ಜಾಗತಿಕ ವೇದಿಕೆಗಳಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪದೇ ಪದೇ ನಿರ್ಲಕ್ಷಿಸುತ್ತಿದ್ದಾರೆ. SCO ಶೃಂಗಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪುಟಿನ್, ಷರೀಫ್‌ರತ್ತ ಕಣ್ಣೆತ್ತಿಯೂ ನೋಡದಿರುವುದು ಪಾಕಿಸ್ತಾನಕ್ಕೆ ತೀವ್ರ ಮುಜುಗರವನ್ನುಂಟು ಮಾಡಿವೆ.
ಭಯೋತ್ಪಾದನೆಯ ಮುಂಚೂಣಿಯಲ್ಲಿರುವ ಪಾಕಿಸ್ತಾನವು ಇತ್ತೀಚಿನ ದಿನಗಳಲ್ಲಿ ಜಾಗತಿಕ ವೇದಿಕೆಗಳಲ್ಲಿ ಪದೇ ಪದೇ ಮುಜುಗರವನ್ನು ಎದುರಿಸುತ್ತಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಭಾರತದ ಮಿತ್ರ ಹಾಗೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, ಪುಟಿನ್ ಅವರು ಪಾಕಿಸ್ತಾನದ ಪ್ರಧಾನಿಯತ್ತ ಗಮನ ಹರಿಸದೇ ನಿರ್ಲಕ್ಷಿಸುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ.
ಶೃಂಗಸಭೆಯಲ್ಲಿ ಶಹಬಾಜ್ ಷರೀಫ್ ಕಡೆ ತಿರುಗಿಯೂ ನೋಡಲಿಲ್ಲ:
ಚೀನಾದಲ್ಲಿ ನಡೆದ SCO ಶೃಂಗಸಭೆಯ ನಂತರ, ಹಲವಾರು ದೇಶಗಳ ರಾಷ್ಟ್ರ ಮುಖ್ಯಸ್ಥರು ಭಾಗವಹಿಸಿದ್ದ ತುರ್ಕಮೆನಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುಟಿನ್ ಅವರು ಮತ್ತೊಮ್ಮೆ ಶಹಬಾಜ್ ಷರೀಫ್ ಅವರನ್ನು ನಿರ್ಲಕ್ಷಿಸಿದ್ದಾರೆ. ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬತ್‌ನಲ್ಲಿ ನಡೆದ ಈ ಶೃಂಗಸಭೆಯಲ್ಲಿ, ಶಹಬಾಜ್ ಷರೀಫ್ ಈಗಾಗಲೇ ವೇದಿಕೆಯ ಮೇಲೆ ನಿಂತಿದ್ದರು. ಆದರೆ, ಪುಟಿನ್ ಆಗಮಿಸಿದಾಗ, ಅವರು ಪಾಕಿಸ್ತಾನಿ ಪ್ರಧಾನಿಯನ್ನು ನೋಡಲೂ ಇಲ್ಲ.
ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಮೊದಲ ದಿನದಂದು ಸಹ ಇದೇ ರೀತಿಯ ಅಸಾಮಾನ್ಯ ದೃಶ್ಯ ಕಂಡುಬಂದಿತ್ತು. ಆಗ ಪ್ರಧಾನಿ ಮೋದಿ ಮತ್ತು ಪುಟಿನ್ ಪರಸ್ಪರ ಮಾತನಾಡುತ್ತಾ ಮುಂದೆ ಸಾಗುತ್ತಿದ್ದರು. ಈ ವೇಳೆ ಹತ್ತಿರದಲ್ಲೇ ನಿಂತಿದ್ದ ಶಹಬಾಜ್ ಷರೀಫ್ ಅವರತ್ತ ಪುಟಿನ್ ಕಣ್ಣೆತ್ತಿಯೂ ನೋಡಿರಲಿಲ್ಲ.
ಕೈಕುಲುಕಲು ಪುಟಿನ್ ಹಿಂದೆಯೇ ಓಡಿದ ಶಹಬಾಜ್ ಷರೀಫ್
SCO ಶೃಂಗಸಭೆಯಲ್ಲಿ ಮತ್ತೊಂದು ವಿಚಿತ್ರ ವಿಡಿಯೋ ಸಹ ಹೊರಬಿದ್ದಿದ್ದು, ಇದರಲ್ಲಿ ಶಹಬಾಜ್ ಷರೀಫ್ ಅವರು ಪುಟಿನ್ ಅವರ ಹಿಂದೆಯೇ ಓಡಿ, ಕೈಕುಲುಕಲು ಯತ್ನಿಸಿದ್ದು ಕಂಡುಬಂದಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನಿಧಾನವಾಗಿ ಮುಂದೆ ಸಾಗುತ್ತಿದ್ದಾಗ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಇದ್ದಕ್ಕಿದ್ದಂತೆ ಓಡಿಹೋಗಿ ರಷ್ಯಾದ ಅಧ್ಯಕ್ಷರೊಂದಿಗೆ ಕೈಕುಲುಕಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿ, ಪಾಕಿಸ್ತಾನಕ್ಕೆ ಭಾರಿ ಮುಜುಗರವನ್ನು ಉಂಟುಮಾಡಿತು.
ಷರೀಫ್ ಪುಟೀನ್‌ರನ್ನ ನಿರ್ಲಕ್ಷಿಸಿದಾಗ:
ಕಳೆದ ವರ್ಷ ಕಝಾಕಿಸ್ತಾನದಲ್ಲಿ ನಡೆದ SCO ಸಭೆಯಲ್ಲಿ ಸಹ ಇದೇ ರೀತಿಯ ಪರಿಸ್ಥಿತಿ ಉಂಟಾಗಿತ್ತು. ದ್ವಿಪಕ್ಷೀಯ ಮಾತುಕತೆಗಾಗಿ ಪುಟಿನ್ ಮತ್ತು ಷರೀಫ್ ವೇದಿಕೆಯಲ್ಲಿದ್ದಾಗ, ಪುಟಿನ್ ಅವರು ಶಹಬಾಜ್ ಷರೀಫ್ ಅವರೊಂದಿಗೆ ಕೈಕುಲುಕಲು ಸಿದ್ಧರಾಗಿ ನಿಂತಿದ್ದರು. ಆದರೆ, ಪಾಕಿಸ್ತಾನಿ ಪ್ರಧಾನಿ ಪುಟಿನ್ ಅವರನ್ನು ನಿರ್ಲಕ್ಷಿಸಿ ಬೇರೊಬ್ಬರೊಂದಿಗೆ ಕೈಕುಲುಕಿದರು. ನಂತರ, ಅವರು ಹಿಂತಿರುಗಿ ನೋಡಿದಾಗ ಪುಟಿನ್ ಅವರು ತಮ್ಮನ್ನು ನೋಡುತ್ತಿರುವುದನ್ನು ಗಮನಿಸಿ ಅವರೊಂದಿಗೆ ಕೈಕುಲುಕಿದರು. ಹೀಗೆ ಪದೇ ಪದೇ ಪಾಕಿಸ್ತಾನದ ನಾಯಕರಿಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮುಜುಗರ ಉಂಟಾಗುತ್ತಿದೆ.


