ವಿಮಾನದಲ್ಲಿ ಪಾಕಿಸ್ತಾನ ಪ್ರಜೆಯ ಕಿತಾಪತಿ: ಫ್ಲೈಟ್ ವಿಂಡೋ ಒಡೆಯಲು ಯತ್ನ: ದುಬೈನಲ್ಲಿ ಬಂಧನ
ಪಾಕಿಸ್ತಾನದ ವಿಮಾನ ಪ್ರಯಾಣಿಕನೋರ್ವ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿ ಜೈಲು ಕಂಬಿ ಎಣಿಸುತ್ತಿದ್ದಾನೆ. ಈತ ತನ್ನ ಬಟ್ಟೆಯನ್ನು ಕಿತ್ತೆಸೆದು, ಹಾರುತ್ತಿದ್ದ ವಿಮಾನದ ಕಿಟಕಿಯನ್ನು ಕಾಲಿನಲ್ಲಿ ಒದ್ದು ಒಡೆಯಲು ಯತ್ನಿಸಿದ್ದಾನೆ.
ಕರಾಚಿ: ವಿಮಾನ ಪ್ರಯಾಣದ ವೇಳೆ ಗಗನಸಖಿಯರ ಜೊತೆ ಅಸಭ್ಯವಾಗಿ ವರ್ತಿಸುವುದು, ಸಹ ಪ್ರಯಾಣಿಕರೊಂದಿಗೆ ಕಿರಿಕಿರಿ ಮಾಡುವುದು ಮುಂತಾದ ಘಟನೆಗಳು ಈ ಹಿಂದೆ ನಡೆದಿದ್ದನ್ನು ಕೇಳಿದ್ದೇವೆ. ಕೆಲವು ವಿಮಾನ ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಏನನಿಸುವುದೋ ಏನೋ ಎಂದೂ ಕಾಣದ ವಿಚಿತ್ರ ವರ್ತನೆಗಳನ್ನು ಅವರು ತೋರಿಸುತ್ತಾರೆ. ಅದೇ ರೀತಿ ಈಗ ಪಾಕಿಸ್ತಾನದ ವಿಮಾನ ಪ್ರಯಾಣಿಕನೋರ್ವ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿ ಜೈಲು ಕಂಬಿ ಎಣಿಸುತ್ತಿದ್ದಾನೆ. ಈತ ತನ್ನ ಬಟ್ಟೆಯನ್ನು ಕಿತ್ತೆಸೆದು, ಹಾರುತ್ತಿದ್ದ ವಿಮಾನದ ಕಿಟಕಿಯನ್ನು ಕಾಲಿನಲ್ಲಿ ಒದ್ದು ಒಡೆಯಲು ಯತ್ನಿಸಿದ್ದಾನೆ.
ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ವಿಮಾನದ ಸಿಬ್ಬಂದಿ ತಮ್ಮ ವಿಮಾನದಲ್ಲಿ ಬಂದಿರುವ ಪ್ರಯಾಣಿಕರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರ ಬೇಕು ಬೇಡಗಳನ್ನು ಕೇಳುತ್ತಾರೆ. ಆದರೆ ಕೆಲವೊಮ್ಮೆ ವಿಮಾನದಲ್ಲಿ ಕೆಲವು ಪ್ರಯಾಣಿಕರು ಈ ವಿಮಾನ ಸಿಬ್ಬಂದಿಯ ಜೊತೆಯೇ ಅಸಭ್ಯವಾಗಿ ವರ್ತಿಸಿ ಅವರನ್ನು ಸಂಕಷ್ಟಕ್ಕೀಡು ಮಾಡುತ್ತಾರೆ. ಅದೇ ರೀತಿ ಈ ಪಾಕಿಸ್ತಾನಿ ಪ್ರಜೆ ಮಾಡಿದ್ದು, ಆತನ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಅಂತಾರಾಷ್ಟ್ರೀಯ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ವಿಮಾನವೂ ಪಾಕಿಸ್ತಾನದ ಪೇಶಾವರದಿಂದ ದುಬೈಗೆ ಸಂಚರಿಸುತ್ತಿತ್ತು.
ವಿಮಾನದಲ್ಲಿ ಪಯಣಿಗರಿಗೆ ಸೆಲೆಬ್ರಿಟಿಯಂತೆ ವಿಶ್ ಮಾಡಿ ಚಿಲ್ ಮಾಡಿದ ಪುಟ್ಟ ಬಾಲಕ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಈತ ಕೇವಲ ಬನಿಯನ್ ಧರಿಸಿ ವಿಮಾನದ ಕಿಟಕಿಯನ್ನು ಕಾಲಿನಲ್ಲಿ ಒದೆಯುತ್ತಿರುವುದು ಕಾಣಿಸುತ್ತಿದೆ. ಅಲ್ಲದೇ ಮತ್ತೊಂದು ವಿಡಿಯೋದಲ್ಲಿ ಈತ ಫ್ಲೈಟ್‌ನಲ್ಲಿ ಇರುವ ಮಧ್ಯದ ಜಾಗದಲ್ಲಿ ಉದ್ದಕ್ಕೆ ಮಲಗಿರುವುದು ಕಾಣಿಸುತ್ತಿದೆ.
ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಪ್ರಕಾರ, ಈ ಪುರುಷ ಪ್ರಯಾಣಿಕೆ ಕಳೆದ ಬುಧವಾರ ಪೇಶಾವರದಿಂದ (Peshawar) ದುಬೈಗೆ (Dubai) ತೆರಳುತ್ತಿದ್ದ PK-283 ವಿಮಾನವನ್ನು ಏರಿದ್ದ, ವಿಮಾನ ಪೇಶಾವರದಿಂದ ಹಾರಾಟ ಆರಂಭಿಸುತ್ತಿದ್ದಂತೆ ಇವನು, ತನ್ನನ್ನು ವಿಮಾನದಿಂದ ಇಳಿಸುವಂತೆ ಕೇಳಿದ್ದಾನೆ. ಅಲ್ಲದೇ ವಿಮಾನದ ಸೀಟುಗಳಿಗೆ ಹೊಡೆಯುವುದು, ಬಡಿಯುವುದು ಮಾಡಲು ಆರಂಭಿಸಿದ್ದಾನೆ. ಅಲ್ಲದೇ ಕಿಟಕಿಯೊಂದರ ಶೆಟರ್ ಅನ್ನು ಕೂಡ ಈತ ಹಾಳು ಮಾಡಿದ್ದಾನೆ. ಈತನ ಈ ಆಘಾತಕಾರಿ ವರ್ತನೆ ಪ್ರಯಾಣಿಕರಲ್ಲಿ ಭಯ ಮೂಡಿಸಿದೆ.
ಶಿಫ್ಟ್ ಮುಗಿತೆಂದು ವಿಮಾನ ಪ್ರಯಾಣ ಮುಂದುವರೆಸಲು ನಿರಾಕರಿಸಿದ ಪಾಕ್ ಪೈಲಟ್
ಇದೇ ವೇಳೆ ವಿಮಾನದ ಕೆಲ ಸಿಬ್ಬಂದಿ ಈತನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅಲ್ಲದೇ ದಯವಿಟ್ಟು ಈ ರೀತಿ ವರ್ತಿಸದಂತೆ ಆತನಿಗೆ ಮನವಿ ಮಾಡುವುದನ್ನು ಕಾಣಬಹುದು. ಆದರೆ ಆತ ಈ ವೇಳೆ ವಿಮಾನ ಸೀಟುಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ನಮಾಝ್ ಮಾಡಿದ್ದಲ್ಲದೇ ಆಜಾನ್ ಕೂಗಿ ಅಲ್ಲೇ ಉದ್ದಕ್ಕೆ ಮಲಗಿದ್ದಾನೆ.
ಇದಾದ ಬಳಿಕ ವಿಮಾನಯಾನ ಕಾನೂನಿನಂತೆ (aviation law), ಈತನನ್ನು ಹತೋಟಿಗೆ ತೆಗೆದುಕೊಳ್ಳಲು, ವಿಮಾನದ ಸಿಬ್ಬಂದಿ ಆತನನ್ನು ವಿಮಾನದ ಸೀಟಿಗೆ ಕಟ್ಟಿದ್ದಾರೆ. ನಂತರ ವಿಮಾನದ ಕ್ಯಾಪ್ಟನ್ ದುಬೈನ ವಿಮಾನ ಸಂಚಾರ ನಿಯಂತ್ರಕ ( air traffic controller) ರನ್ನು ಸಂಪರ್ಕಿಸಿದ್ದು, ಭದ್ರತಾ ಸಹಾಯ ಕೇಳಿದ್ದಾರೆ.
ನಂತರ ದುಬೈ (Dubai) ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ಈ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಸೆಪ್ಟೆಂಬರ್ 14 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ರೀತಿ ಅಸಭ್ಯವಾಗಿ ವರ್ತಿಸಿದ್ದ ಈತನನ್ನು ಬ್ಲಾಕ್‌ಲಿಸ್ಟ್‌ಗೆ (blacklist) ಹಾಕಲಾಗಿದೆ ಎಂದು ಪಾಕಿಸ್ತಾನ ಏರ್‌ಲೈನ್ಸ್ (PIA) ಸಿಬ್ಬಂದಿ ಹೇಳಿದ್ದಾರೆ. ವಿಮಾನಯಾನ ಸಿಬ್ಬಂದಿಗೆ ಈ ಹಿಂದೆಯೂ ಇಂತಹ ಹಲವು ಅಸಭ್ಯ ವರ್ತನೆಗಳ ಅನುಭವ ಆಗಿದೆ.
85 ಶೇಕಡಾದಷ್ಟು ವಿಮಾನಯಾನ ಸಿಬ್ಬಂದಿ (Cabin crew) ಈ ರೀತಿಯ ರೌಡಿಗಳಂತೆ ವರ್ತಿಸುವ ಗ್ರಾಹಕರೊಂದಿಗೆ ವ್ಯವಹರಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಶೇಕಡಾ 17 ರಷ್ಟು ದೈಹಿಕ ಹಿಂಸೆಗೆ ಕಾರಣವಾಗಿವೆ ಎಂದು ಕಾರ್ಮಿಕ ಒಕ್ಕೂಟದ (labour union)ಸಮೀಕ್ಷೆ ವರದಿ ಮಾಡಿದೆ.