ಇತಿಹಾಸದಲ್ಲೇ ಅಪರೂಪ ಎಂಬಂತೆ ಬ್ರೆಜಿಲ್ನ ಅಮೆಜಾನ್ ಮಳೆಕಾಡಿನಲ್ಲಿ ವಾಸಿಸುವ ಅವಾ ಬುಡಕಟ್ಟು ಜನಾಂಗ ಮೊದಲ ಬಾರಿಗೆ ಹೊರ ಪ್ರಪಂಚದೊಂದಿಗೆ ನೇರ ಸಂಪರ್ಕಕ್ಕೆ ಬಂದಿದ್ದಾರೆ. ಮಾರನ್ಹಾವೊ ರಾಜ್ಯದ ಅರಣ್ಯ ಪ್ರದೇಶದಿಂದ ಸುಮಾರು 20 ಮಂದಿ ಅವಾ ಬುಡಕಟ್ಟು ಜನರು ತಮ್ಮ ಆಯುಧಗಳ ಜೊತೆ ಬಂದು ಆಹಾರ ಕೇಳಿದ್ದಾರೆ.
ಬ್ರೆಸಿಲಿಯಾ (ಬ್ರೆಜಿಲ್): ಆಧುನಿಕ ಜಗತ್ತಿನ ಸಂಪರ್ಕದಿಂದ ಸಂಪೂರ್ಣವಾಗಿ ದೂರವಿದ್ದು, ದಟ್ಟಾರಣ್ಯದೊಳಗೆ ತಮ್ಮದೇ ಆದ ಸಾಂಪ್ರದಾಯಿಕ ಬದುಕು ಕಟ್ಟಿಕೊಂಡಿರುವ ಅಮೆಜಾನ್ ಮಳೆಕಾಡಿನ ಅಪರೂಪದ ಬುಡಕಟ್ಟು ಜನಾಂಗವೊಂದರ ಗುಂಪು ಇದೀಗ ಹೊರಜಗತ್ತಿನ ಕಣ್ಣಿಗೆ ಬಿದ್ದಿದೆ. ಬ್ರೆಜಿಲ್ನ ಈಶಾನ್ಯ ರಾಜ್ಯವಾದ ಮರನ್ಹಾವೊದ ಅರಾರಿಬೋಯಾ ಆದಿವಾಸಿ ಭೂಪ್ರದೇಶದಲ್ಲಿ ಸುಮಾರು 20 ಮಂದಿ ಸಂಪರ್ಕವಿಲ್ಲದ ಅವಾ ಬುಡಕಟ್ಟು ಜನರು ತಮ್ಮ ಆಯುಧಗಳ ಜೊತೆಗೆ ಕಾಡಿನಿಂದ ಹೊರಬಂದು ನೆರೆಯ ಗ್ರಾಮಸ್ಥರ ಬಳಿ ಆಹಾರ ಕೇಳಿರುವ ಐತಿಹಾಸಿಕ ಹಾಗೂ ಅಪರೂಪದ ಘಟನೆ ನಡೆದಿದೆ. ಅಕ್ರಮ ಮರ ಕಡಿಯುವುದು, ಗಣಿಗಾರಿಕೆ, ಜಾನುವಾರು ಸಾಕಣೆದಾರರ ಒತ್ತುವರಿಯಿಂದಾಗಿ ತಮ್ಮ ಅಸ್ತಿತ್ವಕ್ಕೆ ಕುತ್ತು ಬಂದಿರುವುದರಿಂದಲೇ ಈ ಸಮುದಾಯ ಆಹಾರ ಅರಸಿ ಹೊರಬಂದಿರಬಹುದು ಎಂದು ಆದಿವಾಸಿ ಹಕ್ಕುಗಳ ಹೋರಾಟಗಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಅಪರೂಪದ ಮುಖಾಮುಖಿಯ ವಿಡಿಯೋದಲ್ಲಿ ಏನಿದೆ?
