ಇರಾನ್ ವಿರುದ್ಧ ತಿರುಗಿಬಿದ್ದ ಪಾಕಿಸ್ತಾನ: ಪ್ರತ್ಯೇಕತಾವಾದಿ ಗುಂಪುಗಳ ಮೇಲೆ ಪ್ರತೀಕಾರ ದಾಳಿ
ಇರಾನ್‌ನ ಸಿಸ್ತಾನ್ ಮತ್ತು ಬಲುಚಿಸ್ತಾನ್ ಪ್ರಾಂತ್ಯದ ಸರವನ್ ನಗರದ ಸಮೀಪವಿರುವ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಎಂಬ ಎರಡು ಬಲೂಚ್ ಪ್ರತ್ಯೇಕತಾವಾದಿ ಗುಂಪುಗಳ ಪೋಸ್ಟ್‌ಗಳ ಮೇಲೆ ಪಾಕಿಸ್ತಾನ ದಾಳಿ ಮಾಡಿದೆ ಎಂದು ವರದಿಯಾಗಿದೆ.
ಹೊಸದಿಲ್ಲಿ (ಜನವರಿ 18, 2024): ಜೈಶ್ ಅಲ್-ಅದ್ಲ್ ಗುಂಪಿನ ಪ್ರಧಾನ ಕಚೇರಿಯ ಮೇಲೆ ಇರಾನ್ ದಾಳಿ ನಡೆಸಿದ್ದಕ್ಕಾಗಿ ಪಾಕಿಸ್ತಾನ ಎಚ್ಚರಿಕೆ ನೀಡಿತ್ತು. ಅದಾದ ಒಂದು ದಿನದ ನಂತರ ಪಾಕಿಸ್ತಾನವು ಗುರುವಾರ ಇರಾನ್‌ನಲ್ಲಿನ ಟಾರ್ಗೆಟ್‌ಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ಇರಾನ್‌ನ ಸಿಸ್ತಾನ್ ಮತ್ತು ಬಲುಚಿಸ್ತಾನ್ ಪ್ರಾಂತ್ಯದ ಸರವನ್ ನಗರದ ಸಮೀಪವಿರುವ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಎಂಬ ಎರಡು ಬಲೂಚ್ ಪ್ರತ್ಯೇಕತಾವಾದಿ ಗುಂಪುಗಳ ಪೋಸ್ಟ್‌ಗಳ ಮೇಲೆ ಪಾಕಿಸ್ತಾನ ದಾಳಿ ಮಾಡಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಕ್ಷಿಪಣಿ ದಾಳಿ ಬಳಿಕ ಪಾಕ್ ಇರಾನ್ ರಾಜತಾಂತ್ರಿಕ ಸಂಘರ್ಷ: ಪಾಕ್‌ನ ಉಗ್ರ ನೆಲೆ ಮೇಲೆ ದಾಳಿ ನಡೆಸಿದ್ದ ಇರಾನಿ ಸೇನೆ
ಇರಾನ್‌ನೊಳಗೆ ಗುರಿಯಾಗಿಸಿಕೊಂಡಿರುವ ಪಾಕಿಸ್ತಾನ ವಿರೋಧಿ ಉಗ್ರಗಾಮಿ ಗುಂಪುಗಳ ವಿರುದ್ಧ ನಾವು ದಾಳಿಗಳನ್ನು ನಡೆಸಿದ್ದೇವೆ ಎಂದು ನಾನು ಖಚಿತಪಡಿಸಬಲ್ಲೆ ಎಂದು ಗುಪ್ತಚರ ಮೂಲವೊಂದು ಸುದ್ದಿ ಸಂಸ್ಥೆ AFP ಗೆ ತಿಳಿಸಿದೆ. ಹಾಗೂ, ಇರಾನ್ ಮಂಗಳವಾರ ತಡರಾತ್ರಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುರಿಗಳ ಮೇಲೆ ದಾಳಿ ಮಾಡಿದ ನಂತರ ಪ್ರತೀಕಾರದ ದಾಳಿಗಳು ನಡೆದಿವೆ.
ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಜೈಶ್ ಅಲ್-ಅದ್ಲ್ ಗುಂಪಿನ ಪ್ರಧಾನ ಕಚೇರಿಯ ಮೇಲೆ ಇರಾನ್ ಮಂಗಳವಾರ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ಮಾಡಿದೆ. ಇದು ನಮ್ಮ ದೇಶದ ಭದ್ರತೆಯ ವಿರುದ್ಧದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ತೆಗೆದುಕೊಂಡ ಮತ್ತೊಂದು ನಿರ್ಣಾಯಕ ಹೆಜ್ಜೆ ಎಂದೂ ಹೇಳಿದೆ. ಇನ್ನು, ಇರಾನ್ ದಾಳಿಯನ್ನು ಖಂಡಿಸಿದ ಪಾಕಿಸ್ತಾನ, ತನ್ನ ವಾಯುಪ್ರದೇಶದ ಉಲ್ಲಂಘನೆಯಂತಹ ಕ್ರಮಗಳಿಗೆ ಗಂಭೀರ ಪರಿಣಾಮಗಳು ಉಂಟುಮಾಡಬಹುದು ಎಂದು ನೆರೆಯ ದೇಶಕ್ಕೆ ಎಚ್ಚರಿಕೆ ನೀಡಿತ್ತು.
ಇದನ್ನೂ ಓದಿ: ಇರಾನ್‌ನಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ : 103 ಬಲಿ
ಕಳೆದ ರಾತ್ರಿ ಇರಾನ್‌ನಿಂದ ಪಾಕಿಸ್ತಾನದ ಸಾರ್ವಭೌಮತ್ವದ ಅಪ್ರಚೋದಿತ ಮತ್ತು ಸ್ಪಷ್ಟ ಉಲ್ಲಂಘನೆಯು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಉದ್ದೇಶಗಳು ಮತ್ತು ತತ್ವಗಳ ಉಲ್ಲಂಘನೆಯಾಗಿದೆ. ಈ ಕಾನೂನುಬಾಹಿರ ಕೃತ್ಯವು ಸ್ವೀಕಾರಾರ್ಹವಲ್ಲ ಮತ್ತು ಯಾವುದೇ ಸಮರ್ಥನೆ ಹೊಂದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತ್ತು.
ನಾವು ಈ ಸಂದೇಶವನ್ನು ಇರಾನ್ ಸರ್ಕಾರಕ್ಕೆ ರವಾನಿಸಿದ್ದೇವೆ. ಪಾಕಿಸ್ತಾನವು ಇರಾನ್‌ನಿಂದ ತನ್ನ ರಾಯಭಾರಿಯನ್ನು ಹಿಂಪಡೆಯಲು ನಿರ್ಧರಿಸಿದೆ ಮತ್ತು ಪ್ರಸ್ತುತ ಇರಾನ್‌ಗೆ ಭೇಟಿ ನೀಡುತ್ತಿರುವ ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿ ಸದ್ಯಕ್ಕೆ ಹಿಂತಿರುಗದಿರಬಹುದು ಎಂದು ನಾವು ಅವರಿಗೆ ತಿಳಿಸಿದ್ದೇವೆ. ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಮತ್ತು ಇರಾನ್ ನಡುವೆ ನಡೆಯುತ್ತಿರುವ ಅಥವಾ ಯೋಜಿಸಲಾಗಿದ್ದ ಎಲ್ಲಾ ಉನ್ನತ ಮಟ್ಟದ ಭೇಟಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದೂ ವಕ್ತಾರರು ಹೇಳಿದ್ದರು.
ಭಯೋತ್ಪಾದಕ ಗುಂಪು ಎಂದು ಇರಾನ್ ಕಪ್ಪುಪಟ್ಟಿಗೆ ಸೇರಿಸಿರುವ ಜೈಶ್ ಅಲ್-ಅದ್ಲ್ ಇತ್ತೀಚಿನ ವರ್ಷಗಳಲ್ಲಿ ಇರಾನ್ ನೆಲದ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ.