನು ಇರಿಸಲಾಗುತ್ತಿದೆ. ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಬಂದರೇ ಅದನ್ನು ಖಾಸಗಿ ಕಟ್ಟಡದಲ್ಲಿ ಸಂಗ್ರಹಿಸಿಡುವ ವ್ಯಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಕಲಬುರಗಿಯಲ್ಲಿ ಆದ್ಯತಾ ಪಟ್ಟಿ ಸಿದ್ಧ

ಕಲ​ಬು​ರ​ಗಿಯಲ್ಲಿಯೂ ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಜಿಲ್ಲಾಡಳಿತ ಚುರುಕಾಗಿದೆ. 2 ವಾರಗಳ ಹಿಂದೆಯೇ ಜಿಲ್ಲಾ ಚಾಲನಾ ಸಮಿತಿ ಸಭೆ ನಡೆಸಿದ್ದು, ಮೊದಲ ಹಂತದಲ್ಲಿ ಜಿಲ್ಲೆಯ ಕೊರೋನಾ ವಾರಿಯರ್ಸ್‌ಗೆ ಲಸಿಕೆ ನೀಡುವ ನಿರ್ಧಾರ ಮಾಡಲಾಗಿದೆ. ಡಿಎಚ್‌ಒ ಕಚೇರಿಯಲ್ಲಿರುವ ಇತರೆ ಲಸಿಕೆ ಸಂಗ್ರಹಿಸುವ ವ್ಯವಸ್ಥೆಯಲ್ಲೇ ಕೋವಿಡ್‌ ಲಸಿಕೆ ಸಂಗ್ರಹಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಲಸಿಕೆ ವಿತರಣೆ ಬಗ್ಗೆ ಈಗಾಗಲೇ ಆದ್ಯತಾ ಪಟ್ಟಿಯೂ ಸಿದ್ಧಗೊಳ್ಳುತ್ತಿದೆ.

ಬೀದರ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸಿದ್ಧತೆ

ಬೀದರ್‌ನಲ್ಲಿ ಲಸಿಕೆ ಸಂಗ್ರಹಕ್ಕೆ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿಯೂ ಶೀತಲೀಕರಣ ಘಟಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಲಸಿಕೆ ಪ್ರಯೋಗಕ್ಕೆ ಸುಮಾರು 6 ಸಾವಿರ ಆಸ್ಪತ್ರೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ಮಾಹಿತಿ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಜಿಲ್ಲೆಯ ಸುಮಾರು 15 ಕಡೆಗಳಲ್ಲಿ ಐಎಲ್‌ಆರ್‌ ಡೀಫ್ರೀಜರ್‌ಗಳ ಅಗತ್ಯತೆಯ ಕುರಿತಂತೆ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿದೆ.

ಉಡುಪಿಯಲ್ಲಿ ವಾಕ್‌ ಇನ್‌ ಕೂಲರ್‌ ರೆಡಿ

ಉಡುಪಿ ಜಿಲ್ಲೆಯಲ್ಲಿ ಲಸಿಕೆ ಸಂಗ್ರಹಿಸಲು ಮತ್ತು ಪೂರೈಕೆ ಮಾಡಲು ವಾಕ್‌ ಇನ್‌ ಕೂಲರ್‌ ಲಸಿಕಾ ಕೊಠಡಿ ಸಿದ್ಧಪಡಿಸಲಾಗಿದೆ. ಈ ಲಸಿಕಾ ಸಂಗ್ರಹ ಕೊಠಡಿಯಲ್ಲಿ 2 ರಿಂದ 8 ಡಿಗ್ರಿವರೆಗೆ ತಾಪಮಾನದಲ್ಲಿ 2.28 ಕೋಟಿ ಡೋಸ್‌ ಲಸಿಕೆ ಸಂಗ್ರಹಿಸಿ ಇಡಬಹುದಾಗಿದೆ. ಲಸಿಕೆ ಸಾಗಾಟಕ್ಕೆ 1324 ವಾಹನ, 9370 ಐಸ್‌ ಪ್ಯಾಕ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪ್ರತ್ಯೇಕ ಲಸಿಕೆ ಕೊಠಡಿ ಸಿದ್ಧಪಡಿಸಾಗುತ್ತಿದೆ

ಬೆಳಗಾವಿಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದೆ. 12 ಲಕ್ಷ ಡೋಸ್‌ ಲಸಿಕೆ ಜಿಲ್ಲೆಗೆ ಪೂರೈಕೆಯಾಗಲಿದೆ. ಇದಕ್ಕಾಗಿಯೇ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೋದಲ್ಲಿರುವ ಆರೋಗ್ಯ ಇಲಾಖೆ ಕಚೇರಿಯಲ್ಲಿ ಪ್ರತ್ಯೇಕ ಲಸಿಕೆ ಕೊಠಡಿ ಸಿದ್ಧಪಡಿಸಲಾಗುತ್ತಿದೆ. ವ್ಯಾಕ್ಸಿನ್‌ ಡಿಪೋದಲ್ಲಿ ತಲಾ ಒಂದು ವಾಕ್‌ ಇನ್‌ ಕೂಲರ್‌ ಹಾಗೂ ವಾಕ್‌ ಇನ್‌ ಪ್ರೀಝರ್‌ ಲಭ್ಯವಿದೆ. ಲಸಿಕಾ ಸ್ಟೋರ್‌ಗೆಂದು 4 ಸಾವಿರ ಚದರ ಅಡಿ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ.

ಚಿಕ್ಕಮಗಳೂರಿನಲ್ಲಿ ಪಶು ಆಸ್ಪತ್ರೆಯಲ್ಲೂ ದಾಸ್ತಾನು ಸಿದ್ಧತೆ

ಚಿಕ್ಕಮಗಳೂರಲ್ಲಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ದಾಸ್ತಾನು ಮಾಡಿಕೊಳ್ಳಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೊಡ್ಡ ಮಟ್ಟದಲ್ಲಿ ಲಸಿಕೆ ಜಿಲ್ಲೆಗೆ ಬಂದರೆ ತಕ್ಷಣಕ್ಕೆ ದಾಸ್ತಾನು ಮಾಡಿಕೊಳ್ಳಲು ಸ್ಥಳದ ಅಭಾವದ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಯಲ್ಲಿರುವ ಎಲ್ಲ 43 ಪಶು ಆಸ್ಪತ್ರೆಯಲ್ಲಿಯೂ ದಾಸ್ತಾನು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್‌ ವಾರಿಯ​ರ್‍ಸ್, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಮಾಹಿತಿ ಕಲೆ ಹಾಕಲಾಗುತ್ತಿದೆ.

ರಾಮನಗರದಲ್ಲಿ 12 ಲಕ್ಷ ಲಸಿಕೆ ದಾಸ್ತಾನಿಗೆ ಸಿದ್ಧತೆ

ರಾಮನಗರ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ದಾಸ್ತಾನು ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 12 ಲಕ್ಷ ಮಂದಿಗೆ ಲಸಿಕೆ ನೀಡಬೇಕು ಎಂದು ಅಂದಾಜಿಸಿದ್ದು, ಇಷ್ಟುಪ್ರಮಾಣದ ಲಸಿಕೆ ದಾಸ್ತಾನಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಲಸಿಕೆ ನೀಡಲು ಬೇಕಿರುವ ಸಿಬ್ಬಂದಿಗಳ ಪಟ್ಟಿತಯಾರಿಸುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಮೊದಲ ಹಂತದಲ್ಲಿ ಕೊರೋನಾ ವಾರಿಯ​ರ್‍ಸ್ಗೆ ಲಸಿಕೆ ನೀಡಲಾಗುತ್ತದೆ.

ದ.ಕ.ದಲ್ಲಿ ರೀಜನಲ್‌ ವ್ಯಾಕ್ಸಿನ್‌ ಸ್ಟೋರ್‌ನಲ್ಲೇ ಲಸಿಕೆ ಸಂಗ್ರಹ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಲಸಿಕೆಯನ್ನು ಮಂಗಳೂರಿನಲ್ಲಿರುವ ರೀಜನಲ್‌ ವ್ಯಾಕ್ಸಿನ್‌ ಸ್ಟೋರ್‌ನಲ್ಲೇ ಇರಿಸಲಾಗುವುದು. ವೆನ್ಲಾಕ್‌ ಆಸ್ಪತ್ರೆ ವಠಾರದಲ್ಲಿ ಈ ಸ್ಟೋರ್‌ ಇದ್ದು, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಿಗೂ ಇಲ್ಲಿಂದಲೇ ಲಸಿಕೆ ಪೂರೈಕೆಯಾಗುತ್ತದೆ. ಪೊಲಿಯೋ ಸೇರಿದಂತೆ ಮಕ್ಕಳಿಗೆ ನೀಡುವ ಎಲ್ಲ ಲಸಿಕೆಗಳನ್ನು ಇದೇ ಸ್ಟೋರ್‌ನಲ್ಲಿ ಇಡಲಾಗುತ್ತದೆ. ಕೊರೋನಾ ಲಸಿಕೆ ಬಂದರೂ ಅಲ್ಲೇ ಇಡಲು ವ್ಯವಸ್ಥೆ ಮಾಡಲಾಗುವುದು. ಈ ಸ್ಟೋರ್‌ನ ವ್ಯವಸ್ಥೆಯನ್ನು ಫಾರ್ಮಸಿಸ್ಟ್‌ಗಳು ನೋಡಿಕೊಳ್ಳುತ್ತಿದ್ದಾರೆ.

