ಎಲ್ಲಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ಪರ ಹೋರಾಟ ಪ್ರಧಾನಿಯಾಗಿ ಆಯ್ಕೆಯಾದ ಬೆನ್ನಲ್ಲೇ ಹೋರಾಟದ ಮಾತು ಕಾಶ್ಮೀರ ಸಮಸ್ಯೆ ಬಗೆಹರಿಸಿ ಬಳಿಕವಷ್ಟೆ ಭಾರತದ ಜೊತೆ ಸಂಬಂಧ  

ಇಸ್ಲಾಮಾಬಾದ್(ಏ.11): ಪಾಕಿಸ್ತಾನ ನೂತನ ಪ್ರಧಾನಿಯಾಗಿ ವಿರೋಧ ಪಕ್ಷಗಳ ನಾಯಕ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ಆದರೆ ಪ್ರಧಾನಿಯಾಗುವ ಮೊದಲು ಹಾಗೂ ಆಯ್ಕೆಯಾದ ಬಳಿಕ ಕಾಶ್ಮೀರ ವಿಚಾರ ಕೆದಕಿ ಪಾಕಿಸ್ತಾನದಲ್ಲಿ ಭಾರಿ ಸದ್ದು ಮಾಡಿದ್ದಾರೆ. ಇದೀಗ ಎಲ್ಲಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ಪರ ಹೋರಾಡುವುದಾಗಿ ನೂತನ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ.

ಭಾರತದ ಜೊತೆ ಉತ್ತಮ ಸಂಬಂಧ ಹೊಂದಲು ಮೊದಲು ಕಾಶ್ಮೀರ ಸಮಸ್ಯೆಯನ್ನು ಬಗೆ ಹರಿಸಬೇಕು. ಪಾಕಿಸ್ತಾನ ಮುಂದಿರುವ ಎಲ್ಲಾ ಅವಕಾಶಗಳನ್ನು, ಅಂತಾರಾಷ್ಟ್ರೀಯ ವೇದಿಕೆಗಳನ್ನು ಬಳಸಿಕೊಂಡು ಕಾಶ್ಮೀರ ಪರ ಧ್ವನಿ ಎತ್ತುತ್ತೇನೆ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ.

ಪಾಕಿಸ್ತಾನ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ!

ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಲು ಪಾಕಿಸ್ತಾನ ಬಯಸುತ್ತದೆ. ಆದರೆ ಇದು ಸಾಧ್ಯವಾಗಲು ಕಾಶ್ಮೀರದಲ್ಲಿ ಬಗೆಹರಿದ ಸಮಸ್ಯೆಗಳನ್ನು ಪರಿಹರಿಸಬೇಕು. ಇದಕ್ಕಾಗಿ ಪಾಕಿಸ್ತಾನ ಎಲ್ಲಾ ಪ್ರಯತ್ನ ಮಾಡಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸಮಸ್ಯೆ ಬಗೆಹರಿಸಲು ಆಸಕ್ತಿ ತೋರಲಿ. ಕಾಶ್ಮೀರ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸೋಣ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ.

ಪಾಕಿಸ್ತಾನ ಪ್ರಧಾನಿಯಾಗುವ ಮೊದಲು ಶೆಹಬಾಜ್ ಷರೀಫ್ ಕಾಶ್ಮೀರ ವಿಚಾರ ಕೆದಕಿದ್ದರು. ಕಾಶ್ಮೀರ ಪರ ನಮ್ಮ ಹೋರಾಟ ನಿಲ್ಲುವುದಿಲ್ಲ. ಕಾಶ್ಮೀರ ಸಮಸ್ಯೆಗೆ ಅಂತ್ಯಹಾಡಲು ಪ್ರಯತ್ನ ಮಾಡುತ್ತೇನೆ ಎಂದು ಪಾಕಿಸ್ತಾನ ಜನತೆಗೆ ಭರವಸೆ ನೀಡಿದ್ದರು. ಇದೀಗ ಪ್ರದಾನಿಯಾದ ಬಳಿಕವೂ ಕಾಶ್ಮೀರ ವಿಚಾರ ಕೆದಕಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಾಕಿಸ್ತಾನ ಪ್ರಧಾನಿ ಸೇರಿದಂತೆ ಪ್ರತಿ ನಾಯಕರಿಗೆ ಕಾಶ್ಮೀರ ವಿಚಾರ ರಾಜಕೀಯ ಅಸ್ತಿತ್ವವನ್ನು ತಂದುಕೊಟ್ಟಿದೆ. ಕಾಶ್ಮೀರ ಪರ ಗುಡುಕಿ ಪಾಕಿಸ್ತಾನ ಜನತೆ ಚಪ್ಪಾಳೆ ಗಿಟ್ಟಿಸಿದ್ದಾರೆ. ಪ್ರಧಾನಿ ಪಟ್ಟದಿಂದ ಕೆಳಗಿಳಿದ ಇಮ್ರಾನ್ ಖಾನ್ ಕೂಡ ಇದಕ್ಕೆ ಹೊರತಾಗಿಲ್ಲ. 

ಪಾಕ್ ಪ್ರಧಾನಿಯಾಗುವ ಮೊದಲೇ ಕಾಶ್ಮೀರ ವಿಚಾರ ಕೆದಕಿದ ಶೆಹಬಾಜ್‌ ಷರೀಫ್‌!

ಪಾಕಿಸ್ತಾನದಲ್ಲಿನ ರಾಜಕೀಯ ಬಿಕ್ಕಟ್ಟಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ತಹಬದಿಗೆ ತರುವ ಅತೀ ದೊಡ್ಡ ಜವಾಬ್ದಾರಿ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಮೇಲಿದೆ. ಕೊರೋನಾ ಅಪ್ಪಳಿಸಿದ ಬಳಿಕ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಗಂಭೀರ ಸಮಸ್ಯೆಗಳನ್ನು ಬಿಟ್ಟು ಕಾಶ್ಮೀರ ವಿಚಾರ ಕೆದಕಿ ಪಾಕ್ ಜನರಲ್ಲಿ ಹೀರೋ ಆಗುವ ಪ್ರಯತ್ನ ಮಾಡಿದ್ದಾರೆ.

ವಿಶ್ವಾಸ ಮತಯಾಚನೆಯಲ್ಲಿ ಸೋತು ಪದತ್ಯಾಗ ಮಾಡಿದ ಇಮ್ರಾನ್ ಖಾನ್ ಸ್ಥಾನಕ್ಕೆ ಇದೀಗ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ ಶೆಹಬಾಜ್ ಷರೀಫ್ ಆಗಮಿಸಿದ್ದಾರೆ. ಇದರ ನಡುವೆ ಸಹೋದರ, ಮಾಜಿ ಪ್ರಧಾನಿ ನವಾಜ್ ಷರೀಪ್ ಪಾಕಿಸ್ತಾನಕ್ಕೆ ವಾಪಸ್ ಕರೆಯಿಸಿಕೊಳ್ಳಲು ಎಲ್ಲಾ ತಯಾರಿ ನಡೆದಿದೆ.

ಜಾಮೀನ ಮೇಲೆ ಲಂಡನ್‌ನಲ್ಲಿರುವ ಮಾಜಿ ಪ್ರದಾನಿ ನವಾಜ್ ಷರೀಪ್ ಮುಂದಿನ ತಿಂಗಳು ರಂಜಾನ್‌ ನಂತರ ಲಂಡನ್‌ನಿಂದ ಮತ್ತೆ ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನ್‌ ಮುಸ್ಲಿಂ ಲೀಗ್‌-ನವಾಜ್‌ ಪಕ್ಷದ ಹಿರಿಯ ನಾಯಕ ಮಾಹಿತಿ ನೀಡಿದ್ದಾರೆ. ಇಮ್ರಾನ್‌ ಸರ್ಕಾರ ಉರುಳಿದ ನಂತರ ಹೊಸ ಸರ್ಕಾರ ನಿರ್ಮಾಣಕ್ಕಾಗಿ ಮಿತ್ರಪಕ್ಷಗಳೊಂದಿಗೆ ಚರ್ಚೆಯನ್ನು ನಡೆಸಲು ನವಾಜ್‌ ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆಯಿದೆ ಎಂದು ಪಕ್ಷದ ನಾಯಕ ಮಿಯಾನ್‌ ಜಾವೇದ್‌ ಲತೀಫ್‌ ತಿಳಿಸಿದ್ದಾರೆ.

ನವಾಜ್‌ ವಿರುದ್ಧ ಹಲವಾರು ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿದ್ದವು. ಪನಾಮಾ ಪೇಪ​ರ್‍ಸ್ ಪ್ರಕರಣದಲ್ಲಿ 2017ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಅವರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿತ್ತು. 2019ರಲ್ಲಿ ವಿದೇಶದಲ್ಲಿ ಚಿಕಿತ್ಸೆ ಪಡೆಯುವ ನೆಪದಲ್ಲಿ ಷರೀಫ್‌ ಲಂಡನ್‌ಗೆ ತೆರಳಿದ್ದರು. ನಂತರ ಪ್ರಕರಣದಲ್ಲಿ ಜಾಮೀನು ಪಡೆದು ಸೆರೆವಾಸದಿಂದ ತಪ್ಪಿಸಿಕೊಂಡಿದ್ದರು.