ಹೊಸವರ್ಷದ ಆರಂಭದಲ್ಲೇ ಟಿಬೆಟ್‌ಗೆ ಭಾರಿ ಆಘಾತ: ಒಟ್ಟೊಟ್ಟಿಗೆ ಸಂಭವಿಸಿದ ಆರು ಭೂಕಂಪಕ್ಕೆ 53 ಬಲಿ
ಟಿಬೆಟ್‌ನಲ್ಲಿ ಒಟ್ಟೊಟ್ಟಿಗೆ ಆರು ಭೂಕಂಪಗಳು ಸಂಭವಿಸಿ 53ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 7.1 ತೀವ್ರತೆಯ ಭೂಕಂಪ ಸೇರಿದಂತೆ ಆರು ಭೂಕಂಪಗಳು ಸಂಭವಿಸಿದ್ದು, ಭಾರತ, ನೇಪಾಳ, ಭೂತಾನ್‌ಗಳಲ್ಲೂ ಭೂಮಿ ಕಂಪಿಸಿದೆ.
ಟಿಬೆಟ್‌ನಲ್ಲಿ ಒಟ್ಟೊಟ್ಟಿಗೆ ಆರು ಭೂಕಂಪನಗಳು ಸಂಭವಿಸಿದ ಪರಿಣಾಮ ಒಟ್ಟು 53ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. 7.1 ತೀವ್ರತೆಯ ಭೂಕಂಪನವೂ ಸೇರಿದಂತೆ ಒಟ್ಟೊಟ್ಟಿಗೆ ಟಿಬೆಟ್‌ನಲ್ಲಿ ಒಟ್ಟು ಆರು ಭೂಕಂಪಗಳು ಸಂಭವಿಸಿದ್ದು, ಕಣಿವೆ ದೇಶಕ್ಕೆ ಹೊಸ ವರ್ಷದ ಆರಂಭದಲ್ಲೇ ಆಘಾತ ಎದುರಾಗಿದೆ. ಈ ಭೂಕಂಪನದ ಪರಿಣಾಮ ಭಾರತದ ಮೇಲೂ ಆಗಿದ್ದು, ಭಾರತ, ನೇಪಾಳ ಭೂತಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಸ್ಥಳೀಯ ವರದಿಗಳನ್ನು ಆಧರಿಸಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದ್ದು, ಈ ದುರಂತದಲ್ಲಿ ಒಟ್ಟು 53 ಜನ ಸಾವನ್ನಪ್ಪಿದ್ದಾರೆ. ಟಿಬೇಟಿಯನ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು ಚೀನಾದ ನ್ಯೂಸ್ ಏಜೆನ್ಸಿ ಕ್ಸಿನ್ಹುವಾ ವರದಿ ಮಾಡಿದೆ.
ಚೀನಾದ ಮಾಧ್ಯಮಗಳ ಪ್ರಕಾರ, ಭೂಕಂಪ ಸಂಭವಿಸಿದ ಸ್ಥಳಗಳಲ್ಲಿ ಹಲವು ಕಟ್ಟಡಗಳು ಕುಸಿದಿವೆ, ಟಿಬೆಟ್‌ನ ಡಿಂಗ್ರಿ ಕೌಂಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಬಲವಾದ ಕಂಪನಗಳನ್ನು ಅನುಭವಿಸಿದವು ಎಂದು ಚೀನಾದ ರಾಜ್ಯ ಸುದ್ದಿ ವಾಹಿನಿ ಸಿಸಿಟಿವಿ ಹೇಳಿದೆ. ಈ ಭೂಕಂಪನದ ಪರಿಣಾಮ ಭಾರತ ಕೆಲ ಪ್ರದೇಶಗಳಲ್ಲೂ ಅನುಭವಕ್ಕೆ ಬಂದಿವೆ. ದೆಹಲಿ ಎನ್‌ಸಿಆರ್ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಉತ್ತರ ಭಾಗದ ಅನೇಕ ಸ್ಥಳಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದೆ.
ನೆರೆಯ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ, ಬಲವಾದ ಕಂಪನದ ನಂತರ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೋಡಿ ಬಂದರು ಎಂದು ವರದಿಯಾಗಿದೆ.
ನಾನು ಮಲಗಿದ್ದೆ, ಹಾಸಿಗೆ ಅಲುಗಾಡುತ್ತಿತ್ತು, ನಾನು ಮಗು ಹಾಸಿಗೆಯಲ್ಲಿ ಅತ್ತಿತ್ತ ಚಲಿಸುತ್ತಿದೆ ಎಂದು ಭಾವಿಸಿ ಅಷ್ಟೊಂದು ಗಮನ ಹರಿಸಲಿಲ್ಲ, ಆದರೆ ಕಿಟಕಿಯೂ ಅಲುಗಾಡಲು ಶುರುವಾಗಿದ್ದು, ಇದು ಭೂಕಂಪನ ಎಂದು ಖಚಿತವಾಯ್ತು ಎಂದು ಕೂಡಲೇ ಮಗುವನ್ನು ಕರೆದುಕೊಂಡು ಖಾಲಿ ಇರುವ ಮೈದಾನದ ಪ್ರದೇಶಕ್ಕೆ ಓಡಿ ಬಂದೆ ಎಂದು ಕಠ್ಮಂಡುವಿನ ನಿವಾಸಿ ಮೀರಾ ಅಧಿಕಾರಿ ಸುದ್ದಿ ಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.
ಭೂಕಂಪಶಾಸ್ತ್ರದ (Seismology) ರಾಷ್ಟ್ರೀಯ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಟಿಬೆಟ್‌ನಲ್ಲಿ ಮೊದಲ ಬಾರಿಗೆ 7.1 ತೀವ್ರತೆಯ ಭೂಕಂಪ ದಾಖಲಾಗಿದೆ. ನೇಪಾಳ-ಟಿಬೆಟ್ ಗಡಿಯ ಸಮೀಪವಿರುವ ಕ್ಸಿಜಾಂಗ್‌ನಲ್ಲಿ ಬೆಳಿಗ್ಗೆ 6:35 ಕ್ಕೆ ಈ 7.1 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದೆ. ಇದು ಅತ್ಯಂತ ಪ್ರಬಲವೆಂದು ಪರಿಗಣಿಸುವ ಭೂಕಂಪನವಾಗಿದ್ದು, ತೀವ್ರ ಹಾನಿಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದಾದ ನಂತರ ಮತ್ತೆರಡು ಭೂಕಂಪ ಸಂಭವಿಸಿದೆ. ಟಿಬೆಟ್‌ನ ಕ್ಸಿಜಾಂಗ್ ಪ್ರದೇಶದಲ್ಲಿ 4.7 ಹಾಗೂ 4.0 ತೀವ್ರತೆಯ ಭೂಕಂಪನಗಳು ಸಂಭವಿಸಿವೆ. ಚೀನಾದ ಅಧಿಕಾರಿಗಳು ಟಿಬೆಟ್‌ನ ಎರಡನೇ ಅತಿದೊಡ್ಡ ನಗರವಾದ ಶಿಗಾಟ್ಸೆ ನಗರದಲ್ಲಿ 6.8 ರ ತೀವ್ರತೆಯ ಭೂಕಂಪ ಸಂಭವಿಸಿದ್ದನ್ನು ದಾಖಲಿಸಿದ್ದಾರೆ.
ವಿಶ್ವದಲ್ಲಿಯೇ ಸುಂದರ ಪ್ರದೇಶವಾಗಿರೋ ಟಿಬೆಟ್ ಮೇಲೆ ಎಂದಿಗೂ ವಿಮಾನ ಹಾರಾಟ ನಡೆಸಲ್ಲ ಯಾಕೆ?
ಚೀನಾಗೆ ತಿರುಗೇಟು: ಟಿಬೆಟ್ 30 ಸ್ಥಳಗಳಿಗೆ ಹೊಸ ಹೆಸರಿಡಲು ಭಾರತ ನಿರ್ಧಾರ..!