ಬ್ರಿಟನ್ ಮೂಲದ ಆದಿವಾಸಿ ಹಕ್ಕುಗಳ ಸಂಘಟನೆಯಾದ 'ಸರ್ವೈವಲ್ ಇಂಟರ್ನ್ಯಾಷನಲ್' ಈ ಅಪರೂಪದ ಮುಖಾಮುಖಿಯ ವಿಡಿಯೋ ಮತ್ತು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅರಾರಿಬೋಯಾ ಪ್ರದೇಶದಲ್ಲಿ ವಾಸಿಸುವ ಗುವಾಜಜಾರಾ ಬುಡಕಟ್ಟು ಸಮುದಾಯದ ಅರಣ್ಯ ರಕ್ಷಕರು ಈ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಸೋಮವಾರ ಅಲ್ಲಿನ ತವಾರಿ ಸರ್ಕಾರಿ ಪ್ರವೇಶ ನಿಯಂತ್ರಣ ಠಾಣೆ ಮತ್ತು ಗುವಾಜಜಾರಾ ಗ್ರಾಮದ ಸಮೀಪ ಈ ಘಟನೆ ನಡೆದಿದೆ.
ವಿಡಿಯೋದಲ್ಲಿ ಕಂಡುಬಂದ ದಟ್ಟವಾದ ಪೊದೆಗಳ ನಡುವೆ ಅವಾ ಆದಿವಾಸಿಗಳ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಹಾರಗಳು ಮತ್ತು ಗರಿಗಳ ತಲೆಗೆ ಧರಿಸಿ, ನಿರ್ವಸ್ತ್ರಧಾರಿಗಳಾಗಿದ್ದರು. ಪುರುಷರ ಕೈಯಲ್ಲಿ ಬಿಲ್ಲು ಮತ್ತು ಉದ್ದನೆಯ ಬಾಣಗಳು ಇದ್ದವು. ಕಳೆದ ಹಲವು ದಶಕಗಳ ಇತಿಹಾಸದಲ್ಲಿ 'ಅವಾ' ಬುಡಕಟ್ಟು ಜನಾಂಗವು ಈ ರೀತಿ ಹೊರಗಿನವರನ್ನು ಸಂಪರ್ಕಿಸಿರುವುದು ಇದೇ ಮೊದಲಾಗಿದೆ. ಅವರು ಗ್ರಾಮಸ್ಥರ ಬಳಿ ಗೆಣಸುಗಳನ್ನು ಕೇಳಿ ಪಡೆದುಕೊಂಡು, ಮತ್ತೆ ತಮ್ಮ ದಟ್ಟಾರಣ್ಯದೊಳಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಈ ಗುಂಪಿನಲ್ಲಿದ್ದ ಮಕ್ಕಳು ಮತ್ತು ವೃದ್ಧರು ತೀವ್ರ ದೈಹಿಕ ನಿಶ್ಯಕ್ತಿ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವಂತೆ ಕಂಡುಬಂದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ ಎಂದು ಮರನ್ಹಾವೊ ಆದಿವಾಸಿ ಸಂಘಟನೆ ಹೇಳಿದೆ.
ಸಂಪರ್ಕವಿಲ್ಲದ ಆದಿವಾಸಿಗಳು ಎಂದರೆ ಯಾರು?
ಹೊರಜಗತ್ತಿನ ಅಸ್ತಿತ್ವದ ಬಗ್ಗೆ ಸ್ವಲ್ಪ ಅರಿವಿದ್ದು, ಯಾವುದೇ ಸಂಪರ್ಕವನ್ನು ಹೊಂದದೆ ಸ್ವಯಂಪ್ರೇರಿತವಾಗಿ ಪ್ರತ್ಯೇಕವಾಗಿ ಬದುಕುವ ಮೂಲನಿವಾಸಿ ಗುಂಪುಗಳನ್ನು 'ಸಂಪರ್ಕವಿಲ್ಲದ ಆದಿವಾಸಿಗಳು' ಎಂದು ಕರೆಯಲಾಗುತ್ತದೆ. ವಾಯುವ್ಯ ಮರನ್ಹಾವೊದ ಟುಪಿ-ಗೌರಾನಿ ಬುಡಕಟ್ಟಿಗೆ ಸೇರಿದ ಅವಾ ಸಮುದಾಯದ ಸುಮಾರು 100 ಮಂದಿ ಈಗಲೂ ಸಂಪೂರ್ಣ ಪ್ರತ್ಯೇಕವಾಗಿ ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಜಾಗತಿಕವಾಗಿ ದಕ್ಷಿಣ ಅಮೆರಿಕ, ಏಷ್ಯಾ ಮತ್ತು ಪೆಸಿಫಿಕ್ನ 10 ದೇಶಗಳಲ್ಲಿ ಇಂತಹ 196 ಗುಂಪುಗಳಿದ್ದು, ಇವುಗಳಲ್ಲಿ ಶೇ. 95ರಷ್ಟು ಅಮೆಜಾನ್ ಕಾಡಿನಲ್ಲಿ ಹಾಗೂ 124 ಗುಂಪುಗಳು ಬ್ರೆಜಿಲ್ನಲ್ಲಿಯೇ ನೆಲೆಸಿವೆ. ಅವಾ ಜನಾಂಗವನ್ನು ಭೂಮಿಯ ಅತ್ಯಂತ ಅಪಾಯದಲ್ಲಿರುವ ಬುಡಕಟ್ಟು ಎಂದು ಕರೆಯಲಾಗುತ್ತದೆ. ಬಿಲ್ಲು ಮತ್ತು ಬಾಣಗಳನ್ನು ಬಳಸಿ ಬೇಟೆಯಾಡುವ ಇವರು, ಇಂದಿಗೂ ಆಧುನಿಕ ಜಗತ್ತಿನಿಂದ ಸಂಪೂರ್ಣವಾಗಿ ದೂರವಿದ್ದು ಅರಣ್ಯವನ್ನೇ ನಂಬಿ ಬದುಕುತ್ತಿದ್ದಾರೆ.
ಪ್ರಪಂಚದಾದ್ಯಂತ ಹೊರ ಜಗತ್ತಿನ ಸಂಪರ್ಕವಿಲ್ಲದೆ ಬದುಕುತ್ತಿರುವ ಬುಡಕಟ್ಟು ಸಮುದಾಯ
ಮಾಶ್ಕೊ ಪಿರೊ: ಇದು ಪೆರುವಿನ ಅಮೆಜಾನ್ ಕಾಡಿನಲ್ಲಿ ವಾಸಿಸುವ ವಿಶ್ವದ ಅತಿದೊಡ್ಡ ಸಂಪರ್ಕವಿಲ್ಲದ ಬುಡಕಟ್ಟು ಜನಾಂಗವಾಗಿದ್ದು, 750ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮರ ಕಡಿಯುವ ಕಂಪನಿಗಳ ಚಟುವಟಿಕೆಯಿಂದಾಗಿ ಇವರೂ ಸಹ ನದಿ ತೀರಗಳಲ್ಲಿ ಕಾಣಿಸಿಕೊಂಡಿದ್ದರು.
ಸೆಂಟಿನೆಲೀಸ್: ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ದ್ವೀಪದಲ್ಲಿ ವಾಸಿಸುವ ಈ ಬುಡಕಟ್ಟು ಜನಾಂಗವು ಹೊರಗಿನವರ ಯಾವುದೇ ಸಂಪರ್ಕವನ್ನು ಇಂದಿಗೂ ಕಟ್ಟುನಿಟ್ಟಾಗಿ ಇಟ್ಟುಕೊಂಡಿಲ್ಲ. ಸುಮಾರು 500 ಜನರ ಗುಂಪು ಇಲ್ಲಿದೆ ಎನ್ನಲಾಗಿದೆ. ಇವರು ಆಕ್ರಮಣಕಾರಿಯಾಗಿ ತಮ್ಮ ಜಾಗವನ್ನು ಉಳಿಸಿಕೊಂಡಿದ್ದು, ಇವರ ದ್ವೀಪ ಪ್ರವೇಶಿಸಿದವರ ಸಾವು ಕಟ್ಟಿಟ್ಟ ಬುತ್ತಿಯಾಗಿದೆ.
