ಇಂಗ್ಲಿಷ್ ಕಲಿಯಲು ಬೆಂಗಳೂರಿಗೆ ಬಂದ ಜಪಾನ್‌ನ ಹಿರೋಟೋಶಿ ತನಕಾ, ಇಲ್ಲಿನ ಜೈಲು ಸೇರಿ, ಪೊಲೀಸ್ ಭ್ರಷ್ಟಾಚಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತಾರೆ. ಜಪಾನ್‌ನಿಂದಲೇ ಸಮರ ಸಾರಿ ಗೆಲ್ಲುವ ಅವರ ಈ ರೋಚಕ ಪಯಣದಲ್ಲಿ, ಅವರಿಗೆ ಬೆಂಗಳೂರಿನಲ್ಲೇ ಒಬ್ಬ ಜೀವದ ಗೆಳತಿಯೂ ಸಿಗುತ್ತಾರೆ.
ಇಂಗ್ಲಿಷ್ ಕಲಿಯಲು ಬೆಂಗಳೂರಿಗೆ ಬಂದಿದ್ದ ಜಪಾನ್ ಪ್ರಜೆಯೊಬ್ಬರು ಇಲ್ಲಿನ ಜೈಲು ಪಾಲಾದರು. ಭಾಷೆ ತಿಳಿಯದ ನಾಡಿನಲ್ಲಿ ಐದುವರೆ ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದರು. ಜಪಾನ್‌ಗೆ ಹೋದ ಮೇಲೆಯೂ ಭಾರತದ ಪೊಲೀಸರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಕೊನೆಗೂ ಗೆದ್ದರು. ಇದು ಕೇವಲ ಹೋರಾಟದ ಕಥೆಯಲ್ಲ, ಇದರ ನಡುವೆ ಅವರಿಗೆ ಒಂದು ಸುಂದರ ಪ್ರೇಮಕಥೆಯೂ ಸಿಕ್ಕಿದೆ. ಹಿರೋಟೋಶಿ ತನಕಾ ಅವರ ಈ ರೋಚಕ ಜರ್ನಿ ಹೀಗಿದೆ..
ಜೈಲು ವಾಸ ಮತ್ತು ಅನಿರೀಕ್ಷಿತ ಸ್ನೇಹ
2019ರಲ್ಲಿ ಹಿರೋಟೋಶಿ ತನಕಾ ಬೆಂಗಳೂರಿನ ಆರ್.ಟಿ. ನಗರದ ಇಂಗ್ಲಿಷ್ ಅಕಾಡೆಮಿಗೆ ಸೇರಿದ್ದರು. ಅಕಾಡೆಮಿಯ ಮುಖ್ಯಸ್ಥರ ಜೊತೆಗಿನ ಗಲಾಟೆಯಲ್ಲಿ ಆವೇಶಕ್ಕೊಳಗಾದ ತನಕಾ ಅವರ ಮುಖಕ್ಕೆ ಹೊಡೆದಿದ್ದರು. ಈ ಸಂಬಂಧ ಪೊಲೀಸರು ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದರು. 19 ದಿನಗಳ ಜೈಲು ವಾಸದಲ್ಲಿ ಅವರು ಕೈದಿಗಳು ಜೂಜಾಡುವುದನ್ನು, ಮೊಬೈಲ್ ಮತ್ತು ಗಾಂಜಾ ಬಳಸುವುದನ್ನು ಕಣ್ಣಾರೆ ಕಂಡರು. ಅಲ್ಲಿ ಅವರಿಗೆ ಮೂವರು ವ್ಯಕ್ತಿಗಳ ಕೊಲೆ ಮಾಡಿ ಶಿಕ್ಷೆ ಅನುಭವಿಸುತ್ತಿದ್ದ ಶಂಕರ್ ಎಂಬಾತನ ಸ್ನೇಹವಾಯಿತು. ಶಂಕರ್ ನೀಡಿದ ಧೈರ್ಯದಿಂದಲೇ ನಾನು ಅಲ್ಲಿ ಬದುಕಲು ಸಾಧ್ಯವಾಯಿತು ಎಂದು ತನಕಾ ಸ್ಮರಿಸುತ್ತಾರೆ.
ಪೊಲೀಸ್ ದೌರ್ಜನ್ಯ
ತನಕಾ ಅವರಿಗೆ ಜಾಮೀನು ಸಿಕ್ಕಾಗ ಅವರ ಬಳಿ ಹಣವಿರಲಿಲ್ಲ. ಅಂದು ಜೈಲಿನ ಸೂಪರಿಂಟೆಂಡೆಂಟ್ ಶೇಷಮೂರ್ತಿ ಅವರು ತಮ್ಮ ಸ್ವಂತ ಹಣದಿಂದ 4,000 ರೂ. ಕಟ್ಟಿ ಇವರನ್ನು ಬಿಡಿಸಿದ್ದರು. ಆದರೆ ಜೈಲಿನಿಂದ ಹೊರಬಂದ ನಂತರ ಸಬ್ ಇನ್ಸ್‌ಪೆಕ್ಟರ್ ಹನುಮಂತರಾಯಪ್ಪ ಎಂಬುವವರು ಕೇಸ್ ಕ್ಲೋಸ್ ಮಾಡಲು ಲಂಚ ಕೇಳಿದರು ಎಂದು ತನಕಾ ಗಂಭೀರ ಆರೋಪ ಮಾಡಿದ್ದರು.
ನಂತರ ಕೋವಿಡ್ ಸಾಂಕ್ರಾಮಿಕ ಆರಂಭವಾಯಿತು. ತನಕಾ ಅವರ ಆರೋಗ್ಯ ಹದಗೆಟ್ಟಿತು. ಹಣವಿಲ್ಲದೆ ಆರ್.ಟಿ. ನಗರದ ಪಾರ್ಕ್‌ನಲ್ಲಿ ಮಲಗಿದರು, ಅಲ್ಲಿ ಅವರ ವಸ್ತುಗಳೆಲ್ಲ ಕಳ್ಳತನವಾದವು. ನಂತರ ಅವರು ಅದೇ ಪೊಲೀಸ್ ಠಾಣೆಯ ಆವರಣದಲ್ಲೇ ಮಲಗುತ್ತಿದ್ದರು. ವೀಸಾ ಅವಧಿ ಮುಗಿದಿದ್ದರೂ ಕೇಸ್ ನಡೆಯುತ್ತಿದ್ದ ಕಾರಣ ಅವರಿಗೆ ದೇಶ ಬಿಟ್ಟು ಹೋಗಲು ಸಾಧ್ಯವಾಗುತ್ತಿರಲಿಲ್ಲ.
ಪೊಲೀಸ್ ಠಾಣೆಯ 'ಕುರ್ಚಿ' ಕಳ್ಳತನ ಮಾಡಿದ ಕಥೆ!
ತಮ್ಮನ್ನು ಭಾರತದಿಂದ ಹೊರಹಾಕುವುದನ್ನು (Deportation) ತಡೆಯಲು ತನಕಾ ಒಂದು ವಿಚಿತ್ರ ಉಪಾಯ ಮಾಡಿದರು. ತಾವೇನಾದರೂ ಅಪರಾಧ ಮಾಡಿದರೆ ಮತ್ತೆ ಬಂಧಿಸುತ್ತಾರೆ, ಆಗ ಇಲ್ಲಿಯೇ ಇರಬಹುದು ಎಂದುಕೊಂಡು ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯನ್ನು ಕಳ್ಳತನ ಮಾಡಿದರು! ಕುರ್ಚಿ ಜೊತೆ ಸೆಲ್ಫಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ಆದರೆ ಪೊಲೀಸರು ಇವರ ಮೇಲೆ ಕೇಸ್ ಹಾಕದೆ ಇವರನ್ನು ಡಿಟೆನ್ಶನ್ ಸೆಂಟರ್‌ಗೆ ಕಳುಹಿಸಿ 2021ರಲ್ಲಿ ಜಪಾನ್‌ಗೆ ಗಡಿಪಾರು ಮಾಡಿದರು.
ಜಪಾನ್‌ನಿಂದಲೇ ಶುರುವಾಯಿತು ಕಾನೂನು ಸಮರ
ಗಡಿಪಾರಾದ ನಂತರವೂ ತನಕಾ ಸುಮ್ಮನಿರಲಿಲ್ಲ. ಬೆಂಗಳೂರಿನ ವಕೀಲ ರೋಹನ್ ಕೊಠಾರಿ ಮೂಲಕ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದರು. ಹನುಮಂತರಾಯಪ್ಪ ಅವರ ಲಂಚದ ಬೇಡಿಕೆ ಮತ್ತು ಅಕ್ರಮ ಬಂಧನದ ಬಗ್ಗೆ ತನಿಖೆ ನಡೆಯಿತು. ಕೊನೆಗೂ 2022ರಲ್ಲಿ ಆಯೋಗವು ತನಕಾ ಪರವಾಗಿ ತೀರ್ಪು ನೀಡಿ, ಸರ್ಕಾರ 75,000 ರೂ. ಪರಿಹಾರ ನೀಡಬೇಕು ಮತ್ತು ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತು. ಇತ್ತೀಚೆಗೆ ಕರ್ನಾಟಕ ಸರ್ಕಾರ ಈ ಪರಿಹಾರದ ಹಣವನ್ನು ತನಕಾ ಅವರ ವಕೀಲರ ಖಾತೆಗೆ ಜಮೆ ಮಾಡಿದೆ.
ಜರ್ನಿಯಲ್ಲಿ ಸಿಕ್ಕ ಜೀವದ ಗೆಳತಿ
ಇಷ್ಟೆಲ್ಲಾ ಕಷ್ಟಗಳ ನಡುವೆ ತನಕಾ ಅವರಿಗೆ ಬೆಂಗಳೂರಿನಲ್ಲಿ ಈಶಾನ್ಯ ಭಾರತದ ಮೂಲದ ಯುವತಿಯ ಪರಿಚಯವಾಯಿತು. ಇವರ ಕಾನೂನು ಹೋರಾಟಕ್ಕೆ ಆಕೆ ದೊಡ್ಡ ಬೆಂಬಲ ನೀಡಿದರು. ತನಕಾ ಜಪಾನ್‌ಗೆ ಹೋದ ಮೇಲೆಯೂ ಇವರ ಪ್ರೀತಿ ಮುಂದುವರಿಯಿತು. 2024ರಲ್ಲಿ ಆಕೆ ಜಪಾನ್‌ಗೆ ಹೋದಾಗ ಇಬ್ಬರಿಗೂ ನಿಶ್ಚಿತಾರ್ಥವಾಯಿತು ಮತ್ತು 2025ರಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಸದ್ಯ ತನಕಾ ಅವರ ಪತ್ನಿ ಬೆಂಗಳೂರಿನಲ್ಲಿದ್ದು, ಜಪಾನ್ ವೀಸಾಗಾಗಿ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಜೈಲು ಸೇರಿ ಪೊಲೀಸರ ವಿರುದ್ಧವೇ ಗೆದ್ದು ಈಗ ಕನ್ನಡಿಗರ ಸೊಸೆಯನ್ನು ಮದುವೆಯಾಗಿರುವ ಹಿರೋಟೋಶಿ ಅವರ ಕಥೆ ನಿಜಕ್ಕೂ ಸ್ಫೂರ್ತಿದಾಯಕ.


