Imran Khan ಎಂಕ್ಯೂಎಂ ಪಕ್ಷದ ಬೆಂಬಲ ವಾಪಸ್, ಅವಿಶ್ವಾಸಕ್ಕೂ ಮುನ್ನವೇ ಇಮ್ರಾನ್ ರಾಜೀನಾಮೆ ಗುಸುಗುಸು!
- 163 ಸ್ಥಾನಕ್ಕೆ ಕುಸಿದ ಇಮ್ರಾನ್ ಪಕ್ಷದ ಬಲ
- ಅವಿಶ್ವಾಸಕ್ಕೂ ಮೊದಲೇ ರಾಜೀನಾಮೆ ಗುಸುಗುಸು
- ಬಿಕ್ಕಟ್ಟಿನಲ್ಲಿ ಸೇನೆ ಮಧ್ಯಪ್ರವೇಶ: ಗರಿಗೆದರಿದ ಕುತೂಹಲ
ಇಸ್ಲಾಮಾಬಾದ್(ಮಾ.31): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್(Imran Khan) ನೇತೃತ್ವದ ಸರ್ಕಾರಕ್ಕೆ, ಬುಧವಾರ ಭಾರೀ ಹಿನ್ನಡೆಯಾಗಿದೆ. ಇಮ್ರಾನ್ ಅವರ ಪಕ್ಷಕ್ಕೆ ಬೆಂಬಲ ನೀಡಿದ್ದ ಎಂಕ್ಯೂಎಂ-ಪಿ ಪಕ್ಷ(MQM party) ಬೆಂಬಲವನ್ನು ಹಿಂಪಡೆದುಕೊಂಡಿದೆ. ಇದರಿಂದಾಗಿ ಇಮ್ರಾನ್ ಅಧಿಕಾರದಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ.
ಈ ನಡುವೆ, ಅವಿಶ್ವಾಸ ನಿರ್ಣಯಕ್ಕೆ ಮತದಾನ(No Confidence Motion) ನಡೆಯುವ ಮೊದಲೇ ಮತ್ತಷ್ಟುಇಮ್ರಾನ್ ರಾಜೀನಾಮೆ ಸನ್ನಿಹಿತ ಎಂದು ಹೇಳಲಾಗುತ್ತಿದೆ. ಬುಧವಾರ ಸಂಜೆಯೇ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿ ರಾಜೀನಾಮೆ ನೀಡಬಹುದು ಎಂದು ಹೇಳಲಾಗಿತ್ತು. ಆದರೆ, ಪಾಕ್ ಸೇನೆ(Pakistan Army) ಹಾಗೂ ಗುಪ್ತಚರ ಸಂಸ್ಥೆ ಐಎಸ್‌ಐ ಮಧ್ಯಪ್ರವೇಶದ ಕಾರಣ ತಮ್ಮ ನಿರ್ಧಾರ ಪ್ರಕಟಣೆ ತಡೆಹಿಡಿದರು ಎಂದು ಮೂಲಗಳು ಹೇಳಿವೆ. ಬಳಿಕ ತುರ್ತು ಸಂಪುಟ ಸಭೆ ನಡೆಸಿದ ಇಮ್ರಾನ್ ಪ್ರಸಕ್ತ ವಿದ್ಯಮಾನದ ಚರ್ಚೆ ನಡೆಸಿದರು.
ಪಾಕ್ ಪ್ರಧಾನಿ ರಾಜಿನಾಮೆಗೆ ಕ್ಷಣಗಣನೆ, ಅವಮಾನದಿಂದ ಪಾರಾಗೋಕೆ ಇಮ್ರಾನ್ ತಂತ್ರಗಾರಿಕೆ!
ಈ ನಡುವೆ, ಇಮ್ರಾನ್ ರಾಜೀನಾಮೆ ನೀಡಲ್ಲ ಎಂದು ಅವರದ್ದೇ ಪಕ್ಷದ ಸಚಿವ ಶೇಖ್ ರಷೀದ್ ಸ್ಪಷ್ಟಪಡಿಸಿದ್ದಾರೆ.
163ಕ್ಕೆ ಕುಸಿದ ಬಲ:
ಇಮ್ರಾನ್ ಅವರ ಪಕ್ಷಕ್ಕೆ ಬೆಂಬಲ ನೀಡಿದ್ದ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್(ಎಂಕ್ಯೂಎಂ-ಪಿ) ಪಕ್ಷ ಬೆಂಬಲವನ್ನು ಹಿಂಪಡೆದುಕೊಂಡಿದೆ. ಅಲ್ಲದೇ ಬಲೂಚಿಸ್ಥಾನ್ ಅವಾಮಿ ಪಕ್ಷವೂ ವಿಪಕ್ಷಗಳ ಅವಿಶ್ವಾಸ ನಿರ್ಣಯ ಬೆಂಬಲಿಸಿದೆ. ಹೀಗಾಗಿ ಇಮ್ರಾನ್‌ರ ಪಿಟಿಐ ಪಕ್ಷದ ಬಲ 163ಕ್ಕೆ ಕುಸಿದಿದೆ. ಬಹುಮತ ಸಾಬೀತು ಪಡಿಸಲು 173 ಸ್ಥಾನಗಳ ಅವಶ್ಯಕತೆ ಇದ್ದು ವಿಪಕ್ಷಗಳ ಬಲ 177ಕ್ಕೇರಿದೆ.
ಪಾಕ್ ಪ್ರಧಾನಿಗೆ ಕೈಕೊಟ್ಟ ಬಲೂಚ್ ಪಾರ್ಟಿ, ಮೈತ್ರಿ ಮುರಿದು ಇಮ್ರಾನ್ ವಿರುದ್ಧ ಹೋರಾಟ!
ಐಎಸ್‌ಐ ಮಧ್ಯಪ್ರವೇಶ:
ಬುಧವಾರ ಸಂಜೆ ಭಾಷಣ ನಡೆಸಿ ರಾಜೀನಾಮೆಗೆ ಇಮ್ರಾನ್ ನಿರ್ಧರಿಸಿದ್ದರು. ಆದರೆ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಮತ್ತು ಗುಪ್ತಚರ ಇಲಾಖೆ ಡಿಜಿ ನದೀಮ್ ಅಂಜುಮ್ ಅವರು ಇಮ್ರಾನ್ ಭೇಟಿ ಮಾಡಿದರು. ಬಳಿಕ ಅವರು ಭಾಷಣ ಮಾಡುವುದನ್ನು ರದ್ದುಗೊಳಿಸಿದರು ಎಂದು ಮೂಲಗಳು ಹೇಳಿವೆ. ಈ ಭೇಟಿ ಕುತೂಹಲ ಉಂಟು ಮಾಡಿದೆ.
ಪಾಕ್ ಸಂಸತ್ ಬಲಾಬಲ
ಒಟ್ಟು ಸ್ಥಾನ 342
ಬಹುಮತಕ್ಕೆ 173
ಇಮ್ರಾನ್ ಬಲ 163
ವಿಪಕ್ಷಗಳ ಬಲ 177
ಅವಿಶ್ವಾಸ ನಿರ್ಣಯದಿಂದ ದೂರ ಇರುವಂತೆ ಸ್ವಪಕ್ಷೀಯರಿಗೆ ಇಮ್ರಾನ್ ಖಾನ್ ಸೂಚನೆ
ಅಧಿಕಾರ ಕಳೆದುಕೊಳ್ಳುವ ಇಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಅವಿಶ್ವಾಸ ನಿರ್ಣಯ ನಡೆಯುವ ದಿನ ಅಧಿವೇಶನದಿಂದ ದೂರ ಇರಬೇಕು ಅಥವಾ ಗೈರುಹಾಜರಾಗಬೇಕು ಎಂದು ತಮ್ಮ ಪಕ್ಷದ ಸಂಸದರಿಗೆ ಸೂಚನೆ ನೀಡಿದ್ದಾರೆ. ಇಮ್ರಾನ್ ಅವರ ವಿರುದ್ಧ ವಿಶ್ವಾಸ ಮತ ನಿರ್ಣಯ ಏಪ್ರಿಲ್ ಮೊದಲ ವಾರ ನಡೆಯುವ ಸಾಧ್ಯತೆ ಇದೆ. ಅವಿಶ್ವಾಸ ನಿರ್ಣಯದ ಮತದಾನದ ವೇಳೆ ಹಾಜರಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ. ಮಾ.31ರಂದು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ನಂತರ ಏಪ್ರಿಲ್ 3ರಂದು ಮತದಾನ ನಡೆಯುವ ಸಾಧ್ಯತೆಯಿದ್ದು, ಅದರನ್ನು ಜಯಶೀಲರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏ.4ಕ್ಕೆ ಇಮ್ರಾನ್ ಖಾನ್ ಹಣೆಬರಹ ನಿರ್ಧಾರ
ತೆಹ್ರೀಕ್ ಎ ಇನ್ಸಾಫ್ ಪಕ್ಷದ ನಾಯಕ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಸರ್ಕಾರದ ವಿರುದ್ಧ ಸೋಮವಾರ ಅಧಿಕೃತವಾಗಿ ವಿಪಕ್ಷಗಳಿಂದ ಪಾಕ್ ಸಂಸತ್ತಿನಲ್ಲಿ ಅವಿಶ್ವಾಸ ಮಂಡನೆ ಗೊತ್ತುವಳಿ ಮಂಡನೆ ಆಗಿದೆ. ಈ ಗೊತ್ತುವಳಿ ಏ.4ರಂದು ಮತಕ್ಕೆ ಹೋಗುವ ಸಾಧ್ಯತೆ ಇದ್ದು, ಅಂದು ಅವರ ಹಣೆಬರಹ ನಿರ್ಧಾರವಾಗಲಿದೆ. ಸಂಸತ್ತಿನ ನಿಮಯಗಳ ಅನ್ವಯ ಗೊತ್ತುವಳಿ ಮಂಡನೆಯಾದ ಬಳಿಕ ಆ ಕುರಿತು ಚರ್ಚೆ ನಡೆದು, 3 ದಿನಗಳ ನಂತರ ಮತ್ತು 7 ದಿನಗಳ ಒಳಗಾಗಿ ಮತದಾನ ನಡೆಯಬೇಕು. ಈ ನಡುವೆ ಇಮ್ರಾನ್ ಪತನವಾದರೆ ಪಿಎಂಎಲ್ ಪಕ್ಷದ ನಾಯಕ ಶಹಬಾಜ್ ಷರೀಫ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೆಸರಿಸಲು ವಿಪಕ್ಷಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