ಯಾವುದೇ ರಾಜ್ಯದಲ್ಲಿ ಹಜ್ ಯಾತ್ರೆಗೆ ಸರ್ಕಾರದಿಂದ ಸಬ್ಸಿಡಿ ಕೊಡುವುದಿಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಹಜ್ ಕಮಿಟಿಗೆ 90 ಸಾವಿರ ರೂ. ಪೂರ್ಣ ಪಾವತಿ ಮಾಡಲಾಗುತ್ತದೆ ಮತ್ತು ಖಾಸಗಿ ಏಜೆನ್ಸಿಗಳು 5 ಲಕ್ಷ ರೂ. ತೆಗೆದುಕೊಳ್ಳುತ್ತವೆ ಎಂದು ಅವರು ಹೇಳಿದರು.

ಬೆಂಗಳೂರು (ಜ.29): ನಮ್ಮ ದೇಶದ ಯಾವುದೇ ರಾಜ್ಯದಲ್ಲಿಯೂ ಹಜ್ ಯಾತ್ರೆಗೆ ಸರ್ಕಾರದಿಂದ ಸಬ್ಸಿಡಿ ಕೊಡುವುದಿಲ್ಲ. ಹಜ್ ಕಮಿಟಿಗೆ 90 ಸಾವಿರ ರೂ. ಫುಲ್ ಪೇಮೆಂಟ್ ಕಟ್ಟಲಾಗುತ್ತದೆ. ಇನ್ನು ಖಾಸಗಿ ಏಜೆನ್ಸಿಗಳು 5 ಲಕ್ಷ ರೂ. ತೆಗೆದುಕೊಳ್ಳುತ್ತಾರೆ. ಇದನ್ನು ತಿಳಿದುಕೊಂಡು ಸಿ.ಟಿ. ರವಿ ಮಾತನಾಡಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಹಜ್ ಸಬ್ಸಿಡಿಯನ್ನ ರದ್ದು ಮಾಡಿ ಎಂಬ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಹಜ್ ಸಬ್ಸಿಡಿ ಯಾವುದೂ ಇಲ್ಲ. ಯಾರು ಹಜ್ ಯಾತ್ರೆಗೆ ಹೋಗುತ್ತಾರೋ ಅವರೆಲ್ಲರೂ ಫುಲ್ ಹಣವನ್ನು ಕಟ್ಟುತ್ತಾರೆ. ಇಲ್ಲಿ ಯಾರಿಗೂ ಸಬ್ಸಿಡಿ ಇಲ್ಲ. ಹಜ್ ಕಮಿಟಿಯಿಂದ ಪ್ರತಿಯೊಬ್ಬರಿಗೂ 90 ಸಾವಿರ ರೂ. ತೆಗೆದುಕೊಳ್ಳುತ್ತಾರೆ. ಆದರೆ, ಖಾಸಗಿ ಏಜೆನ್ಸಿಯ ಮೂಲಕ ಹೋಗುವವರಿಗೆ 5 ಲಕ್ಷ ರೂ. ತೆಗೆದುಕೊಳ್ಳುತ್ತಾರೆ. ಕೇಂದ್ರ, ರಾಜ್ಯ ಸರ್ಕಾರ ಇರಲಿ, ನಮಗೆ ಯಾವ ಸಬ್ಸಿಡಿ ಇಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಸಿ.ಟಿ. ರವಿ ಅವರು ಸಚಿವರಾಗಿ ಕೆಲಸ ಮಾಡಿದ್ದಾರೆ. ಏನಾದರೂ ಮಾತನಾಡುವುದಕ್ಕೂ ಮುನ್ನ ಸಂಪೂರ್ಣವಾಗಿ ವಿಚಾರವನ್ನು ತಿಳಿದುಕೊಂಡು ಮಾತನಾಡಬೇಕು. ಇಡೀ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಹಜ್ ಸಬ್ಸಿಡಿ ಕೊಡುತ್ತಿಲ್ಲ. ಹಜ್ ಕ್ಯಾಂಪ್‌ನಲ್ಲಿ ಸಹಾಯ ಮಾಡುವುದೇ ನಮಗೆ ಕೊಡುವ ಸಬ್ಸಿಡಿ ಆಗಿದೆ. ಇದನ್ನು ಬಿಟ್ಟರೆ ಬೇರೇನೂ ಸೌಲಭ್ಯಗಳಿಲ್ಲ ಎಂದು ಸಿ.ಟಿ. ರವಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು ಭಾಗದಲ್ಲಿ‌ ಮಾಡಿ: ಸಚಿವ ಪರಮೇಶ್ವರ!

ಬೇರೆಯವರು ತೆರಿಗೆ ಹಣದಲ್ಲಿ ಹಜ್ ಸಬ್ಸಿಡಿ ನೀಡುತ್ತಿದ್ದಾರೆ ಎಂಬ ಆರೋಪವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಹಜ್ ಸಬ್ಸಿಡಿ ಎಲ್ಲಿ ಕೊಡ್ತಾ ಇದ್ದಾರೆ ರೀ? ಯಾರದ್ದು ಇದು? ಎಂದು ತಿಳಿದುಕೊಂಡು ಮಾತನಾಡಬೇಕು. ಇಲ್ಲಿ ಮುಖ್ಯವಾಗಿ ಹಜ್ ಕಮಿಟಿ ಇರುವುದು ಸೆಂಟ್ರಲ್‌ ಗೌರ್ನಮೆಂಟ್ ಅವರದ್ದು, ಮೊದಲು ಸಿ.ಟಿ. ರವಿ ಈ ಮಾಹಿತಿ ತಿಳಿದುಕೊಳ್ಳಬೇಕು ಸಚಿವ ಜಮೀರ್ ಅಹಮದ್ ಖಾನ್ ತಿರುಗೇಟು ಕೊಟ್ಟಿದ್ದಾರೆ.