ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ, ಸತ್ಯ ಸಾಯಿಬಾಬಾರ ಪರಮ ಭಕ್ತರಾಗಿದ್ದರು. ಅಮೆರಿಕವು ಡ್ರೋನ್, ಉಪಗ್ರಹ ಮತ್ತು ಆಂತರಿಕ ಮಾಹಿತಿದಾರರನ್ನು ಬಳಸಿ, ಮಡುರೋ ಮನೆ ಮಾದರಿ ನಿರ್ಮಿಸಿ ದಾಳಿಯ ತಾಲೀಮು ನಡೆಸಿತ್ತು..
ಕಾರಕಸ್: 8000 ಮೈಲಿಗಳಿಗೂ ದೂರವಿರುವ ವೆನಿಜುವೆಲಾದ ಅಧ್ಯಕ್ಷರಾಗಿದ್ದ ಮಡುರೋ ಅವರು, ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿದ್ದ ಸತ್ಯ ಸಾಯಿಬಾಬಾ ಅವರ ಪರಮಭಕ್ತರಾಗಿದ್ದರು. ತಾವು ವಿದೇಶಾಂಗ ಸಚಿವರಾಗಿದ್ದ ಅವಧಿಯಲ್ಲಿ 2005 ಮತ್ತು 2012ರಲ್ಲಿ ಮಡುರೋ ಭಾರತಕ್ಕೆ ಆಗಮಿಸಿದ್ದರು. ಮೊದಲ ಭೇಟಿ ವೇಳೆ ಅವರು ಪುಟ್ಟಪರ್ತಿಗೆ ತೆರಳಿ ಪತ್ನಿಯೊಂದಿಗೆ ಸಾಯಿಬಾಬಾರನ್ನು ಭೇಟಿಯಾಗಿದ್ದರು. ಜನ್ಮತಃ ಕ್ರೈಸ್ತರಾಗಿದ್ದ ದಂಪತಿ, ಬಳಿಕ ಹಿಂದೂ ಸಂಪ್ರದಾಯದ ಪಾಲನೆಯನ್ನು ಆರಂಭಿಸಿದ್ದರು ಹಾಗೂ ಸಾಯಿಬಾಬಾರ ಫೋಟೋವನ್ನು ಮಡುರೋ ತಮ್ಮ ಕಚೇರಿಯಲ್ಲಿ ಇರಿಸಿಕೊಂಡಿದ್ದರು.
ನಿಜುವೆಲಾಕ್ಕೆ ಮಸ್ಕ್ ಸ್ಟಾರ್‌ಲಿಂಕ್‌ನಿಂದ ಉಚಿತ ಇಂಟರ್ನೆಟ್
ಅಮೆರಿಕ ದಾಳಿಯಿಂದ ಸಂಕಷ್ಟಕ್ಕೀಡಾಗಿರುವ ವೆನಿಜುವೆಲಾದ ಬೆನ್ನಿಗೆ ವಿಶ್ವದ ನಂ.1 ಸಿರಿವಂತ ಎಲಾನ್ ಮಸ್ಕ್ ನಿಂತಿದ್ದು, ತಮ್ಮ ಸ್ಟಾರ್‌ಲಿಂಕ್ ಜಾಲದ ಮೂಲಕ ಒಂದು ತಿಂಗಳು ಉಚಿತ ಇಂಟರ್ನೆಟ್ ನೀಡುವುದಕ್ಕೆ ಮುಂದಾಗಿದ್ದಾರೆ.ಈ ಬಗ್ಗೆ ಮಸ್ಕ್ ಒಡೆತನದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಜಂಟಿ ಘೋಷಣೆ ಹೊರಡಿಸಿದ್ದು, ‘ ಸ್ಟಾರ್‌ಲಿಂಕ್ ಒಂದು ತಿಂಗಳು ಉಚಿತ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆ ನೀಡಲಿದೆ’ ಎಂದಿದೆ. ಮಸ್ಕ್ ಈ ಹಿಂದಿನಿಂದಲೂ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ವಿರೋಧಿಸಿ, ಜಾಲತಾಣಗಳಲ್ಲಿ ಟೀಕಿಸುತ್ತಿದ್ದರು. ಸಾಲದ್ದಕ್ಕೆ 2024ರ ಚುನಾವಣೆಯಲ್ಲಿ ವೆನಿಜುವೆಲಾದ ವಿಪಕ್ಷ ನಾಯಕಿ ಮರಿಯಾ ಕೊರಿನಾ ಮಚಾಡೋ ಅವರನ್ನು ಬೆಂಬಲಿಸಿದ್ದರು.
