ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳು 'ಮೆಕ್ಕಾ ರಕ್ಷಣಾ ಒಪ್ಪಂದ'ಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಒಂದು ದೇಶದ ಮೇಲಿನ ದಾಳಿಯನ್ನು ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸಲಾಗುವುದು. 'ಇಸ್ಲಾಮಿಕ್ ನ್ಯಾಟೋ' ಎಂದು ವಿಶ್ಲೇಷಿಸಲಾಗುತ್ತಿದೆ ಇದು ಭಾರತಕ್ಕೆ ಅಪಾಯಕಾರಿಯೇ?
ಏನಿದು ಒಪ್ಪಂದ?
- ಸೌದಿ ಅರೇಬಿಯಾ, ಪಾಕಿಸ್ತಾನ ನಡುವೆ 2025ರಲ್ಲೇ ಜಂಟಿ ಮಿಲಿಟರಿ ಒಪ್ಪಂದ ಏರ್ಪಟ್ಟಿತ್ತು
- ಅದರ ಭಾಗವಾಗಲು ಟರ್ಕಿ ಕೂಡ ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಇದೀಗ ಹೊಸ ಡೀಲ್‌ಗೆ ಸಹಿ
- ಆ ಪ್ರಕಾರ, 3 ದೇಶಗಳ ಪೈಕಿ ಯಾವುದಾದರೂ ಒಂದರ ಮೇಲೆ ದಾಳಿ ಆದರೆ ಒಗ್ಗಟ್ಟು ಪ್ರದರ್ಶನ
- ಅದು ತಮ್ಮ ಮೇಲೆಯೇ ನಡೆದ ದಾಳಿ ಎಂದು ಭಾವಿಸಿ ಉಳಿದ ಎರಡೂ ದೇಶಗಳಿಂದ ಪ್ರತಿದಾಳಿ
- ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಪಾಕ್ ಪ್ರಧಾನಿ, ಸೌದಿ ದೊರೆ, ಟರ್ಕಿ ಅಧ್ಯಕ್ಷರಿಂದ ಒಪ್ಪಂದ
ಪಿಟಿಐ ಇಸ್ಲಾಮಾಬಾದ್/ಮೆಕ್ಕಾ: ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಸೌದಿ ಅರೇಬಿಯಾ, ಪಾಕಿಸ್ತಾನ ಹಾಗೂ ಟರ್ಕಿ ದೇಶಗಳು ಮಹತ್ವದ ‘ಮೆಕ್ಕಾ ರಕ್ಷಣಾ ಒಪ್ಪಂದ’ಕ್ಕೆ ಶುಕ್ರವಾರ ಸಹಿಹಾಕಿವೆ. ಈ ಒಪ್ಪಂದದಂತೆ ಇನ್ನು ಮುಂದೆ ಈ ಮೂರು ರಾಷ್ಟ್ರಗಳಲ್ಲಿ ಯಾವುದೇ ಒಂದರ ಮೇಲೆ ದಾಳಿ ನಡೆದರೂ ಅದನ್ನು ಉಳಿದೆರಡು ದೇಶಗಳ ಮೇಲೂ ನಡೆದ ದಾಳಿ ಎಂದೇ ಭಾವಿಸಲಾಗುತ್ತದೆ. ಅಂದರೆ ‘ಒಂದು ದೇಶ ದಾಳಿಗೊಳಗಾದರೆ ಅದರ ನೆರವಿಗೆ ಉಳಿದೆರಡು ದೇಶಗಳು ಬರಲಿವೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಸೌದಿ ದೊರೆ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ಈ ಒಪ್ಪಂದಕ್ಕೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆದ ಮಕ್ಕಾ ಅಲ್-ಮಕರ್ರಮ್ ಸಮ್ಮೇಳನದಲ್ಲಿ ಸಹಿ ಹಾಕಿದ್ದಾರೆ.
‘ಇದು ಮೂರೂ ರಾಷ್ಟ್ರಗಳ ಭದ್ರತೆಯನ್ನು ಬಲಪಡಿಸುವುದಷ್ಟೇ ಅಲ್ಲದೆ, ಪರಸ್ಪರ ರಕ್ಷಣಾ ಸಹಕಾರವನ್ನೂ ಹೆಚ್ಚಿಸುತ್ತದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಒಪ್ಪಂದವು ‘ಇಸ್ಲಾಮಿಕ್ ನ್ಯಾಟೋ’ ರಚನೆಗೆ ನಾಂದಿ ಎನ್ನಲಾಗುತ್ತಿದೆ. ಪಾಕಿಸ್ತಾನಕ್ಕೆ ಭಾರತ ವೈರಿ ದೇಶ ಆಗಿರುವ ಕಾರಣ ಈ ಒಪ್ಪಂದ ಭಾರತಕ್ಕೂ ಎಚ್ಚರಿಕೆ ಗಂಟೆಯಾಗಿದೆ. ಇನ್ನು ಮಧ್ಯಪ್ರಾಚ್ಯದಲ್ಲಿ ಇಸ್ಲಾಮಿಕ್ ದೇಶಗಳ ಮೇಲೆ ಮುಗಿಬೀಳುವ ಇಸ್ರೇಲ್‌ಗೂ ಇದು ಎಚ್ಚರಿಕೆ ಗಂಟೆ. ಇದರ ಬೆನ್ನಲ್ಲೇ ಈ ಒಪ್ಪಂದವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಒಪ್ಪಂದಕ್ಕೆ ಇರಾನ್ ಆಕ್ರೋಶ ವ್ಯಕ್ತಪಡಿಸಿದೆ.
