ಸೆಂಟ್ ಪೀಟರ್ಸ್‌ಬರ್ಗ್ ಶೃಂಗಸಭೆಯಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಸಾರ್ವಭೌಮತ್ವವನ್ನು ಶ್ಲಾಘಿಸಿದ್ದಾರೆ. ಭಾರತವು ವಿದೇಶಿ ಆದೇಶಗಳನ್ನು ಪಾಲಿಸುವುದಿಲ್ಲ ಮತ್ತು ರಷ್ಯಾದೊಂದಿಗಿನ ಸಹಕಾರವನ್ನು ಕಡಿಮೆ ಮಾಡಲು ಪಾಶ್ಚಿಮಾತ್ಯ ದೇಶಗಳು ಹೇರುತ್ತಿರುವ ಒತ್ತಡ ನಿಷ್ಪ್ರಯೋಜಕ ಎಂದಿದ್ದಾರೆ.
ಸೆಂಟ್ ಪೀಟರ್ಸ್‌ಬರ್ಗ್, ರಷ್ಯಾ (ಜೂ.5): ರಷ್ಯಾ ಜೊತೆಗಿನ ಸಹಕಾರವನ್ನು ಕಡಿಮೆ ಮಾಡುವಂತೆ ಭಾರತದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅತ್ಯಂತ ಕಠಿಣ ಸಂದೇಶ ರವಾನಿಸಿದ್ದಾರೆ. 'ಭಾರತವು ಎಂದಿಗೂ ವಿದೇಶಗಳ ಯಾವುದೇ ರೀತಿಯ ಆಜ್ಞೆ ಅಥವಾ ಆದೇಶಗಳನ್ನು (Diktat) ಪಾಲಿಸಿಲ್ಲ' ಎಂದು ಪುಟಿನ್ ದೃಢವಾಗಿ ಪ್ರತಿಪಾದಿಸಿದ್ದಾರೆ.‘ಸೆಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ಶೃಂಗಸಭೆ’ಯಲ್ಲಿ (SPIEF 2026) ಮಾತನಾಡಿದ ಅವರು, ಯಾವುದೇ ಒಂದು ದೇಶದ ಸಾರ್ವಭೌಮತ್ವ ಮತ್ತು ಸ್ವತಂತ್ರ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಯಾರೂ ಎಂದಿಗೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಚೀನಾ ಮತ್ತು ಭಾರತದ ಸಾರ್ವಭೌಮತ್ವಕ್ಕೆ ಪುಟಿನ್ ಶ್ಲಾಘನೆ
ಜಾಗತಿಕ ಮಟ್ಟದಲ್ಲಿ ‘ದಾವೋಸ್ ಶೃಂಗಸಭೆ’ಗೆ ರಷ್ಯಾದ ಉತ್ತರ ಎಂದೇ ಪರಿಗಣಿಸಲಾಗುವ ಈ ಜಾಗತಿಕ ವೇದಿಕೆಯಲ್ಲಿ ಮಾತನಾಡಿದ ಪುಟಿನ್, "ಸ್ವಾಭಾವಿಕವಾಗಿ, ವಿದೇಶದ ಯಾವುದೇ ಆದೇಶಗಳಿಗೆ ಎಂದಿಗೂ ತಲೆಬಾಗದ ಭಾರತವಾಗಲಿ ಅಥವಾ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವಾಗಲಿ, ತಮ್ಮದೇ ಆದ ಸಾರ್ವಭೌಮತ್ವವನ್ನು ಹೊಂದಿವೆ. ಇಂತಹ ದೇಶಗಳ ಸ್ವತಂತ್ರ ನಿರ್ಧಾರಗಳನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
ರಷ್ಯಾ ಜೊತೆಗಿನ ಸಂಬಂಧದ ವಿಷಯದಲ್ಲಿ ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನಗಳು "ಅಪ್ರಯೋಜಕ" ಎಂದು ಪುಟಿನ್ ಹೇಳಿದ ಮರುದಿನವೇ ಈ ಪ್ರಬಲ ಹೇಳಿಕೆ ಹೊರಬಿದ್ದಿದೆ. ಮಾಸ್ಕೋದ ಅತ್ಯಂತ ನಂಬಿಕಸ್ಥ ಪಾಲುದಾರ ದೇಶವಾಗಿರುವ ಭಾರತವು ಪಾಶ್ಚಿಮಾತ್ಯ ರಾಷ್ಟ್ರಗಳ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ತೈಲ ವ್ಯಾಪಾರ ಮತ್ತು ಅಮೆರಿಕದ ಸುಂಕದ ರಾಜಕಾರಣ
ಭಾರತವು ದಶಕಗಳಿಂದಲೂ ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೆಮ್ಮೆಯಿಂದ ಅನುಸರಿಸಿಕೊಂಡು ಬಂದಿದೆ. ಕಳೆದ ವರ್ಷ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವ ವಿಷಯದಲ್ಲಿ ಭಾರತದ ಮೇಲೆ ಟ್ರಂಪ್ ಆಡಳಿತದಿಂದ ಭಾರಿ ಒತ್ತಡ ಇತ್ತು. ಈ ತೈಲ ಆದಾಯವು ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ನಿಧಿ ಒದಗಿಸುತ್ತಿದೆ ಎಂದು ವಾಷಿಂಗ್ಟನ್ ವಾದಿಸಿತ್ತು. ಈ ಕಾರಣಕ್ಕಾಗಿ ಅಮೆರಿಕವು ಭಾರತದ ಮೇಲಿನ ತನ್ನ ಆಮದು ಸುಂಕವನ್ನು (Tariffs) ಶೇಕಡಾ 50 ರಷ್ಟು ಭಾರೀ ಪ್ರಮಾಣಕ್ಕೆ ಹೆಚ್ಚಿಸುವ ಮೂಲಕ ದಂಡನಾತ್ಮಕ ಕ್ರಮ ಕೈಗೊಂಡಿತ್ತು, ಆದರೆ ಈ ವರ್ಷ ಅದನ್ನು ಶೇಕಡಾ 18 ಕ್ಕೆ ಇಳಿಸಿದೆ.