ಇದೀಗ ಬ್ರೆಜಿಲ್ನ ಆದಿವಾಸಿ ವ್ಯವಹಾರಗಳ ಸಂಸ್ಥೆ 'ಫುನೈ' ಮತ್ತು ಆದಿವಾಸಿ ಜನರ ಸಚಿವಾಲಯವು ತುರ್ತು ಕಾರ್ಯಪಡೆಯನ್ನು ಸಕ್ರಿಯಗೊಳಿಸಿದೆ. ಪ್ರತ್ಯೇಕವಾಗಿ ಬದುಕುವ ಆದಿವಾಸಿಗಳಿಗೆ ಹೊರಜಗತ್ತಿನ ಸಾಮಾನ್ಯ ಸಾಂಕ್ರಾಮಿಕ ರೋಗಗಳ ವಿರುದ್ಧ ರೋಗನಿರೋಧಕ ಶಕ್ತಿ ಇರುವುದಿಲ್ಲ. ಹೀಗಾಗಿ ಅವರಿಗೆ ಯಾವುದೇ ಕಾಯಿಲೆಗಳು ಹರಡದಂತೆ ಆರೋಗ್ಯ ಕಾರ್ಯಕರ್ತರು ಮತ್ತು ವಿಶೇಷ ರಕ್ಷಣಾ ತಂಡಗಳು ಸ್ಥಳದಲ್ಲಿ ನಿಗಾ ವಹಿಸಿವೆ. ಈ ಸಣ್ಣ ಮುಖಾಮುಖಿಯು ಅವರು ಶಾಶ್ವತ ಸಂಪರ್ಕ ಬಯಸಿದ್ದಾರೆ ಎಂಬುದರ ಸಂಕೇತವಲ್ಲ. ಅವರ ಪ್ರತ್ಯೇಕತೆಯ ಹಕ್ಕನ್ನು ಗೌರವಿಸುವ 'ಸಂಪರ್ಕ ರಹಿತ ನೀತಿ'ಯನ್ನೇ ಸರ್ಕಾರ ಮುಂದುವರಿಸಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕಾಡಿನಿಂದ ಹೊರಬರಲು ಕಾರಣವೇನು?
ಬೇಟೆಯಾಡುವುದು, ಮೀನುಗಾರಿಕೆ ಮತ್ತು ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದ ಅವಾ ಸಮುದಾಯ ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಘಟನೆಯನ್ನು ನಿಜವಾದ ಬಿಕ್ಕಟ್ಟಿನ ಕ್ಷಣ ಮತ್ತು ಎಚ್ಚರಿಕೆಯ ಗಂಟೆ ಎಂದು ಬಣ್ಣಿಸಿರುವ ಸರ್ವೈವಲ್ ಬ್ರೆಜಿಲ್ ಮುಖ್ಯಸ್ಥೆ ಸಾರಾ ಶೆಂಕರ್, ಅಕ್ರಮ ಮರ ಕಡಿಯುವವರು, ಬೇಟೆಗಾರರು, ಚಿನ್ನದ ಗಣಿಗಾರರು , ಜಾನುವಾರು ಸಾಕಣೆದಾರರು ಎಲ್ಲಾ ದಿಕ್ಕುಗಳಿಂದಲೂ ಅರಣ್ಯವನ್ನು ಅತಿಕ್ರಮಿಸುತ್ತಿದ್ದಾರೆ. ಇದರಿಂದ ಅವಾ ಜನರ ವಾಸಸ್ಥಾನವು ವಿನಾಶದಿಂದ ಆವೃತವಾದ ಒಂದು ಸಣ್ಣ ದ್ವೀಪದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅರಾರಿಬೋಯಾ ಅರಣ್ಯವನ್ನು ರಕ್ಷಿಸಲು ಗುವಾಜಜಾರಾ ಸಮುದಾಯದ ಅರಣ್ಯ ರಕ್ಷಕರು ಹಲವು ವರ್ಷಗಳಿಂದ ಹೋರಾಡುತ್ತಿದ್ದು, ಈ ಸಂಘರ್ಷದಲ್ಲಿ ಹಲವು ಆದಿವಾಸಿ ಸದಸ್ಯರು ಅತಿಕ್ರಮಣಕಾರರಿಂದ ಹತ್ಯೆಗೀಡಾಗಿದ್ದಾರೆ. ಅವಾ ಆದಿವಾಸಿಗಳು ಬದುಕುಳಿಯಲು ಇರುವ ಏಕೈಕ ಮಾರ್ಗವೆಂದರೆ, ಒಳನುಗ್ಗುವವರನ್ನು ಅವರ ಕಾಡಿನಿಂದ ಸಂಪೂರ್ಣವಾಗಿ ಹೊರಗಿಡುವುದು. ಬ್ರೆಜಿಲ್ ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶೆಂಕರ್ ಹಾಗೂ ಸರ್ವೈವಲ್ ಇಂಟರ್ನ್ಯಾಷನಲ್ ನಿರ್ದೇಶಕಿ ಕ್ಯಾರೋಲಿನ್ ಪಿಯರ್ಸ್ ಒತ್ತಾಯಿಸಿದ್ದಾರೆ.
ಅಮೆಜಾನ್ ಶೋಷಣೆ ವಿರುದ್ಧ ಪೋಪ್ ಲಿಯೋ ಧ್ವನಿ
ಮತ್ತೊಂದೆಡೆ, ದಕ್ಷಿಣ ಅಮೆರಿಕ ಪ್ರವಾಸದಲ್ಲಿರುವ ಪೋಪ್ ಲಿಯೋ ಅವರು ಭಾನುವಾರ ಪೆರುವಿನ ಅಮೆಜಾನ್ ಪ್ರದೇಶದ ಪುಕಾಲ್ಪಾ ನಗರದಲ್ಲಿ ಆದಿವಾಸಿ ಸಮುದಾಯಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಅಮೆಜಾನ್ ಕಾಡಿನ ಶೋಷಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಚಿನ್ನ ಮತ್ತು ತೈಲ ಉತ್ಪಾದನೆಯಿಂದ ಉಂಟಾಗುತ್ತಿರುವ ಅರಣ್ಯನಾಶ ಹಾಗೂ ಮಾಲಿನ್ಯವನ್ನು ವಿರೋಧಿಸುವಂತೆ ಕರೆ ನೀಡಿರುವ ಅವರು, ತಮ್ಮ ನೆಲವನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿರುವ ಆದಿವಾಸಿ ನಾಯಕರ ಸರಣಿ ಹ*ತ್ಯೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರದೇಶಗಳನ್ನು ರಕ್ಷಿಸಿಕೊಂಡಿದ್ದಕ್ಕಾಗಿ ಅನೇಕ ಮೂಲನಿವಾಸಿ ನಾಯಕರನ್ನು ಕೊಲ್ಲಲಾಗಿದೆ. ಈ ಸಹೋದರರ ರಕ್ತವು ನ್ಯಾಯಕ್ಕಾಗಿ ಮೊರೆಯಿಡುತ್ತಿದೆ ಎಂದು ಪೋಪ್ ಲಿಯೋ ಹೇಳಿರುವುದು ಅಮೆಜಾನ್ ಕಾಡಿನ ರಕ್ಷಣೆಯ ಕೂಗಿಗೆ ಮತ್ತಷ್ಟು ಬಲ ತುಂಬಿದೆ.











