ಪಾಕಿಸ್ತಾನದ ಕರಾಚಿ ಸಮೀಪದ ಚಾರ್ನಾ ದ್ವೀಪದಲ್ಲಿ ಲಷ್ಕರ್ ಉಗ್ರರಿಗೆ ಸ್ಕೂಬಾ ಡೈವಿಂಗ್ ಮತ್ತು ಸಮುದ್ರ ಕಾರ್ಯಾಚರಣೆಯ ರಹಸ್ಯ ತರಬೇತಿ ನೀಡಲಾಗುತ್ತಿದೆ. ಪ್ರವಾಸಿಗರ ಸೋಗಿನಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳು ಭಾರತದ ಭದ್ರತೆಗೆ ಹೊಸ ಆತಂಕವನ್ನು ಸೃಷ್ಟಿಸಿವೆ.
ಇಸ್ಲಾಮಾಬಾದ್: ಆಪರೇಷನ್ ಸಿಂದೂರದ ವೇಳೆ ಭಾರತ ನೀಡಿದ ಪೆಟ್ಟಿನಿಂದ ಇನ್ನೂ ಪಾಠ ಕಲಿತಂತೆ ಕಾಣದ ಪಾಕಿಸ್ತಾನ, ಇದೀಗ ಕರಾಚಿ ಸಮೀಪದ ಜನಪ್ರಿಯ ಪ್ರವಾಸಿ ತಾಣವಾದ ಚಾರ್ನಾ ದ್ವೀಪದಲ್ಲಿ ಲಷ್ಕರ್ ಸಂಘಟನೆಯ ಉಗ್ರರಿಗೆ ಸಮುದ್ರ ಕಾರ್ಯಾಚರಣೆಯ ತರಬೇತಿ ನೀಡುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ದ್ವೀಪದಲ್ಲಿ ಜಲಕ್ರೀಡೆಗಳಲ್ಲಿ ಭಾಗವಹಿಸುವ ನೆಪದಲ್ಲಿ, ಲಷ್ಕರ್‌ನ ‘ದಾವಾ ಮೆರೈನ್ ವಿಂಗ್’ ಅಥವಾ ‘ಸದಾ-ಎ-ಹುರಿಯತ್’ ಘಟಕಕ್ಕೆ ಸೇರಿದ ಉಗ್ರರಿಗೆ ಸ್ಕೂಬಾ ಡೈವಿಂಗ್, ಈಜು ಹಾಗೂ ನೀರೊಳಗಿನ ಕಾರ್ಯಾಚರಣೆಗಳ ತರಬೇತಿ ನೀಡಲಾಗುತ್ತಿದೆ. ಲಷ್ಕರ್‌ನ ಪರ್ಯಾಯ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿರುವ , ಮರ್ಕಝಿ ಮುಸ್ಲಿಂ ಲೀಗ್‌ನ ಸದಸ್ಯರು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಭಾರತಕ್ಕೆ ಆತಂಕವೇಕೆ?
ಜಲಮಾರ್ಗದ ಮೂಲಕ ಉಗ್ರರು ಭಾರತದಲ್ಲಿ ಕರಾಳ ಕಾರ್ಯಾಚರಣೆಗಳನ್ನು ನಡೆಸಿದ ಇತಿಹಾಸವಿದೆ. 2008ರ ನವೆಂಬರ್‌ನಲ್ಲಿ ಮುಂಬೈನಲ್ಲಿನ ದಾಳಿಗೆ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಆಗಮಿಸಿದ್ದರು. ಆ ಸಮಯದಿಂದಲೇ ಲಷ್ಕರ್ ಸಮುದ್ರ ಕಾರ್ಯಾಚರಣೆಗೆಂದು ಸಣ್ಣ ತಂಡವನ್ನು ಹೊಂದಿದ್ದು, ಇದೀಗ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿ ಎಂದು ವಿಶ್ಲೇಷಿಸಲಾಗಿದೆ.
ಈ ಬಗ್ಗೆ ಭಾರತೀಯ ಭದ್ರತಾ ಸಂಸ್ಥೆಗಳು ಜಾಗೃತವಾಗಿದ್ದು, ಸಮುದ್ರ ಮಾರ್ಗದ ಮೂಲಕ ಎದುರಾಗಬಹುದಾದ ಬೆದರಿಕೆಗಳನ್ನು ಎದುರಿಸಲು ಸಿದ್ಧತೆ ನಡೆಸುತ್ತಿವೆ.