ಮೆಕ್ಕಾ ರಕ್ಷಣಾ ಒಪ್ಪಂದದಲ್ಲೇನಿದೆ?:
ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನವು 2025ರಲ್ಲೇ ಜಂಟಿ ಮಿಲಿಟರಿ ಒಪ್ಪಂದ ಮಾಡಿಕೊಂಡಿದ್ದು, ಆ ಬಳಿಕ ಟರ್ಕಿ ಕೂಡ ಇದರ ಭಾಗವಾಗುವ ಆಸಕ್ತಿ ತೋರಿತ್ತು. ಆ ಕುರಿತ ಚರ್ಚೆಗಳನ್ನು ಪೂರ್ಣಗೊಳಿಸಿರುವ ಮೂರೂ ರಾಷ್ಟ್ರಗಳು ಈಗ ಜಂಟಿ ಮಿಲಿಟರಿ ಒಪ್ಪಂದಕ್ಕೆ ಸಹಿಹಾಕಿವೆ.
ಒಪ್ಪಂದದ ಅಂಶಗಳನ್ನು ಅವು ಪೂರ್ತಿ ಬಹಿರಂಗಪಡಿಸಿಲ್ಲ. ಆದರೆ ಈ ಒಪ್ಪಂದವು ಒಟ್ಟಾರೆಯಾಗಿ ಮೂರೂ ದೇಶಗಳ ಜಂಟಿ ಮಿಲಿಟರಿ ಕಾರ್ಯಾಚರಣೆ ಮತ್ತು ತರಬೇತಿ, ತಂತ್ರಜ್ಞಾನ ವರ್ಗಾವಣೆ ಮತ್ತು ಗುಪ್ತಚರ ಹಂಚಿಕೆಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಒಪ್ಪಂದ ಏಕೆ ಮಹತ್ವದ್ದು?:
ಇದೀಗ ಮಧ್ಯ ಪ್ರಾಚ್ಯ ಸಂಘರ್ಷದ ನಡುವೆಯೇ ಮೂರೂ ರಾಷ್ಟ್ರಗಳು ಈ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿರುವುದು ಕುತೂಹಲ ಮೂಡಿಸಿದೆ.
ಇರಾನ್-ಅಮೆರಿಕ ಸಮರದ ವೇಳೆ ಸೌದಿ ಅರೇಬಿಯಾ ನಲುಗಿದೆ. ಅದು ಇರಾನ್, ಅದರ ಬೆಂಬಲಿತ ಯೆಮೆನ್‌ನ ಹೌತಿ ಉಗ್ರರು ಹಾಗೂ ಇರಾಕಿ ಉಗ್ರರಿಂದ ದಾಳಿಗೆ ಒಳಗಾಗಿದೆ. ಹೀಗಾಗಿ ತನ್ನ ರಕ್ಷಣಾ ಪಾಲುದಾರಿಕೆಯನ್ನು ವೃದ್ಧಿಸಲು ಎದುರು ನೋಡುತ್ತಿತ್ತು. ಟರ್ಕಿ ಕೂಡ ಈ ದಾಳಿಯಿಂದ ನಲುಗಿತ್ತು. ಇಂಥ ಉದ್ವಿಗ್ನ ಸಂದರ್ಭದಲ್ಲಿ ತೈಲ ಸಮೃದ್ಧ ಸೌದಿ ಅರೇಬಿಯಾ, ಪರಮಾಣು ಸಜ್ಜಿತ ಪಾಕಿಸ್ತಾನ ಹಾಗೂ ನ್ಯಾಟೋದ ಎರಡನೇ ಅತಿದೊಡ್ಡ ಸೇನೆ ಟರ್ಕಿಯನ್ನು ಈ ಒಪ್ಪಂದ ಒಟ್ಟುಗೂಡಿಸುತ್ತಿದೆ.
ಸೌದಿ ಅರೇಬಿಯಾವು ಗಲ್ಫ್ ಭಾಗದ ಪ್ರಭಾವಿ ಹಾಗೂ ಶ್ರೀಮಂತ ಮುಸ್ಲಿಂ ರಾಷ್ಟ್ರವಾಗಿದ್ದು, ಪಾಕಿಸ್ತಾನವು ಭಾರತದ ಪ್ರಮುಖ ವೈರಿ ದೇಶವಾಗಿದೆ. ಇನ್ನು ನ್ಯಾಟೋದ ಭಾಗವಾಗಿರುವ ಟರ್ಕಿಯು ಬಲಿಷ್ಠ ಸೇನೆಯನ್ನು ಹೊಂದಿದೆ.


