ಇಸ್ಲ​ಮಾ​ಬಾ​ದ್‌[ಆ.07]: 370ನೇ ವಿಧಿ ರದ್ದಾದ ಬಳಿಕ ಹತಾ​ಶೆ​ಗೊ​ಳ​ಗಾ​ಗಿ​ರುವ ಪಾಕಿ​ಸ್ತಾನ, ಭಾರತದ ಇಂಥ ನಿರ್ಧಾರ, ಮತ್ತೊಂದು ಪುಲ್ವಾಮ ಮಾದ​ರಿ ದಾಳಿಗೆ ಕಾರಣವಾಗಬಹುದು ಎಂದು ಬೆದರಿಕೆ ಹಾಕಿದ್ದಾರೆ.

ಕಾಶ್ಮೀರ ವಿಚಾರ ಸಂಬಂಧ ಆಯೋಜನೆಗೊಂಡಿದ್ದ ಸಂಸತ್ತಿನ ತುರ್ತು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಇಮ್ರಾನ್‌, ಭಾರ​ತದ ಈ ನಡೆ​ಯಿಂದಾಗಿ ಯುದ್ಧ ವಾತಾ​ವ​ರ​ಣ ಸೃಷ್ಟಿಯಾಗಿದ್ದು, ಇದ​ರಿಂದ ಪುಲ್ವಾಮ ಮಾದ​ರಿ ದಾಳಿ ಸಂಭ​ವಿ​ಸಿ​ದ್ರೂ ಅಚ್ಚ​ರಿ​ಯಿಲ್ಲ. ಇದಕ್ಕೆ ನಮ್ಮನ್ನು ದೂರ​ಬಾ​ರ​ದು. ಎರಡು ಅಣ್ವಸ್ತ್ರ ರಾಷ್ಟ್ರ​ಗಳ ನಡು​ವಿನ ತಿಕ್ಕಾಟದಿಂದ ಕೇವಲ ಭಾರತ- ಪಾಕ್‌ ಮಾತ್ರ​ವಲ್ಲ, ಇಡೀ ಜಗತ್ತು ಇದ​ರಿಂದ ತೊಂದರೆ ಅನು​ಭ​ವಿ​ಸು​ತ್ತದೆ. ಇದು ನಮ್ಮ ಅಣ್ವ​ಸ್ತ್ರ ಬೆದ​ರಿ​ಕೆ​ಯಲ್ಲ. ನಮ್ಮ ಮೇಲೆ ದಾಳಿ ಮಾಡಿ​ದರೆ ನಾವು ಪ್ರತಿ​ದಾಳಿ ಮಾಡು​ತ್ತೇವೆ. ಇದ​ರಿಂದ ಯುದ್ಧ ಸನ್ನಿ​ವೇಶ ಸೃಷ್ಟಿ​ಯಾ​ಗು​ತ್ತದೆ. ಯುದ್ಧ​ದಲ್ಲಿ ಯಾರೂ ಗೆಲ್ಲು​ವು​ದಿಲ್ಲ. ಯುದ್ಧ ನಡೆ​ದರೆ ಇಡೀ ಪ್ರಪಂಚಕ್ಕೆ ತೊಂದ​ರೆ​ಯಾ​ಗು​ತ್ತದೆ ಎಂದು ಪರೋ​ಕ್ಷ​ವಾಗಿ ಯುದ್ಧದ ಮುನ್ಸೂ​ಚ​ನೆ ನೀಡಿ​ದ್ದಾರೆ.

ಜನಾಂಗೀಯ ಸಿದ್ಧಾಂತದ ಮೂಲಕ ಕಾಶ್ಮೀ​ರ​ವನ್ನು ಭಾರ​ತ ಒಡೆದು ಹಾಕಿದ್ದು ಇದು ಮಹಾತ್ಮಾ ಗಾಂಧಿ​ಯ​ವರ ತತ್ವ​ಗ​ಳಿಗೆ ವಿರು​ದ್ಧ​ವಾ​ಗಿದೆ. ಭಾರ​ತದ ಈ ನಿಲುವನ್ನು ನಾವು ವಿಶ್ವ​ಸಂಸ್ಥೆಯ ಭದ್ರತಾ ಮಂಡ​ಳಿ​ಯಲ್ಲಿ ಪ್ರಶ್ನೆ ಮಾಡು​ತ್ತೇ​ವೆ. ಜಾಗ​ತಿಕ ಸಮು​ದಾಯ ಕಾಶ್ಮೀ​ರದ ಪ್ರಸ​ಕ್ತ ಸನ್ನಿ​ವೇ​ಶದ ಬಗ್ಗೆ ಗಮನ ಹರಿ​ಸ​ಬೇಕು ಎಂದು ಮನವಿ ಮಾಡಿ​ದ್ದಾ​ರೆ.

ನಾವು ನಮ್ಮ ಎಲ್ಲಾ ನೆರೆ ರಾಷ್ಟ್ರ​ಗ​ಳೊಂದಿಗೆ ಉತ್ತಮ ಸಂಬಂಧ ಕಾಯ್ದು​ಕೊ​ಳ್ಳು​ವು​ದಕ್ಕೆ ಬಯ​ಸಿದ್ದು, ಭಾರತ ಇದಕ್ಕೆ ಪೂರ​ಕ​ವಾ​ಗಿ ಸ್ಪಂದಿ​ಸು​ತ್ತಿಲ್ಲ. ನಾನು ಭಾರ​ತದ ಪ್ರಧಾ​ನಿ​ಯೊಂದಿಗೆ ನಾನು ಮಾತು​ಕತೆ ನಡೆ​ಸಿ​ದಾಗ ಕಾಶ್ಮೀ​ರದಲ್ಲಿ ಉಪ​ಟಳ ನೀಡು​ತ್ತಿ​ರು​ವ ಭಯೋ​ತ್ಪಾ​ದಕರನ್ನು ನಿಯಂತ್ರಿ​ಸುವ ಬಗ್ಗೆ ಮಾತು ಕೊಟ್ಟಿದ್ದೆ. ಆದರೆ ಅವರು ನಮ್ಮ ಮೇಲೆ ದಾಳಿ ಮಾಡಿ​ದ​ರು. ಮಾತು​ಕ​ತೆ ಕರೆ​ದ​ರೂ ಪೂರ​ಕ​ವಾಗಿ ಸ್ಪಂದಿ​ಸು​ತ್ತಿಲ್ಲ ಎಂದು ಸದ​ನ​ದಲ್ಲಿ ಅಳಲು ತೋಡಿ​ಕೊಂಡ​ರು.