ನಾನು ಟ್ವಿಟ್ಟರ್ ಖರೀದಿಸಲು, ನೀವು ದಯವಿಟ್ಟು ನನ್ನ ಸುಗಂಧ ದ್ರವ್ಯ ಕೊಂಡುಕೊಳ್ಳಿ: Elon Musk
ನಾನು ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್ (Twitter) ಖರೀದಿಸಲು ನೀವು ದಯವಿಟ್ಟು ನನ್ನ ಸುಗಂಧ ದ್ರವ್ಯ ಖರೀದಿಸಿ ಎಂದು ತಮ್ಮ ಫಾಲೋವರ್‌ಗಳಿಗೆ ವಿಶ್ವದ ನಂ. 1 ಶ್ರೀಮಂತ ಎಲಾನ್ ಮಸ್ಕ್ ಮನವಿ ಮಾಡಿಕೊಂಡಿದ್ದಾರೆ.
ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk)ನಾನಾ ಕಾರಣಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಟ್ವೀಟ್‌ಗಳ ಮೂಲಕವೂ ಅವರು ವೈರಲ್ ಆಗುತ್ತಿರುತ್ತಾರೆ. ಇತ್ತೀಚೆಗೆ ಮತ್ತೆ ಸುದ್ದಿಯಾಗಿರುವುದು ಸಹ ಅವರ ಟ್ವೀಟ್‌ನಿಂದ (Tweet) . ಅದೇನದು ಟ್ವೀಟ್ ಅಂತೀರಾ..? ಅವರು ತಮ್ಮ ಹೊಸ ಸುಗಂಧ ದ್ರವ್ಯ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಿದ್ದಾರೆ. ಆ ಬ್ರ್ಯಾಂಡ್ ಹೆಸರು 'Burnt Hair’ ಅಂದರೆ ಸುಟ್ಟ ಕೂದಲು..! ಟೆಸ್ಲಾ ಸಿಇಒ ಗುರುವಾರ ಈ ಟ್ವೀಟ್ ಅನ್ನು ಮಾಡಿದ್ದಾರೆ. ಆದರೆ, ಈ ಟ್ವೀಟ್ ವೈರಲ್ ಆಗೋಕೆ ಕಾರಣವೇನು ಗೊತ್ತಾ..? ಅವರು ಟ್ವೀಟ್ ಮಾಡಿರುವ ರೀತಿ. ‘’ನಾನು ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್ (Twitter) ಖರೀದಿಸಲು ನೀವು ದಯವಿಟ್ಟು ನನ್ನ ಸುಗಂಧ ದ್ರವ್ಯ (Perfume) ಖರೀದಿಸಿ’’ ಎಂದು ತಮ್ಮ ಫಾಲೋವರ್‌ಗಳಿಗೆ ವಿಶ್ವದ ನಂ. 1 ಶ್ರೀಮಂತ ಎಲಾನ್ ಮಸ್ಕ್ ಕೇಳಿಕೊಂಡಿದ್ದಾರೆ.
ಮಸ್ಕ್ ಟ್ವಿಟ್ಟರ್ ಮೂಲಕ ತನ್ನ ಸುಗಂಧ ದ್ರವ್ಯ ಬ್ರ್ಯಾಂಡ್ ಅನ್ನು ಘೋಷಿಸಿದ್ದಾರೆ. ಅಲ್ಲದೆ, ತಾನು ಈ ಉದ್ಯಮಕ್ಕೆ ಕಾಲಿಡುವುದು ಅವಶ್ಯಕವಾಗಿದೆ ಎಂದೂ ಹೇಳಿದ್ದಾರೆ. ಇಷ್ಟೇ ಅಲ್ಲ, ಟ್ವಿಟ್ಟರ್ ಬಯೋದಲ್ಲಿ "Perfume Salesman" (ಸುಗಂಧ ದ್ರವ್ಯದ ಸೇಲ್ಸ್‌ಮನ್) ಎಂದೂ ಹಾಕಿಕೊಂಡಿದ್ದಾರೆ.
ಇದನ್ನು ಓದಿ: 9 ಕೆಜಿ ತೂಕ ಕಳೆದುಕೊಂಡ ಎಲಾನ್ ಮಸ್ಕ್: ಡಯಟ್ ಸೀಕ್ರೆಟ್ ಬಹಿರಂಗ..!
ಈ ಸುಗಂಧ ದ್ರವ್ಯದ ಬೆಲೆ ಎಷ್ಟು ಗೊತ್ತಾ..? ಈ ಆಮ್ನಿಜೆಂಡರ್ (ಸರ್ವಲಿಂಗಿ) ಸುಗಂಧ ದ್ರವ್ಯದ ಭಾರತದ ಬೆಲೆ ಸುಮಾರು 8,400 ರೂ. (ಅಮೆರಿಕದಲ್ಲಿ 100 ಡಾಲರ್).