ಕೊಡಗಲ್ಲಿ 6 ಸಾವಿರ ಲಸಿಕೆ ದಾಸ್ತಾನಿಗೆ ಸಿದ್ಧತೆ

ಕೊಡಗು ಜಿಲ್ಲೆಯಲ್ಲಿ ಸದ್ಯಕ್ಕೆ 6 ಸಾವಿರ ಮಂದಿಗೆ ಕೋವಿಡ್‌ ಲಸಿಕೆ ದಾಸ್ತಾನಿಗೆ ಸಿದ್ಧತೆ ನಡೆಸಲಾಗಿದೆ. ಜಿಲ್ಲಾಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ 41 ಐಸ್‌ಲೈನ್‌್ಡ ರೆಫ್ರಿಜರೇಟರ್‌ಗಳÜ ವ್ಯವಸ್ಥೆ ಮಾಡಲಾಗಿದ್ದು, ಸುಸ್ಥಿತಿಯಲ್ಲಿಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು 5.5 ಲಕ್ಷ ಜನಸಂಖ್ಯೆಯಿದ್ದು, ಮೊದಲನೇ ಹಂತದಲ್ಲಿ ಆರು ಸಾವಿರ ಮಂದಿಗೆ ವಿತರಿಸಲಾಗುತ್ತದೆ. ಲಸಿಕೆ ಬಂದ ತಕ್ಷಣ ಎಲ್ಲ ಕಡೆ ತಲುಪಿಸಲು ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ 7,500 ಲಸಿಕೆ ನೀಡಲು ತಯಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 7,500 ಮಂದಿಗೆ ಕೊರೋನಾ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಹಂತ ಹಂತವಾಗಿ ಮೂರು ಹಂತದಲ್ಲಿ ಲಸಿಕಾ ಅಭಿಯಾನ ನಡೆಸಲು ತಯಾರಿಯಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಲಸಿಕೆ ಶೇಖರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಲಸಿಕೆ ಸಾಗಾಟಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಹಾವೇರಿಯಲ್ಲಿ ದಾಸ್ತಾನಿಗೆ ಅಗತ್ಯ ವ್ಯವಸ್ಥೆ

ಹಾವೇರಿ ಜಿಲ್ಲೆಯಲ್ಲಿ ಸರ್ಕಾರ ಸೂಚನೆ ಮೇರೆಗೆ ಜಿಲ್ಲಾಡಳಿತ ಲಸಿಕೆ ದಾಸ್ತಾನಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಇದುವರೆಗೆ ವಿವಿಧ ಔಷಧಿ, ಲಸಿಕೆ ಸಂಗ್ರಹಣಕ್ಕೆ ಜಿಲ್ಲಾದ್ಯಂತ ಉಪಯೋಗಿಸುತ್ತಿದ್ದ ಕೋಲ್ಡ್‌ ಸ್ಟೋರೇಜ್‌ ಚೈನ್‌ ಪಾಯಿಂಟ್‌ಗಳನ್ನು ಕೋವಿಡ್‌ ಲಸಿಕೆ ದಾಸ್ತಾನಿಗೆ ಬಳಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ಪಾಯಿಂಟ್‌ಗಳಲ್ಲಿ ತಲಾ 90 ಐಸ್‌ ಲೈನ್‌್ಡ ರೆಫ್ರಿಜರೇಟರ್‌ (ಐಎಲ್‌ಆರ್‌) ಹಾಗೂ ಡೀಫ್ರೀಜರ್‌ಗಳಿವೆ. ಅಲ್ಲದೇ ಪಶು ಆಸ್ಪತ್ರೆಗಳಲ್ಲಿರುವ ವ್ಯಾಕ್ಯೂಮ್‌ ಕೂಲರ್‌ಗಳನ್ನು ಕೂಡ ಕೋವಿಡ್‌ ವ್ಯಾಕ್ಸಿನ್‌ ದಾಸ್ತಾನಿಗೆ ಬಳಸಲು ನಿರ್ಧರಿಸಲಾಗಿದೆ.

ಉ.ಕ.ಇರುವುದರಲ್ಲಿಯೇ ಲಸಿಕೆ ಸಂಗ್ರಹಕ್ಕೆ ಸಿದ್ಧತೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಲಸಿಕೆ ಸಂಗ್ರಹಣೆಗೆ ಹೊಸದಾಗಿ ಯಾವುದೆ ವ್ಯವಸ್ಥೆ ಮಾಡುತ್ತಿಲ್ಲ. ಈ ಹಿಂದೆ ಇರುವ ವ್ಯವಸ್ಥೆಯಲ್ಲಿಯೇ ಲಸಿಕೆ ಸಂಗ್ರಹಿಸಲು ಯೋಜಿಸಲಾಗಿದೆ. ಜಿಲ್ಲೆಯ 103 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಣೆಗೆ ಹಲವು ವರ್ಷಗಳ ಹಿಂದೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಸಂಗ್ರಹಣೆಗೆ ವ್ಯವಸ್ಥೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲೂ ಸಂಗ್ರಹಿಸಬಹುದು. ಲಸಿಕೆ ಸಾಗಾಟಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಧಾರವಾಡದಲ್ಲಿ ಪ್ರತ್ಯೇಕ ಅಧಿಕಾರಿಗಳ ನೇಮಕ

ಧಾರವಾಡದಲ್ಲಿ ಸರ್ಕಾರದ ನಿರ್ದೇಶನದಂತೆ ಈಗಾಗಲೇ 22 ಸಾವಿರ ಕೊರೋನಾ ವಾರಿಯರ್ಸ್‌ಗಳ ಮಾಹಿತಿ ಪಡೆದು ಸರ್ಕಾರಕ್ಕೆ ಕಳುಹಿಸಲಾಗಿದೆ. ಲಸಿಕೆ ದಾಸ್ತಾನು ಸಿದ್ಧತೆಗಾಗಿ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಿದ್ದು ಅವರು ಸಭೆ ನಡೆಸುವ ಮೂಲಕ ಸಿದ್ಧತೆಯಲ್ಲಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯ ಕಿಮ್ಸ್‌, ಜಿಲ್ಲಾಸ್ಪತ್ರೆ ಹಾಗೂ ಇತರೆ ಖಾಸಗಿ ಆಸ್ಪತ್ರೆಯಲ್ಲಿನ ವ್ಯವಸ್ಥೆಯಾದ ವಾಕ್‌ ಇನ್‌ ಕೂಲರ್‌, ಐಸ್‌ಪ್ಯಾಕ್‌ಗಳಲ್ಲಿ ಲಸಿಕೆಗಳನ್ನು ಸಂಗ್ರಹಿಸಿಡಲಾಗುವುದು. ಜಿಲ್ಲಾ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಕ್ಕೆ ಸೌಲಭ್ಯವಿದೆ.

ಕೊಪ್ಪಳದಲ್ಲಿ 15 ಲಕ್ಷ ಲಸಿಕೆ ಸಂಗ್ರಹಕ್ಕೆ ಸಿದ್ಧತೆ

ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸ್ಟೋರೇಜ್‌ ಯುನಿಟ್‌ಗಳು ನಮಗೆ ಬೇಕಾಗುವಷ್ಟುಇವೆ ಎಂದು ಡಿಎಚ್‌ಒ ಲಿಂಗರಾಜು ತಿಳಿಸಿದ್ದಾರೆ. ಸುಮಾರು 15 ಲಕ್ಷ ಜನರಿಗೆ ಬೇಕಾದ ಲಸಿಕೆ ಸಂಗ್ರಹ ಮಾಡಬಹುದಾದ ಸಾಮರ್ಥ್ಯ ನಮ್ಮ ಬಳಿ ಇದೆ. ಪ್ರಥಮ ಹಂತವಾಗಿ ಜಿಲ್ಲಾಸ್ಪತ್ರೆ, ಹೆರಿಗೆ ಆಸ್ಪತ್ರೆಯಲ್ಲಿರುವ ಸಂಗ್ರಹಣಾ ಘಟಕಗಳೇ ಸಾಕಷ್ಟಿವೆ. ಔಷಧಿ ಸಂಗ್ರಹಾಲಯಗಳು ಮತ್ತು ಇದಲ್ಲದೆ 45 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸಂಗ್ರಹಣಾ ಸಾಮರ್ಥ್ಯವಿದೆ.

