ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಕಠಿಣ ಕ್ರಮ ಕೈಗೊಂಡಿದೆ. ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿ, ಪಾಕಿಸ್ತಾನಿ ರಕ್ಷಣಾ ಸಲಹೆಗಾರರನ್ನು ಹೊರಹಾಕಿದೆ. ಪಾಕಿಸ್ತಾನಿ ಮಾಧ್ಯಮದಲ್ಲಿ ಭಾರತೀಯ ರಾಜಕೀಯ ಪಕ್ಷಗಳು, ವ್ಯಕ್ತಿಗಳನ್ನು ಪಾಕ್ ಬೆಂಬಲಿಗರೆಂದು ಬಿಂಬಿಸಲಾಗಿದೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಈಗ ಯುದ್ಧದ ಭೀತಿ ಶುರುವಾಗಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರ ದಾಳಿ ನಡೆಸುವ ಮೂಲಕ ಪಾಕಿಸ್ತಾನ ತನ್ನ ಹಳ್ಳವನ್ನು ತಾನೇ ತೋಡಿಕೊಂಡಿದೆ. ಈ ನರಮೇಧಕ್ಕೆ ಭಾರತ ಕೊಡುತ್ತಿರುವ ಮರ್ಮಾಘಾತ ಮುಂದುವರೆಯುತ್ತಲೇ ಇದೆ. ಹಿಂದೂಗಳ ಹತ್ಯೆ ಮಾಡಿದವರು ಕನಸಿನಲ್ಲಿಯೂ ಊಹಿಸಿಕೊಳ್ಳಲಾಗದ ಪೆಟ್ಟು ನೀಡುತ್ತೇನೆ ಎಂದು ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಮಾತು ಕೊಟ್ಟಾಗಿದೆ. ಹೀಗೆ ಭಾರತ ತಕ್ಕ ಉತ್ತರ ನೀಡುತ್ತಿರುವ ನಡುವೆಯೇ, ಪಾಕಿಸ್ತಾನದ ಚಾನೆಲ್ ಒಂದರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ. ಈ ಚಾನೆಲ್ ಒಂದರಲ್ಲಿ ನಡೆದಿರುವ ಪ್ಯಾನಲ್ ಚರ್ಚೆಯಲ್ಲಿ ಪಾಕಿಸ್ತಾನ ಬೆಂಬಲಿತ ಭಾರತೀಯರ ಲಿಸ್ಟ್ ಅನ್ನು ಪತ್ರಕರ್ತನೊಬ್ಬ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
ಕಾಶ್ಮೀರದ ಬಗ್ಗೆ ಮಾತನಾಡುತ್ತಿರುವ ಸಮಯದಲ್ಲಿ, ಈ ಭಾಗದ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎನ್ನುವ ಪ್ರಶ್ನೆಗೆ ಉತ್ತರವಾಗಿ ಆ ಪತ್ರಕರ್ತ, ಅದೇನೂ ದೊಡ್ಡ ವಿಷಯವಲ್ಲ. ಹಲವಾರು ಹಿಂದೂಸ್ತಾನಿಗಳು ನಿಮ್ಮ (ಪಾಕಿಸ್ತಾನ) ಬೆಂಬಲಿಗರು ಇದ್ದಾರೆ. ಹಿಂದೂಸ್ತಾನವು ಅತಿ ದೊಡ್ಡ ದೇಶ ಎನ್ನುತ್ತಲೇ ಪಾಕ್ ಬೆಂಬಲಿತ ಭಾರತೀಯರ ಪಟ್ಟಿಯನ್ನು ಅವರು ನೀಡಿದ್ದಾರೆ. ಅದರಲ್ಲಿ ಅವರು, ಅರುಂಧತಿ ರಾಯ್, ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ, ಎಡ ಪಕ್ಷಗಳು, ದಲಿತ ಪಕ್ಷಗಳು ಇವೆ. ಎಲ್ಲರೂ ಮೋದಿ ಪರವಾಗಿ ಇಲ್ಲದ ಮೇಲೆ ಸಮಸ್ಯೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಇದು ಕಳೆದ ಜನವರಿಯ ವಿಡಿಯೋ ಆಗಿದ್ದು, ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೈರಲ್ ಆಗಿದೆ. ಅಂದಹಾಗೆ ಇದಾಗಲೇ ಭಾರತವು, ಸಿಂಧೂ ಜಲ ಒಪ್ಪಂದ (ಇಂಡಸ್ ವಾಟರ್ಸ್ ಟ್ರೀಟಿ - ಐಎಬ್ಲ್ಯುಟಿ) ಎಂಬ ಸಿಂಧೂ ನದಿಯ ನೀರಿನ ಹಂಚಿಕೆಯ ಕುರಿತು ಪಾಕಿಸ್ತಾನದೊಡನೆ ಮಾಡಿಕೊಂಡಿದ್ದ 65 ವರ್ಷ ಹಳೆಯ ಒಪ್ಪಂದವನ್ನು ಅಮಾನತುಗೊಳಿಸಿದೆ. ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ತನಕ ಸಿಂಧೂ ಜಲ ಹಂಚಿಕೆಯ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಘೋಷಿಸಿದೆ.
ಇದರ ಬೆನ್ನಲ್ಲೇ, ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನಿಂದ ಎಲ್ಲಾ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು ಹೊರಹಾಕಿದೆ. ಈ ವ್ಯಕ್ತಿಗಳನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ ಮತ್ತು ಒಂದು ವಾರದೊಳಗೆ ದೇಶವನ್ನು ತೊರೆಯುವಂತೆ ಸೂಚಿಸಲಾಗಿದೆ. ಇದಕ್ಕೆ ಅನುಗುಣವಾಗಿ, ಭಾರತವು ಇಸ್ಲಾಮಾಬಾದ್‌ನಲ್ಲಿರುವ ತನ್ನದೇ ಆದ ಹೈಕಮಿಷನ್‌ನಿಂದ ತನ್ನ ಮಿಲಿಟರಿ ಸಲಹೆಗಾರರನ್ನು ಹಿಂತೆಗೆದುಕೊಳ್ಳಲಿದೆ. ಎರಡೂ ಕಾರ್ಯಾಚರಣೆಗಳಲ್ಲಿ ಸೇವಾ ಸಲಹೆಗಾರರಿಗೆ ನಿಯೋಜಿಸಲಾದ ಐದು ಸಹಾಯಕ ಸಿಬ್ಬಂದಿಯನ್ನು ಸಹ ಹಿಂಪಡೆಯಲಾಗುತ್ತಿದೆ. ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆಯನ್ನು ಭಾರತ ಸ್ಥಗಿತಗೊಳಿಸಿದೆ.
