ಪಾಕ್ ಬಳಿಕ ಮತ್ತೊಂದು ದೇಶದ ದುಸ್ಥಿತಿ: ಮತಪತ್ರಕ್ಕೂ ದುಡ್ಡಿಲ್ಲದೆ ಹಲವು ಎಲೆಕ್ಷನ್‌ಗಳನ್ನೇ ಮುಂದೂಡಿದ ಲಂಕಾ..!
ಬ್ಯಾಲೆಟ್‌ಪತ್ರಕ್ಕೆ ದುಡ್ಡಿಲ್ಲ ಎಂದು ಶ್ರೀಲಂಕಾ ಚುನಾವಣೆಯನ್ನೇ ಮುಂದೂಡಿದೆ. ಹಣ ಇಲ್ಲದೆ ಚುನಾವಣೆ ನಡೆಸಲು ಆಗುತ್ತಿಲ್ಲ ಎಂದು ಕೋರ್ಟ್‌ನಲ್ಲಿ ಚುನಾವಣಾ ಆಯೋಗ ಅಳಲು ತೋಡಿಕೊಂಡಿದ್ದಾರೆ.
ಕೊಲಂಬೋ: ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನ ಬಹುತೇಕ ದಿವಾಳಿಯಾಗಿರುವ ಹೊತ್ತಿನಲ್ಲೇ ಭಾರತದ ಮತ್ತೊಂದು ನೆರೆಯ ದೇಶವಾದ ಶ್ರೀಲಂಕಾ ಅದಕ್ಕಿಂತ ಭೀಕರ ಸ್ಥಿತಿಗೆ ತಲುಪಿದೆ. ಯಾವ ಮಟ್ಟಿಗೆ ಎಂದರೆ, ಸ್ಥಳೀಯ ಚುನಾವಣೆ ನಡೆಸಲೂ ಅದರ ಬಳಿ ಇದೀಗ ಹಣ ಇಲ್ಲದಂಥ ದಯನೀಯ ಸ್ಥಿತಿ ಎದುರಾಗಿದೆ. ಹೀಗಾಗಿ ಸರ್ಕಾರ ಅನಿವಾರ್ಯವಾಗಿ ಚುನಾವಣೆಯನ್ನೇ ಮುಂದೂಡುವ ಹಂತಕ್ಕೆ ಬಂದಿದೆ.
ಮಾರ್ಚ್ 9ರಂದು ಶ್ರೀಲಂಕಾದ (Sri Lanka) ಪಾಲಿಕೆಗಳಿಗೆ ಚುನಾವಣೆ (Local Elections) ನಿಗದಿಯಾಗಿತ್ತು. ಆದರೆ ಚುನಾವಣೆ ನಡೆಸಲು ಬೇಕಾದ ಇಂಕ್ (Ink), ಮತಪತ್ರ (Ballot Paper), ವಾಹನಗಳಿಗೆ ಇಂಧನ (Fuel), ಮತಗಟ್ಟೆಗಳಿಗೆ ರಕ್ಷಣೆ (Security) ಒದಗಿಸಲು ಬೇಕಾದ ವೆಚ್ಚವನ್ನು ನೀಡಲು ಸಾಧ್ಯವಿಲ್ಲ ಎಂದು ಖಜಾನೆ ಇಲಾಖೆ (Treasury Department) ಚುನಾವಣಾ ಆಯೋಗಕ್ಕೆ (Election Commission) ಮಾಹಿತಿ ನೀಡಿದೆ. ಈ ಮಾಹಿತಿಯನ್ನು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಚುನಾವಣೆ ನಡೆಸುವಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ. ಈ ವಿಷಯ ಮಂಗಳವಾರ ಸಂಸತ್ತಿನಲ್ಲೂ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಚುನಾವಣೆ ಮುಂದೂಡಿಕೆ ಕುರಿತು ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬಿದ್ದಿದೆ.
ಇದನ್ನು ಓದಿ: ಭಾರತ ಹೊರತುಪಡಿಸಿ ಏಷ್ಯಾದ 14 ರಾಷ್ಟ್ರದಲ್ಲಿ ಆರ್ಥಿಕ ಹಿಂಜರಿತ, ಬ್ಲೂಮ್‌ಬರ್ಗ್ ಸಮೀಕ್ಷಾ ವರದಿ!
ದೇಶದ ಆದಾಯವು ಚುನಾವಣೆ ನಡೆಸಲು ಸಮರ್ಪಕವಾಗಿಲ್ಲ. ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸುವುದಕ್ಕೇ ಹಣದ ಕೊರತೆ ಇದೆ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಇತ್ತೀಚೆಗೆ ಹೇಳಿಕೆ ನೀಡಿದ್ದ ಬೆನ್ನಲ್ಲೇ ಸರ್ಕಾರ ಚುನಾವಣೆಗೆ ಹಣ ಬಿಡುಗಡೆ ಮಾಡಲು ನಿರಾಕರಿಸಿದೆ.