ಡ್ರೋನ್, ಸ್ಪೈ ಮೂಲಕ ನಿಗಾ: ಮನೆ ಮಾದರಿ ಮಾಡಿ ದಾಳಿ
ಮಡುರೋ ಬಂಧನಕ್ಕಾಗಿ ಅಮೆರಿಕ ಸುದೀರ್ಘ ಕಾಲದಿಂದ ಭಾರೀ ಸಿದ್ಧತೆ ನಡೆಸಿತ್ತು. ಗುಪ್ತಚರ ಡ್ರೋನ್, ಉಪಗ್ರಹ ಬಳಿಕ ಮಡುರೋ ಅವರ ಎಲ್ಲಾ ಕಾರ್ಯಾಚರಣೆಗೆ ಮೇಲೆ ನಿಗಾ ಇಡಲಾಗಿತ್ತು. ಇದರ ಜೊತೆಗೆ ಅಮೆರಿಕದ ಗುಪ್ತಚರರ ಮಡುರೋ ಮೇಲೆ ಹದ್ದಿನಗಣ್ಣಿಟ್ಟಿದ್ದರು. ಅಲ್ಲದೆ ಮಡುರೋ ಸರ್ಕಾರದೊಳಗಿದ್ದ ವ್ಯಕ್ತಿಯನ್ನು ಕೂಡಾ ಇಂಥ ಬೇಹುಗಾರಿಕೆ ಬಳಸಿಕೊಳ್ಳಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಮಡುರೋ ಯಾವಾಗ ಮಲಗಿದರು, ಏನು ತಿಂದರು, ಯಾವ ಬಣ್ಣದ ಬಟ್ಟೆ ಹಾಕಿದ್ದಾರೆ ಎಂಬ ಸಣ್ಣ ಸಣ್ಣ ಸಂಗತಿಗಳನ್ನೂ ಅದು ವರದಿ ಮಾಡುತ್ತಿತ್ತು. ಮಡುರೋ ಅವರ ಸಾಕುಪ್ರಾಣಿಗಳ ಮೇಲೂ ನಿಗಾ ಇಡಲಾಗಿತ್ತು. ಡಿಸೆಂಬರ್ ಆರಂಭದಲ್ಲಿ ಯೋಜನೆ ಅಂತಿಮವಾಯಿತು. ಸೈನಿಕರು ಮಡುರೋ ಮನೆಯ ಮಾದರಿಯನ್ನು ಅಮೆರಿಕದಲ್ಲಿ ನಿರ್ಮಾಣ ಮಾಡಿ, ಅದನ್ನು ಭೇದಿಸುವ ಅಭ್ಯಾಸ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
150 ಯುದ್ಧವಿಮಾನಗಳ ಬಳಕೆ
ದಾಳಿಗೆ 4 ದಿನದ ಹಿಂದೆ ಟ್ರಂಪ್ ಅನುಮತಿ ನೀಡಿದ್ದರು, ಆದರೆ ಹವಾಮಾನ ಸರಿಯಿಲ್ಲದಿದ್ದರಿಂದ ಮತ್ತೆ ಕಾಯಬೇಕಾಯಿತು. ಅಂತಿಮವಾಗಿ ಅಧ್ಯಕ್ಷರ ಆದೇಶ ಶುಕ್ರವಾರ ರಾತ್ರಿ 10:46ಕ್ಕೆ (ಭಾರತೀಯ ಸಮಯ) ಅಂದರೆ ಕರಾಕಸ್‌ನಲ್ಲಿ ಶನಿವಾರ ಬೆಳಿಗ್ಗೆ ಸುಮಾರು 3:46ಕ್ಕೆ ಬಂತು. ಅಧ್ಯಕ್ಷರು ಸೈನಿಕರಿಗೆ ‘ಗುಡ್ ಲಕ್ ಆ್ಯಂಡ್ ಗಾಡ್‌ಸ್ಪೀಡ್’ ಎಂದು ಶುಭ ಕೋರಿದರು. ಕರಾಕಸ್‌ನಲ್ಲಿ ರಾತ್ರಿಯಾಗಿದ್ದರಿಂದ ಕತ್ತಲೆಯಲ್ಲಿ ಕಾರ್ಯಾಚರಣೆ ನಡೆಸಲು ಅನುಕೂಲವಾಯಿತು. ವಾಯು, ಭೂ ಮತ್ತು ಸಮುದ್ರಮಾರ್ಗದ ಮೂಲಕ 2 ಗಂಟೆ 20 ನಿಮಿಷ ಕಾರ್ಯಾಚರಣೆ ನಡೆಯಿತು. ಒಟ್ಟು 150 ಯುದ್ಧವಿಮಾನಗಳನ್ನು ಬಳಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.


