ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಬೇಡ, ಭದ್ರತೆ ಬಿಗಿಗೊಳಿಸಿ ಎಂದಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆ ಟೀಕೆಗೊಳಗಾಗಿತ್ತು. ಪಾಕ್ ಟಿವಿಯಲ್ಲೂ ವರದಿಯಾಗಿತ್ತು. ನಂತರ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ಯುದ್ಧ ಅಂತಿಮ ಆಯ್ಕೆ, ಭದ್ರತಾ ವೈಫಲ್ಯಕ್ಕೆ ಕೇಂದ್ರ ಹೊಣೆ, ಕಠಿಣ ಕ್ರಮಗಳಿಗೆ ನಮ್ಮ ಸಹಕಾರ ಎಂದರು.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿರುವ ಉಗ್ರರ ನೀಚ ಕೃತ್ಯದ ಬೆನ್ನಲ್ಲೇ, ಭಾರತವು ಪಾಕಿಸ್ತಾನಕ್ಕೆ ನೀಡಿರುವ ವಿವಿಧ ಸೌಲಭ್ಯಗಳನ್ನು ಒಂದೊಂದಾಗಿ ನಿಲ್ಲಿಸುತ್ತಿದೆ. ಇದರ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಜೊತೆ ಯುದ್ಧ ಅನಗತ್ಯ. ಅದರ ಬದಲು ಭದ್ರತೆಯನ್ನು ಬಿಗಿಗೊಳಿಸಿ ಎಂದಿದ್ದರು. ಉಗ್ರರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ, ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ. ನಾವು ಯಾವತ್ತೂ ಯುದ್ಧದ ಪರ ಇಲ್ಲ. ನಾವು ಯಾವಾಗಲೂ ಶಾಂತಿಯ ಪರ. ಯುದ್ಧದ ಬದಲು ಭದ್ರತೆಯನ್ನು ಬಿಗಿಗೊಳಿಸಬೇಕಿದೆ. ಯುದ್ಧದ ಬಗ್ಗೆ ಯೋಚನೆ ಬೇಡ. ಅದರ ಬದಲು ಭದ್ರತೆಯನ್ನು ಬಿಗಿ ಮಾಡಿ ಎಂದು ಸಲಹೆ ನೀಡಿದ್ದರು. ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಅಲ್ಲಿ ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. ಆದರೆ, ಅಲ್ಲಿ ಭದ್ರತಾ ವೈಫಲ್ಯ ಉಂಟಾಗಿದೆ. ಹಾಗಾದರೆ, ಇವರು ಇಷ್ಟು ದಿನ ಮಾಡಿದ್ದು ಬರಿ ಭಾಷಣನಾ? ಈಗ ಏನೇ ಕ್ರಮ ಕೈಗೊಂಡರೂ ಹೋದ 26 ಜೀವಗಳನ್ನು ವಾಪಸ್ ತರಲು ಸಾಧ್ಯನಾ? ಎಂದು ಕಿಡಿಕಾರಿದ್ದರು.
ಇದು ಬಿಜೆಪಿ ಸೇರಿದಂತೆ ಹಲವರಿಂದ ಭಾರಿ ಟೀಕೆಗೆ ಒಳಗಾಗಿತ್ತು. ಆದರೆ, ಇದೀಗ ಪಾಕಿಸ್ತಾನದ ಟಿವಿಯಲ್ಲಿಯೂ ಸಿದ್ದರಾಮಯ್ಯನವರು ಫೇಮಸ್ ಆಗಿದ್ದಾರೆ. ಇವರ ಈ ಹೇಳಿಕೆಯ ಕುರಿತು ಪಾಕಿಸ್ತಾನದ ಜಿಯೋ ಟಿವಿಯಲ್ಲಿ ವರದಿ ಬಿತ್ತರಿಸಲಾಗಿದೆ. ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಸುದ್ದಿ ವಾಚಕಿ, ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಭಾರತದಲ್ಲಿಯೂ ದನಿ ಎತ್ತಲಾಗುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಮಾತನಾಡಿದ್ದು ಯುದ್ಧ ಬೇಡ ಎಂದಿದ್ದಾರೆ ಎಂದು ಹೇಳಿದ್ದಾರೆ ಎಂದು ನಿರೂಪಕಿ ಹೇಳಿದ್ದಾರೆ.
ಪಾಕ್ ಬೆಂಬಲಿತ ಭಾರತೀಯರ ಲಿಸ್ಟ್ ಕೊಟ್ಟ ಪಾಕ್ ಮೀಡಿಯಾ! ಹಳೇ ವಿಡಿಯೋ ವೈರಲ್
ಇದರ ವಿಡಿಯೋ ಯಾವಾಗ ವೈರಲ್ ಆಯಿತೋ, ಸಿದ್ದರಾಮಯ್ಯನವರು ತಮ್ಮ ಹೇಳಿಕೆಯನ್ನು ಇಂದು ಬದಲಿಸಿದ್ದಾರೆ. ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡುವ ಕುರಿತಾಗಿ ನಾನು ನೀಡಿದ ಹೇಳಿಕೆಯ ಬಗ್ಗೆ ಪರ -ವಿರೋಧದ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ ಎಂದಿದ್ದಾರೆ. ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು ಎಂದು ಪುನಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಗೆ ಬದ್ಧವಾಗಿ ನಿಂತಿರುವ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪಹಲ್ಗಾಮ್ ನಲ್ಲಿ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಗೆ ನಮ್ಮ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯ ಕಾರಣ ಎನ್ನುವುದು ದೇಶದ ಜನತೆಗೆ ಮತ್ತು ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆಯಾಗಿದೆ.
ಮೊದಲು ಈ ಲೋಪವನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಸಿಂಧೂ ನದಿ ಒಪ್ಪಂದದ ರದ್ದತಿಯೂ ಸೇರಿದಂತೆ ಕೇಂದ್ರ ಸರ್ಕಾರ ಕೆಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಮುಂದೆ ಇದಕ್ಕಿಂತಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಭರವಸೆ ನಮಗಿದೆ. ಅವುಗಳನ್ನೆಲ್ಲ ಬಹಿರಂಗ ಪಡಿಸುವ ಅಗತ್ಯವಿಲ್ಲ. ಅಂತಹ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
