ಪಹಲ್ಗಾಂ ದಾಳಿ ಹಿಂದಿದ್ದ ಹಾಗೂ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿರುವ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥೆ ದಿ ರೆಸಿಸ್ಟನ್ಸ್‌ ಫ್ರಂಟ್‌ಗೆ (ಟಿಆರ್‌ಎಫ್‌) ಪಾಕ್‌ ಸರ್ಕಾರದ ಬಹಿರಂಗ ಬೆಂಬಲ ಇದೀಗ ಬಯಲಾಗಿದೆ.

ನವದೆಹಲಿ: ಪಹಲ್ಗಾಂ ದಾಳಿ ಹಿಂದಿದ್ದ ಹಾಗೂ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿರುವ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥೆ ದಿ ರೆಸಿಸ್ಟನ್ಸ್‌ ಫ್ರಂಟ್‌ಗೆ (ಟಿಆರ್‌ಎಫ್‌) ಪಾಕ್‌ ಸರ್ಕಾರದ ಬಹಿರಂಗ ಬೆಂಬಲ ಇದೀಗ ಬಯಲಾಗಿದೆ.ಟಿಆರ್‌ಎಫ್‌ ಅನ್ನು ನಾವು ಉಗ್ರ ಸಂಘಟನೆ ಎಂದೇ ಭಾವಿಸಲ್ಲ, ಪಹಲ್ಗಾಂ ದಾಳಿ ಹಿಂದೆ ಟಿಆರ್‌ಎಫ್‌ ಪಾತ್ರ ಕುರಿತು ದಾಖಲೆಯಿದ್ದರೆ ನೀಡಿ ಎಂದು ಪಾಕ್‌ ಉಪಪ್ರಧಾನಿ, ವಿದೇಶಾಂಗ ಸಚಿವ ಇಶಾಕ್‌ ದಾರ್‌ ಸಂಸತ್ತಿನಲ್ಲೇ ಆಗ್ರಹಿಸಿರುವ ವಿಚಾರ ಇದೀಗ ಬಯಲಾಗಿದೆ.ಶುಕ್ರವಾರವಷ್ಟೇ ಅಮೆರಿಕವು ಟಿಆರ್‌ಎಫ್‌ ಅನ್ನು ವಿದೇಶಿ ಉಗ್ರ ಸಂಘಟನೆ ಎಂದು ಘೋಷಿಸಿದೆ.

ಜತೆಗೆ, ಪಹಲ್ಗಾಂ ದಾಳಿ ಹಿಂದೆ ಟಿಆರ್‌ಎಫ್‌ ಕೈವಾಡ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಪಾಕ್‌ ಉಪಪ್ರಧಾನಿಯೇ ಟಿಆರ್‌ಎಫ್‌ ಅನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.‘ಪಹಲ್ಗಾಂ ದಾಳಿ ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿಕೆಯಲ್ಲಿ ಟಿಆರ್‌ಎಫ್‌ನ ಉಲ್ಲೇಖವನ್ನು ಪಾಕ್‌ ಒತ್ತಡದ ಹಿನ್ನೆಲೆಯಲ್ಲೇ ಕೈಬಿಡಲಾಯಿತು. ಆಗ ನಮಗೆ ವಿದೇಶಗಳಿಂದ ಸಾಕಷ್ಟು ಕರೆಗಳು ಬಂತು. ಆದರೆ, ನಾವು ಮಾತ್ರ ಅದನ್ನು ಒಪ್ಪಿಕೊಳ್ಳಲಿಲ್ಲ. ಹೇಳಿಕೆಯಲ್ಲಿ ಟಿಆರ್‌ಎಫ್‌ ಹೆಸರು ತೆಗೆದುಹಾಕುವ ಮೂಲಕ ನಾವು ಮೇಲುಗೈ ಸಾಧಿಸಿದೆವು’ ಎಂದು ದಾರ್‌ ಹೇಳಿಕೊಂಡಿದ್ದಾರೆ ಟಿಆರ್‌ಎಫ್‌ ಉಗ್ರ ಸಂಘಟನೆ ಬಹಿರಂಗವಾಗಿಯೇ ಪಹಲ್ಗಾಂ ದಾಳಿ ಹೊಣೆ ಹೊತ್ತುಕೊಂಡಿತ್ತು. ಈ ಘಟನೆ ಭಾರತ-ಪಾಕ್‌ ಸಂಘರ್ಷಕ್ಕೆ ಕಾರಣವಾಗುತ್ತಿದ್ದಂತೆ ಬಳಿಕ ಸಂಘಟನೆ ತನ್ನ ವರಸೆ ಬದಲಿಸಿತ್ತು.

ಸಂಸತ್ತಲ್ಲಿ ಟ್ರಂಪ್ ಹೇಳಿಕೆ ಪ್ರಸ್ತಾಪಕ್ಕೆ ಇಂಡಿಯಾ ಕೂಟ ನಿರ್ಧಾರ

ನವದೆಹಲಿ: ಸಂಸತ್‌ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಈ ವೇಳೆ ಪಹಲ್ಗಾಂ ಉಗ್ರ ದಾಳಿ, ಭಾರತ-ಪಾಕ್‌ ಕದನವಿರಾಮಕ್ಕೆ ಶ್ರಮಿಸಿದ್ದು ತಾವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ಹೇಳುತ್ತಿರುವುದು, ಬಿಹಾರದಲ್ಲಿನ ವಿವಾದಾತ್ಮಕ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ, ಕ್ಷೇತ್ರ ಮರುವಿಂಗಡಣೆ ಸೇರಿ 8 ಪ್ರಮುಖ ವಿಷಯ ಪ್ರಸ್ತಾಪಿಸಲು ವಿಪಕ್ಷಗಳ ಇಂಡಿಯಾ ಕೂಟ ನಿರ್ಣಯಿಸಿದೆ. 

ಶನಿವಾರ ಸಂಜೆ ಕೂಟದ 20 ಪಕ್ಷಗಳ ನಾಯಕರು ಪರಸ್ಪರ ವರ್ಚುವಲ್‌ ವಿಧಾನದಲ್ಲಿ ಸಭೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಪ್ರಮೋದ್ ತಿವಾರಿ ತಿಳಿಸಿದ್ದಾರೆ.ಇದೇ ವೇಳೆ, ವಿಪಕ್ಷಗಳು ಪ್ರಸ್ತಾಪಿಸಿದ ಈ ವಿಷಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಹಾಜರಿದ್ದು ಉತ್ತರಿಸಬೇಕು. ಪಹಲ್ಗಾಂ ಗುಪ್ತಚರ ವೈಫಲ್ಯ, ಟ್ರಂಪ್ ಅವರ ಮಧ್ಯಸ್ಥಿಕೆ ಹೇಳಿಕೆ ಬಗ್ಗೆ ಉತ್ತರಿಸಬೇಕು ಎಂದೂ ಇಂಡಿಯಾ ಕೂಟ ನಿರ್ಣಯ ಕೈಗೊಂಡಿದೆ.

ಇಂದು ಸರ್ವಪಕ್ಷ ಸಭೆ:ಅಧಿವೇಶನ ಹಿನ್ನೆಲೆಯಲ್ಲಿ ಭಾನುವಾರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ.