೨೦೨೫ರ ಹಜ್ ಯಾತ್ರೆ ಜೂನ್ 4 ರಿಂದ 9 ರವರೆಗೆ ನಡೆಯಲಿದ್ದು, ಅನುಮತಿ ಕಡ್ಡಾಯ. ಅನುಮತಿಯಿಲ್ಲದ ಯಾತ್ರಿಕರಿಗೆ ₹4.5 ಲಕ್ಷ ದಂಡ, ಸಹಾಯ ಮಾಡಿದವರಿಗೆ ₹22.7 ಲಕ್ಷ ದಂಡ ವಿಧಿಸಲಾಗುವುದು. ಹತ್ತು ವರ್ಷಗಳ ಕಾಲ ದೇಶ ಪ್ರವೇಶ ನಿಷೇಧ ಹೇರಲಾಗುವುದು.
ನವದೆಹಲಿ: ಪ್ರತಿವರ್ಷ ಕೋಟ್ಯಂತರ ಮುಸ್ಲಿಂ ಯಾತ್ರಿಕರು ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾಗೆ ಪವಿತ್ರ ತೀರ್ಥಯಾತ್ರೆಗೆ ತೆರಳುತ್ತಾರೆ. ವರ್ಷದಿಂದ ವರ್ಷಕ್ಕೆ ಯಾತ್ರಿಕರ ಸಂಖ್ಯೆ ಏರಿಕೆಯಾಗುತ್ತಿರೋದರಿಂದ ಸೌದಿ ಅರೇಬಿಯಾ ಜನಸಂದಣಿ ನಿಯಂತ್ರಣಕ್ಕಾಗಿ ಹಲವಾರು ಅಗತ್ಯಕ್ರಮಗಳನ್ನು ತೆಗೆದುಕೊಂಡಿದೆ. ಆದರೆ 2025 ರ ಹಜ್‌ನ ಯಾತ್ರೆ ಭದ್ರತೆ ಮತ್ತು ಅನುಮತಿಯ ಮೇಲೆ ಅವಲಂಬಿತವಾಗಿದೆ. ಅನುಮತಿ ಇಲ್ಲದೇ ಹಜ್ ಯಾತ್ರೆಗೆ ಬರುವ ಯಾತ್ರಿಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೌದಿ ಅರೇಬಿಯಾ ಹೇಳಿದೆ. ಈ ವರ್ಷ ಹಜ್ ಯಾತ್ರೆ 2025 ರ ಜೂನ್ 4 ರಿಂದ 9 ರವರೆಗೆ ನಡೆಯುವ ಸಾಧ್ಯತೆಯಿದೆ. ಈ ದಿನಾಂಕ ಚಂದ್ರನ ದರ್ಶನವನ್ನು ಅವಲಂಬಿಸಿರುತ್ತದೆ. ಅನುಮತಿ ಇಲ್ಲದೇ ಹಜ್ ಯಾತ್ರೆಗೆ ಹೋದರೆ 4.5 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಸೌದಿ ಸರ್ಕಾರ ಘೋಷಿಸಿದೆ.
ಈ ಅವಧಿಯಲ್ಲಿ ಮೆಕ್ಕಾ ಅಥವಾ ಪವಿತ್ರ ಸ್ಥಳಗಳನ್ನು ಪ್ರವೇಶಿಸುವ ವೀಸಾ ಹೊಂದಿರುವವರಿಗೂ ಈ ದಂಡಗಳು ಅನ್ವಯಿಸುತ್ತವೆ. ಸೌದಿ ಸರ್ಕಾರದ ಹೊಸ ನಿಯಮದ ಪ್ರಕಾರ, ನೋಂದಣಿ ಇಲ್ಲದೆ ಹಜ್ ಯಾತ್ರೆ ಮಾಡಲು ಯಾರಾದರೂ ಸಹಾಯ ಮಾಡಿದರೆ, ಅವರಿಗೆ 22.7 ಲಕ್ಷ ರೂ.ಗಳವರೆಗೆ ಭಾರಿ ದಂಡ ವಿಧಿಸಲಾಗುತ್ತದೆ. ಇನ್ನು ಸ್ಥಳೀಯ ಹೋಟೆಲ್, ಅಪಾರ್ಟ್‌ಮೆಂಟ್ ಮಾಲೀಕರು ಪರವಾನಿಗೆಯಿಲ್ಲದೇ ಆಗಮಿಸಿದ ಯಾತ್ರಿಕರಿಗೆ ಆಶ್ರಯ ನೀಡಿದ್ದರೆ 22.7 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ಖಡಕ್ ಎಚ್ಚರಿಕೆಯನ್ನು ನೀಡಿದೆ.
ಹಜ್ ಯಾತ್ರೆ ವೇಳೆ ಅಕ್ರಮವಾಗಿ ದೇಶದ ಗಡಿ ಪ್ರವೇಶಿಸುವ ಜನರನ್ನು ಆ ಕ್ಷಣವೇ ಹೊರಗೆ ಕಳುಹಿಸಲಾಗುವುದು ಮತ್ತು ಮುಂದಿನ 10 ವರ್ಷಗಳ ಕಾಲ ಅವರಿಗೆ ದೇಶ ಪ್ರವೇಶಿಸದಂತೆ ನಿರ್ಬಂಧ ವಿಧಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಯಾತ್ರಿಕರು ಅನುಮತಿ ಇಲ್ಲದ ವಾಹನ ಚಲಾಯಿಸಿದ್ರೆ, ಅಂತಹ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಭಾರತದಿಂದ ಹಜ್ ಯಾತ್ರಿಕರ ವಿಮಾನಗಳ ಹಾರಾಟ ಏಪ್ರಿಲ್ 29ರಿಂದ ಆರಂಭವಾಗಿದೆ. ಲಕ್ನೊ ಮತ್ತು ಹೈದರಾಬಾದ್‌ನಿಂದ ಎರಡು ವಿಮಾನಗಳು ಸೌದಿ ಅರೇಬಿಯಾದತ್ತ ಪ್ರಯಾಣ ಬೆಳೆಸಿವೆ. ಈ ವರ್ಷ 1,22,518 ಭಾರತೀಯ ಯಾತ್ರಿಕರು ಹಜ್ ಯಾತ್ರೆಗೆ ತೆರಳಲಿದ್ದು, ಇದಕ್ಕಾಗಿ ಭಾರತ ಸರ್ಕಾರ ಸಂಪೂರ್ಣ ವ್ಯವಸ್ಥೆಗಳನ್ನು ಮಾಡಿದೆ. ಹಜ್ ಸಮಯದಲ್ಲುಂಟಾಗುವ ಜನಸಂದಣಿ ನಿಯಂತ್ರಿಸಲು ಸೌದಿ ಅರೇಬಿಯಾ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಕೆಲವು ದೇಶಗಳ ಪ್ರವಾಸಿಗರಿಗೆ ಕೆಲವು ವೀಸಾ ವಿಭಾಗಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಪ್ರಧಾನಿ ಮೋದಿ ಸೌದಿ ಪ್ರವಾಸ
ಸೌದಿ ರಾಜಕುಮಾರನ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದರು, 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಜೆಡ್ಡಾಗೆ ಭೇಟಿ ನೀಡಿದ್ದರಯ. ಇಲ್ಲಿನ ಕಿಂಗ್ ಅಬ್ದುಲ್ಲಾ ಅಜೀಜ್ ಅಂತಾರಾಷ್ಟ್ರೀಯ ವಿಮಾನಕ್ಕೆ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ‘ಈ ಭೇಟಿ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸ್ನೇಹವನ್ನು ಬಲಪಡಿಸುತ್ತದೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಉತ್ಸುಹಕನಾಗಿದ್ದೇನೆ’ ಎಂದು ಪ್ರಧಾನಿಗಳು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: ಹಜ್ ಯಾತ್ರೆಗೆ ಸರ್ಕಾರ ಸಬ್ಸಿಡಿ ಕೊಡಲ್ಲ, ₹90 ಸಾವಿರ ಫುಲ್ ಪೇಮೆಂಟ್ ಮಾಡ್ತೇವೆ: ಸಚಿವ ಜಮೀರ್ ಅಹಮದ್ ಖಾನ್
ಸೌದಿಯ ಗಾಯಕರು ಮೋದಿಯವರಿಗೆ ಹಿಂದಿ ಗೀತೆಯ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು .ಇನ್ನು ಆ ಬಳಿಕ ಮೋದಿ ಅವರಿಗೆ ಪ್ರಧಾನಿಗೆ ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದಿಂದಲೂ ಅದ್ಧೂರಿ ಸ್ವಾಗತ ದೊರೆತಿದ್ದು, ಈ ವೇಳೆ ಭಾರತೀಯರ ಜೊತೆ ಸಂವಾದ ನಡೆಸಿದ್ದರು. ಇನ್ನು ಪ್ರಧಾನಿ ನೋಡಿದ ಜನರು ಹರ್ಷ ವ್ಯಕ್ತಪಡಿಸಿದರು. ಆದ್ರೆ ಪಹಲ್ಗಾಮ್ ದಾಳಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದ್ದರು.
ಮೋದಿ ವಿಮಾನಕ್ಕೆ ಸೌದಿ ಯುದ್ಧ ವಿಮಾನ ‘ಬೆಂಗಾವಲು ಗೌರವ’
ಸೌದಿ ಅರೇಬಿಯಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ವಿಮಾನವು ಗಲ್ಫ್ ರಾಷ್ಟ್ರದ ವಾಯುಪ್ರದೇಶವನ್ನು ಪ್ರವೇಶಿಸಿದಾಗ, ಗೌರವ ಸೂಚಕವಾಗಿ ಸೌದಿ ಅರೇಬಿಯಾದ ಯುದ್ಧ ವಿಮಾನಗಳು ಅವರ ವಿಮಾನಕ್ಕೆ ಬೆಂಗಾವಲು ನೀಡಿದ್ದವು.
ಇದನ್ನೂ ಓದಿ: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಿಎಂ ಭರ್ಜರಿ ಕೊಡುಗೆ: ಶಿಕ್ಷಣಕ್ಕೆ ಬಂಪರ್, ಹಜ್ ಯಾತ್ರೆಗೆ ಆಫರ್!


