ಪಹಲ್ಗಾಮ್ ನರಮೇಧದ ಬಳಿಕ ಭಾರತ-ಪಾಕ್ ಉದ್ವಿಗ್ನತೆ ಹೆಚ್ಚಿದೆ. ಟರ್ಕಿ ಪಾಕ್‌ಗೆ ಮಿಲಿಟರಿ ನೆರವು ನೀಡುತ್ತಿದ್ದು, ಭಾರತದ ನೆರವನ್ನು ಮರೆತಿದೆ. ಚೀನಾ ಕೂಡ ಪಾಕ್ ಪರ ನಿಂತಿದೆ. ಇದರಿಂದ ಭಾರತಕ್ಕೆ ಸವಾಲು ಎದುರಾಗಿದ್ದು, ಭಾರತದಲ್ಲಿ "ಬೈಕಾಟ್ ಟರ್ಕಿ" ಅಭಿಯಾನ ಆರಂಭವಾಗಿದೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ 26 ಹಿಂದೂಗಳ ನರಮೇಧದ ಬೆನ್ನಲ್ಲೇ ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಶುರುವಾಗಿದೆ. ಇದಾಗಲೇ ಭಾರತವು, ಪಾಕಿಸ್ತಾನಕ್ಕೆ ನೀಡುತ್ತಿದ್ದ ಹಲವು ನೆರವುಗಳಿಗೆ ಕತ್ತರಿ ಹಾಕಿದ್ದು, ಪಾಕ್ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ ಕಾರ್ಯ ಕೈಗೊಂಡಿದೆ. ದಿವಾಳಿಯಾಗಿ ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಇರುವ ಪಾಕಿಸ್ತಾನಕ್ಕೆ ಯುದ್ಧದ ಹೆಸರು ಕೇಳಿದರೇ ನಡುಕ ಉಂಟಾಗುವ ಸ್ಥಿತಿ ಇದೆ. ಇದೇ ಕಾರಣಕ್ಕೆ ತಮ್ಮನ್ನು ತಾವು ಸಮಾಧಾನಪಡಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯುದ್ಧ ಬೇಡ ಎಂದು ಹೇಳಿರುವ ಮಾತನ್ನೇ ತಮ್ಮ ದೇಶದ ಚಾನೆಲ್ಗಳಲ್ಲಿ ತೋರಿಸಿ ತೋರಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಇದು ಒಂದೆಡೆಯಾದರೆ, ಮುಸ್ಲಿಮ್ ದೇಶವಾಗಿರುವ ಟರ್ಕಿ ಈಗ ಪಾಕ್ನ ಪರವಾಗಿ ನಿಂತಿದ್ದು, ಅದಕ್ಕೆ ಯುದ್ಧ ಸಲಕರಣೆಗಳನ್ನು ಸರಬರಾಜು ಮಾಡುತ್ತಿದೆ!
ಅಂದಹಾಗೆ, 2023ರಲ್ಲಿ ಟರ್ಕಿಯಲ್ಲಿ ನಡೆದಿದ್ದ ಭೀಕರ ಭೂಕಂಪದಲ್ಲಿ ಸುಮಾರು 25 ಸಾವಿರ ಮಂದಿ ಜೀವ ಕಳೆದುಕೊಂಡಿದ್ದರು. ಜನಜೀವನ ಅಸ್ತವ್ಯಸ್ತವಾಗಿ ಲಕ್ಷಾಂತರ ಮಂದಿ ನಿರ್ಗತಿಕರಾಗಿದ್ದರು. ಆಗ ಅವರ ನೆರವಿಗೆ ಧಾವಿಸಿದ್ದು ಭಾರತ. ಭಾರತವು ಆಪರೇಷನ್ ದೋಸ್ತ್ ಮೂಲಕ ಅಪಾರ ಪ್ರಮಾಣದ ವೈದ್ಯಕೀಯ ನೆರವನ್ನು ಕಳುಹಿಸಿತ್ತು. ಭಾರತದ ಯೋಧರು ಟರ್ಕಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇಲ್ಲಿಂದ ಪಡೆದ ವೈದ್ಯಕೀಯ ನೆರವಿನಿಂದಾಗಿ ಲಕ್ಷಾಂತರ ಮಂದಿಯ ಪ್ರಾಣ ಕಾಪಾಡುವಲ್ಲಿ ಸಹಾಯವಾಗಿತ್ತು. ಆದರೆ ಈಗ ಭಾರತದ ವಿರುದ್ಧ ಯುದ್ಧಕ್ಕೆ ಟರ್ಕಿ ನೆರವಾಗಿ ನಿಂತಿದೆ!
