ಪಾಕಿಸ್ತಾನದಲ್ಲಿ ತೀವ್ರಗೊಂಡಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಐಎಂಎಫ್ ಷರತ್ತುಗಳ ಭಾಗವಾಗಿ ಸರ್ಕಾರ ಇಂಧನದ ಮೇಲೆ ತೆರಿಗೆ ಹೆಚ್ಚಿಸಿದೆ. ಇದನ್ನು ವಿರೋಧಿಸಿ ಜಮಾತ್-ಎ-ಇಸ್ಲಾಮಿ ಪಕ್ಷದ ನೇತೃತ್ವದಲ್ಲಿ ಇಸ್ಲಾಮಾಬಾದ್, ಕರಾಚಿಯಂತಹ ಪ್ರಮುಖ ನಗರಗಳಲ್ಲಿ ಸಾವಿರಾರು ಜನರು ಬೃಹತ್ ಪ್ರತಿಭಟನೆ ಭುಗಿಲೆದ್ದಿದೆ.
ಇಸ್ಲಾಮಾಬಾದ್: ಅಮೆರಿಕ-ಇರಾನ್ ಶಾಂತಿ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಿ ಜಾಗತಿಕ ಮಟ್ಟದಲ್ಲಿ ಹೀರೋ ಆಗಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಆಂತರಿಕ ಗಲಭೆಗಳೇ ಹೈರಾಣಾಗಿಸಿವೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು, ಇಂಧನದ ಮೇಲಿನ ತೆರಿಗೆ ಹಾಗೂ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸಾವಿರಾರು ಜನರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಆರ್ಥಿಕವಾಗಿ ನಲುಗಿರುವ ಪಾಕಿಸ್ತಾನವು ಐಎಂಎಫ್‌ನಿಂದ ಸಾಲ ಪಡೆಯಲು ಅದರ ಕಠಿಣ ಷರತ್ತುಗಳಿಗೆ ಒಪ್ಪಿಕೊಂಡಿದೆ. ಇದರ ಭಾಗವಾಗಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಸರ್ಕಾರ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದನ್ನು ಖಂಡಿಸಿ ಪ್ರಮುಖ ಧಾರ್ಮಿಕ-ರಾಜಕೀಯ ಪಕ್ಷವಾದ ಜಮಾತ್-ಎ-ಇಸ್ಲಾಮಿ ಪ್ರತಿಭಟನೆಗೆ ಕರೆ ನೀಡಿದೆ. ಪ್ರತಿಭಟನಾಕಾರರು ‘ಐಎಂಎಫ್‌ಗೆ ಧಿಕ್ಕಾರ’ ಎಂಬ ಘೋಷಣೆಗಳೊಂದಿಗೆ ಇಸ್ಲಾಮಾಬಾದ್, ಕರಾಚಿ, ಲಾಹೋರ್, ಪೇಶಾವರ ಮತ್ತು ಕ್ವೆಟ್ಟಾ ನಗರಗಳ ಪ್ರಮುಖ ಹೆದ್ದಾರಿಗಳನ್ನು ತಡೆದು ಧರಣಿ ನಡೆಸಿದ್ದಾರೆ.
ಜಮಾತ್ ಖಡಕ್ ಎಚ್ಚರಿಕೆ:
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಮಾತ್-ಎ-ಇಸ್ಲಾಮಿ ಮುಖ್ಯಸ್ಥ ಹಫೀಜ್ ನಯೀಮ್ ಉರ್ ರೆಹಮಾನ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಅವರ ಸಂಪುಟಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ನೀವು ಐಎಂಎಫ್ ನೆಪ ಹೇಳಿ ಜನರ ಜೇಬಿಗೆ ಕನ್ನ ಹಾಕುವುದನ್ನು ಸಹಿಸುವುದಿಲ್ಲ. ಇಂಧನ ಮೇಲಿನ ಹೆಚ್ಚುವರಿ ತೆರಿಗೆಯನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಶುಕ್ರವಾರ ನಡೆದ ಈ ಪ್ರತಿಭಟನೆಗಳು ಬರಿ ಟ್ರೇಲರ್ ಅಷ್ಟೇ, ಸರ್ಕಾರ ಸರಿದಾರಿಗೆ ಬಾರದಿದ್ದರೆ ಇಡೀ ದೇಶವನ್ನು ಬಂದ್ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.


