Asianet Suvarna News Asianet Suvarna News

ಪಾಕಿಸ್ತಾನದಲ್ಲಿ ಇದೀಗ ಔಷಧಕ್ಕೂ ಹಾಹಾಕಾರ:ತುರ್ತು ಶಸ್ತ್ರಚಿಕಿತ್ಸೆಗೂ ಔಷಧ ಇಲ್ಲದ ದುಸ್ಥಿತಿ

ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಪಾಕಿಸ್ತಾನ ಇದರಿಂದ ಹೊರಬರಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬಳಿ ಸಾಲಕ್ಕೆ ಮನವಿ ಮಾಡಿದೆ. ಆದರೆ ಅದು ಬಿಡುಗಡೆಯಾಗುವುದು ಬಾಕಿಯಿದೆ.

pakistan hospitals facing shortage of crucial drugs like insulin doctors postponing surgeries ash
Author
First Published Feb 27, 2023, 8:15 AM IST

ಇಸ್ಲಾಮಾಬಾದ್‌ (ಫೆಬ್ರವರಿ 27, 2023): ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ದುಸ್ಥಿತಿಗೆ ತಲುಪಿರುವ ಪಾಕಿಸ್ತಾನಕ್ಕೆ ಇದೀಗ ವೈದ್ಯಕೀಯ ಕ್ಷೇತ್ರದಲ್ಲೂ ಸಮಸ್ಯೆ ಆರಂಭವಾಗಿದೆ. ಅಗತ್ಯ ಔಷಧಗಳ ಲಭ್ಯತೆ ಪ್ರಮಾಣ ಅತ್ಯಂತ ಕನಿಷ್ಠ ಪ್ರಮಾಣಕ್ಕೆ ಕುಸಿದಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ವೈದ್ಯಕೀಯ ಉತ್ಪನ್ನಗಳ ಅಭಾವದಿಂದ ರೋಗಿಗಳ ಶಸ್ತ್ರಚಿಕಿತ್ಸೆಗೆ ಮುಂದಾಗದಂತೆ ವೈದ್ಯರಿಗೆ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ.

‘ಪಾಕಿಸ್ತಾನ (Pakistan) ಔಷಧಗಳಿಗೆ (Medicine) ಬಹುತೇಕ ಹೊರದೇಶಗಳನ್ನೇ ನೆಚ್ಚಿಕೊಂಡಿದ್ದು, ಇದೀಗ ವಿದೇಶಿ ವಿನಿಮಯ ಪ್ರಮಾಣ (Foreign Exchange Rate) ಕುಸಿದಿರುವುದರಿಂದ ಔಷಧಗಳನ್ನು ಆಮದು (Export) ಮಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಒಂದೆಡೆ ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಇದ್ದರೆ, ಮತ್ತೊಂದೆಡೆ ಅತಿಯಾದ ಬೆಲೆ ಏರಿಕೆಯಿಂದ (Price Rise) ದೇಶೀಯವಾಗಿಯೂ ಔಷಧಗಳನ್ನು ತಯಾರಿಸುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸ್ಥಳೀಯ ವೈದ್ಯಕೀಯ ಕಂಪನಿಗಳು ಉತ್ಪಾದನೆಯನ್ನು ನಿಲ್ಲಿಸಿದ್ದು, ರೋಗಿಗಳ (Patients) ಕಷ್ಟವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಔಷಧಗಳ ಆಮದಿಗೆ ಬೇಕಾದ ಹಣ ನೀಡಲು ಬ್ಯಾಂಕುಗಳು (Bank) ನಿರಾಕರಿಸಿವೆ ಎಂದು ಔಷಧ ಉತ್ಪಾದಕ ಕಂಪನಿಗಳು (Drug Manufacturing Companies) ದೂರಿವೆ’ ಎಂದು ಪಾಕ್‌ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನು ಓದಿ: ಪಾಕ್‌ ಬಳಿಕ ಮತ್ತೊಂದು ದೇಶದ ದುಸ್ಥಿತಿ: ಮತಪತ್ರಕ್ಕೂ ದುಡ್ಡಿಲ್ಲದೆ ಹಲವು ಎಲೆಕ್ಷನ್‌ಗಳನ್ನೇ ಮುಂದೂಡಿದ ಲಂಕಾ..!

