ಮದುವೆ ದೇಶದ ಒಳಗೆ ಅಥವಾ ಹೊರಗೆ ನಡೆದರೂ, ಅಥವಾ ವಧು-ವರರಲ್ಲಿ ಒಬ್ಬರು ವಿದೇಶಿಗರಾಗಿದ್ದರೂ, ಮದುವೆ ಒಪ್ಪಂದಕ್ಕೆ ಈ ವೈದ್ಯಕೀಯ ಪರೀಕ್ಷೆ ಮೂಲಭೂತ ನಿಯಮವಾಗಿರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ವ್ಯವಸ್ಥೆಯನ್ನು ಮಾಡಿದೆ. 

ವಿವಾಹಪೂರ್ವ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಒಮಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ನಿರ್ಧಾರವು ಜನವರಿ 1, 2026 ರಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ರಾಯಲ್ ಡಿಕ್ರಿ ಸಂಖ್ಯೆ 111/2025 ರ ಅಡಿಯಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಮದುವೆ ದೇಶದ ಒಳಗೆ ಅಥವಾ ಹೊರಗೆ ನಡೆದರೂ, ಅಥವಾ ವಧು-ವರರಲ್ಲಿ ಒಬ್ಬರು ವಿದೇಶಿಗರಾಗಿದ್ದರೂ, ಮದುವೆ ಒಪ್ಪಂದಕ್ಕೆ ಈ ವೈದ್ಯಕೀಯ ಪರೀಕ್ಷೆ ಮೂಲಭೂತ ನಿಯಮವಾಗಿರುತ್ತದೆ.

ಯಾವೆಲ್ಲಾ ಪರೀಕ್ಷೆಗಳು ಕಡ್ಡಾಯ?

ಮದುವೆಗೂ ಮುನ್ನ ನಡೆಸುವ ಈ ಪರೀಕ್ಷೆಯಲ್ಲಿ ಮುಖ್ಯವಾಗಿ ಆನುವಂಶಿಕ ರಕ್ತ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಲಾಗುತ್ತದೆ. ಸಿಕಲ್ ಸೆಲ್ ಅನೀಮಿಯಾ, ಥಲಸ್ಸೆಮಿಯಾ, ಸಾಂಕ್ರಾಮಿಕ ರೋಗಗಳಾದ ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ಮತ್ತು ಎಚ್‌ಐವಿ/ಏಡ್ಸ್ ಪರೀಕ್ಷೆಗಳ ಜೊತೆಗೆ, ಫಲಿತಾಂಶಗಳ ಆಧಾರದ ಮೇಲೆ ವೈದ್ಯಕೀಯ ಸಮಾಲೋಚನೆಯನ್ನೂ ಈ ಹೊಸ ಸುಧಾರಣೆಯಲ್ಲಿ ಸೇರಿಸಲಾಗಿದೆ.

ಕಾನೂನಿನ ಉದ್ದೇಶವೇನು?

ಈ ನಿರ್ಧಾರವು ಆನುವಂಶಿಕ, ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಒಂದು ತಡೆಗಟ್ಟುವ ಕ್ರಮವಾಗಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

  • ಆನುವಂಶಿಕ ರಕ್ತ ಸಂಬಂಧಿ ಕಾಯಿಲೆಗಳೊಂದಿಗೆ ಮಕ್ಕಳು ಹುಟ್ಟುವ ಸಾಧ್ಯತೆಯನ್ನು ಕಡಿಮೆ ಮಾಡುವುದು.
  • ಕುಟುಂಬಗಳ ಮೇಲಿನ ಆರೋಗ್ಯ, ಸಾಮಾಜಿಕ, ಮಾನಸಿಕ ಮತ್ತು ಆರ್ಥಿಕ ಹೊರೆಗಳನ್ನು ತಗ್ಗಿಸುವುದು.
  • ಆರೋಗ್ಯ ಸಂಸ್ಥೆಗಳು ಮತ್ತು ರಕ್ತನಿಧಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು.
  • ದಂಪತಿಗಳ ನಡುವೆ ಮತ್ತು ತಾಯಿಯಿಂದ ಗರ್ಭದಲ್ಲಿರುವ ಮಗುವಿಗೆ ರೋಗ ಹರಡುವುದನ್ನು ತಡೆಯುವುದು.
  • ಅಗತ್ಯ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಮೊದಲೇ ಒದಗಿಸಲು ಇದು ಸಹಾಯಕವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಮದುವೆ ನಿರ್ಧಾರದಲ್ಲಿ ಹಸ್ತಕ್ಷೇಪವಿಲ್ಲ

ಕಡ್ಡಾಯ ಎನ್ನುವುದು ಕೇವಲ ಪರೀಕ್ಷೆ ಮಾಡಿಸಿಕೊಳ್ಳುವ ಜವಾಬ್ದಾರಿಯಷ್ಟೇ. ಮದುವೆಯಾಗಬೇಕೇ ಬೇಡವೇ ಎಂಬ ನಿರ್ಧಾರದಲ್ಲಿ ಸರ್ಕಾರವಾಗಲಿ, ಆರೋಗ್ಯ ಇಲಾಖೆಯಾಗಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ವೈವಾಹಿಕ ಜೀವನ ಮತ್ತು ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುವ ಆರೋಗ್ಯ ಮಾಹಿತಿಯನ್ನು ದಂಪತಿಗೆ ಸ್ಪಷ್ಟವಾಗಿ ತಿಳಿಸುವುದೇ ಇದರ ಮುಖ್ಯ ಉದ್ದೇಶ.

