ಯುದ್ಧದಿಂದ ಸರ್ಕಾರಿ ನೌಕರರ ಸಂಬಳ ಕಟ್, ಇಂಧನ ಕಟ್, ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಸರ್ಕಾರಿ ವಾಹನಗಳ ಇಂಧನಕ್ಕೆ ಕತ್ತರಿ ಹಾಕಿ ವೇತನದಲ್ಲಿ ಶೇಕಾಡ 30ರಷ್ಟು ಕಡಿತಕ್ಕೆ ಆದೇಶ ನೀಡಲಾಗಿದೆ. 

ಇಸ್ಲಾಮಾಬಾದ್ (ಮಾ.14) : ಇರಾನ್ ಹಾಗೂ ಇಸ್ರೇಲ್ ಯುದ್ಧದಿಂದ ಹಲವು ದೇಶಗಳು ತತ್ತರಿಸಿದೆ. ಇದಕ್ಕೆ ಪಾಕಿಸ್ತಾನ ಕೂಡ ಹೊರತಾಗಿಲ್ಲ.ಆದರೆ ಪಾಕಿಸ್ತಾನಕ್ಕೆ ಇರಾನ್ ಯುದ್ಧ ಮಾತ್ರವಲ್ಲ , ಪಾಕಿಸ್ತಾನ ತನ್ನ ಪಕ್ಕದ ರಾಷ್ಟ್ರ ಅಫ್ಘಾನಿಸ್ತಾನ ಮೇಲೆ ಯುದ್ಧ ಮಾಡುತ್ತಿದೆ. ತಾಲಿಬಾನ್ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಮೊದಲೇ ಹಣದುಬ್ಬರ, ಬೆಲೆ ಏರಿಕೆಯಿಂದ ತತ್ತರಿಸಿದ್ದ ಪಾಕಿಸ್ತಾನ ಇದೀಗ ಆರ್ಥಿಕವಾಗಿ ಕೈಸುಟ್ಟುಕೊಂಡಿದೆ. ಎಲ್ಲಾ ಕಡೆ ಸಾಲ ಮಾಡಿದರೂ ಪಾಕಿಸ್ತಾನ ಪರಿಸ್ಥಿತಿ ನೆಟ್ಟಗಿಲ್ಲ. ಸಂಕಷ್ಟ ನಿಭಾಯಿಸಲು ಪಾಕಿಸ್ತಾನ ಸರ್ಕಾರ ಖರ್ಚು ವೆಚ್ಚ ಕಡಿತಕ್ಕೆ ಮುಂದಾಗಿದೆ. ಇದರ ಭಾಗವಾಗಿ ಸರ್ಕಾರಿ ನೌಕರರ ಸಂಬಳವನ್ನು ಕಡಿತಗೊಳಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ

ಪ್ರಧಾನಿ ಶೆಹಬಾಜ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ಸಂಬಳದಲ್ಲಿ ಶೇ. 5 ರಿಂದ 30ರಷ್ಟು ಕಡಿತ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಈ ಖರ್ಚು ಕಡಿತದ ಕ್ರಮಗಳಿಂದ ಉಳಿತಾಯವಾಗುವ ಹಣವನ್ನು ಸಾರ್ವಜನಿಕರ ಕಲ್ಯಾಣಕ್ಕಾಗಿ ಮಾತ್ರ ಬಳಸುವುದಾಗಿ ಸರ್ಕಾರ ಹೇಳಿದೆ.

ಸರ್ಕಾರಿ ವಾಹನಗಳ ಇಂಧನದಲ್ಲಿ ಶೇಕಡಾ 50ರಷ್ಟು ಕಡಿತ

ಇದಲ್ಲದೆ, ಸರ್ಕಾರಿ ವಾಹನಗಳಿಗೆ ನೀಡುವ ಇಂಧನ ಕೋಟಾದಲ್ಲಿ ಶೇ. 50ರಷ್ಟು ಕಡಿತ ಮಾಡಲಾಗಿದೆ. ಇದನ್ನು ಥರ್ಡ್-ಪಾರ್ಟಿ ಆಡಿಟ್ ಸಂಸ್ಥೆಯೊಂದು ಪರಿಶೀಲಿಸಲಿದೆ. ಮುಂದಿನ ಎರಡು ತಿಂಗಳಲ್ಲಿ ಶೇ. 60ರಷ್ಟು ಸರ್ಕಾರಿ ವಾಹನಗಳನ್ನು ರಸ್ತೆಯಿಂದ ಹಿಂಪಡೆಯಲಾಗುವುದು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಆಫ್ಘಾನಿಸ್ತಾನ ವಿರುದ್ದ ಯುದ್ಧ ಮಾಡಲು ಪಾಕಿಸ್ತಾನ ಹೆಣಗಾಡುತ್ತಿದೆ. ಇತ್ತ ಮಧ್ಯಪ್ರಾಚ್ಯ ಯುದ್ಧದ ಬಿಸಿ ಭಾರಿ ತಟ್ಟಿದೆ. ಕಳೆದ ಶುಕ್ರವಾರವಷ್ಟೇ ಸರ್ಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 55 ರೂಪಾಯಿಗಳಷ್ಟು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ, ಇಂಧನ ಬಳಕೆಯನ್ನು ನಿಯಂತ್ರಿಸಲು ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಎರಡು ತಿಂಗಳ ಕಾಲ ಸರ್ಕಾರಿ ವಾಹನಗಳ ಇಂಧನ ಬಳಕೆಯಲ್ಲಿ ಶೇ. 50ರಷ್ಟು ಕಡಿತ, ಶೇ. 60ರಷ್ಟು ಸರ್ಕಾರಿ ವಾಹನಗಳನ್ನು ರಸ್ತೆಯಿಂದ ಹಿಂಪಡೆಯುವುದು ಮತ್ತು ಸರ್ಕಾರಿ ಕಚೇರಿಗಳಿಗೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸದ ಅವಧಿ ನಿಗದಿಪಡಿಸಿರುವುದು ಸೇರಿದೆ.