ರಷ್ಯಾವನ್ನು ಒಂಟಿಯಾಗಿಸುವ ಜಾಗತಿಕ ತಂತ್ರ ವಿಫಲವಾಗಿದೆ
ರಷ್ಯಾವನ್ನು ಜಾಗತಿಕವಾಗಿ ಆರ್ಥಿಕವಾಗಿ ಪ್ರತ್ಯೇಕಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪುಟಿನ್, ಅಂತಹ ಎಲ್ಲಾ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿವೆ ಮತ್ತು ಮಾಸ್ಕೋ ಪ್ರಪಂಚದಾದ್ಯಂತದ ದೇಶಗಳೊಂದಿಗೆ ಬಲವಾದ ಸಂಬಂಧವನ್ನು ಮುಂದುವರಿಸಿದೆ ಎಂದು ಹೇಳಿದರು. ರಷ್ಯಾವನ್ನು ಜಾಗತಿಕವಾಗಿ ಬಹಿಷ್ಕರಿಸುವ ಮತ್ತು ಒಂಟಿಯಾಗಿಸುವ ಈ ನೀತಿಯನ್ನು ಹಿಂದಿನ ಅಮೆರಿಕ ಸರ್ಕಾರವು ಪ್ರಾರಂಭಿಸಿತು ಮತ್ತು ನಂತರ ಯುರೋಪಿಯನ್ ದೇಶಗಳು ಅದನ್ನು ಬೆಂಬಲಿಸಿದವು. ಆದರೆ ಈ ತಂತ್ರವು ಸಂಪೂರ್ಣವಾಗಿ ತಲೆಕೆಳಗಾಗಿದೆ (Came a cropper) ಎಂದು ಪುಟಿನ್ ವಾದಿಸಿದರು. "ರಷ್ಯಾ ಎಂದಿಗೂ ಜಾಗತಿಕವಾಗಿ ಒಂಟಿಯಾಗಿಲ್ಲ" ಎಂದು ರಷ್ಯಾದ ನಾಯಕ ಸ್ಪಷ್ಟಪಡಿಸಿದರು.
ಅಮೆರಿಕದ ‘ಪ್ರಾಯೋಗಿಕ’ ರಾಜಕಾರಣದ ಹಿನೋಟ
ಪ್ರಸ್ತುತ ಉದ್ವಿಗ್ನತೆಯ ನಡುವೆಯೂ ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಆರ್ಥಿಕ ಸಹಕಾರವು ಹಲವಾರು ಕ್ಷೇತ್ರಗಳಲ್ಲಿ ಮುಂದುವರಿದಿದೆ ಎಂಬ ವಿರೋಧಾಭಾಸವನ್ನು ಪುಟಿನ್ ಇದೇ ವೇಳೆ ಎತ್ತಿ ತೋರಿಸಿದರು. ಅಮೆರಿಕಕ್ಕೆ ರಷ್ಯಾ ಮಾಡುತ್ತಿರುವ ಯುರೇನಿಯಂ ರಫ್ತು ಮತ್ತು ವಿವಿಧ ಇಂಧನ ಯೋಜನೆಗಳನ್ನು ಅವರು ಇದಕ್ಕೆ ಉದಾಹರಣೆಯಾಗಿ ನೀಡಿದರು.
'ಅಮೆರಿಕನ್ನರು ಅತ್ಯಂತ ಪ್ರಾಯೋಗಿಕ (Pragmatic) ಸ್ವಭಾವದವರು. ಅವರಿಗೆ ಎಲ್ಲಿ ಲಾಭವಿದೆಯೋ, ಅಲ್ಲಿ ಸಹಕಾರ ಮುಂದುವರಿಯುತ್ತದೆ' ಎಂದು ಪುಟಿನ್ ಲೇವಡಿ ಮಾಡಿದರು. ಅಲ್ಲದೆ, ಅಧಿಕೃತವಾಗಿ ರಷ್ಯಾದ ಯೋಜನೆಗಳಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಕೆಲವು ದೇಶಗಳು, ಇಂದಿಗೂ ರಷ್ಯಾದ ದೂರದ ಪೂರ್ವ ಪ್ರದೇಶಗಳಲ್ಲಿನ (Far East) ಇಂಧನ ಉದ್ಯಮಗಳಲ್ಲಿ ರಹಸ್ಯವಾಗಿ ತೊಡಗಿಸಿಕೊಂಡಿವೆ ಎಂದು ಅವರು ಪ್ರತಿಪಾದಿಸಿದರು.
ತಮ್ಮ ಭಾಷಣದ ಕೊನೆಯಲ್ಲಿ, 'ನಮಗೆ ಇದರಿಂದ ಯಾವುದೇ ದೊಡ್ಡ ಹಾನಿಯಾಗಿಲ್ಲ... ನಾವು ಎಂದಿಗೂ ಯಾರಿಂದಲೂ ನಮ್ಮನ್ನು ಪ್ರತ್ಯೇಕಿಸಿಕೊಂಡಿಲ್ಲ" ಎಂದು ಹೇಳಿದ ಪುಟಿನ್, ರಷ್ಯಾ ತನ್ನ ನೆರೆಹೊರೆಯವರು, ಪಾಲುದಾರರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಸಾರಿದರು.