ಬಳ್ಳಾರಿಯಲ್ಲಿ ಪ್ರತ್ಯೇಕ ಕಟ್ಟಡದ ವ್ಯವಸ್ಥೆ

ಬಳ್ಳಾರಿ ಜಿಲ್ಲೆಯಲ್ಲಿ ಲಸಿಕೆ ಸಂಗ್ರಹಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿ ಇದಕ್ಕಾಗಿ ಪ್ರತ್ಯೇಕ ಕಟ್ಟಡವನ್ನು ಕಾಯ್ದಿರಿಸಲಾಗಿದೆ. ಈಗಾಗಲೇ ಆರೋಗ್ಯ ಸೇವಾ ಕಾರ್ಯಕರ್ತರ ಸಿಬ್ಬಂದಿ ಪಟ್ಟಿಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯ ಲಸಿಕಾ ಸಂಗ್ರಹಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯದಷ್ಟುಐಎಲ್‌ಆರ್‌ಗಳನ್ನು ಇಟ್ಟುಕೊಳ್ಳಲಾಗಿದೆ. ಶೀಘ್ರದಲ್ಲಿ ವಾಕ್‌ ಇನ್‌ ಕೂಲರ್‌ ಹಾಗೂ ವಾಕಿಂಗ್‌ ರಿಫ್ರಿಜರೇಟರ್‌ಗಳು ಆಗಮಿಸಲಿವೆ. ಇರುವ ಸಿಬ್ಬಂದಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಶಿವಮೊಗ್ಗದಲ್ಲಿ ಪ್ರತಿ ಆರೋಗ್ಯ ಕೇಂದ್ರದಲ್ಲೂ ಕೋಲ್ಡ್‌ ಸ್ಟೋರೇಜ್‌

ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋಲ್ಡ್‌ ಸ್ಟೋರೇಜ್‌ಗಳಿದ್ದು, ಲಸಿಕೆ ಸಂಗ್ರಹಣಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೆ ಇತರೆ ರಕ್ತನಿಧಿ ಕೇಂದ್ರ ಸೇರಿ ಎಲ್ಲೆಲ್ಲಿ ಔಷಧ ಸಂಗ್ರಹಣೆ ವ್ಯವಸ್ಥೆ ಇದೆ ಎಂಬ ಬಗ್ಗೆ ಸರ್ಕಾರ ಕೇಳಿದ ಮಾಹಿತಿಯನ್ನು ಪಡೆದು ಕಳುಹಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಎಷ್ಟುಜನರಿಗೆ ನೀಡಬೇಕಾಗುತ್ತದೆ? ಯಾವ ಪ್ರಮಾಣದಲ್ಲಿ ನೀಡಲಾಗುತ್ತದೆ? ಇದಕ್ಕೆ ಎಷ್ಟುಔಷಧ ಬೇಕು? ಇದರ ಸಂಗ್ರಹಣೆಗೆ ಎಷ್ಟುಸ್ಥಳಾವಕಾಶ ಬೇಕು ಎಂಬೆಲ್ಲ ಮಾಹಿತಿಗಳು ಪರಿಶೀಲನೆಯಲ್ಲಿವೆ.

ಮಂಡ್ಯದಲ್ಲಿ 124 ಐಎಲ್‌ಆರ್‌ಗಳು ಲಭ್ಯ

ಮಂಡ್ಯ ಜಿಲ್ಲೆಯಲ್ಲಿ ಮಿಮ್ಸ್‌ ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲೂ ಲಸಿಕೆಯನ್ನು ಸಂಗ್ರಹಿಸಿಡುವುದಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಸರ್ವ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಹಾಲಿ 124 ಐಎಲ್‌ಆರ್‌ಗಳಿವೆ. ಇದರಲ್ಲಿ ಸುಮಾರು 50 ಸಾವಿರ ಲಸಿಕೆ ಸಂಗ್ರಹಿಸಿಡಲು ಸಾಧ್ಯವಿದೆ. ಮುಂಜಾಗ್ರತೆಯಾಗಿ ಹೆಚ್ಚುವರಿ 40 ಐಎಲ್‌ಆರ್‌ಗಳನ್ನು ನೀಡುವಂತೆ ಸರ್ಕಾರಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಮೊದಲ ಹಂತದಲ್ಲಿ ಲಸಿಕೆ ನೀಡುವುದಕ್ಕೆ 600 ಜನರನ್ನು ನಿಯೋಜಿಸಲಾಗಿದ್ದು, 13 ಸಾವಿರ ಜನರನ್ನು ಗುರುತಿಸಲಾಗಿದೆ.