ಪರೀಕ್ಷೆಯನ್ನು ಎಲ್ಲಿ ಮಾಡಿಸಬಹುದು?

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಪರೀಕ್ಷೆ ಲಭ್ಯವಿದೆ. ಸಚಿವಾಲಯದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲೂ ಪರೀಕ್ಷೆ ಮಾಡಿಸಬಹುದು. ಕೆಲವು ಪ್ರಕರಣಗಳಲ್ಲಿ ಹೆಚ್ಚಿನ ಪರೀಕ್ಷೆಗಳು ಬೇಕಾಗುವುದರಿಂದ, ಮದುವೆ ಒಪ್ಪಂದಕ್ಕೆ ಸಾಕಷ್ಟು ಮುಂಚಿತವಾಗಿಯೇ ಪರೀಕ್ಷೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಪರೀಕ್ಷೆ ಮತ್ತು ಸಮಾಲೋಚನೆ ಪೂರ್ಣಗೊಂಡ ನಂತರವೇ ವಿವಾಹಪೂರ್ವ ವೈದ್ಯಕೀಯ ಪರೀಕ್ಷಾ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಡಿಜಿಟಲ್ ವ್ಯವಸ್ಥೆಯೊಂದಿಗೆ ಸಂಪರ್ಕ

ಈ ಪ್ರಮಾಣಪತ್ರವನ್ನು ಸುಪ್ರೀಂ ಜುಡಿಷಿಯಲ್ ಕೌನ್ಸಿಲ್‌ನ ನೋಟರಿ ಪಬ್ಲಿಕ್ ಪ್ಲಾಟ್‌ಫಾರ್ಮ್‌ನೊಂದಿಗೆ ಎಲೆಕ್ಟ್ರಾನಿಕ್ ಆಗಿ ಲಿಂಕ್ ಮಾಡಲಾಗುತ್ತದೆ. ವಧು ಮತ್ತು ವರ ಇಬ್ಬರಿಗೂ ಇದರ ಎಲೆಕ್ಟ್ರಾನಿಕ್ ಪ್ರತಿ ಲಭ್ಯವಾಗಲಿದೆ. ಎಲ್ಲಾ ವೈದ್ಯಕೀಯ ಮಾಹಿತಿಯನ್ನು ಕಟ್ಟುನಿಟ್ಟಾದ ಗೌಪ್ಯತೆಯೊಂದಿಗೆ ನಿರ್ವಹಿಸಲಾಗುವುದು ಎಂದು ಸಚಿವಾಲಯ ಭರವಸೆ ನೀಡಿದೆ.

'Make the Start Right’ ಜಾಗೃತಿ ಅಭಿಯಾನ

ವಿವಾಹಪೂರ್ವ ಪರೀಕ್ಷೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಒಮಾನ್ ಆರೋಗ್ಯ ಸಚಿವಾಲಯವು ಒಂದು ವರ್ಷದ 'Make the Start Right' ಎಂಬ ರಾಷ್ಟ್ರೀಯ ಜಾಗೃತಿ ಅಭಿಯಾನವನ್ನು ನಡೆಸಿತ್ತು. ಮದುವೆಗೆ ಸಿದ್ಧರಾಗುತ್ತಿರುವ ಯುವಕ-ಯುವತಿಯರು ಮತ್ತು ಅವರ ಪೋಷಕರನ್ನು ಗುರಿಯಾಗಿಸಿಕೊಂಡು ಈ ಅಭಿಯಾನವನ್ನು ಮೂರು ಹಂತಗಳಲ್ಲಿ ನಡೆಸಲಾಗಿತ್ತು. ಕುಟುಂಬದ ಆರೋಗ್ಯ ರಕ್ಷಣೆ ಮತ್ತು ಸಮಾಜದ ಭವಿಷ್ಯದ ಭದ್ರತೆಗಾಗಿ ಒಮಾನ್ ಕೈಗೊಂಡಿರುವ ಈ ನಿರ್ಧಾರ, ಗಲ್ಫ್ ವಲಯದ ಆರೋಗ್ಯ ನೀತಿಗಳಲ್ಲಿ ಹೊಸ ಮಾನದಂಡವಾಗಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.