ಪಾಕಿಸ್ತಾನ ಶೇ. 95 ರಷ್ಟು ಔಷಧಗಳಿಗಾಗಿ ವಿದೇಶಗಳನ್ನು ನಂಬಿಕೊಂಡಿದೆ. ಅಲ್ಲದೇ ಔಷಧ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಭಾರತ ಮತ್ತು ಚೀನಾ ಸೇರಿ ಕೆಲವು ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಆದರೆ ಇದಕ್ಕೆ ಬೇಕಾದ ಹಣ ಈಗ ದೇಶದ ಬಳಿ ಇಲ್ಲದಿರುವುದರಿಂದ ಇವುಗಳಿಗೆಲ್ಲಾ ತಡೆ ಬಿದ್ದಿದೆ. ಪಾಕಿಸ್ತಾನಕ್ಕೆ ಇತರ ದೇಶಗಳಿಂದ ರಫ್ತಾಗಿರುವ ಒಂದಷ್ಟು ವಸ್ತುಗಳು ಸಹ ಕರಾಚಿ ಬಂದರಿನಲ್ಲೇ ನಿಂತಿವೆ.

ಆಪರೇಷನ್‌ಗೆ ತಡೆ:
ಹೃದಯ, ಕಿಡ್ನಿ ಮತ್ತು ಕ್ಯಾನ್ಸರ್‌ನಂತರ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಬೇಕಾದ ಅರಿವಳಿಕೆ ಚುಚ್ಚುಮದ್ದುಗಳು ಕೇವಲ 2 ವಾರಕ್ಕಾಗುವಷ್ಟು ಮಾತ್ರ ಉಳಿದಿದೆ. ಹಾಗಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡದಂತೆ ವೈದ್ಯರಿಗೆ ಸರ್ಕಾರ ಸೂಚನೆ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ನಾವೀಗ ದಿವಾಳಿಯಾಗಿರುವ ದೇಶದಲ್ಲಿದ್ದೇವೆ; ಈ ಪರಿಸ್ಥಿತಿಗೆ ನಾವೇ ಕಾರಣ: ಪಾಕ್‌ ರಕ್ಷಣಾ ಮಂತ್ರಿ

ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಪಾಕಿಸ್ತಾನ ಇದರಿಂದ ಹೊರಬರಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬಳಿ ಸಾಲಕ್ಕೆ ಮನವಿ ಮಾಡಿದೆ. ಆದರೆ ಅದು ಬಿಡುಗಡೆಯಾಗುವುದು ಬಾಕಿಯಿದೆ.

ಏನು ಸಮಸ್ಯೆ?

  • ಔಷಧಗಳಿಗೆ ಭಾರತ, ಚೀನಾ ಸೇರಿ ಹೊರದೇಶಗಳ ನೆಚ್ಚಿಕೊಂಡಿರುವ ಪಾಕ್‌
  • ಶೇ.95 ರಷ್ಟು ಔಷಧಗಳು ಪಾಕಿಸ್ತಾನಕ್ಕೆ ಹೊರದೇಶಗಳಿಂದಲೇ ಸರಬರಾಜು
  • ಆದರೆ ವಿದೇಶಿ ವಿನಿಮಯ ಕೊರತೆ, ದೇಶೀ ಉತ್ಪಾದನೆ ಕುಂಠಿತ ಆಗಿ ಸಂಕಷ್ಟ
  • ಆಪರೇಷನ್‌ಗಳನ್ನೂ ಮಾಡದಂತೆ ವೈದ್ಯರಿಗೆ ಸರ್ಕಾರದಿಂದ ಸೂಚನೆ: ವರದಿ

ಇದನ್ನೂ ಓದಿ: ಟರ್ಕಿಗೆ ನೆರವು ನೀಡಿದ ವ್ಯಕ್ತಿಗೆ ಪಾಕ್‌ ಪ್ರಧಾನಿ ಮೆಚ್ಚುಗೆ; ಪಾಕ್‌ಗೇಕೆ ಸಹಾಯ ಮಾಡಿಲ್ಲ ಎಂದು ನೆಟ್ಟಿಗರ ವ್ಯಂಗ್ಯ 

Follow Us:
Download App:
  • android
  • ios