ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆ ಮುಖ್ಯಸ್ಥನಾದ ಹಫೀಜ್‌ ಸಯೀದ್‌ನ ಸಂಬಂಧಿ ಹಾಗೂ 2023ರ ರಜೌರಿ ದಾಳಿ ಸೇರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳ ಹಿಂದಿನ ಮಾಸ್ಟರ್‌ ಮೈಂಡ್‌ ಅಬು ಖತಲ್‌ ಪಾಕಿಸ್ತಾನದಲ್ಲಿ ಅನಾಮಿಕರಿಂದ ಹತನಾಗಿದ್ದಾನೆ.  

ಇಸ್ಲಾಮಾಬಾದ್ (ಮಾ.17): ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆ ಮುಖ್ಯಸ್ಥನಾದ ಹಫೀಜ್‌ ಸಯೀದ್‌ನ ಸಂಬಂಧಿ ಹಾಗೂ 2023ರ ರಜೌರಿ ದಾಳಿ ಸೇರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳ ಹಿಂದಿನ ಮಾಸ್ಟರ್‌ ಮೈಂಡ್‌ ಅಬು ಖತಲ್‌ ಪಾಕಿಸ್ತಾನದಲ್ಲಿ ಅನಾಮಿಕರಿಂದ ಹತನಾಗಿದ್ದಾನೆ. ಈ ಮೂಲಕ ಈ ರೀತಿ ಪಾಕ್‌ನಲ್ಲಿ ಅನಾಮಿಕರ ಗುಂಡಿಗೆ ಬಲಿಯಾದ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರ ಸಂಖ್ಯೆ 26ಕ್ಕೇರಿದೆ. ಶನಿವಾರ ಪಾಕಿಸ್ತಾನದ ಜೀಲಂ ಜಿಲ್ಲೆಯ ದಿನಾ ಪ್ರದೇಶದಲ್ಲಿ ಸಾಗುತ್ತಿದ್ದಾಗ ರಾತ್ರಿ 7 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಖತಲ್‌ನನ್ನು ಹತ್ಯೆ ಮಾಡಿದ್ದಾರೆ. 

ಘಟನೆಯಲ್ಲಿ ಉಗ್ರ ಖತಲ್‌ ಹಾಗೂ ಆತನ ಒಬ್ಬ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ವಿವಿಧ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ 25ಕ್ಕೂ ಹೆಚ್ಚು ಉಗ್ರರು ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಅನಾಮಿಕ ವ್ಯಕ್ತಿಗಳಿಂದ ಗುಂಡೇಟು ತಿಂದು ಸಾವನ್ನಪ್ಪಿದ್ದರು. ಆದರೆ ಕಳೆದ 5-6 ತಿಂಗಳಿನಿಂದ ಇಂಥ ಬೆಳವಣಿಗೆ ಕಂಡುಬಂದಿರಲಿಲ್ಲ. ಆದರೆ ಇದೀಗ ಖತಲ್‌ ಹತ್ಯೆಯೊಂದಿಗೆ ಆ ರೀತಿಯ ಘಟನೆಗಳು ಪುನಾರಂಭವಾದಂತಿದೆ. ಕಳೆದ ವಾರ ಕೂಡಾ ಭಾರತಕ್ಕೆ ಬೇಕಾಗಿದ್ದ ಉಗ್ರನೊಬ್ಬ ಪಾಕಿಸ್ತಾನದಲ್ಲಿ ನಿಗೂಢವಾಗಿ ಹತ್ಯೆಯಾಗಿದ್ದ.

