ನವದೆಹಲಿ (ನ.15): ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ), ಮಂಗಳ ಗ್ರಹದಿಂದ ಕಲ್ಲು- ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಅದನ್ನು ಭೂಮಿಗೆ ತರುವ ಯೋಜನೆಯೊಂದನ್ನು ರೂಪಿಸಿದೆ. ಮಾರ್ಸ್‌ ಸ್ಯಾಂಪಲ್‌ ರಿಟರ್ನ್‌(ಎಂಎಸ್‌ಆರ್‌) ಯೋಜನೆಯನ್ನು ನಾಸಾ ನ.10ರಂದು ಅನಾವರಣಗೊಳಿಸಿದೆ. ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಜತೆಗೂಡಿ ಈ ಯೋಜನೆಯನ್ನು ರೂಪಿಸಲಾಗಿದ್ದು, 2030ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಏನಿದು ಯೋಜನೆ?

ಮಂಗಳ ಗ್ರಹದ ಮೇಲೆ ಇಳಿಸಿ ಅಲ್ಲಿನ ಮಣ್ಣಿನ ಮಾದರಿ ಸಂಗ್ರಹಿಸಲು ಮಾರ್ಸ್‌ ರೋವರ್‌ ಮಿಷನ್‌ ಅನ್ನು ನಾಸಾ 2020ರ ಜುಲೈನಲ್ಲಿ ಉಡಾವಣೆ ಮಾಡಿದೆ. ಈ ನೌಕೆ ಈಗಾಗಲೇ ಅರ್ಧದಾರಿಯನ್ನು ಕ್ರಮಿಸಿದ್ದು, 2021ರ ಫೆಬ್ರವರಿಯಲ್ಲಿ ಮಂಗಳ ಗ್ರಹದ ಅಂಗಳದಲ್ಲಿ ಇಳಿಯಲಿದೆ. ಅಲ್ಲಿ ಸುತ್ತಾಡಿ ಮಣ್ಣಿನ ಮಾದರಿ ಸಂಗ್ರಹಿಸಲಿದೆ. ಅದನ್ನು ಭೂಮಿಗೆ ತರಲು ಇದೀಗ ನಾಸಾ ಇನ್ನೊಂದು ಯೋಜನೆ ರೂಪಿಸಿದೆ. ಅದಕ್ಕೆ ‘ಮಾರ್ಸ್‌ ಸ್ಯಾಂಪಲ್‌ ರಿಟರ್ನ್‌’ ಎಂಬ ಹೆಸರನ್ನು ನೀಡಲಾಗಿದೆ.

ಭೂಮಿಗೆ ವಾಪಸ್‌ ಹೇಗೆ?

ಮಂಗಳ ಗ್ರಹದಲ್ಲಿ ರೋವರ್‌ ಸಂಗ್ರಹಿಸಿ ಇಟ್ಟಮಾದರಿಗಳನ್ನು ಫೆಚ್‌ ರೋವರ್‌ ಮೂಲಕ ವಾಹನವೊಂದಕ್ಕೆ ತುಂಬಲಾಗುತ್ತದೆ. ಈ ವಾಹನ ಮಂಗಳ ಗ್ರಹದಿಂದಲೇ ಕ್ಯಾಪ್ಸೂಲ್‌ವೊಂದನ್ನು ಉಡಾವಣೆ ಮಾಡಿ ಅದನ್ನು ಭೂಮಿಗೆ ಮರಳುವ ಆರ್ಬಿಟರ್‌ಗೆ ಕಳುಹಿಸುತ್ತದೆ. ಮಂಗಳ ಗ್ರಹವನ್ನು ಸುತ್ತುತ್ತಿರುವ ಆರ್ಬಿಟರ್‌ ಮಂಗಳ ಗ್ರಹದ ಮಾದರಿಗಳು ಇರುವ ಕ್ಯಾಪ್ಯೂಲ್‌ ಅನ್ನು ಸಂಗ್ರಹಿಸಿ ಭೂಮಿಗೆ ಮರಳುತ್ತದೆ. 2030ರ ವೇಳೆಗೆ ಮಂಗಳ ಗ್ರಹದ ಮಾದರಿ ಭೂಮಿಯನ್ನು ಬಂದು ತಲುಪಲಿದೆ ಎಂದು ನಾಸಾ ತಿಳಿಸಿದೆ.

ವಾಸ್ತವ್ಯದ ಆಸೆಗೆ ತಣ್ಣೀರು?: ಮಂಗಳ ಗ್ರಹ ವೇಗವಾಗಿ ಕಳೆದುಕೊಳ್ಳುತ್ತದೆ ನೀರು! ...

ಉಪಯೋಗ ಏನು?

ಮಂಗಳ ಗ್ರಹದಲ್ಲಿ ಜೀವಿಗಳು ಇರುವ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಅದರ ಮಣ್ಣಿನ ಮಾದರಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಹೀಗಾಗಿ ವಿಜ್ಞಾನಿಗಳು ಮಂಗಳ ಗ್ರಹದ ಭೂ ರಚನೆಯ ಅಧ್ಯಯನ ನಡೆಸಲು ಈ ಯೋಜನೆ ಸಹಕಾರಿಯಾಗಿದೆ.