ವಿಶ್ವಾಸ ಮತ ಯಾಚನೆ ಬೆನ್ನಲ್ಲೇ ಹೆಚ್ಚಿತು ಇಮ್ರಾನ್ ತಲೆನೋವು ಆಡಳಿತ ಪಕ್ಷದ 50 ಸಚಿವರು ನಾಪತ್ತೆ, ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಸರ್ಕಾರ ಉಳಿಸಿಕೊಳ್ಳಲು ಆಪ್ತರೊಂದಿಗೆ ಸತತ ಸಭೆ  

ಇಸ್ಲಾಮಾಬಾದ್(ಮಾ.26): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಂಕಷ್ಟ ತೀವ್ರಗೊಳ್ಳುತ್ತಿದೆ. ಸರ್ಕಾರದ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ ಇಮ್ರಾನ್ ಖಾನ್ ಕಾಲು ನೆಲದಲ್ಲಿ ನಿಲ್ಲುತ್ತಿಲ್ಲ. ಸರ್ಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಆಡಳಿತ ಪಕ್ಷವಾಗಿರು ತೆಹ್ರಿಕ್ ಇ ಇನ್ಸಾಫ್ ಪಕ್ಷದದ 50 ಸಚಿವರು ನಾಪತ್ತೆಯಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ.

ಕಳೆದೆರಡು ದಿನದಿಂದ 50 ಸಚಿವರು ಎಲ್ಲೂ ಕಾಣಿಸಿಕೊಂಡಿಲ್ಲ. ಈ ನಡೆ ಇಮ್ರಾನ್ ಖಾನ್ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ, ಮಾಹಿತಿ ಸಚಿವ ಫಾವದ್ ಚೌಧರಿ, ಒಳಾಂಗಣ ಸಚಿವ ಶೇಕ್ ರಶೀದ್ ಸೇರಿದಂತೆ ಕಲ ಸಚಿವರು ಇಮ್ರಾನ್‌ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಇದು ಇಮ್ರಾನ್ ಬಣಕ್ಕೆ ಸಮಾಧಾನ ತಂದಿದೆ.

ಭಾರತದ ವಿದೇಶಾಂಗ ನೀತಿ ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್!

50 ಸಚಿವರನ್ನು ಸ್ವತಃ ಇಮ್ರಾನ್ ಖಾನ್ ಗೌಪ್ಯ ಸ್ಥಳದಲ್ಲಿ ಇರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಸೋಮವಾರ ವಿಶ್ವಾಸ ಮತ ಯಾಚನೆ ನಡೆಯಲಿದೆ. ಹೀಗಾಗಿ ಕೊನೆ ಕ್ಷಣದಲ್ಲಿನ ಬದಲಾವಣೆಗಳನ್ನು, ಆಘಾತಗಳನ್ನು ತಪ್ಪಿಸಲು ಆಪ್ತರ ಸಲಹೆ ಮೇರೆಗೆ ಆಡಳಿತ ಪಕ್ಷದ 50 ಸಚಿವರನ್ನು ಕೂಡಿಡಲಾಗಿದೆ ಅನ್ನೋ ಮಾತುಗಳು ಇವೆ.

ವಿಶ್ವಾಸ ಮತ ಯಾಚನೆ ದಿನ ಹತ್ತಿರವಾಗುತ್ತಿದ್ದಂತೆ ಇಮ್ರಾನ್ ಖಾನ್ ಇನ್ನಿಲ್ಲದ ಕಸರತ್ತು ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೀಗ ಎಲ್ಲಾ ಕುತೂಹಲ ಸೋಮವಾರಕ್ಕೆ ಮುಂದೂಡಲಾಗಿದೆ. ಈ ಬಾರಿಯೂ ಇಮ್ರಾನ್ ಖಾನ್ ವಿಶ್ವಾಸ ಗಳಿಸಲು ಯಶಸ್ವಿಯಾಗ್ತಾರಾ ಅನ್ನೋ ಚರ್ಚೆಗಳು ಜೋರಾಗಿದೆ.

ಬಟಾಟೆ, ಟೊಮಾಟೋ ರೇಟ್ ನೋಡೋಕೆ ರಾಜಕೀಯಕ್ಕೆ ಬಂದಿಲ್ಲ ಎಂದ ಪಾಕ್ ಪ್ರಧಾನಿ Imran Khan!