ಕಾರಣ ಏನು?:
2019ರಲ್ಲಿ ಈಸ್ಟರ್ ದಿನದಂದು ಚರ್ಚ್ ಗುರಿಯಾಗಿಸಿ ನಡೆದ ದಾಳಿ ಬಳಿಕ ಲಂಕಾ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿತ್ತು. ಬಳಿಕ ಕಾಡಿದ ಕೋವಿಡ್‌ನಿಂದ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲ ಕಚ್ಚಿತ್ತು. ದೇಶದ ಬಹುತೇಕ ಆದಾಯ ಬರುವ ಪ್ರವಾಸೋದ್ಯಮವೇ ಬಂದ್ ಆದ ಕಾರಣ ಶ್ರೀಲಂಕಾ ಸರ್ಕಾರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಹಣದುಬ್ಬರ ಗಗನಕ್ಕೇರಿದ್ದು, ಬಹುತೇಕ ವಸ್ತುಗಳ ಜನಸಾಮಾನ್ಯರ ಕೈಗೆಟುಕದ ಪರಿಸ್ಥಿತಿ ತಲುಪಿದೆ. ಹೀಗಾಗಿ ಸರ್ಕಾರದ ಆದಾಯವೂ ಸ್ಥಗಿತಗೊಂಡಿದೆ. ಮತ್ತೊಂದೆಡೆ ಚೀನಾದ ಸಾಲದ ಬಲೆ ಕೂಡಾ ಲಂಕಾವನ್ನು ಹೈರಾಣು ಮಾಡಿದ್ದು, ಸಾಲದ ಸುಳಿಯಿಂದ ಹೊರಬರಲಾಗದ ಸ್ಥಿತಿಗೆ ತಲುಪಿದೆ.
ಇದನ್ನೂ ಓದಿ: ಶ್ರೀಲಂಕಾ ಆಯ್ತು, ಈಗ ಇರಾಕ್‌ನಲ್ಲಿ ಎರಡನೇ ಬಾರಿ ಸಂಸತ್ ಭವನಕ್ಕೆ ನುಗ್ಗಿದ ಪ್ರತಿಭಟನಾಕಾರರು..!
ದಯನೀಯ ಸ್ಥಿತಿ
- ಪ್ರವಾಸೋದ್ಯಮದ ಮೇಲೆಯೇ ಅವಲಂಬಿತವಾಗಿದ್ದ ದೇಶ ಶ್ರೀಲಂಕಾ
- ಉಗ್ರರ ದಾಳಿ, ಕೋವಿಡ್ ಅಟ್ಟಹಾಸ ಬಳಿಕ ನೆಲಕಚ್ಚಿದ ಪ್ರವಾಸೋದ್ಯಮ
- ಆದಾಯ ಬಂದ್ ಆದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು
- ಜತೆಗೆ ಚೀನಾದಿಂದ ಮಾಡಿದ ಸಾಲದಿಂದಾಗಿಯೂ ಸಂಕಷ್ಟಕ್ಕೆ ಸಿಲುಕಿದ ದೇಶ
- ಅಗತ್ಯ ವಸ್ತುಗಳ ಬೆಲೆಗಳು ಏರಿಕೆ. ಜನರ ಜೀವನ ನಡೆಸಲೂ ದುರ್ಭರ ಸ್ಥಿತಿ
- ಈ ಮಧ್ಯೆ ಮಾರ್ಚ್ 9ರಂದು ಶ್ರೀಲಂಕಾದಲ್ಲಿನ ಪಾಲಿಕೆಗಳಿಗೆ ಚುನಾವಣೆ ಪ್ರಕಟ
- ಆದರೆ ಇಂಕ್, ಮತಪತ್ರ, ಇಂಧನ, ರಕ್ಷಣೆಗೆ ಕೊಡಲು ಹಣ ಇಲ್ಲ ಎಂದ ಸರ್ಕಾರ
- ಕೋರ್ಟ್‌ನಲ್ಲಿ ಅಸಹಾಯಕತೆ ತೋಡಿಕೊಂಡ ಚುನಾವಣಾ ಆಯೋಗ
ಇದನ್ನೂ ಓದಿ: SriLankan Crisis: ತುತ್ತು ಅನ್ನಕ್ಕಾಗಿ ಮೈ ಮಾರಿಕೊಳ್ಳುತ್ತಿದ್ದಾರೆ ಮಹಿಳೆಯರು!