ಅವರ ಸುಗಂಧ ದ್ರವ್ಯದ ಟ್ವೀಟ್ ವೇಳೆ ಮತ್ತೆ ಟ್ವಿಟ್ಟರ್ ಖರೀದಿ ಪ್ರಸ್ತಾಪ ಮಾಡಿರೋದು ಮತ್ತಷ್ಟು ಕುತೂಹಲ ಮೂಡಿಸಿದೆ. ಟ್ವಿಟ್ಟರ್ ಖರೀದಿಗೆ ಏಪ್ರಿಲ್ ತಿಂಗಳಲ್ಲಿ ಮುಂದಾಗಿದ್ದರು ಅವರು. ಆಗಿನಿಂದಲೂ ಅವರ ಹೇಳಿಕೆಯಲ್ಲಿ ಟ್ವಿಸ್ಟ್ ನಡೆಯುತ್ತಿದೆ. ಟ್ವಿಟ್ಟರ್ ಮಂಡಳಿಯಲ್ಲಿ ಸ್ಥಾನ ಬೇಕು ಹಾಗೂ ಬೇಡ - ಹೀಗೆ ಎರಡರ ಬಗ್ಗೆಯೂ ಎಲಾನ್ ಮಸ್ಕ್ ಮಾತನಾಡಿದ್ದಾರೆ. ಅಲ್ಲದೆ, ಟ್ವಿಟ್ಟರ್ ಖರೀದಿಯಿಂದ ಹೊರಬಂದಿರುವುದಾಗಿ ಘೋಷಿಸಿದ್ದು ಸಹ ದೊಡ್ಡ ಸುದ್ದಿಯಾಗಿತ್ತು ಹಾಗೂ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ: ಎಲಾನ್ ಮಸ್ಕ್ ಬಗ್ಗೆ ನನಗೆ ಹೆಮ್ಮೆ ಇಲ್ಲ, ಇನ್ನೂ ಸಂಗಾತಿ ಹುಡುಕಿಕೊಂಡಿಲ್ಲ ಎಂದ ಅಪ್ಪ..!
ಟೆಸ್ಲಾ ಸಿಇಒ ಟ್ವಿಟ್ಟರ್ ಅನ್ನು ಒಂದು ಷೇರಿಗೆ 54.20 ಡಾಲರ್ ಮೌಲ್ಯಕ್ಕೆ ಖರೀದಿಸಲು ಮುಂದಾಗಿದ್ದರು. ಹಾಗೂ, ಇದರ ಒಟ್ಟಾರೆ ಮೌಲ್ಯ 44 ಬಿಲಿಯನ್ ಡಾಲರ್ ಆಗಿತ್ತು. ಆದರೆ, ಕೆಲ ದಿನಗಳ ನಂತರ ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿಕೊಂಡು ಟ್ವಿಟ್ಟರ್ ನೀತಿಯಿಂದ ಹೊರಬರುವುದಾಗಿಯೂ ಹೇಳಿದ್ದರು.
ಆದರೆ, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಟ್ವಿಟ್ಟರ್ ಕಂಪನಿ, ಕೋರ್ಟ್ ಮೊರೆ ಹೋಗಿತ್ತು. ಸದ್ಯ, ಅಮೆರಿಕದ ನ್ಯಾಯಾಲಯ ವಿಶ್ವದ ನಂ. 1 ಶ್ರೀಮಂತ ಎಲಾನ್ ಮಸ್ಕ್‌ಗೆ ಹೆಚ್ಚುವರಿ ಸಮಯ ನೀಡಿದ್ದು, ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಈ ಮಧ್ಯೆ, ಅಕ್ಟೋಬರ್ 28 ರೊಳಗೆ ಅವರು ಟ್ವಿಟ್ಟರ್ ಖರೀದಿ ಮಾಡಬಹುದು ಎಂದು ಕೋರ್ಟ್‌ಗೆ ತಿಳಿಸಿದ್ದಾರಂತೆ.
ಇದನ್ನೂ ಓದಿ: ಗೂಗಲ್ ಸಹ ಸಂಸ್ಥಾಪಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಲಾನ್ ಮಸ್ಕ್..?
ಒಟ್ಟಾರೆ, ಟ್ವಿಟ್ಟರ್ ಖರೀದಿಸಲ್ಲ ಎಂದಿದ್ದ ಮಸ್ಕ್ ಈಗ ಖರೀದಿಗೆ ಮುಂದಾಗಿದ್ದಾರೆ. ಅಥವಾ ಕೋರ್ಟ್ ಸಮರದಿಂದಾಗಿ ಇದು ಅವರಿಗೆ ಅನಿವಾರ್ಯತೆಯೂ ಆಗಿರಬಹುದು. ಆದರೂ, ಜಗತ್ತಿನ ನಂ. 1 ಶ್ರೀಮಂತ ವ್ಯಕ್ತಿ, ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಸುಗಂಧ ದ್ರವ್ಯ ಬ್ರ್ಯಾಂಡ್ ಅನ್ನು ಪರಿಚಯಿಸಿರುವುದು ಕೆಲವರಿಗೆ ಅಚ್ಚರಿಯಾಗಿದೆ. ಹಾಗೂ, ಸಾಮಾಜಿಕ ಜಾಲತಾಣಗಳಲ್ಲಿ ಇದು ಚರ್ಚೆಗೆ ಗ್ರಾಸವಾಗಿದೆ.