ಎರಡು ದಿನದ ಕಾಲಾವಕಾಶ ಪಡೆದ ಇಮ್ರಾನ್ ಖಾನ್
ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ಮಂಡನೆಗೆಂದು ಶುಕ್ರವಾರ ಕರೆಯಲಾಗಿದ್ದ ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿ ಕಲಾಪವನ್ನು, ದಿಢೀರನೆ ಸೋಮವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಇಮ್ರಾನ್‌ಗೆ 2 ದಿನ ಕಾಲಾವಕಾಶ ಸಿಕ್ಕಿದೆ. ಅಧಿವೇಶನದ ಮೊದಲ ದಿನ, ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯ ಮಂಡಿಸಿ ಸ್ಪೀಕರ್‌ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಏರಿಕೆ ಮೊದಲಾದ ವಿಷಯ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿಪಕ್ಷಗಳು ಇಮ್ರಾನ್‌ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ.

ಪಾಕಿಸ್ತಾನ ಮುಸ್ಲಿಂ ಲೀಗ್‌ ನವಾಜ್‌ (ಪಿಎಂಎಲ್‌ಎನ್‌) ಹಾಗೂ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) ಸುಮಾರು 100 ಜನ ಸಂಸತ್‌ ಸದಸ್ಯರು ಸರ್ಕಾರದ ವೈಫಲ್ಯ ಖಂಡಿಸಿ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ್ದರು. ಇದಕ್ಕೆ ಇಮ್ರಾನ್‌ರ ಪಿಟಿಐ ಪಕ್ಷದ 23 ಸಂಸದರೂ ಕೈಜೋಡಿಸಿದ್ದಾರೆ. ಹೀಗಾಗಿ ಗೆಲ್ಲಲು 172 ಸಂಸದರ ಬಲ ಇಮ್ರಾನ್‌ಗೆ ಬೇಕಿದ್ದು, ಬಂಡಾಯದ ಕಾರಣ ಕೇವಲ 155 ಸಂಸದರ ಬೆಂಬಲ ಹೊಂದಿ ಪರದಾಡುತ್ತಿದ್ದಾರೆ. ಹೀಗಾಗಿ 28ರಂದು ಅವರ ಭವಿಷ್ಯ ನಿರ್ಧಾರವಾಗಲಿದೆ.

ಭಾರತವನ್ನು ಹೊಗಳಿದ ಇಮ್ರಾನ್‌ ಖಾನ್‌!
ಇದರ ನಡುವೆ ಭಾರತವನ್ನು ಹೊಗಳಿ ಎಲ್ಲರ ಅಚ್ಚರಿಗೂ ಕಾರಣರಾಗಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಇದೇ ಮೊದಲ ಬಾರಿಗೆ ಭಾರತ ಸರ್ಕಾರವನ್ನು ಹೊಗಳಿದ್ದಾರೆ. ಉಕ್ರೇನ್‌-ರಷ್ಯಾ ಯುದ್ಧದ ವಿಷಯದಲ್ಲಿ ಭಾರತದ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸುತ್ತಿದೆ ಎಂದು ಅವರು ಪ್ರಶಂಸಿಸಿದ್ದಾರೆ.

ಖೈಬರ್‌-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಾರ್ವಜನಿಕ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ‘ಭಾರತವು ರಷ್ಯಾ ವಿರೋಧಿಸುವ ಕ್ವಾಡ್‌ ದೇಶಗಳ ಸದಸ್ಯ ರಾಷ್ಟ್ರವಾಗಿದ್ದರೂ ಹಾಗೂ ಅಮೆರಿಕದ ನಿರ್ಬಂಧ ಹೇರಿದ್ದರೂ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಭಾರತದ ಸ್ವತಂತ್ರ ವಿದೇಶಾಂಗ ನಿಲುವಿನ ಸಂಕೇತ. ಭಾರತದ ಸ್ವತಂತ್ರ ವಿದೇಶಾಂಗ ನೀತಿ ಅತ್ಯುತ್ತಮವಾಗಿದೆ. ಪಾಕಿಸ್ತಾನವೂ ಜನ ಸ್ನೇಹಿ ಸ್ವತಂತ್ರ ವಿದೇಶಾಂಗ ನೀತಿ ಹೊಂದಿದೆ’ ಎಂದು ಹೇಳಿದರು.