ಟಿಬೆಟ್‌ನ ಬಾಚೆನ್ ಕೌಂಟಿಯಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 16ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಾತ್ರಿ ವೇಳೆ ಸಂಭವಿಸಿದ ಈ ದುರಂತದಲ್ಲಿ 300ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಟಿಬೆಟ್: ಜಾಗತಿಕ ಹವಾಮಾನ ಬದಲಾವಣೆ ತೀವ್ರಗೊಳ್ಳುತ್ತಿದೆ. ಒಂದು ಕಡೆ ಎಲ್‌ನಿನೊ ಭೀತಿ ಹೆಚ್ಚುತ್ತಿರುವುದರ ನಡುವೆ ಏಷ್ಯಾದಲ್ಲಿ ಮತ್ತೊಂದು ಭೀಕರ ನೈಸರ್ಗಿಕ ವಿಕೋಪ ಸಂಭವಿಸಿದೆ. ಟಿಬೆಟ್‌ನ ಬಾಚೆನ್ ಕೌಂಟಿಯಲ್ಲಿ ಬೆಳಗಿನ ಜಾವ 7.0 ತೀವ್ರ ಪ್ರಬಲ ಭೂಕಂಪ ಸಂಭವಿಸಿದ್ದು, ದುರ್ಘಟನೆಯಲ್ಲಿ 16ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಟಿಬೆಟ್ ಪ್ರಬಲ ಭೂಕಂಪ: 300ಕ್ಕೂ ಹೆಚ್ಚು ಮನೆಗಳು ನಾಶ

ರಿಕ್ಟರ್ ಮಾಪಕದಲ್ಲಿ 7.0 ರಷ್ಟು ತೀವ್ರತೆ ದಾಖಲಾಗಿದೆ. ಭಾರತದ ಗಡಿಯಲ್ಲಿರುವ ಟಿಬೆಟಿಯನ್ ಪ್ರಸ್ಥಭೂಮಿಯನ್ನು ನಡುಗಿಸಿದೆ. ಗುರುವಾರ ರಾತ್ರಿ ಸಂಭವಿಸಿದ ಭೂಕಂಪಕ್ಕೆ ನಿದ್ದೆಗಣ್ಣಲ್ಲೇ ಎದ್ದು ಕಿರುಚಾಡುತ್ತಾ ಪ್ರಾಣ ಉಳಿಸಿಕೊಳ್ಳಲು ದಿಕ್ಕಪಾಲಾಗಿ ಓಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮನೆಯಿಂದ ಆಚೆ ಬಂದ ಆದರೆ ಕೆಲವೇ ಕ್ಷಣಗಳಲ್ಲಿ ಮನೆಗಳು ಉರುಳಿಬಿದ್ದಿವೆ. ಈ ಭೀಕರ ದುರಂತದಲ್ಲಿ ಇಲ್ಲಿಯವರೆಗೆ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು 32 ಕ್ಕೂ ಹೆಚ್ಚು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾತ್ರಿ ಸುಮಾರು 10:33 ಕ್ಕೆ ಪ್ರಬಲ ಭೂಕಂಪ ಸಂಭವಿಸಿದೆ. ಗಾಢ ನಿದ್ರೆಯಲ್ಲಿದ್ದ ಜನರು ಏನಾಗುತ್ತದೆಂದು ಯೋಚಿಸುವುದಕ್ಕೆ ಅವಕಾಶ ಇಲ್ಲದೆ ನೆಲ ನಡುಗುತ್ತಿದ್ದಂತೆ ಕಿರುಚಾಡುತ್ತಾ ಹೊರಗಡೆ ಓಡೋಡಿ ಬಂದಿದ್ದಾರೆ.

ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ 'ಕ್ಸಿನ್ಹುವಾ' ನೀಡಿದ ಮಾಹಿತಿಯ ಪ್ರಕಾರ, ಕೆಲವೇ ಸೆಕೆಂಡುಗಳಲ್ಲಿ 300 ಕ್ಕೂ ಹೆಚ್ಚು ಮನೆಗಳು ಇಸ್ಪೀಟ್‌ನ ಎಲೆಗಳಂತೆ ಕುಸಿದವು ಎಂದು ವರದಿ ಮಾಡಿದೆ. ಭೂಕಂಪದ ತೀವ್ರತೆಯಿಂದಾಗಿ, ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ದೂರಸಂಪರ್ಕ ಸೇವೆಗಳು ಸಂಪೂರ್ಣವಾಗಿ ಅಸ್ತವ್ಯವಸ್ತಗೊಂಡು ಇಡೀ ಪ್ರದೇಶ ಕತ್ತಲೆ ಆವರಿಸಿ ಇನ್ನಷ್ಟು ಭೀಕರಗೊಳಿಸಿದೆ.

ಚೀನಾ ಭೂಕಂಪ ಕೇಂದ್ರ, ಯುಎಸ್‌ಜಿಎಸ್ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಉತ್ತರ ಟಿಬೆಟ್‌ನ ನಾಗ್ಚು ಪ್ರದೇಶದ ಬಾಚೆನ್ ಕೌಂಟಿಯ ಮಾರು ಟೌನ್‌ಶಿಪ್‌ನಲ್ಲಿ 10 ಕಿಲೋಮೀಟರ್ ಆಳದಲ್ಲಿದೆ. ಈ ಪ್ರದೇಶವು ಟಿಬೆಟಿಯನ್ ರಾಜಧಾನಿ ಲಾಸಾದಿಂದ ಈಶಾನ್ಯಕ್ಕೆ ಸುಮಾರು 390 ಕಿಲೋಮೀಟರ್ ದೂರದಲ್ಲಿದೆ. ಇಡೀ ಪ್ರದೇಶವು ಸಮುದ್ರ ಮಟ್ಟದಿಂದ 4,864 ಮೀಟರ್ ಎತ್ತರದಲ್ಲಿದೆ. ಅತ್ಯಂತ ಶೀತ ಹವಾಮಾನ, ಅತ್ಯಂತ ಕಠಿಣ ಭೌಗೋಳಿಕ ಪರಿಸ್ಥಿತಿಗಳಿಂದಾಗಿ, ನೆರವು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳವನ್ನು ತಲುಪಲು ಮತ್ತು ಅವಶೇಷಗಳನ್ನು ತೆಗೆದುಹಾಕುವಲ್ಲಿ ಹೆಚ್ಚಿನ ತೊಂದರೆಗಳನ್ನು ಎದುರಿಸುತ್ತಿವೆ.

ಅವಶೇಷಗಳಡಿ ಸಿಲುಕಿರುವ ಶಂಕೆ

ಶುಕ್ರವಾರ ಬೆಳಿಗ್ಗೆವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಗಾಯಗೊಂಡವರಲ್ಲಿ 11 ಜನರ ಸ್ಥಿತಿ ತುಂಬಾ ಗಂಭೀರವಾಗಿದೆ. ತುರ್ತು ವಿಭಾಗವು ಇಡೀ ಪ್ರದೇಶದಲ್ಲಿ ಅಲರ್ಟ್ ಆಗಿದ್ದು ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಇನ್ನೂ ಕೆಲವು ನಾಗರಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಹೆಚ್ಚಿದ್ದು, ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ.

ಉತ್ತರ ಟಿಬೆಟ್‌ನ ನಾಗ್ಚು ಭೂಕಂಪದ ಕೇಂದ್ರಬಿಂದು

Scroll to load tweet…