ಚಾಮರಾಜನಗರದಲ್ಲಿ ಆದ್ಯತಾ ಪಟ್ಟಿ ಸಿದ್ಧವಾಗಿದೆ

ಚಾಮರಾಜನಗರ ಜಿಲ್ಲೆಯ 4,282 ಆರೋಗ್ಯ ಸಿಬ್ಬಂದಿ ಹೆಸರು ಒಳಗೊಂಡ ಆದ್ಯತಾ ಪಟ್ಟಿಯನ್ನು ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಲಸಿಕೆ ಸಂಗ್ರಹಕ್ಕಾಗಿ ಕೋಲ್ಡ್‌ ಸ್ಟೋರೆಜ್‌ ನಂತಹ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ಸಾಗಾಟಕ್ಕೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಯಾದಗಿರಿಯಲ್ಲಿ ಪ್ರತ್ಯೇಕ ಕೋಣೆ ಮೀಸಲು

ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಕೋಣೆಯೊಂದನ್ನು ಲಸಿಕೆ ಸಂಗ್ರಹಕ್ಕಾಗಿ ಮೀಸಲಿರಿಸಲಾಗಿದೆ. ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗುತ್ತದೆ. 24 ಲಕ್ಷ ಡೋಸ್‌ ಸಂಗ್ರಹ ಸಾಮರ್ಥ್ಯದ ಕೋಣೆ ಇದಾಗಿದೆ. ಡಿಎಚ್‌ಒ, ಜಿಲ್ಲಾ ಲಸಿಕಾ ಸಂಗ್ರಹಣಾಧಿಕಾರಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಇದಕ್ಕಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಿಂದ 5000 ಡೋಸ್‌ಗಳ ಬೇಡಿಕೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.

ಹಾಸನದಲ್ಲಿ ಲಸಿಕೆ ದಾಸ್ತಾನಿಗೆ ಸಕಲ ಸಿದ್ಧತೆ

ಹಾಸನ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳು, 28ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆ ದಾಸ್ತಾನಿಗೆ ಸಿದ್ಧತೆ ಕೈಗೊಳ್ಳಲಾಗಿದೆ. ಈ ಎಲ್ಲಾ ಆರೋಗ್ಯ ಕೇಂದ್ರಗಳಿಂದ ಒಟ್ಟಾರೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವುಗಳ ಪೈಕಿ ಎಷ್ಟುಆರೋಗ್ಯ ಕೇಂದ್ರಗಳಲ್ಲಿ ಜನರೇಟರ್‌ ಸೌಲಭ್ಯ ಇದೆ, ಯುಪಿಎಸ್‌ ಸೌಲಭ್ಯ ಇದೆ ಎನ್ನುವ ಅಂಕಿ ಅಂಶ ಸಂಗ್ರಹಿಸಲಾಗಿದೆ.

ದಾವಣಗೆರೆಯಲ್ಲಿ ದಾಸ್ತಾನಿಗೆ ಸಿದ್ಧತೆ

ದಾವಣಗೆರೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರವು ಜಿಲ್ಲೆಗೆ ಪೂರೈಸುವ ಲಸಿಕೆಗಳನ್ನು ನಗರದ ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡಿರುವ ಜಿಲ್ಲಾ ಔಷಧಿ ಉಗ್ರಾಣದಲ್ಲಿ ಸಂಗ್ರಹಿಸಲು ಸಾಕಷ್ಟುಸಂಖ್ಯೆಯಲ್ಲಿ ಡೀಫ್ರೀಜರ್‌, ಐಸ್‌ ಲೈನ್‌್ಡ ರೆಫ್ರಿಜಿರೇಟರ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಶು ಸಂಗೋಪನಾ ಇಲಾಖೆಯಿಂದ ಶೀತಲ ಪೆಟ್ಟಿಗೆಗಳನ್ನು ಪಡೆದು, ಅವುಗಳಲ್ಲಿ ಕೊರೋನಾ ಲಸಿಕೆ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.