ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ನೀಡಿದ ಎದುರೇಟಿಗೆ ತತ್ತರಿಸಿದ ಪಾಕಿಸ್ತಾನ ಕದನ ವಿರಾಮ ಜಾರಿಗೊಳಿಸುವಂತೆ ಅಮೆರಿಕಕ್ಕೆ ಮೊರೆಯಿಟ್ಟಿತ್ತು.
ಲಾಹೋರ್ (ಮೇ.12): ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ನೀಡಿದ ಎದುರೇಟಿಗೆ ತತ್ತರಿಸಿದ ಪಾಕಿಸ್ತಾನ ಕದನ ವಿರಾಮ ಜಾರಿಗೊಳಿಸುವಂತೆ ಅಮೆರಿಕಕ್ಕೆ ಮೊರೆಯಿಟ್ಟಿತ್ತು. ಕದನ ವಿರಾಮ ಜಾರಿಯಾದ ಬೆನ್ನಲ್ಲೇ, ಇದೀಗ ಭಾರತ ತಡೆ ಹಿಡಿದ ಸಿಂಧೂ ಜಲ ಒಪ್ಪಂದದ ಪುನರ್‌ಜಾರಿಗೂ ಅಮೆರಿಕ ಮಧ್ಯಸ್ಥಿಕೆ ವಹಿಸುವಂತೆ ಮೊರೆಯಿಡುವ ನಿರೀಕ್ಷೆಯಿದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತದ ಕ್ರಮದ ವಿರುದ್ಧ ಅಮೆರಿಕದೊಂದಿಗೆ ಚರ್ಚಿಸಬೇಕು. ಭಾರತ ತಕ್ಷಣವೇ ಇದನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದು ಪಾಕಿಸ್ತಾನದ ಜಲ ತಜ್ಞರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
‘ಸಿಂಧೂ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತದ ಕಾನೂನುಬಾಹಿರ ಏಕಪಕ್ಷೀಯ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ನಮ್ಮ ಸರ್ಕಾರ ತಕ್ಷಣವೇ ಅಮೆರಿಕದ ಅಧಿಕಾರಿಗಳೊಂದಿಗೆ ಚರ್ಚಿಸಬೇಕು’ ಎಂದು ಪಾಕಿಸ್ತಾನದ ಜಲ ಮತ್ತು ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಜಾವೈದ್ ಲತೀಫ್ ಸಲಹೆ ನೀಡಿದ್ದಾರೆ. ‘ಕದನ ವಿರಾಮವು ಮೊದಲ ಹೆಜ್ಜೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಮತ್ತು ಭಾರತ ಒಟ್ಟಿಗೆ ಕುಳಿತು, ಸಿಂಧೂ ಜಲ ಒಪ್ಪಂದದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಪಾಕಿಸ್ತಾನದ ಮಾಜಿ ಆಯುಕ್ತ ಸೈಯದ್ ಜಮಾತ್ ಅಲಿ ಶಾ ಹೇಳಿದ್ದಾರೆ.
ಪಾಕ್‌ಗೆ ತಕ್ಕ ಉತ್ತರ ನೀಡುವ ಅಧಿಕಾರ ಕಮಾಂಡರ್‌ಗಳಿಗೆ: ಅಮೆರಿಕದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದ್ದ ಕದನ ವಿರಾಮಕ್ಕೆ ಅನಿವಾರ್ಯವಾಗಿ ಒಪ್ಪಿದ್ದ ಪಾಕ್, ಕೆಲವೇ ಗಂಟೆಗಳಲ್ಲಿ ಅದನ್ನು ಉಲ್ಲಂಘಿಸಿದ ಬೆನ್ನಲ್ಲೇ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವ ಅಧಿಕಾರವನ್ನು ಸೇನಾ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ ಅವರು ಸೇನಾ ಕಮಾಂಡರ್‌ಗಳಿಗೆ ನೀಡಿದ್ದಾರೆ. ಶನಿವಾರ ಸಂಜೆ, ಭೂಮಿ, ವಾಯು ಮತ್ತು ಸಮುದ್ರದದಿಂದ ನಡೆಯುವ ಎಲ್ಲಾ ಗುಂಡಿನ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವ ಒಪ್ಪಂದಕ್ಕೆ ಬಂದಿರುವುದಾಗಿ ಭಾರತ ಮತ್ತು ಪಾಕಿಸ್ತಾನ ಘೋಷಿಸಿದ್ದವು. ಆದರೆ ಈ ಘೋಷಣೆಯಾದ ಕೆಲ ಗಂಟೆಗಳಲ್ಲೇ ಪಾಕ್ ಪಡೆ ಗುಂಡು ಹಾರಿಸತೊಡಗಿದ್ದು, ಭಾರತೀಯ ಯೋಧರೂ ಅದಕ್ಕೆ ತಕ್ಕ ಉತ್ತರ ನೀಡಿದ್ದರು. ಇದಾದ ಬಳಿಕ ಪಶ್ಚಿಮ ಗಡಿಯಲ್ಲಿ ಕಮಾಂಡರ್‌ಗಳೊಂದಿಗೆ ಭದ್ರತಾ ಪರಿಸ್ಥಿತಿ ಪರಿಶೀಲಿಸಿದ ದ್ವಿವೇದಿ, ಪಾಕ್ ಪ್ರಚೋದನೆಗೆ ಸೂಕ್ತ ಉತ್ತರ ನೀಡುವ ಅಧಿಕಾರವನ್ನು ಕಮಾಂಡರ್‌ಗಳಿಗೆ ನೀಡಿದ್ದಾರೆ.
ಅಣು ದಾಳಿ ಭೀತಿಗೆ ಅಮೆರಿಕದ ಮಧ್ಯ ಪ್ರವೇಶ?: ಭಾರತ ದಿಢೀರ್ ಕದನ ವಿರಾಮಕ್ಕೆ ಒಪ್ಪಿದ್ದೇಕೆ?
ಕೊಟ್ಟ ಕೆಲಸ ನಿಖರವಾಗಿ ಪೂರ್ಣ: ಆಪರೇಷನ್ ಸಿಂದೂರ್ ಸಮಯದಲ್ಲಿ ತಮಗೆ ವಹಿಸಿದ್ದ ಕಾರ್ಯಗಳನ್ನು ನಿಖರವಾಗಿ ಮತ್ತು ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಆಪರೇಷನ್ ಸಿಂದೂರ್ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಾಯುಪಡೆ, ‘ಕಾರ್ಯಾಚರಣೆ ಇನ್ನೂ ನಡೆಯುತ್ತಿರುವುದರಿಂದ, ಸೂಕ್ತ ಸಮಯದಲ್ಲಿ ಇನ್ನಷ್ಟು ವಿವರಗಳನ್ನು ನೀಡಲಾಗುವುದು. ಊಹಾಪೋಹ ಅಥವಾ ಸುಳ್ಳು ಮಾಹಿತಿ ಪ್ರಸಾರದಿಂದ ದೂರವಿರಲು ಎಲ್ಲರನ್ನೂ ವಿನಂತಿಸುತ್ತೇವೆ. ಆಪರೇಷನ್ ಸಿಂಧೂರ್‌ನಲ್ಲಿ ನಿಯೋಜಿಸಲಾದ ಕಾರ್ಯಗಳನ್ನು ವಾಯುಪಡೆಯು ನಿಖರತೆ, ವೃತ್ತಿಪರತೆ ಮತ್ತು ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ಯಶಸ್ವಿಯಾಗಿ ನಿರ್ವಹಿಸಿದೆ’ ಎಂದು ಹೇಳಿದೆ.