'ಉಗ್ರರನ್ನು ಕ್ಷಮಿಸುವುದು ದೇವರಿಗೆ ಬಿಟ್ಟದ್ದು, ಆದರೆ ಅವರನ್ನು ಆತನ ಬಳಿಗೆ ಕಳುಹಿಸುವುದು ನನಗೆ ಸೇರಿದ್ದು!'
ಇದಾಗಲೇ, ಟರ್ಕಿಯು, ಯುದ್ಧ ಉಪಕರಣಗಳನ್ನು ಸರಬರಾಜು ಮಾಡಿರುವುದಾಗಿ ವರದಿಯಾಗಿದೆ. ಟರ್ಕಿ ವಾಯುಪಡೆಯ C-130 Hercules ಯುದ್ಧ ವಿಮಾನಗಳು ಹಾಗೂ ಯುದ್ಧ ಸಾಮಾಗ್ರಿಗಳು ಪಾಕಿಸ್ತಾನದ ಕರಾಚಿಗೆ ಬಂದಿಳಿದಿವೆ! ಈ ಕುರಿತು ಇದಾಗಲೇ ಟರ್ಕಿ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವರು ದೂರವಾಣಿ ಮೂಲಕ ಸಂಪರ್ಕಿಸಿ ನೆರವು ನೀಡುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯ ಮಾಡುತ್ತಿರುವ ಟರ್ಕಿಯಿಂದ ಪಾಕಿಸ್ತಾನದ ಕರಾಚಿ ಹಾಗೂ ಇಸ್ಲಾಮಾಬಾದ್‌ನ ಮಿಲಿಟರಿ ನೆಲೆಗಳಿಗೆ ಯುದ್ಧ ವಿಮಾನಗಳು ಬಂದಿಳಿದಿವೆ ಎಂದು ವರದಿಯಾಗಿದೆ. ಅದೇ ಇನ್ನೊಂದೆಡೆ, ಚೀನಾ ಕೂಡ ಪಾಕ್ ಬೆಂಬಲಕ್ಕೆ ನಿಂತಿದೆ. ಚೀನಾದಿಂದ ರಕ್ಷಣಾತ್ಮಕ ಸಾಮರ್ಥ್ಯಗಳನ್ನು ಹೆಚ್ಚಿಸುವ ಡ್ರೋನ್‌ಗಳ ಪೂರೈಕೆಯೂ ನಡೆದಿದೆ ಎಂದು ಹೇಳಲಾಗಿದೆ. ಟರ್ಕಿ ಮತ್ತು ಚೀನಾ ಪಾಕ್ ಪರವಾಗಿ ನಿಂತರೆ, ಭಾರತಕ್ಕೆ ಇದು ಸ್ವಲ್ಪ ಸವಾಲು ಆಗುತ್ತದೆ.
ಟರ್ಕಿಯ ಈ ಮೋಸದಾಟದಿಂದ ಭಾರತದಲ್ಲಿ ಬೈಕಾಟ್ ಟರ್ಕಿ ಶುರುವಾಗಿದೆ. ಅಷ್ಟಕ್ಕೂ ಟರ್ಕಿಯು ಭಾರತೀಯ ಪ್ರವಾಸಿಗರಿಂದಾಗಿ ಸಾಕಷ್ಟು ಗಳಿಸುತ್ತದೆ. ಪ್ರವಾಸೋದ್ಯಮವಾಗಿ ಹೆಸರು ಪಡೆದಿರುವ ಟಿರ್ಕಿಗೆ ಲಕ್ಷಾಂತರ ಭಾರತೀಯರು ಹೋಗುತ್ತಾರೆ. ಆದರೆ ಇದೀಗ ಪಾಕಿಗಳಿಗೆ ಟರ್ಕಿ ಬೆಂಬಲ ಕೊಡಲು ನಿಂತಿರುವ ಕಾರಣ, ಬೈಕಾಟ್ ಟರ್ಕಿ ಎಂಬ ಅಭಿಯಾನವನ್ನು ಶುರು ಮಾಡಲಾಗಿದೆ. ಇದರ ಪರವಾಗಿ ಎಷ್ಟು ನಿಜವಾದ ಭಾರತೀಯರು ನಿಲ್ಲುತ್ತಾರೆ ಎಂದು ನೋಡಬೇಕಿದೆಯಷ್ಟೇ.
ಪಾಕಿಸ್ತಾನದ ಟಿವಿಯಲ್ಲೂ ಸಿದ್ದರಾಮಯ್ಯ ಫೇಮಸ್: ಸುದ್ದಿಯ ವಿಡಿಯೋ ವೈರಲ್- ನಿರೂಪಕಿ ಹೇಳಿದ್ದೇನು ಕೇಳಿ...