ಪಾಪಿಸ್ತಾನಕ್ಕೆ ಪುಲ್ವಾಮಾ ರುಚಿ?: ಬಲೂಚಿಸ್ತಾನ ಬಂಡುಕೋರರಿಂದ 90 ಪಾಕ್ ಯೋಧರ ಹತ್ಯೆ

ಹಲವು ದಾಳಿಗಳ ರೂವಾರಿ: ಕಳೆದ ವರ್ಷ ಜಮ್ಮುವಿನ ರೇಸಾಯಿ ಜಿಲ್ಲೆಯಲ್ಲಿ ಜೂ.9ರಂದು ಶಿವು ಖೋರಿ ದೇವಸ್ಥಾನದ ಪ್ರವಾಸ ಮುಗಿಸಿ ವಾಪಸಾಗುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್‌ ಮೇಲೆ ಉಗ್ರ ದಾಳಿ ನಡೆದಿತ್ತು. ಘಟನೆಯಲ್ಲಿ ಬಸ್‌ ಕಂದಕಕ್ಕೆ ಉರುಳಿ 41 ಮಂದಿ ಗಾಯಗೊಂಡಿದ್ದರು. ಇನ್ನು 2023ರ ಜ.1ರಂದು ರಜೌರಿ ಜಿಲ್ಲೆಯ ಡಂಗ್ರಿ ಗ್ರಾಮದಲ್ಲಿ ನಡೆದ ಗುಂಡಿನ ದಾಳಿ ಹಾಗೂ ಐಇಡಿ ಸ್ಫೋಟದಲ್ಲಿ ಏಳಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಈ ಎರಡೂ ದಾಳಿಗಳು ಖತಲ್‌ ಸೂಚನೆಯಂತೆ ನಡೆದಿತ್ತು.

ಯಾರೀ ಅಬು ಖತಲ್‌?: ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಉಗ್ರ ಹಫೀಜ್‌ ಸಯೀದ್‌ನ ಆತ್ಮೀಯ ಬಂಟ. ಈತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಖ್ವೈರಟ್ಟಾ ಪ್ರದೇಶದಲ್ಲಿರುವ ಎಲ್‌ಇಟಿ ಕ್ಯಾಂಪ್‌ನ ಮುಖ್ಯಸ್ಥನಾಗಿದ್ದ. ಲಷ್ಕರ್‌-ಎ-ತೊಯ್ಬಾ ಮುಖಂಡರು ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಸಿಂಧ್ ಪ್ರಾಂತ್ಯದಲ್ಲಿರುವ ಉಗ್ರರ ನಡುವಿನ ಪ್ರಮುಖ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ. ಅಬು ಖತಲ್‌ 2000ರಲ್ಲಿ ಜಮ್ಮುವಿಗೆ ಪ್ರವೇಶಿಸಿ, ಬಳಿಕ 2005ರಲ್ಲಿ ಪಾಕ್‌ಗೆ ವಾಪಸಾಗಿದ್ದ.

ಭಾರತೀಯ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕಿಂತ ಶ್ರೇಷ್ಠ: ಪ್ರಧಾನಿ ಮೋದಿ

ಕಾಶ್ಮೀರದಲ್ಲಿ ಜನ ಮತ್ತು ಭದ್ರತಾ ಸಿಬ್ಬಂದಿ ಮೇಲಿನ ದಾಳಿ ಮಾತ್ರವಲ್ಲದೆ, ಪೀಪಲ್ಸ್‌ ಆ್ಯಂಟಿ ಫ್ಯಾಸಿಸ್ಟ್‌ ಫೋರ್ಸ್‌ ಮತ್ತು ದಿ ರಿಸಿಸ್ಟೆನ್ಸ್‌ ಫೋರ್ಸ್‌ನಂಥ ಛಾಯಾ ಉಗ್ರ ಸಂಘಟನೆಗಳ ಸೃಷ್ಟಿಯಲ್ಲೂ ಈತ ಪ್ರಮುಖ ಪಾತ್ರವಹಿಸಿದ್ದ. ಲಷ್ಕರ್‌-ಎ-ತೊಯ್ಬಾ, ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಗಳ ಪರವಾಗಿ ಕೆಲಸ ಮಾಡುವ ಈ ಸಂಘಟನೆಗಳು ತೋರಿಕೆಗೆ ಕಾಶ್ಮೀರದಲ್ಲಿ ನಡೆಯುವ ಉಗ್ರ ದಾಳಿಗಳ ಹೊಣೆಗಾರಿಕೆಯನ್ನು ತೋರಿಕೆಗೆ ತಾವೇ ಹೊತ್ತುಕೊಳ್ಳುತ್ತಿದ್ದವು.